Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Drama Romance Action

4  

JAISHREE HALLUR

Drama Romance Action

ಕೃಷ್ಣಾ!

ಕೃಷ್ಣಾ!

2 mins
267



ಅದೇನಿವತ್ತು? ಹಾಗೇ ಹೋಗುವೆಯಲ್ಲಾ...?

ದಿನಾ ಬಂದು ನಾ ಕಡೆದ ಮಜ್ಜಿಗೆ ಮೇಲಿನ ಹಸೀ ಬೆಣ್ಣೆ ತಿಂದು

ನನ್ನ ತುಟಿಗೆ ಬೆಣ್ಣೆ ಸವರಿ ಕದ್ದೋಡುತಿದ್ದೆಯಲ್ಲಾ...!


ಇಂದೇಕೆ ಈ ಮೌನ?

ಬೆಣ್ಣೆಯಲ್ಲಿ ರುಚಿಯಿಲ್ಲದಾಯಿತೇ?


ಇಲ್ಲ ರಾಧೆ, ಯಾಕೋ ಏನೋ ಗೊತ್ತಿಲ್ಲ, ನಾ ನಾನಾಗಿಲ್ಲ, ಮನದ ಚಾಂಚಲ್ಯತೆ ಕಾಡುತಿದೆ ಗೆಳತಿ..

ನಿನ್ನ ಬೆಣ್ಣೆಯಂತ ಮನಸಿಗೆ ಗಾಸಿ ಮಾಡಲಾರೆ, ಮನ್ನಿಸೆನ್ನನು..


ಏಕೀ ಪೀಟಿಕೆ ಮುರಾರೀ, ಹೃದಯ ಹೊಯ್ದಾಡುತಿದೆ, ಆಲಿಸುವ ಕಿವಿಗಳು ಕಿವುಡಾಗಬಾರದೆ ಎನಿಸಿದೆ ಕೃಷ್ಣಾ....

ನಿನ್ನ ಮ್ಲಾನವದನ ಅದೇಕೋ ಆತಂಕ ಉಂಟುಮಾಡಿದೆ. ಹೇಳಿಬಿಡು ಈಗಲೇ


ಬೃಂದಾವನದ ಋಣ ತೀರಿತಿಂದು ಗೆಳತೀ, ನಾನೊಮ್ಮೆ ಅವ್ವ ದೇವಕಿಯ ಮಡಿಲಲ್ಲಿ ಪವಡಿಸುವಾಸೆಯಾಗಿದೆ. ಅವಳ ಕಂಬನಿಯ ಒರೆಸಿ, ಸಾಂತ್ವನಗೊಳಿಸಬೇಕಿದೆ. ಅದೆಷ್ಟು ದಿನದ ನೋವು ಹೃದಯದಲ್ಲಿದ್ದಿರಬಹುದು ಅವಳಿಗೆ.


ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ?

ಬೃಂದಾವನವನ್ನು ತೊರೆಯುವೆಯಾ.?

ಅಕಟಾ....ಹೇಗೆ ಸಹಿಸಲಿ ನೀನಿಲ್ಲದ ಕ್ಷಣವಾ...? ಈ ಉಸಿರು, ಈ ದೇಹ ಎಲ್ಲವೂ ನಿನಗೇ ಮುಡಿಪಾಗಿರುವಾಗ ನೀನಿಲ್ಲದೆ ನಾನಿದ್ದೇನು ಪ್ರಯೋಜನೆ? 


ರಾಧೆ! ನಾನೆಲ್ಲಿ ನಿನ್ನ ತೊರೆವೆನೆಂದು ಹೇಳಿದೆ ನಲ್ಲೇ? 

ನನ್ನ ಕೊಳಲುಲಿಯಲೂ ನಿನದೇ ತಾನ. ನೀ ನಡೆವ ಪ್ರತೀ ಹೆಜ್ಜೆಯಲೂ ಗೆಜ್ಜೆಸದ್ದಲಿ ನಾನಿರುವೆನಲ್ಲಾ. ಕರೆದಾಗ ಓಡಿಬರುವೆ. ನಿನ್ನ ಮೃದುಮನಸು ಬೆಣ್ಣೆಯಂತೆ ಕರಗುವುದನ್ನು ನಾ ನೋಡಿದಾಗಲೆಲ್ಲಾ ಮಿಡಿವ ನನ್ನ ಹೃದಯದಲ್ಲಿ ನೂರು ಕಂಪನಗಳೇಳುವವು ಗೆಳತಿ. ನನ್ನೊಳಗೇ ಸಮ್ಮಿಳಿತಗೊಂಡವಳು ನೀನು. ನಿನ್ನ ಮರೆಯಬಲ್ಲೆನೇ ಹೇಳು.


ಕೃಷ್ಣಾ!

ನಿನ್ನೊಂದೊಂದು ನುಡಿಯೂ ಹಾಲುಪಾಯಸದಂತೆ ಸವಿಯುಂಟು. ಆದರೂ ತಲ್ಲಣಿಸುತಿದೆ ಮನ, ಅರಿಯದ ಶಂಕೆಯಲಿ ಅದುರುತಿವೆ ಅಧರಗಳು. ಮುದುರುತಿವೆ ಭಾವಗಳು. ಗರಿಗೆದರಿ ಹಾರುತಿದ್ದ ಕನಸ ಹಕ್ಕಿಗಳು ರೆಕ್ಕೆ ಮುರಿದಂತೆ ಮಲಗಿವೆ. ಬಿರುಗಾಳಿಯ ಸೂಚನೆಯೇ ಇದು? 


ನನ್ನ ಮಾತು ಕೇಳು ರಾಧೆ! ಇದು ಬಿರುಗಾಳಿಯಲ್ಲ. ಚಂಡಮಾರುತ !

ಕಂಸನ ಪಾಲಿಗೆ. ನನ್ನವ್ವನ ನೋಯಿಸಿದ್ದಕ್ಕೆ ನಾ ಎಬ್ಬಿಸುವ ಭೀಕರ ಅಲೆ. ಈ ಅಲೆಯಲ್ಲಿ ಕೊಚ್ಚಿಹೋಗುವನವ. ಸಮುದ್ರ ಭೋರ್ಗರೆಯುತಿದೆ ಆಪೋಷನಕೆ.


ಈ ಅಲೆಯಲಿ ನಾ ಕೊಚ್ಚಿಹೋಗುವೆನಲ್ಲಾ ಕೃಷ್ಣಾ!

ಕ್ಷಣವಾಂತು ನನ್ನ ಮೇಲೆ ಕರುಣೆಯಿಲ್ಲದಾಯಿತೇ ನಿನಗೆ?

ಕನ್ನಡಿಯಲಿ ಬಿಂಬತೋರಿ ಸ್ಮರಣೆ ಮಾಡೆಂದರೆ ಎಂತಾದೀತು ಗೆಳೆಯಾ?

ಅನುಗಾಲವೂ ನಿನ್ನ ಪಾದಕಮಲದಲಿ ಅನುರಾಗದಾನುಭೂತಿಯಲಿ ತೋಯ್ದು ಸಾರ್ಥಕಳೆನಿಸಿಕೊಳ್ಳುವ ಭಾಗ್ಯ ನನ್ನ ತೊರೆಯುವಾಗ ಹೇಗೆ ಬದುಕಲಿ ಹೇಳು.?


ಸಕಲಜೀವಿಗಳಿಗೂ ಅದರದೇ ಜೀವನ ಉಂಟು. ನಾ ನಿಮಿತ್ತ ಮಾತ್ರ. ಕೇವಲ ಪೂರಕವಾದೆ. ಭಾವನೆಗೆ ಹೂರಣವಾದೆ. ಕಾಮನೆಗೆ ಕಣ್ಣಾದೆ. ಪ್ರೀತಿ ಪ್ರೇಮಕೆ ಒಡಲಾದೆ, ಮಡಿಲಾದೆ. ನೋವುಗಳಿಗೆ ಹೆಗಲಾದೆ. ನಗುವು ನಲಿವುಗಳಿಗೆ ಜೊತೆಯಾಗಿ ನಿನ್ನ ಅತ್ಯಂತ ಒಲವಿನ ಸಖನಾದೆ ಗೆಳತಿ. ಇದು ನನ್ನ ಕರ್ತವ್ಯ. ನಾ ಬಾಧ್ಯ ಇದಕೆಲ್ಲ. ಚಿಂತೆಯ ಬಿಡು. ಹೋಗಲಪ್ಪಣೆ ನೀಡು ಮನಸೇ!

ಅವ್ವನ ಮುದ್ದಿನ ಕೂಸು ನಾನು. ಹಾತೊರೆತಿದೆ ಅವಳನ್ನು ಕಾಣಲು. ಅಣಿಮಾಡಿಕೊಡು ರಾಧೆ, ಪಯಣ ಸಿದ್ದವಾಗಿದೆ.


ರಾಧೆಯ ಅಳಲು ಮುಗಿಲು ಮುಟ್ಟಿತು.

ಕೊಳಲು ರಾಗ ಮರೆತಿತು. ಗಡಿಗೆಯೊಳಗಿನ ಬೆಣ್ಣೆ ಕರಗದೇ ಮುಳುಗಿಹೋಯಿತು. ಕಾರ್ಮೋಡ ಕವಿದು ಆವೀರ್ಭವಿಸುವ ಭೀಭತ್ಸ ಮಳೆಗಾಗಿ ಕಾಯುವ ಸರದಿ ರಾಧೆಯದಾಯಿತಲ್ಲಾ...

ಅವಳ ಅಳಲಿಗೆ ಕೊನೆಯೆಲ್ಲೆ..ಕೃಷ್ಣಾ........


Rate this content
Log in

Similar kannada poem from Drama