Vijaya Bharathi

Abstract Classics Others

4  

Vijaya Bharathi

Abstract Classics Others

ಚಿತ್ರ ಪಟಗಳು

ಚಿತ್ರ ಪಟಗಳು

2 mins
539


"ಅಜ್ಜಿ, ಆಲ್ಬಂ ಫೋಟೋ ತೋರಿಸು "ಒಂದೇ ಸಮನೆ ಮೊಮ್ಮಗಳು ಚಿನ್ನು ಗಲಾಟೆ ಮಾಡಲು ಶುರು ಮಾಡಿದಾಗ, ಮನೆ ಕೆಲಸಗಳನ್ನೆಲ್ಲಾ ಬಿಟ್ಟಲ್ಲೇ ಬಿಟ್ಟು

ರೂಮಿಗೆ ಹೋಗಿ ಬೀರು ತೆಗೆದು ಆಲ್ಬಂಗಳನ್ನು ತೆಗೆದು ತೋರಿಸಲು ಪ್ರಾರಂಭಿಸಿದಳು ಸುಮಾ. ತನ್ನ ಮದುವೆಯ ಫೋಟೋ ಗಳನ್ನು ಒಂದೊಂದೇ ತೆಗೆದು ತೋರಿಸುತ್ತಾ ಹೋದಾಗ , ಚಿನ್ನುವಿನ ಕುತೂ‌ಹಲ ಕೆರಳುತ್ತಾ ಸಾಗಿತು.


"ಅಜ್ಜಿ ಅವರು ಯಾರು? ನೀನೇಕೆ ಹೀಗೆ ಮೊಗ್ಗಿನ ಜಡೆ ಹಾಕಿಕೊಂಡಿದ್ಯಾ? ತಾತ ಯಾಕೆ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದಾರೆ? ಅವರೆಲ್ಲಾ ಯಾರು? ಅವರು ನಿನಗೆ ಹಣೆಗೆ ಏನು ಹಚ್ಚುತ್ತಿದ್ದಾರೆ?ನೀನು ಏಕೆ ಕೈ ಗೆಲ್ಲಾ ಡಿಸೈನ್ ಮಾಡಿಕೊಂಡಿದ್ದೀಯಾ?"

ಅಬ್ಬಾ ಚಿನ್ನುವಿನ ಪ್ರಶ್ನೆ ಗಳಿಗೆ ಉತ್ತರಿಸುತ್ತಾ ಉತ್ತರಿಸುತ್ತಾ ಸುಮಾ ತನ್ನ ಮದುವೆಯ ದಿನಕ್ಕೆ ಜಾರಿದಳು.


ತನ್ನ ಹಾಗೂ ಸುಧಾಕರ್ ಮದುವೆಯ ಕಥೆಯನ್ನು ಹೇಳುತ್ತಾ ಹೇಳುತ್ತಾ ಏದು ದಶಕಗಳ

ಹಿಂದಕ್ಕೆ ಹೊರಟುಹೋದಳು. ತನ್ನ ಮದುವೆಯ ಕಥೆಯನ್ನೆಲ್ಲಾ ತುಂಬಾ ಖುಷಿ ಯಿಂದ ಹೇಳುತ್ತಾ ಹೋದಂತೆ, ಹಳೆಯ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಹೋದಳು. ಸಮಯ ಸರಿದುದೇ ತಿಳಿಯಲಿಲ್ಲ. ಸುಧಾಕರ್ ನನ್ನು ಕಾಲೇಜಿನ ದಿನಗಳಿಂದಲೂ ಪ್ರೀತಿಸಿದ್ದು, ಪ್ರೀತಿಯನ್ನು ಒಳಗೇ ಬಚ್ಚಿಟ್ಟುಕೊಂಡಿದ್ದು, ನಂತರ ಸುಧಾಕರ್ ನ ಮನೆಯವರ ಮೂಲಕವೇ ವಿಷಯ ಪ್ರಸ್ತಾಪಿಸುವಂತಾದದ್ದು,ಕಡೆಗೂ ತನ್ನ ಪ್ರೀತಿ ಗೆದ್ದು ಸುಂದರ ಸುಖೀ ಸಂಸಾರ ತನ್ನದಾದದ್ದು,......ಎಲ್ಲವೂ ಅವಳ ಚಿತ್ತಭಿತ್ತಿಯಲ್ಲಿ ಸುರುಳಿ ಸುರುಳಿಗಳಾಗಿ ಬಿಚ್ಚಿಕೊಳ್ಳುತ್ತಾ ಹೋಯಿತು. ಚಿನ್ನು ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದರೂ ಯಾವುದಕ್ಕೂ ಉತ್ತರಿಸದೇ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿದ್ದಳು ಸುಮಾ.


ಚಿನ್ನು ಆಲ್ಬಂ ನ ಹಾಳೆಗಳನ್ನು ತಿರುಗಿಸುತ್ತಾ ಕುತೂಹಲದಿಂದ ಫೋಟೋಗಳನ್ನು ನೋಡುತ್ತಿತ್ತು. ಯಾಕೋ ಅಜ್ಜಿ ಏನೂ ಮಾತನಾಡದೇ ಸುಮ್ಮನೆ ಕುಳಿತಿರುವುದನ್ನು ಕಂಡು ಚಿನ್ನುಗೆ ತುಂಬಾ ಬೇಸರವಾಗಿ, ಅಜ್ಜಿ ಯ ಮೈ ಮುಟ್ಟಿ ತೊಡೆಯೇರಿ

"ಅಜ್ಜಿ ಅಜ್ಜಿ ನಿನ್ನ ಮದುವೆಯಲ್ಲಿ ನನ್ನ ಫೋಟೋನೇ ಇಲ್ಲ. ಮಮ್ಮಿ ಪಪ್ಪಾದು ಇಲ್ಲ . ಏಕಜ್ಜಿ"


ಮಗುವಿನ ಈ ಮುಗ್ಧ ಮಾತಿಗೆ ಜೋರಾಗಿ ನಕ್ಕ ಸುಮಾ, "ಆಗ ನಿನ್ನ ಮಮ್ಮಿ ,ಪಪ್ಪ ,ನೀನು ಯಾರೂ ಇರಲಿಲ್ಲ ಮರಿ, ಈಗ ನಿಮ್ಮ ಫೋಟೋ ಆಲ್ಬಂ ತೋರಿಸುತ್ತೀನಿ . ಒ.ಕೆ.ನಾ "


"ಒ.ಕೆ.ಅಜ್ಜಿ ಬೇಗ ತೋರಿಸು ಮತ್ತೆ "


"ಆಯ್ತು ಚಿನ್ನು "


ಚಿನ್ನು ಮಗುವಾಗಿದ್ದಾಗಲಿನ ಫೋಟೋ ಆಲ್ಬಂ ತೆಗೆದು ಅದರ ಮುಂದಿಟ್ಟು ಒಂದೊಂದೇ ಹಾಳೆ ಮಗಚುತ್ತಾ ಹೋದ ಸುಮಾಗೆ ತನ್ನ ಮಗಳು ಸೀಮಾ , ಮಗುವನ್ನು ಪಡೆಯಲು ಪಟ್ಟ ಕಷ್ಟಗಳೆಲ್ಲಾ ನೆನಪಾಗತೊಡಗಿತು.


ಸೀಮಾಳಿಗೆ ಮದುವೆಯಾಗಿ ಏಳು ವರ್ಷಗಳಾದರೂ ಮಕ್ಕಳಾಗುವ ಸೂಚನೆಯೇ ಇಲ್ಲವಾದಾಗ, ಅತ್ತೆಯಿಂದ ಕೇಳ ಬಾರದ್ದನ್ನೆಲ್ಲಾ ಕೇಳಿ, ಎಲ್ಲರಿಂದಲೂ ಬಂಜೆ ಎನ್ನಿಸಿಕೊಳ್ಳುವಾಗ ಕಣ್ಣೀರು ಹಾಕುತ್ತಿದ್ದುದು, ಅವಳು ಕನ್ಸಲ್ಟ ಮಾಡದ ಡಾಕ್ಟರ ಗಳಿಲ್ಲ, ಹರಕೆ ಹೊರದ ದೇವರುಗಳಿಲ್ಲ. ಐ.ವಿ.ಎಫ್. ಸೆಂಟರ್ ಹೊಕ್ಕರೂ ಪ್ರಯೋಜನವಾಗದಿದ್ದಾಗ, ಕಡೆಗೆ ಒಂದು ಮಗುವನ್ನು ಅಡಾಪ್ಟ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು.


ಮಗುವನ್ನು ಅಡಾಪ್ಟ್ ಮಾಡಿಕೊಳ್ಳುವ ವಿಷಯದಲ್ಲಿ ಪರ ವಿರುದ್ಧ ವಾದ ವಿವಾದಗಳು ನಡೆದು, ಕಡೆಗೆ ತಮ್ಮ ಸಂಬಂಧಿಕರಲ್ಲೇ ಒಬ್ಬರಾದ, ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ಹಸುಗೂಸು ಚಿನ್ನುವನ್ನು ಎದೆಗಪ್ಪಿಕೊಂಡಳು ಸೀಮಾ. ಇಂದು ಅದೇ ಮಗು ಚಿನ್ನು ಎರಡೂ ಮನೆಗಳ ಕಣ್ಮಣಿಯಾಗಿದೆ.

"ಅಬ್ಬಾ ಇಂದು ಈ ಮಗುವಿನ ಹಠದಿಂದ ಆಲ್ಬಂ ನೋಡುವಂತಾಗಿ ಹಳೆಯ ಘಟನೆಗಳೆಲ್ಲಾ ಕಣ್ಮುಂದೆ ಸುಳಿದಾಡುವಂತಾಯಿತು. " ಸುಮಾ ತನಗೆ ಮನೆ ಕೆಲಸವಿದೆಯೆಂದು ಮೇಲೆದ್ದರೆ, ಚಿನ್ನು ಆಲ್ಬಂ ಅನ್ನು ತಿರುವಿ ಹಾಕುತ್ತಾ ಕುಳಿತಿತ್ತು.



Rate this content
Log in

Similar kannada story from Abstract