Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 1

ಇಷ್ಟ ದೇವತೆ ಭಾಗ 1

2 mins
194



ಹೆಣ್ಣು ಮನೆಯ ಕಣ್ಣು , ಹೆಣ್ಣು ದೇವತೆ, ಹೆಣ್ಣು ಹುಟ್ಟಿದ ಮನೆ ತಣ್ಣಗೆ , ಹತ್ತು ಜನ ಗಂಡು ಮಕ್ಕಳನ್ನು ಹೆತ್ತರೂ ಮುದ್ದಾದ ಒಂದಾದರೂ ಹೆಣ್ಣು ಮಗು ಇದ್ದರೆನೆ ಮನೆ ಲಕ್ಷಣ, ಈ ರೀತಿಯಾಗಿ ಹೇಳುವಂತಹ ಸಮಾಜದಲ್ಲಿಯೇ ಒಮ್ಮೊಮ್ಮೆ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಎನ್ನುವಂತೆ ಮೂಗು ಮುರಿಯುವ ಜನರೂ ಕೂಡ ಇದ್ದಾರೆ. ಆದರೆ ತಮ್ಮ ಮಗನಿಗೆ ಹೆಣ್ಣು ಹುಡುಕುವಾಗ ಅಂದ ಚೆಂದದ ಹೆಣ್ಣನ್ನು ಹುಡುಕುತ್ತಿರುತ್ತಾರೆ. ಒಟ್ಟಿನಲ್ಲಿ ಹೆಣ್ಣು, ಜೀವ ಇರುವ ಗೊಂಬೆಯಂತೆ ಎನ್ನಿಸಿ ಬಿಡುತ್ತದೆ.


ಈ ಹೆಣ್ಣು ಮಗು ಹೆತ್ತಾಗ ತಾಯ್ತನ ಎನ್ನುವುದು ಹೊಳೆಯಾಗಿ ಹರಿದು, ಪರಿಪೂರ್ಣ ತಾಯಿಯಾಗಿ , ತನ್ನ ಮಕ್ಕಳನ್ನು ಬೆಳೆಸುವಲ್ಲಿ ಬಹುಪಾಲು ಆ ತಾಯಿಯೇ ಮುಖ್ಯ ಪಾತ್ರ ವಹಿಸುವಳು. ಹೀಗೊಬ್ಬ ಮಹಾತಾಯಿಯು ಎಂಟು ಮಕ್ಕಳನ್ನು ಹೆತ್ತು ,, ಮಹಾತಾಯಿಯಾಗಿ ಹೇಗೆ ತನ್ನ ಮಾತೃ ವಾತ್ಸಲ್ಯ ಹರಿಸಿದಳು,ಏನೆಲ್ಲ ಕಷ್ಟ ಪಟ್ಟಳು ಎಂಬುದನ್ನು ಕೆಲವೊಂದು ಭಾಗಗಳ ರೂಪದಲ್ಲಿ ನಿಮ್ಮ ಮುಂದೆ ತರುವ ಕಿರು ಪ್ರಯತ್ನ ಮಾಡಿದ್ದೇನೆ. ಓದಿ ಹರಸಿ ...



ಸುಂದರವಾದ ಹಸಿರಿನಿಂದ ತುಂಬಿದ ಮಲೆನಾಡಿನ ತಗ್ಗಿನ ಚಿಕ್ಕ ಊರು ರಾಮಾಪುರ. ಅಲ್ಲಿ ಅತೀ ಸಿರಿವಂತ ಅಲ್ಲದ, ಅತೀ ಬಡತನದ್ದು ಅಲ್ಲದ ಒಂದು ಸುಸಂಸ್ಕೃತ ಕುಟುಂಬ. ಹಿಂದೆಯಂತೂ ಅವಿಭಕ್ತ ಕುಟುಂಬಗಳು ಹೆಚ್ಚಾಗಿ ಇರುತ್ತಿದ್ದ ಕಾರಣ ಇದೂ ಕೂಡ ತುಂಬು ಕುಟುಂಬ. ಮನೆಯಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಜನರಿದ್ದ ಕಾರಣ ನಾನು ಅಂದರೆ ಗಿರಿಜಮ್ಮ ,ಈ ಮನೆಯ ಮುದ್ದಿನ ಮಗಳು, ಮುದ್ದಿನ ಮೊಮ್ಮಗಳು, ನನ್ನ ಇಬ್ಬರು ತಮ್ಮಂದಿರಿಗೆ ಪ್ರೀತಿಯ ಅಕ್ಕ, ಐದು ಆರು ಜನ ಚಿಕ್ಕಪ್ಪಂದಿರ ಹೆಣ್ಣು ಮಕ್ಕಳಿಗೆ ಅಕ್ಕನೂ ಹೌದು ಒಂದಿಬ್ಬರಿಗೆ ತಂಗಿಯೂ ಹೌದು. ಸೋದರತ್ತೆಯರ ಮುದ್ದಿನ ಸೊಸೆಯಾದ ನಾನು ಇವರೆಲ್ಲರ ಪ್ರೀತಿಯಲ್ಲಿ ದಿನಕಳೆದದ್ದು ಗೊತ್ತಾಗುತ್ತಲೇ ಇರಲಿಲ್ಲ. ಮುಂದೆ ಹೋದಂತೆ ಎಲ್ಕರ ಪರಿಚಯ ಮಾಡಿ ಕೊಡುತ್ತೇನೆ. ಈಗ ನನ್ನಜ್ಜ ಮಹದೇವಪ್ಪ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲುಗಾರ. ಈಗ ಪೂರ್ತಿಯಾಗಿ ವಯಸ್ಸಾಗಿದೆ. ಆದರೂ ನನ್ನಜ್ಜ ಖಡಕ್ಕಾಗಿಯೇ ಇದ್ದಾರೆ...



ಈ ನನ್ನ ಅಜ್ಜನಿಗೆ ಮುದ್ದಿನ ಮೊಮ್ಮಗಳಾದ ನಾನು ಊಟ ಕೊಡುವುದು, ನೀರು ಇಡುವುದು, ಅಜ್ಜನ

ಖಜಾನೆಯನ್ನು ನೋಡಿಕೊಳ್ಳುವುದು, ಮಾಡಬೇಕಾಗಿತ್ತು,ಆದರೆ ಹೊರಗೆ ಮಾತ್ರ ಹೋಗಬಾರದಾಗಿತ್ತು.. ನಾನು ಸಹ ಅವರಿಚ್ಛೆಯೆಂತೆಯೇ ಇರುತ್ತಿದ್ದೆ. ಯಾವುದಕ್ಕೂ ಹೇಳಿಸಿ ಕೊಳ್ಳುತ್ತಿರಲಿಲ್ಲ. ಬೈಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಮನೆಯವರೆಲ್ಲರಿಗೂ ಅಚ್ಚು ಮೆಚ್ಚಿನ ಮುದ್ದಿನ ಮಗಳಾಗಿ, ಮೊಮ್ಮಗಳಾಗಿ ಇರುತ್ತಿದ್ದೆ. ಅಜ್ಜ ನನ್ನನ್ನು ಎಂದೂ ಹೊರಗೆ ಆಡಲೂ, ಓಡಾಡಲು ಬಿಡುತ್ತಿರಲಿಲ್ಲ, ಆದರೆ ಪ್ರೀತಿ ಜಾಸ್ತಿ. ಈಗ ನನಗೆ ಎಪ್ಪತ್ನಾಲ್ಕು ವರ್ಷ ವಯಸ್ಸು. ನಾನು ಹೇಳುತ್ತಿರುವುದು ನನ್ನದೇ ಸುಂದರ ಅನುಭವದ ಸಾರದ ಕತೆ. ಹಾಗಾದರೆ ನನ್ನಜ್ಜ ತುಂಬಾ ಹಿಂದಿನ ಕಾಲದವರು. ಹಾಗಾಗಿ ಅವರ ಪ್ರಕಾರ ಹೆಣ್ಣು ಮಕ್ಕಳು ಚೆಂದಾಗಿ ಮನೆ ಹಿಡಿದು ಒಳಗಡೆ ಇರಬೇಕು ಎನ್ನುವುದು ಅವರ ನಿಲುವಾಗಿತ್ತು.


ಚಿಕ್ಕಂದಿನಲ್ಲಿ ಓದಬೇಕು ಎನ್ನುವ ನನ್ನ ಆಸೆಯೊಂದೇ ನನ್ನಲ್ಲಿ ಈಡೇರದೆ ಉಳಿದಂತಹ ಆಸೆಯಾಗಿತ್ತು ಅಂತಾ ಹೇಳಬಹುದು. ಅದು ಕೂಡ ಮಹಾದೇವಪ್ಪಜ್ಜನ ಆಜ್ಞೆ ಕೂಡ ಆಗಿತ್ತು. ನನ್ನ ಅಪ್ಪ ಮಲ್ಲಪ್ಪ , ನನ್ನ ಅವ್ವ ಕಮಲವ್ವ ಇವರಿಬ್ಬರು ಯಾವಾಗಲೂ ಅಜ್ಜನ ಮಾತಿಗೆ ಎದಿರು ಆಡಿದವರಲ್ಲ, ನಿಂತು ಮಾತಾಡಿದವರೂ ಅಲ್ಲ. ಹೀಗಿದ್ದಾಗ ಮನೆಯಲ್ಲಿ ಅಜ್ಜನ ಮಾತೇ ವೇದ ವಾಕ್ಯವಾಗಿತ್ತು ಅಂತ ಹೇಳಬಹುದು...




ಗಿರಿಜಮ್ಮನ ಮುಂದಿನ ದಿನದ ಬದುಕು ಹೇಗಿತ್ತು ಅಂತ ಭಾಗ ಎರಡರಲ್ಲಿ ನೋಡೋಣ...




Rate this content
Log in

Similar kannada story from Classics