StoryMirror Feed

Children Stories Classics

3.9  

StoryMirror Feed

Children Stories Classics

ಮಕ್ಕಳ ಕಥೆ: ರಂಗೇಗೌಡನ ದುರಾಸೆ

ಮಕ್ಕಳ ಕಥೆ: ರಂಗೇಗೌಡನ ದುರಾಸೆ

2 mins
11.6K


ರಂಗೇನಹಳ್ಳಿ ಎಂಬೂರಿನಲ್ಲಿ ರಂಗೇಗೌಡ ಎಂಬ ದೊಡ್ಡ ಸಾಹುಕಾರನಿದ್ದನು. ಆತನ ಬಳಿ ತುಂಬಾ ಹಣ, ಆಸ್ತಿಗಳೆಲ್ಲ ಇದ್ದರೂ ಅವನಿಗೆ ತೃಪ್ತಿಯೇ ಇರಲಿಲ್ಲ. ಅವರ ಮನೆಗೆ ಯಾರೇ ಬಂದು ಸಹಾಯ ಕೇಳಿದರೂ ಆತ ಏನಾದರೂ ಒಂದು ಸಬೂಬು ಹೇಳಿ ಬರಿಗೈ ತೋರಿಸಿ ಬಾಗಿಲು ಹಾಕಿ ಒಳಗಡೆ ನಡೆದು ಬಿಡುತ್ತಿದ್ದ. 


ರಂಗೇಗೌಡ ಒಂದು ದಿನ ಪೇಟೆಯಿಂದ ಕೈಚೀಲದಲ್ಲಿ ಸಾಮಾನು ಹಿಡಿದುಕೊಂಡು ಹಳ್ಳಿಗೆ ಬರುವಾಗ ಕತ್ತಲಾಗಿಬಿಟ್ಟಿತ್ತು. ಅವನ ಬಳಿ ಯಾವುದೇ ರೀತಿಯ ಬೆಳಕು ಇರಲಿಲ್ಲ. ಹೇಗೋ ಮನೆಗೆ ಬಂದವನೇ ಆತ ಸಾಮಾನುಗಳನ್ನೆಲ್ಲ ಒಳಗಡೆ ಇಟ್ಟು ಹಣದ ಚೀಲವನ್ನು ತೆಗೆದು ಕಪಾಟಿನಲ್ಲಿರಿಸಲು ಹುಡುಕಾಡಿದರೆ ಚೀಲವೇ ಇಲ್ಲ. ದಾರಿಯಲ್ಲಿ ಬಿತ್ತೋ, ಸಂತೆಯಲ್ಲಿ ಬಿತ್ತೋ, ಬಸ್ಸಲ್ಲಿ ಬರುವಾಗ ಬಿತ್ತೋ ಅಥವಾ ಯಾರಾದರೂ ಕಳ್ಳರು ಲಪಟಾಯಿಸಿದರೋ ಅವನಿಗೆ ಗೊತ್ತೇ ಆಗಲಿಲ್ಲ. ಆತ ಆ ದಿನವಷ್ಟೇ ಬ್ಯಾಂಕಿನಿಂದ ಐವತ್ತು ಸಾವಿರದ ನೋಟಿನ ಕಟ್ಟುಗಳನ್ನು ತಂದಿದ್ದ. ರಂಗೇಗೌಡನಿಗೆ ತನ್ನ ಜೀವವೇ ಹಾರಿ ಹೋದಷ್ಟು ಸಂಕಟವಾಯ್ತು. ಆಮೇಲೆ ಮುಂಜಾನೆ ಎದ್ದವನೇ ಐವತ್ತು ಸಾವಿರ ಹಣವಿದ್ದ ಚೀಲ ಕಳೆದು ಹೋಗಿದ್ದರ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟು ಬಂದ. 


ಅದೇ ಊರಿನಲ್ಲಿ ಮಣಿಕಂಠ ಎಂಬ ಹುಡುಗನಿದ್ದ. ಆತನ ಮನೆಯಲ್ಲಿ ತುಂಬಾ ಬಡತನ. ಆದರೆ ಕಲಿಕೆಯಲ್ಲಿ ಆತ ತುಂಬಾ ಜಾಣನಿದ್ದ. ಅವನ ಅಪ್ಪ ಅಮ್ಮ ಅವನಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟಿದ್ದರು. ಮಣಿಕಂಠ ಶಾಲೆಗೆ ಹೋಗುತ್ತಿದ್ದಾಗ ಆ ದುಡ್ಡಿನ ಚೀಲ ಆಕಸ್ಮಿಕವಾಗಿ ಅವನಿಗೆ ಸಿಕ್ಕಿತು. ಆತ ಮನೆಗೆ ತಂದು ಅಪ್ಪ ಅಮ್ಮನಿಗೆ ಕೊಟ್ಟು 'ಅಪ್ಪಾ, ಈ ಹಣದ ಚೀಲ ಯಾರದ್ದೋ ಗೊತ್ತಿಲ್ಲ. ದಾರಿಯಲ್ಲಿ ಸಿಕ್ಕಿತು. ಪಾಪ ಅವರು ಎಷ್ಟು ಸಂಕಟ ಪಡುತ್ತಾರೋ ಏನೋ? ಇದನ್ನು ಆದಷ್ಟು ಬೇಗ ಪೊಲೀಸರಿಗೆ ತಲುಪಿಸಿಬಿಡೋಣ' ಎಂದು ಹೇಳಿದ. ಮಣಿಕಂಠ ಅಪ್ಪನ ಜತೆ ಪೇಟೆಗೆ ಬಂದು ಹಣದ ಚೀಲವನ್ನು ಪೊಲೀಸರಿಗೆ ತಲುಪಿಸಿದನು. 


ಪೊಲೀಸರು ಕೂಡಲೇ ರಂಗೇಗೌಡನನ್ನು ಕರೆಸಿ ಆ ಚೀಲ ತೋರಿಸಿ 'ನೀವು ಕಳೆದುಕೊಂಡ ಚೀಲ ಇದೇ ಹೌದೋ ಅಲ್ಲವೋ' ಎಂದು ಕೇಳಿದರು. 'ಹೌದು ಹೌದು ಎಂದು ಚೀಲ ತೆಗೆದುಕೊಂಡ ರಂಗೇಗೌಡನಿಗೆ ಕೂಡಲೇ ಮನಸಲ್ಲೇ ದುರಾಸೆಯೊಂದು ಬಂತು. 'ಸ್ವಾಮಿ, ಚೀಲವೇನೋ ನನ್ನದೇ. ಆದರೆ ಆ ಚೀಲದಲ್ಲಿ ಎಪ್ಪತ್ತೈದು ಸಾವಿರವಿತ್ತು. ಇದರಲ್ಲಿ ಐವತ್ತೇ ಸಾವಿರವಿದೆ. ಉಳಿದ ಹಣವನ್ನು ಬಹುಶ: ಚೀಲ ತಂದವರು ಲಪಟಾಯಿಸಿಬಿಟ್ಟಿದ್ದಾರೆ' ಎಂದನು. 


ಆಗ ಪೊಲೀಸರು 'ಏನ್ರೀ, ಕಂಪ್ಲೇಂಟಿನಲ್ಲಿ ಐವತ್ತು ಸಾವಿರ ಎಂದು ಬರೆಸಿ ಇವತ್ತು ಎಪ್ಪತ್ತೈದು ಸಾವಿರ ಎಂದು ಸುಳ್ಳು ಹೇಳುತ್ತಿದ್ದೀರಲ್ಲಾ. ಸತ್ಯದಿಂದ ನಿಮ್ಮ ಹಣವನ್ನು ವಾಪಸ್‌ ತಂದು ಕೊಟ್ಟ ಆ ಬಾಲಕನ ಮೇಲೇ ಕಳ್ಳತನದ ಆರೋಪ ಹೊರಿಸುತ್ತಿದ್ದೀರಲ್ಲಾ. ಈ ಹಣದ ಚೀಲ ನಮ್ಮಲ್ಲೇ ಇರಲಿ. ಎಪ್ಪತ್ತೈದು ಸಾವಿರವಿದ್ದ ಹಣದ ಚೀಲ ಸಿಕ್ಕಿದರೆ ಪುನ: ನಿಮ್ಮನ್ನು ಕರೆಸುತ್ತೇವೆ. ಈಗ ಮನೆಗೆ ನಡೆಯಿರಿ ಎಂದರು ತನ್ನ ದುರಾಸೆಯಿಂದ ಕೈಗೆ ಬಂದ ಹಣವನ್ನೂ ಕಳೆದುಕೊಂಡ ರಂಗೇಗೌಡ ಪಶ್ಚಾತ್ತಾಪದಿಂದ ಹಳ್ಳಿಯತ್ತ ಸಾಗಿದ. 


Rate this content
Log in