Vijaya Bharathi.A.S.

Abstract Children Stories Others

4  

Vijaya Bharathi.A.S.

Abstract Children Stories Others

ಶುಭ ಶಕುನ

ಶುಭ ಶಕುನ

2 mins
264


ಆ ಮನೆಯ ಅಜ್ಜ ,ತನ್ನ ಐದು ವರ್ಷ ದ ಮೊಮ್ಮಗ ಬಾಬುವನ್ನು ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ಒಳಗೆ ಹೋದ ಅವರು ,ಹಲವು ವಿಧದ ಪಕ್ಷಿಗಳಿಂದ ಪ್ರಾರಂಭಿಸಿ, ಮುಂದೆ ಮಂಗಗಳು, ಹುಲಿ ,ಸಿಂಹ , ಗೇಂಡಾ ಮೃಗ, ತೋಳ, ಚಿರತೆ ಒಂಟೆ ಎಲ್ಲಾ ಪ್ರಾಣಿಗಳನ್ನೂ ತೋರಿಸಿ, ಅವುಗಳ ಬಗ್ಗೆ ವಿವರಣೆ ಕೊಡುತ್ತಾ, ನಿಧಾನವಾಗಿ ನಡೆಸಿಕೊಂಡು ಹೋದರು. ಮೊದ ಮೊದಲು ತುಂಬಾ ಉತ್ಸಾಹದಿಂದ ಎಲ್ಲವನ್ನೂ ನೋಡುತ್ತಾ ಹೋದ ಮೊಮ್ಮಗ, ಅರ್ಧ ಗಂಟೆಯಾದ ಬಳಿಕ  ತನಗೆ ಕಾಲುನೋವು ಎಂದು ಗಲಾಟೆ ಶುರು ಮಾಡಿದಾಗ, ಅಜ್ಜ ಅವನನ್ನು ಅಲ್ಲೇ ಕಲ್ಲು ಬೆಂಚಿನ ಮೇಲೆ ಐದು ನಿಮಿಷ ಕೂರಿಸಿ, ತಿನ್ನಲು ಚಾಕಲೇಟ್, ಬಿಸ್ಕತ್ತು, ಲೇಸು ಮುಂತಾದುವುಗಳನ್ನು ಕೊಟ್ಟು, ನಂತರ ಮುಂದೆ ಕರೆದುಕೊಂಡು ಹೋದರು. ಐದು ನಿಮಿಷ ಎರಡು ಹೆಜ್ಜೆ ಇಟ್ಟಾದ ನಂತರ, ಬಾಬುವಿನ ಕಣ್ಣಿಗೆ ಎದುರಿಗೆ ಇದ್ದ ಐಸ್ಕ್ರೀಮ್ ಅಂಗಡಿ ಕಂಡಾಗ ಮತ್ತೆ ಕಾಲುನೋವು ಎಂದು ಗಲಾಟೆ ಮಾಡಿ, ತಾತನ ಕೈಯಲ್ಲಿ ಐಸ್ ಕ್ರೀಮ್ ತೆಗೆಸಿ ಕೊಂಡು ತಿಂದು ಮುಗಿಸಿದ. 

ನಂತರ ಬಾಬುವಿನ ಕೈ ಹಿಡಿದು ಕೊಂಡು ಆನೆ, ಕುದುರೆ,ಒಂಟೆ, ಕಾಡುಕೋಣ, ಹೆಬ್ಬಾವುಗಳು ಮೀನುಗಳು ಎಲ್ಲವನ್ನೂ ತೋರಿಸುತ್ತಾ ಹೋದರು. ಸ್ವಲ್ಪ ಹೊತ್ತು ಸುಮ್ಮನಿದ್ದ ಬಾಬು , ಮತ್ತೆ ಗಲಾಟೆ ಶುರು ಮಾಡಿದ.'ಅಯ್ಯೋ ನಾನು ಯಾಕಾದರೂ ಈ ಮಗುವನ್ನು ಕರೆದುಕೊಂಡು ಇಲ್ಲಿಗೆ ಬಂದನೋ?, ಇನ್ನು ಮನೆಗೆ ಹಿಂದಿರುಗುವುದೇ ಸರಿ ಎಂದು ಕೊಂಡು,

',ಬಾಬು ಮರಿ ಈಗ ಮನೆಗೆ ಹೋಗೋಣವ?,:, ಅಂತ ಮೆಲ್ಲನೆ ಕೇಳಿದಾಗ, 

'ತಾತ ನನಗೆ ತುಂಬಾ ದಾಹ , ಅಲ್ಲಿ ಜೂಸ್ ಇದೆ ಕೊಡಿಸು', ಎಂದು ಹಠ ಮಾಡಿದಾಗ ಅವನಿಗೊಂದು ಫ್ರೂಟಿ ಕೊಡಿಸಿ, ತಾವೂ ಒಂದು ಕುಡಿದು , ಮುಖ್ಯ ದ್ವಾರದ ಕಡೆಗೆ ಹೊರಟರು.

ಆಗ ಇದ್ದಕ್ಕಿದ್ದಂತೆ ಬಾಬು ಆ ಕಡೆ ತೋರಿಸಿ ತಾತನ ಕೈಯ್ಯನ್ನು ಎಳೆದುಕೊಂಡು, ಕರೆದುಕೊಂಡು ಹೋದ. ಅವರು ಮೊಮ್ಮಗ ತೋರಿಸಿದ ಕಡೆ ಹೊರಟರು. 

ಅಲ್ಲಿ ಬಣ್ಣ ಬಣ್ಣದ ನವಿಲುಗಳು ಗರಿಬಿಚ್ಚಿ ಧ್ವನಿ ಮಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದವು. ಅವುಗಳನ್ನು ನೋಡಿ ಬಾಬುವಿಗೆ ಖುಷಿಯಾಯಿತು.

',ತಾತ ಕಲರ್ ಕಲರ್ ಪೀಕಾಕ್ ನೋಡು', ಅಂತ ತೋರಿಸಿ ಕೈ ತಟ್ಟುತ್ತಾ ನಿಂತ.

ತಾವು ಮಗುವನ್ನು ಕರೆದುಕೊಂಡು ಬಂದಿದ್ದ  ಸಾರ್ಥಕವಾಯಿತು ಎಂದು ಕೊಂಡರು ಅಜ್ಜ.

ಅಲ್ಲಿಯವರೆಗೆ ಸುಡು ಬಿಸಿಲು ಇತ್ತು. ಇದ್ದಕ್ಕಿದ್ದಂತೆ  ಹೊರಗಡೆ ಮೋಡಿ ಕವಿದ ವಾತಾವರಣ .  ಆಗ ತಾತ 'ಹೋ ಈ ಮೋಡಗಳನ್ನು ನೋಡಿಯೇ ನವಿಲುಗಳು ಸಂತೋಷ ದಿಂದ ನರ್ತನ ಮಾಡುತ್ತಿವೆ, ಇನ್ನು ಮಳೆ ಬರಬಹುದು, ಬೇಗ ಮನೆಗೆ ಹೊರಟು ಬಿಡಬೇಕು ', ಎಂದುಕೊಳ್ಳುತ್ತಾ ಅವರು ಮೊಮ್ಮಗನನ್ನು ಕರೆದುಕೊಂಡು ಬೇಗ ಬೇಗ ಹೆಜ್ಜೆ ಹಾಕಿ, ಆಟೋ ಹತ್ತಿ ಕುಳಿತರು ಅದೆಲ್ಲಿತ್ತೋ? ಪಟಪಟನೆ ದಪ್ಪ ದಪ್ಪ ಹನಿಗಳು ಶುರುವಾಗಿಯೇ ಹೋಯಿತು. ಸುಮಾರು ತಿಂಗಳುಗಳಿಂದ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಮಳೆ ಇಂದು ಧಾರಾಕಾರವಾಗಿ ಸುರಿದು ಹೋಯಿತು. ಅಜ್ಜ ಮತ್ತು ಮೊಮ್ಮಗ ಮಳೆಯಲ್ಲಿಯೇ ಮನೆಗೆ ಬಂದರು.  ಮನೆಯೊಳಗೆ ಕಾಲಿಡುತ್ತಿದ್ದಂತೆ ಅಜ್ಜ , ತಮ್ಮ ಹೆಂಡತಿ ಕಡೆ ತಿರುಗಿ 

"ನೋಡಿದೆಯಾ ಇವತ್ತು ಪ್ರಾಣಿ ಸಂಗ್ರಹಾಲಯ ದಲ್ಲಿ ನವಿಲುಗಳು ತಮ್ಮ ಹಸಿರು ಗುರಿಗಳನ್ನು ಬಿಚ್ಚಿ ಕೇಕೆ ಹಾಕುತ್ತಾ ನರ್ತನ ಮಾಡಿದ್ದನ್ನು ನೋಡಿ ಬಂದೆ. ಬಹಳ ದಿನಗಳಿಂದ ಸತಾಯಿಸುತ್ತಿದ್ದ ಮಳೆ ಬಂದೇ ಬಿಟ್ಟಿತು. "

ಎಂದು ಖುಷಿಯಿಂದ ಹೇಳಿದಾಗ ಅಜ್ಜಿ

"ಹೂಂ ಮತ್ತೆ, ನವಿಲು ಗರಿ ಗೆದರಿ ಕುಣಿದರೆ ಅದೊಂದು ಶುಭ ಸಂಕೇತ ಅಂತೆ. ಹೇಗೋ ಅನ್ನದಾತನ ಬಾಡಿದ ಮುಖ ಅರಳಿತು."

ನವಿಲು ಗರಿ ಬಿಚ್ಚುವುದಕ್ಕೂ ಮಳೆಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಅಜ್ಜ ಮಾತನಾಡುತ್ತಿದ್ದರು.


ಅಜ್ಜ ಅಜ್ಜಿ ಮಾತನಾಡುತ್ತಾ ಇದ್ದರೆ ಬಾಬು ಮನೆಯ ಬಾಗಿಲಿನಲ್ಲಿ ನಿಂತು ಮಳೆಯ ಹನಿಗಳಿಗೆ ಕೈ ಒಡ್ಡಿ

", ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ",ಅಂತ ಖುಷಿಯಿಂದ ಕುಣಿಯುತ್ತಿದ್ದ.


Rate this content
Log in

Similar kannada story from Abstract