Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ

3 mins
319



ಅಂದು ದೀಪಾವಳಿಯ ಪ್ರಾರಂಭ. ಹತ್ತು ವರ್ಷದ ರಶ್ಮಿಯ ಶಾಲೆಗೆ ಮರುದಿನದಿಂದ ನಾಲ್ಕು ದಿನಗಳು ದೀಪಾವಳಿ ಹಬ್ಬದ ರಜ. ಸಾಯಂಕಾಲ ಶಾಲೆಯಿಂದ ಬಂದವಳೇ ಖುಷಿಯಿಂದ ಕುಣಿಯುತ್ತಾ, 'ಅಮ್ಮ ನನಗೆ ನಾಳೆಯಿಂದ ನಾಲ್ಕು ದಿವಸಗಳ ಕಾಲ ಸ್ಕೂಲಿಗೆ ರಜೆ.ಅಷ್ಟೇ ಅಲ್ಲದೇ ಹೋಂವರ್ಕ್ ಕೂಡ ಇಲ್ಲ. ಇವತ್ತೇ ಹೋಗಿ ಪಟಾಕಿಗಳನ್ನು ತಂದು ಬಿಡೋಣ ನಾನು ಈಗ ಆಟಕ್ಕೆ ಹೋಗುತ್ತೀನಿ.' ಅಂತ ಅಮ್ಮನಿಗೆ ಹೇಳಿ ಮನೆಯಿಂದ ಹೊರಗೆ  ಹೊರಟೇ ಬಿಟ್ಟಳು  ಅವಳಮ್ಮ ಸುಮನಾ ಅವಳಿಗೆ ಹಾಲು ಕುಡಿದು ಹೋಗೆನ್ನುತ್ತಿದ್ದರೂ ಅದನ್ನು ಕೇಳಿಸಿಕೊಳ್ಳದೇ  ಆಟಕ್ಕೆ ಓಡೇ ಬಿಟ್ಟಳು.  ಅಂದು ಅವರಪ್ಪ ಆಫೀಸ್ ನಿಂದ ಬಂದ ನಂತರ,  ಅವರ ಜೊತೆ ಹೋಗಿ ಪಟಾಕಿಗಳನ್ನು ತಂದಳು.

ಅವುಗಳನ್ನೆಲ್ಲ ತಾತ ಮತ್ತು ಅಜ್ಜಿ ಗೆ ತೋರಿಸಿ ಸಂತೋಷ ಪಟ್ಟಿದ್ದೆ ಪಟ್ಟಿದ್ದು.  ಮೊಮ್ಮಗಳ ಸಂತೋಷ ವನ್ನು ನೋಡುತ್ತಾ ಇದ್ದ ತಾತನಿಗೂ ತುಂಬಾ ಸಂತೋಷ. ಅವರು ಮೊಮ್ಮಗಳನ್ನು ಕರೆದು ಹತ್ತಿರ ಕೂರಿಸಿಕೊಂಡು ದೀಪಾವಳಿ ಹಬ್ಬದ ಮಹತ್ವ ವನ್ನು ಅವಳಿಗೆ ಅರ್ಥ ವಾಗುವಂತೆ ತಿಳಿಸಿದರು.


 "ಪುಟ್ಟಿ ಈ ದೀಪಾವಳಿ ಹಬ್ಬದ ಮಹತ್ವ ನಿನಗೆ ಗೊತ್ತಾ?" ಎಂದು ಕೇಳಿದಾಗ 

",ದೀಪಾವಳಿ ಎಂದರೆ ಪಟಾಕಿ ಸಿಡಿಸಿ, ಸಿಹಿ ತಿಂಡಿ ಗಳನ್ನು ತಿಂದು ಹೊಸ ಬಟ್ಟೆಗಳನ್ನು ಹಾಕಿಕೊಂಡು ಎಂಜಾಯ್ಮಾಡುವುದು, ಹಾಂ ಹಣತೆಯಲ್ಲಿ ದೀಪ ಹೊತ್ತಿಸಿ ಮನೆಯ ಮುಂದೆ ಇಡುವುದು " 

ರಶ್ಮಿ ತನಗೆ ತಿಳಿದಂತೆ ಬಾಲಭಾಷೆಯಲ್ಲಿ ಹೇಳಿದಾಗ ಅವಳ ತಾತ 

"ಅದೆಲ್ಲಾ ಸರಿ ಪುಟ್ಟಿ, ಆದರೆ ಇವೆಲ್ಲಕ್ಕೂ ಹೆಚ್ಚಾಗಿ ಈ ಹಬ್ಬಕ್ಕೆ ವಿಶೇಷವಾದ ಕಥೆ ಇದೆ. " ಅಂತ ಪ್ರಾರಂಭಿಸಿದ ತಾತ ನರಕಾಸುರನ ಹಾಗೂ ಬಲೀಂದ್ರನ ಕಥೆಗಳನ್ನು ಹೇಳಿ ಕಡೆಗೆ ದೀಪಾವಳಿ ಎಂದರೇನು ಅನ್ನುವ ವಿಷಯವನ್ನು ಸಹ ವಿವರಿಸಿದರು. 

"ಭಾರತೀಯ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ನಾಲ್ಕು ದಿನಗಳ ಹಬ್ಬದ ಸಾಲು ಈ ದೀಪಾವಳಿ ಹಬ್ಬ .ಅಶ್ವಯುಜ ಕೃಷ್ಣ ತ್ರಯೋದಶಿಯಂದ ಹಿಡಿದು ಕಾರ್ತಿಕ ಶುದ್ಧ ಪಾಡ್ಯದವರೆಗೂ ಹಬ್ಬಿರುವ ಈ ಬೆಳಕಿನ ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.ಅಶ್ವಯುಜ ಕೃಷ್ಣ ತ್ರಯೋದಶಿಯಂದು ಮನೆಯ ಸ್ನಾನ ಗೃಹವನ್ನು ಶುದ್ಧ ಗೊಳಿಸಿ, ಹಂಡೆಗಳನ್ನು ಬೆಳಗಿ , ಒಲೆಗಳ ಮುಂದೆ ರಂಗೋಲಿ ಗಳನ್ನು ಬಿಡಿಸಿ, ಹಂಡೆಗೆ ನೀರನ್ನು ತುಂಬಿಸುವ ಸಂಭ್ರಮ. (ಈಗಿನ ಕಾಲದಲ್ಲಿ ಇದು ಮಹಾನಗರಗಳಲ್ಲಿ ಕಾಣಲು ಸಾಧ್ಯವಿಲ್ಲ)ಇದಕ್ಕೆ ನೀರು ತುಂಬುವ ಹಬ್ಬ ಎನ್ನುವ ರೂಢಿ ಬಂದಿದೆ.. ಎರಡನೇ ದಿನ ನರಕ ಚತುರ್ದಶಿ. ಈ ದಿನ ಮನೆ ಮಂದಿಯೆಲ್ಲಾ ತೈಲಾಭ್ಯಂಜನ ಮಾಡುವ ಪದ್ಧತಿ.

ಇದು ನೀರು ಹಾಕಿಕೊಳ್ಳುವ ಹಬ್ಬ.ನರಕಾಸುರನ ಸಂಹಾರವಾದ ದಿನ. ಇದರ ಸಾಂಕೇತಿಕವಾಗಿ ಸ್ನಾನ ಮಾಡಿದ ನಂತರ ಚಿಕ್ಕ ಮಕ್ಕಳು ಹೊಸ ಬಟ್ಟೆ ಧರಿಸಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಮೂರನೇ ದಿನ ಅಮಾವಾಸ್ಯೆಯ ಸಾಯಂಕಾಲ ಲಕ್ಷ್ಮೀ ಪೂಜೆ. ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. 

ನಂತರ ನಾಲ್ಕನೇ ದಿನ ಬಲಿ ಪಾಡ್ಯಮಿ ಅಥವಾ ದೀಪಾವಳಿ ಹಬ್ಬ. ಈ ದಿನದಂದು ಎಲ್ಲರ ಮನೆಯಲ್ಲೂ ಸಾಯಂಕಾಲದ ಸಮಯದಲ್ಲಿ ಬಲೀಂದ್ರ ಪೂಜೆ, ಗೋವರ್ಧನ ಪೂಜೆ, ದೀಪಸ್ತಂಭ ಗಳ ಪೂಜೆ ಗಳನ್ನು ಮಾಡಿ, ನಂತರ ಪೂಜಿಸಲ್ಪಟ್ಟ ದೀಪದ ಕಂಬಗಳ ದೀಪದಿಂದ ಒಂದೊಂದೇ ಮಣ್ಣಿನ ಹಣತೆಯನ್ನು ಬೆಳಗಿಸಿ, ಮನೆಯ ಎಲ್ಲಾ ಕಡೆಗೂ ಇಟ್ಟು, ಕವಿದ ಕತ್ತಲನ್ನು ಹೋಗಲಾಡಿಸುತ್ತಾರೆ. ಹೀಗೆ ದೀಪದಿಂದ ದೀಪವನ್ನು ಬೆಳಗಿಸಿ, ಎಲ್ಲಾ ಕಡೆಗೂ ಆ ಬೆಳಕು ಹರಿಯುವಂತೆ ಮಾಡುವ ಬೆಳಕಿನ ಹಬ್ಬ ದೀಪಾವಳಿ. ದೀಪದ ಅವಳಿಯೇ ದೀಪಾವಳಿ. ಹಬ್ಬಗಳ ಅವಳಿಯೇ ದೀಪಾವಳಿ.  ಹೀಗೆ ದೀಪಾವಳಿ ಹಬ್ಬ ಅತ್ಯಂತ ಸಡಗರದಿಂದ ಆಚರಿಸಲಾಗುವ ಒಂದು ಮಹಾ ಪರ್ವ.

ಬಲಿಪಾಡ್ಯಮಿಯಂದು ಬಲೀಂದ್ರನ ಪೂಜೆಗಾಗಿ ಗೋಮಯದಿಂದ ಕೋಟೆಯನ್ನು ಮಾಡಿ ದೇವರ ಮುಂದೆ, ಮನೆಯ ಹೊಸ್ತಿಲುಗಳ ಮೇಲೆ ಇಡುವ ರೂಢಿಯೂ ಇದೆ. ಭಕ್ತ ಪರಾಧೀನ ನಾದ ವಾಮನನು ತ್ರಿವಿಕ್ರಮ ನಾಗಿ ತನ್ನ ಮೂರನೇ ಹೆಜ್ಜೆಯನ್ನು ಅವನ ತಲೆಯ ಮೇಲಿಟ್ಟು ಬಲಿಯನ್ನು ಪಾತಾಳಕ್ಕೆ ಸೇರಿಸಿದ ನಂತರ, ಅವನ ಒಂದು ಪ್ರಾರ್ಥನೆಯಂತೆ ದೀಪಾವಳಿಯ ದಿನ ಬಲೀಂದ್ರನ ಪೂಜೆ ಮನೆ ಮನೆಯಲ್ಲಿ ನೆರವೇರುವಂತೆ ಮಾಡಿದ . ಅಂದು ಅಂತಹ ಭಾಗವತೋತ್ತಮ ಬಲಿ ಚಕ್ರವರ್ತಿಯ ನೆನಪಿಗಾಗಿ ಬಲೀಂದ್ರ ಪೂಜೆ. ಅಂತೆಯೇ ಆ ದಿನ ಬಲಿಪಾಡ್ಯಮಿ ಎಂದೇ ಪ್ರಸಿದ್ಧಿ ಪಡೆದಿದೆ. ವಿಶೇಷವಾಗಿ ಹೊಸದಾಗಿ ಮದುವೆಯಾದ ಮಗಳು ಅಳಿಯನನ್ನು ಮಾವನ ಮನೆಗೆ ಕರೆದು ಮೊದಲ ವರ್ಷದ ದೀಪಾವಳಿಯನ್ನು ಸಡಗರದಿಂದ ಆಚರಿಸುವ ಪದ್ಧತಿಯೂ ಕೆಲವು ಮನೆಗಳಲ್ಲಿ ಬೆಳೆದು ಬಂದಿದೆ.ಹೀಗಾಗಿ ಅಳಿಯಂದಿರ ಹಿರಿಮೆ ಹೆಚ್ಚಿಸುವ ಹಬ್ಬವೂ ಇದಾಗಿದೆ.


ಹಳೆಯ ಕೊಳೆಯನ್ನು ಕಳೆದು, ಶುದ್ಧರಾಗಿ, ನಮ್ಮ ಒಳಗಿರುವ ಅಜ್ಞಾನವೆಂಬ ನರಕಾಸುರನನ್ನು ಸಂಹರಿಸಿ, ಅಹಂಕಾರವೆಂಬ ಬಲಿಯನ್ನು ಮೆಟ್ಟಿ ಭಕ್ತ ಬಲಿಯನ್ನು ಉದ್ದೀಪನಗೊಳಿಸಿ, ಮನದೊಳಗೆ ಹೊರಗಿರುವ ತಮಸ್ಸನ್ನು ಹೊಡೆದೋಡಿಸಿ, ನಮ್ಮೊಳಗಿನ ಅರಿವಿನ ಬೆಳಕನ್ನು ಕಂಡುಕೊಂಡು, ಅದರ ಸಾಂಕೇತಿಕವಾಗಿ ಹೊರಗೂ ಹಣತೆಗಳ ದೀಪಗಳನ್ನು ಹಚ್ಚಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಸಾಧ್ಯವಾಗಿಸುವ ಹಬ್ಬ  ದೀಪಾವಳಿ. ಅಂತೆಯೇ ನಮ್ಮ ಪ್ರಾಥನೆ

"ತಮಸೋಮಾ ಜ್ಯೋತಿರ್ಗಮಯ" ಎಂದಾಗ ಬೇಕು. ಆಗ ದೀಪಾವಳಿಯ ನಿಜವಾದ ದೀಪೋತ್ಸವ." ಎಲ್ಲವನ್ನೂ ವಿವರಿಸಿ ಹೇಳಿದ ತಾತ ಕಡೆಗೆ 

"ಪುಟ್ಟಿ ಈಗ ಇಷ್ಟು ಅರ್ಥ ಮಾಡಿಕೊಂಡರೆ ಸಾಕು.

ಮುಂದೆ ದೊಡ್ಡವಳಾದ ಮೇಲೆ ಇದರ ಬಗ್ಗೆ ತುಂಬಾ

ವಿಷಯ ತಿಳಿದುಕೊಳ್ಳುವಂತೆ.ಕತ್ತಲಿನಿಂದ ಬೆಳಕಿಗೆ ದಾರಿ ತೋರಿಸುವ ಹಬ್ಬವೇ ದೀಪಾವಳಿ "  ಎಂದು ಅವಳಿಗೆ ಅರ್ಥವಾಗುವಂತೆ ಹೇಳಿದಾಗ,  ಎಲ್ಲವನ್ನೂ ಬಹಳ ಆಸಕ್ತಿಯಿಂದ ಕೇಳಿಕೊಂಡ ರಶ್ಮಿ

"ತಾತ ನೀನು ಎಷ್ಟೊಂದು ವಿಷಯಗಳನ್ನು ತಿಳಿಸಿಕೊಟ್ಟೆ ತುಂಬಾ ಥ್ಯಾಂಕ್ಸ್, ನಾನು ಶಾಲೆಯಲ್ಲಿ ನನ್ನ ಗೆಳತಿ ಯಾರಿಗೆ ಇದನ್ನು ಹೇಳುತ್ತೇನೆ."

ಎಂದು ಹೇಳಿ, ತಾತನ ಕೆನ್ನೆಗೆ ಮುತ್ತು ಕೊಟ್ಟ ರಶ್ಮಿ  ಪಟಾಕಿಗಳನ್ನು ನೋಡಲು ಓಡಿದಳು.


Rate this content
Log in

Similar kannada story from Abstract