Prajna Raveesh

Abstract Classics Others

4.5  

Prajna Raveesh

Abstract Classics Others

ತುಳಸಿ ಪೂಜೆ

ತುಳಸಿ ಪೂಜೆ

2 mins
436



ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ತುಳಸಿ ಗಿಡಕ್ಕೆ, ತುಳಸಿ ಪೂಜೆಗೆ ಬಹಳ ಮಹತ್ವವಿದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ, ತುಳಸಿ ಗಿಡದ ಎಲ್ಲಾ ಭಾಗಗಳು ಕೂಡ ಪೂಜ್ಯನೀಯವೇ ಆಗಿದೆ.


ಮುತ್ತೈದೆಯರು ತುಳಸಿ ಗಿಡವನ್ನು ಪೂಜಿಸುವುದರಿಂದ ಪಾತಿವ್ರತ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ತುಳಸಿ ಗಿಡವನ್ನು ಪೂಜಿಸುವ ಮೊದಲು ಶುದ್ಧವಾಗಿ ಸ್ನಾನ ಮಾಡಿ, ಮೊದಲಿಗೆ ಸೂರ್ಯ ದೇವರಿಗೆ ಅರ್ಘ್ಯವನ್ನು ಸಮರ್ಪಿಸಿ ನಂತರ ತುಳಸಿ ಗಿಡಕ್ಕೆ ಹಿತ್ತಾಳೆಯ ಕಲಶದಲ್ಲಿ ನೀರನ್ನು ಹಾಕಿ ತುಳಸಿ ಗಿಡದ ಸುತ್ತ ಮೂರು ಪ್ರದಕ್ಷಿಣೆ ಬರಬೇಕು, ಮೊದಲ ಹಾಗೂ ಎರಡನೇ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ಬುಡಕ್ಕೆ ಹಾಗೂ ಮೂರನೆಯ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ತುದಿಯಿಂದ ಗಿಡದ ಎಲ್ಲಾ ಭಾಗಗಳಿಗೂ ನೀರು ಬೀಳುವಂತೆ ನೀರನ್ನು ಹಾಕಬೇಕು ಎನ್ನುವರು.


ತುಳಸಿ ಮಾತೆಗೆ ಮೂರು ಪ್ರದಕ್ಷಿಣೆ ಬಂದ ನಂತರ, ದೇವಿಗೆ ಆರತಿಯನ್ನು ಎತ್ತಿ, ಹೂ ಮಾಲೆ ಹಾಕಿ, ಸೆಗಣಿ ಗುಡಿಸಿ ನಿರ್ಮಲವಾದ ತುಳಸಿ ಕಟ್ಟೆಯ ಎದುರಿನಲ್ಲಿ ರಂಗೋಲಿ ಬಿಡಿಸಿ, ದೇವಿಗೆ ಸೀರೆಯನ್ನು ಉಡಿಸಿ, ಬಳೆ, ಕಾಲುಂಗುರ, ಕುಂಕುಮ, ತಾಳಿಯನ್ನು ಇಟ್ಟು, ಬಾಳೆದಿಂಡನ್ನು ತುಳಸಿ ಕಟ್ಟೆಯ ಪಕ್ಕದಲ್ಲಿ ಇಟ್ಟು, ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಗಿಡದ ಜೊತೆಗೆ ಇಟ್ಟು, ತುಳಸಿ ಮಾತೆಗೆ ಆರತಿ ಬೆಳಗಿ ಪೂಜೆ ಮಾಡುತ್ತಾರೆ.


ಈ ರೀತಿ ಪ್ರತಿ ದಿನವೂ ಪೂಜೆ ಮಾಡಿದರೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ವೃದ್ಧಿಗೊಳ್ಳುತ್ತದೆ ಹಾಗೂ ದುಷ್ಟ ಶಕ್ತಿಗಳ ನಿರ್ನಾಮವಾಗಿ ಮನೆಗೆ ಯಾವುದೇ ದುಷ್ಟ ಶಕ್ತಿಗಳ ಪ್ರಭಾವ ಬೀರುವುದಿಲ್ಲ ಹಾಗೂ ಮನೆಯ ವಾಸ್ತು ದೋಷಗಳು ಕೂಡ ಪರಿಹಾರವಾಗುತ್ತವೆ ಎನ್ನುತ್ತಾರೆ.


ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಉತ್ಥಾನ ದ್ವಾದಶಿಯೆಂದು ಕರೆಯಲಾಗುತ್ತದೆ, ಆ ಉತ್ಥಾನ ದ್ವಾದಶಿಯ ದಿನ ತುಳಸಿ ಕಾರ್ತಿಕ ಅಥವಾ ತುಳಸಿ ವಿವಾಹವನ್ನು ಮಾಡುತ್ತಾರೆ. ತುಳಸಿ ವಿವಾಹವನ್ನು ಕೂಡ ಮೇಲೆ ಹೇಳಿದಂತೆ ಸ್ವಚ್ಚವಾಗಿ ಸ್ನಾನ ಮಾಡಿ, ಶ್ರದ್ಧೆ, ಭಕ್ತಿಯಿಂದ ತುಳಸಿ ಮಾತೆಗೆ ನೀರೆರೆದು, ಆರತಿ ಎತ್ತಿ, ಹೂ ಹಾರ ಹಾಕಿ, ಬಾಳೆದಿಂಡನ್ನು ತುಳಸಿ ಕಟ್ಟೆಯ ಬಳಿ ಇಟ್ಟು,ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಗಿಡದ ಜೊತೆ ನೆಟ್ಟು ತುಳಸಿ ಕಾರ್ತಿಕ ಪೂಜೆಯನ್ನು ನೆರವೇರಿಸಿದರೆ ಒಳಿತು ಎಂದು ಪುರಾಣಗಳಲ್ಲಿ ಹೇಳಲಾಗಿದೆ.


ತುಳಸಿ ಗಿಡವನ್ನು ನೆಡುವಾಗ ಶುದ್ಧ ಮಣ್ಣಿನಲ್ಲಿ ನೆಡಬೇಕು, ಮನೆಯ ಯಜಮಾನನು ಸೋಮವಾರ, ಬುಧವಾರ, ಗುರುವಾರಗಳಂದು ತುಳಸಿ ಗಿಡವನ್ನು ನೆಟ್ಟರೆ ಶುಭ ಎನ್ನುತ್ತಾರೆ, ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸಿದ ನಂತರ ತುಳಸಿ ದಳದಲ್ಲಿ ಬಿದ್ದ ನೀರನ್ನು ತೀರ್ಥವೆಂದು ಸ್ವೀಕರಿಸಿದರೆ ಸರ್ವ ರೋಗ ನಿವಾರಣೆಯಾಗುವುದು ಎನ್ನುತ್ತಾರೆ.


ತುಳಸಿ ಎಲೆಯನ್ನು ಒಂದೊಂದೇ ದಳಗಳಾಗಿ ಕೀಳದೆ ಅದರ ಕುಡಿ ಸಮೇತ ಕೀಳಬೇಕು ಹಾಗೂ ಸ್ವಚ್ಚವಾಗಿ ಸ್ನಾನ ಮಾಡಿದ ನಂತರವೇ ತುಳಸಿ ಗಿಡವನ್ನು ಮುಟ್ಟಬೇಕು ಹಾಗೂ ಮಧ್ಯಾಹ್ನ 12 ಘಂಟೆಯ ನಂತರ ತುಳಸಿ ಕುಡಿಗಳನ್ನು ಕೀಳಬಾರದು, ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕಬಾರದು ಎಂಬ ಸಂಪ್ರದಾಯವಿದೆ.


ತುಳಸಿ ಗಿಡವನ್ನು ಸೂರ್ಯ ದೇವರ ಕಿರಣಗಳು ತುಳಸಿ ಗಿಡದ ಅಭಿಮುಖವಾಗಿ ಬೀಳುವಂತೆ ಶುದ್ಧ ಮಣ್ಣಿನಲ್ಲಿ ನೆಡಬೇಕು ಹಾಗೂ ಮನೆಯ ಈಶಾನ್ಯ ಭಾಗದಲ್ಲಿ ನೆಟ್ಟರೆ ಶುಭ ಎನ್ನಲಾಗುತ್ತದೆ.


ನೆಟ್ಟ ತುಳಸಿ ಗಿಡವು ಒಣಗಿದರೆ ಸಕಲ ವಿಘ್ನಗಳು ನಿವಾರಣೆಯಾಯಿತು, ಮನೆಯಲ್ಲಿ ಏನಾದರೂ ವಾಸ್ತು ದೋಷಗಳು ಇದ್ದರೆ ಅವುಗಳೆಲ್ಲಾ ಪರಿಹಾರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಯೂರಿತು ಎಂದು ಭಾವಿಸಬೇಕೇ ವಿನಃ ನೆಟ್ಟ ಗಿಡ ಒಣಗಿ ಹೋಯಿತಲ್ಲಾ ಎಂದು ಮರುಕಪಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.


ತುಳಸಿ ಗಿಡವು ಒಣಗಿದರೂ ಕೂಡ ಅದರ ಗಿಡದ ಎಲ್ಲಾ ಭಾಗಗಳು ಪವಿತ್ರವಾದುದು ಹಾಗಾಗಿ ಅವುಗಳನ್ನು ಎಲ್ಲೆಂದರಲ್ಲಿ ಬೇರೆ ಕಲ್ಮಶಗಳ ಜೊತೆ ಹಾಕದೆ ಹರಿದು ಹೋಗುವ ನೀರಿನಲ್ಲಿ ಬಿಡಬೇಕು ಎಂಬ ಸಂಪ್ರದಾಯವಿದೆ.


ಸರ್ವ ರೋಗ ನಿವಾರಿಣಿ, ಸರ್ವ ಪಾಪ ಪರಿಹಾರಿಣಿಯಾದ ತುಳಸಿ ಕಟ್ಟೆಯ ಸಮೀಪ ಪ್ರತಿನಿತ್ಯ ಮುಸ್ಸಂಜೆಯ ಹೊತ್ತು ದೀಪವಿಟ್ಟರೆ ತುಂಬಾ ಒಳಿತು ಹಾಗೂ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ನಾವು ದೇವಿಯ ಬಳಿ ಇಡುವ ದೀಪಕ್ಕಿದೆ ಎನ್ನಲಾಗುತ್ತದೆ.


ನಮೋ ತುಳಸಿ ಕಲ್ಯಾಣಿ

ನಮೋ ವಿಷ್ಣು ಪ್ರಿಯೇ ಶುಭೇ

ನಮೋ ಮೋಕ್ಷ ಪ್ರದೇ ದೇವಿ

ನಮಃ ಸಂಪತ್ಪ್ರದಾಯಿನಿ



Rate this content
Log in

Similar kannada story from Abstract