Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Children Stories Inspirational Others

4  

Shridevi Patil

Children Stories Inspirational Others

ಆಕೆ,ಯಾರ ಮಗಳು? ಭಾಗ 2.

ಆಕೆ,ಯಾರ ಮಗಳು? ಭಾಗ 2.

2 mins
473


ಅಪ್ಪ ಅಮ್ಮನಿಗೂ ಹೇಳದೆ , ಕಟ್ಟಿಕೊಂಡ ಗಂಡನಿಗೂ ಗೊತ್ತು ಮಾಡಿಕೊಡದೆ , ತನ್ನ ನೋವನ್ನು ತಾನೊಬ್ಬಳೇ ಅನುಭವಿಸುತ್ತಿದ್ದಳು. ಇದೆಲ್ಲದರ ಮದ್ಯ ಗಂಡನ ಪ್ರತಿದಿನದ ಆ ಆಸೆಯೇ ತೀರದ ಆತನ ವರ್ತನೆಯನ್ನು ಸಹಿಸಿಕೊಂಡು ನಡೆಯುತ್ತಿರುವಾಗ , ಹದಿನಾಲ್ಕು ವರ್ಷ ಅಷ್ಟೇ ವಯಸ್ಸಿದ್ದಿರಬಹುದು , ಆಡುವ ಗೊಂಬೆಗೊಂದು ಗೊಂಬೆ ಎನ್ನುವಂತೆ ರತ್ನಮ್ಮ ಗರ್ಭವತಿಯಾದಳು. ಗರ್ಭಿಣಿ ಪದದ ಅರ್ಥ ತಿಳಿಯುವ ಮೊದಲೇ ಗರ್ಭವತಿಯಾದಳು.


ಮನೆ ಕೆಲಸವನ್ನೂ ಬಿಡುವಂತಿಲ್ಲ , ಅದರ ಜೊತೆಗೆ ವಾಂತಿ ಬೇರೆ ಶುರುವಾಯಿತು. ನೀರು ಸಹ ದಕ್ಕಲಾರದಷ್ಟು ವಾಂತಿ ಆಗುತ್ತಿತ್ತು. ಈ ಬಾರಿ ಅಪ್ಪ ಅಮ್ಮ ಆಕೆಯನ್ನು ನಾಲ್ಕು ದಿನ ತವರಿಗೆ ಕರೆದೊಯ್ದರು. ಒಂದೇ ವಾರ ಅಷ್ಟೇ , ಅಷ್ಟರಲ್ಲಿ ಆಕೆಯ ಪತಿ ಪರಮೇಶ್ವರ ಕರೆದುಕೊಂಡು ಹೋಗಲು ಬಂದನು. ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಜೊತೆಗೆ ಹೊರಡಲು ಅಣಿಯಾದಳು.


ಬಂದ ಮೇಲೆ ಮತ್ತದೇ ಕೆಲಸ , ಮತ್ತದೇ ಬೈಗುಳ , ಜೊತೆಗೆ ಅದೇ ವಾಂತಿ . ಹಾಗೂ ಹೀಗೂ ದಿನಗಳನ್ನು ದೂಡುತ್ತಿದ್ದಳು. ದಿನಗಳೆದಂತೆ ಹೊಟ್ಟೆ ಭಾರವಾಗತೊಡಗಿತು. ಹೊಟ್ಟೆ ಮುಂದೆ ಬಂದಂತೆ ಆಕೆಗೆ ಕೆಲಸಗಳೂ ಸಹ ಭಾರವಾಗತೊಡಗಿದವು. ಗಂಡನ ಸೋದರತ್ತೆಗೆ ಕೆಲಸಗಳು ಹೆಚ್ಚಾದಾಗ ರತ್ನಮ್ಮನಿಗೆ ಬೈಗುಳಗಳು ತುಸು ಹೆಚ್ಚಾಗುತ್ತಿದ್ದವು. ಈ ನಡುವೆ ಆಕೆಯ ಅತ್ತೆ ಸೀಮಂತದ ಬಗ್ಗೆ ಮಾತಾಡುತ್ತಿದ್ದರು. ಸೀಮಂತ ಮಾಡಿ ಮತ್ತೆ ತವರಿಗೆ ಕಳುಹಿಸುವ ಮಾತು ಬಂದಾಗ ತುಂಬಾ ಖುಷಿಯಾಗಿದ್ದಳು ರತ್ನಮ್ಮ. ತುಂಬಿದ ಗರ್ಭಿಣಿ ನಾನು , ತವರಲ್ಲಾದರೂ ಆರಾಮಾಗಿ ಬಾಣಂತನ ಮುಗಿಯುವವರೆಗೆ ಇರಬಹುದಲ್ಲ ಎನ್ನುವ ಆಸೆ ಮನಸ್ಸಲ್ಲಿ ಮೂಡಿತ್ತು.


ಸೀಮಂತ ಮುಗಿಸಿಕೊಂಡು ತವರಿಗೆ ಹೆರಿಗೆಗೆಂದು ಬಂದಾಗ ತನಗೆ ಬೇಕಾದದ್ದನ್ನು ತಾಯಿಗೆ ಹೇಳಿ ಮಾಡಿಸಿಕೊಂಡು ತಿಂದು ಬಯಕೆ ತೀರಿಸಿಕೊಂಡಳು. ಆಕೆ ತಿನ್ನುವ ಪರಿಯನ್ನು ಕಂಡಾಗ ಅಪ್ಪ ಅಮ್ಮನಿಗೆ ತುಸು ಆಶ್ಚರ್ಯವಾಯಿತು. ಅಮ್ಮ ಕೇಳಿಯೇಬಿಟ್ಟರು. " ಯಾಕವ್ವಾ , ನೀನು ಗಂಡನ ಮನೆಯಲ್ಲಿ ಆರಾಮಾಗಿದ್ದಿ ಅಲ್ವಾ , ಹೊಟ್ಟೆ ತುಂಬ ತಿನ್ನುತ್ತಿದ್ದಿಯೋ ಅಥವಾ ಇಲ್ಲವೋ , ಸಮಾಧಾನವಾಗಿ ತಿನ್ನು ಮಗಳೇ, ಇದೆಲ್ಲ ನಿನಗೆ ಮಾಡಿದ್ದು , ಆರಾಮಾಗಿ ತಿನ್ನು , ನಾವು ಬಡತನದ ಸಲುವಾಗಿ ಕೂಲಿ ಮಾಡುವ ಭರದಲ್ಲಿ ನಿನ್ನ ಕಡೆ ಗಮನ ಕೊಡಲಿಲ್ಲ , ದೊಡ್ಡ ಮನೆ ಆರಾಮಾಗಿದ್ದಾಳೆ ಬಿಡು ಅಂತ ಸುಮ್ಮನಾದೆವು , ನೀನು ಸಹ ಏನನ್ನೂ ಹೇಳಲಿಲ್ಲ. " ಎಂದು ಅಮ್ಮ ಬೇಸರ ಪಟ್ಟುಕೊಂಡಳು.


ಆಗ ಮಗಳು ,ಇಲ್ಲ ಬಿಡಮ್ಮ , ನಾನು ಆರಾಮಾಗಿದಿನಿ , ನಿನ್ನ ಕೈರುಚಿ ತಿನ್ನಬೇಕು ಅಂತ ಅನಿಸುತ್ತಿತ್ತು , ಈಗ ಸಿಕ್ತಲ್ಲಾ , ಅದಕ್ಕೆ ಹೀಗೆ ಖುಷಿಯಲ್ಲಿ ತಿಂದೆ ಎಂದಳು.


ಆದರೂ ಅವಳ ತಾಯಿಗೆ ಸ್ವಲ್ಪ ಅನುಮಾನ ಬಂದಿತು. ಮಗಳೇನೂ ಬಾಯಿ ಬಿಡಲಿಲ್ಲ. ಹೀಗಾಗಿ ಮನಸ್ಸಲ್ಲಿ ಆ ಸಂದೇಹ ಹಾಗೆಯೇ ಉಳಿಯಿತು.


ಒಂಬತ್ತು ತಿಂಗಳು ಕಳೆಯಲು , ಸಹಜ ಹೆರಿಗೆಯಾಗಿ ರತ್ನಮ್ಮ ಒಂದು ಸುಂದರ ಗಂಡು ಮಗುವಿಗೆ ಜನ್ಮವಿತ್ತಳು. ನೋಡಲು ಕೆಂಪಗೆ , ಗುಂಡು ಗುಂಡುಗೆ ಬಹಳೆ ಮುದ್ದಾಗಿತ್ತು ಆಕೆಯ ಮಗು.


ಹೆರಿಗೆಯಾಗಿ ಮೂರು ತಿಂಗಳು ಕಳೆಯಲು ಮತ್ತೆ ಗಂಡನ ಮನೆಗೆ ಹೊರಡಬೇಕಾದ ಸಮಯ ಬಂದಿತು. ರತ್ನಮ್ಮನ ಮನಸ್ಸಲ್ಲಿ ಇಷ್ಟು ಬೇಗ ಹೇಗೆ ದಿನಗಳು ಕಳೆದವು, ಮತ್ತೆ ಈಗ ಹೊರಡಬೇಕಲ್ಲ ಎಂದು ಸ್ವಲ್ಪ ಆತಂಕ ಪಟ್ಟುಕೊಂಡಳು. ಆದರೂ ಹೋಗಲೇಬೇಕಿತ್ತು. ತೊಟ್ಟಿಲು ತಂದು ಮಗಳನ್ನು ಕಳುಹಿಸಲು ಸಕಲ ಸಿದ್ಧತೆ ಮಾಡಿಕೊಂಡರು.


ಒಂದು ಒಳ್ಳೆಯ ದಿನದಂದು ತನ್ನ ಮಗುವಿನೊಂದಿಗೆ ಗಂಡನ ಮನೆಗೆ ಆಗಮಿಸಿದಳು.


ಮುಂದುವರೆಯುವುದು....





Rate this content
Log in