Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Children Stories Inspirational Others

3  

Shridevi Patil

Children Stories Inspirational Others

ಹಸ್ತ ರೇಖೆ ಭವಿಷ್ಯ ರೂಪಿಸುವುದೇ?

ಹಸ್ತ ರೇಖೆ ಭವಿಷ್ಯ ರೂಪಿಸುವುದೇ?

3 mins
136



ಭವಿಷ್ಯ ನೋಡಿ ಬದುಕು ನಡೆಸಲಾಗದು.. ಭವಿಷ್ಯವನ್ನು ಕಂಡವರು ಯಾರಿಹರಿಂದು?

ಒಂದು ವೇಳೆ ಭವಿಷ್ಯ ನುಡಿಯುವುದು ಸತ್ಯವಾಗಿದ್ದರೆ ಎಲ್ಲರ ಬದುಕು ಸುಂದರವಾಗಿ ಕಂಗೊಳಿಸಬೇಕಿತ್ತಲ್ಲವೇ?

ಹಸ್ತ ರೇಖೆ ನಂಬಿ , ಅದರ ಆಧಾರದ ಮೇಲೆ ಬದುಕುತ್ತೇವೆ ಅಂದರೆ ಸಾಧ್ಯವಿಲ್ಲದ ಮಾತು. ಹಸ್ತ ರೇಖೆಗಳಿಂದ ಭವಿಷ್ಯ ಬದಲಾಗುತ್ತದೆ ಎನ್ನುವುದು ತಪ್ಪು. ನಮ್ಮ ನಮ್ಮ ಆತ್ಮವಿಶ್ವಾಸ , ಪ್ರಯತ್ನ, ನಿಷ್ಠೆ, ಪ್ರಾಮಾಣಿಕತೆ , ಮಾನವೀಯತೆ ಇವುಗಳನ್ನು ನಂಬಿ, ಇವುಗಳನ್ನು ಆದರ್ಶವಾಗಿಟ್ಟುಕೊಂಡು ಭವಿಷ್ಯವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರೆ ನಿಜವಾಗಿಯೂ

ಬದುಕು ಸುಂದರವಾಗಿ ಅರಳಬಹುದು.



ಸಂಜನಾ ಮತ್ತು ಸೌಭಾಗ್ಯ ಇಬ್ಬರೂ ಆತ್ಮೀಯ ಗೆಳತಿಯರು. ಅಕ್ಕ ಪಕ್ಕದ ಮನೆಯವರು. ಇಬ್ಬರ ಸ್ನೇಹ ತುಂಬಾ ಗಾಢವಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅವರು ಬಾಲ್ಯದಿಂದಲೇ ಸ್ನೇಹಿತೆಯರಾಗಿದ್ದರು. ಜಾತಿ ಬೇರೆ ಬೇರೆ ಆದರೂ ಒಂದೇ ಮನೆ ಮಕ್ಕಳಂತೆ ಇಬ್ಬರೂ ಜೊತೆಯಾಗಿ ಇರುತ್ತಿದ್ದರು. ಜಗಳ, ಮಾತು ಬಿಡುವುದು , ಒಂದೇ ವಸ್ತುವಿಗೆ ಕಿತ್ತಾಡುವುದು ಎಂದೂ ಮಾಡಿರಲಿಲ್ಲ. ನೋಡಿದವರೆಲ್ಲ ಗೆಳೆತನ ಎಂದರೆ, ಸೌಭಾಗ್ಯ ಮತ್ತು ಸಂಜನಾ ಈ ಇಬ್ಬರನ್ನು ನೋಡಿ ಕಲಿಯಬೇಕು ಎನ್ನುವಷ್ಟು ಮಾದರಿ ಗೆಳತಿಯರಾಗಿದ್ದರು. ಓದುವುದರಲ್ಲಿ ಮಾತ್ರ ನಾ ಮುಂದು, ತಾ ಮುಂದು ಎನ್ನುವಂತೆ ಪ್ರತಿಯೊಂದರಲ್ಲೂ ಭಾಗವಹಿಸುತ್ತ ಶಾಲೆಯಲ್ಲೂ ತಮ್ಮ ಛಾಪು ಮೂಡಿಸಿದ್ದರು.


ಓದುವ, ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದರೆ ಇಬ್ಬರೂ ಕೂಡ ತುಂಬಾ ಹುರುಪಿನಿಂದ ಭಾಗವಹಿಸಿ, ತೀರ್ಪುಗಾರರಿಗೆ ಕಷ್ಟ ಕೊಡುತ್ತಿದ್ದರು , ಯಾರನ್ನು ಗೆಲ್ಲಿಸುವುದು ಎಂದು ಗೊಂದಲ ಮಾಡುತ್ತಿದ್ದರು. ಅಂದರೆ ವಿಷಯದ ಪರ ವಿರೋಧ ಇಬ್ಬರು ಫೈನಲ್ ಗೆ ಬರುತ್ತಿದ್ದರು. ಇಬ್ಬರೂ ಕೂಡ ಸೋಲೊ ಮಾತೇ ಇಲ್ಲದೆ ವಾದ ಮಂಡಿಸುತ್ತಿದ್ದರು.



ಸಂಜನಾ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಸಂಜನಾ ಅಣ್ಣ ಎಂ.ಟೆಕ್ ಓದುತ್ತಿದ್ದನು. ಅಣ್ಣ ತಂಗಿ ಪ್ರಾಮಾಣಿಕ ಪ್ರಯತ್ನ ಪಟ್ಟು ಓದುತ್ತಿದ್ದರು. ಅಪ್ಪ ಅಮ್ಮನೂ ಅಷ್ಟೇ, ಭವಿಷ್ಯದ ಕುರಿತು ಚಿಂತೆ ಮಾಡದೇ, ವರ್ತಮಾನದ ಮೇಲೆ ನಂಬಿಕೆ ಇಟ್ಟು ಜೀವನ ಮಾಡುತ್ತಿದ್ದ ಅವರು ಆತ್ಮವಿಶ್ವಾಸ ಜೊತೆಗೆ ಶ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಮಕ್ಕಳಿಗೂ ಅದನ್ನೇ ಕಲಿಸಿದ್ದರೂ ಕೂಡ.


ಆದರೆ ಸೌಭಾಗ್ಯಳ ಮನೆಯಲ್ಲಿ ದೇವರು, ಭಯ ಭಕ್ತಿ, ಹಾಗೂ ಭವಿಷ್ಯ ಕೇಳುವುದು, ಜ್ಯೋತಿಷ್ಯದಲ್ಲಿ ಸ್ವಲ್ಪ ನಂಬಿಕೆ ಇಡುವುದು, ಕೈ ರೇಖೆ ನಂಬುವುದು, ಈ ರೀತಿಯ ಸ್ವಭಾವ ಹೊಂದಿದ ಕುಟುಂಬ..


ಈ ರೀತಿಯ ವಿಭಿನ್ನ ಗುಣಗಳನ್ನು ಹೊಂದಿದ ಕುಟುಂಬದಿಂದ ಬಂದ ಆ ಎರಡು ಮಕ್ಕಳು ಮಾತ್ರ ಆಪ್ತ ಗೆಳತಿಯರಾಗಿ ಅಷ್ಟೇ ಖುಷಿಯಿಂದ ಇರುತ್ತಿದ್ದರು.


ಹೀಗಿರುತ್ತಿದ್ದಾಗ ಅವರ ಶಾಲೆಯಲ್ಲಿ ಒಲಂಪಿಕ್ನಲ್ಲಿ ಭಾಗವಹಿಸಲು ಅವಕಾಶವೊಂದು ಒದಗಿ ಬಂತು. ಇಬ್ಬರು ಮಕ್ಕಳಿಗೆ ಅವಕಾಶವಿದ್ದದರಿಂದ ಶಾಲಾಡಳಿತ ಮಂಡಳಿ ಸಂಜನಾ ಸೌಭಾಗ್ಯರನ್ನು ಆಯ್ಕೆ ಮಾಡಿತ್ತು. ಆಯ್ಕೆಯೂ ಸರಿಯಾಗಿತ್ತು ಕೂಡ.


ಊರಲ್ಲೆಲ್ಲ ಸುದ್ದಿಯಾಗಿ ಇಬ್ಬರನ್ನು ಕೂಡ ಅಭಿನಂದಿಸಿ ಎಲ್ಲರೂ ಹೊಗಳಿದರು. ಮಾರನೇ ದಿನದಿಂದಲೇ ಸಂಜನಾ ತುಂಬಾ ಶ್ರಮ ಪಟ್ಟು ಪ್ರಾಕ್ಟಿಸ್ ಮಾಡುತ್ತಿದ್ದಳು. ಸೌಭಾಗ್ಯ ಕೂಡ ಮಾಡುತ್ತಿದ್ದಳು. ಆದರೆ ಒಂದಿನ ಪ್ರಾಕ್ಟಿಸ್ ಮಾಡಲು ಬಂದರೆ ಒಂದಿನ ಮನೆಯಲ್ಲಿ ಮಾಡುತ್ತಿದ್ದಳು. ಜೊತೆಗೆ ಸೌಭಾಗ್ಯಳ ಅಪ್ಪ ಮಗಳ ಕೈ ರೇಖೆಗಳನ್ನು ನೋಡಿ ಈ ಸಲ ಜಯ ನಿನ್ನದಾಗುತ್ತೆ ಮಗಳೇ ಎಂದು ಬೇರೆ ಹೇಳಿಯಾಗಿತ್ತು. ಹೀಗಿದ್ದಾಗ ಸೌಭಾಗ್ಯಳಿಗೆ ತಾನು ಒಲಂಪಿಕ್ನಲ್ಲಿ ಗೆದ್ದೇ ಗೆಲ್ಲುವೇ ಎಂದು ನಂಬಿಕೆ ಕೂಡ ಬಂದಾಗಿತ್ತು. ಹೀಗಾಗಿ ಪ್ರಾಕ್ಟಿಸ್ ಮಾಡುವತ್ತ ಸ್ವಲ್ಪ ತಲೆ ಕೆಡಿಸಿಕೊಳ್ಳಲಿಲ್ಲ....... ಆದರೆ,, ಸಂಜನಾ ಮಾತ್ರ ದಿನಕ್ಕೆ ಐದಾರು ಗಂಟೆಯಾದರೂ ಪ್ರಾಕ್ಟಿಸ್ ಮಾಡುತ್ತಿದ್ದಳು. ಅವಳಿಗೆ ತನ್ನ ಮೇಲೆ ಆತ್ಮವಿಶ್ವಾಸ ಹೆಚ್ಚಿತ್ತು. ಹೀಗೆ ಸೌಭಾಗ್ಯ ಅಪ್ಪ ಹೇಳಿದ ಹಸ್ತರೇಖೆ ಮೇಲೆ ನಂಬಿಕೆ ಇಟ್ಟುಕೊಂಡಳು, ಸಂಜನಾ ಪ್ರಯತ್ನ ಪರಿಶ್ರಮದ ಮೇಲೆ ನಂಬಿಕೆ ಇಟ್ಟುಕೊಂಡಳು. ಸಂಜನಾ ಗೆಳತಿಗೆ ಬುದ್ದಿ ಕೂಡ ಹೇಳಿದಳು. ಸ್ವಲ್ಪವಾದರೂ ಪ್ರಯತ್ನಿಸು, ಪ್ರಾಕ್ಟಿಸ್ ಮಾಡು ಎಂದು ಹೇಳಿದರೂ ಸೌಭಾಗ್ಯ ಹು ಎನ್ನುತ್ತಿದ್ದಳೆ ಹೊರತು ಹೆಚ್ಚು ಶ್ರಮ ಹಾಕುತ್ತಿರಲಿಲ್ಲ.


ಒಲಂಪಿಕ್ನಲ್ಲಿ ಭಾಗವಹಿಸಲು ಮೊದಲೇ ನಿರ್ಧರಿತವಾಗಿದ್ದ ಸ್ಥಳಕ್ಕೆ ಬಂದರು. ಸಂಜನಾ ಮುಖದಲ್ಲಿ ಗೆದ್ದೇ ಗೆಲ್ಲುವೇ ಎನ್ನುವ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಜೊತೆಗೆ ಸೌಭಾಗ್ಯ ಕೂಡ ಗೆಲ್ಲುತ್ತೇನೆ, ಗೆಲುವು ನನ್ನ ಹಸ್ತ ರೇಖೆಯಲ್ಲೇ ತೋರಿಸುತ್ತಿದೆ ಎಂದು ಅತೀಯಾದ ವಿಶ್ವಾಸ ಹೊಂದಿದ್ದಳು.


ಕ್ರೀಡೆಗಳು ಶುರುವಾದವು. ಒಂದರ ಹಿಂದೊಂದು ಆಟಗಳು ಬಹಳ ಸ್ಪರ್ಧಾತ್ಮಕ ರೀತಿಯಲ್ಲಿ ಮುಂದುವರಿಯುತ್ತಿದವು. ಸೌಭಾಗ್ಯ ಮೊದಮೊದಲು ಒಂದೆರಡು ವಿಭಾಗದಲ್ಲಿ ಗೆದ್ದಳು. ಆಗ ಅವಳಿಗೆ ಅವಳಪ್ಪ ಹೇಳಿದ್ದು ಸರಿಯೆನಿಸಿತು. ಹೌದು ಗೆಲುವು ನನ್ನ ಹಸ್ತರೇಖೆಯಲ್ಲಿಯೇ ಅಡಗಿದೆ. ಈ ಸಂಜನಾ ಒಬ್ಬಳು ಪ್ರಾಕ್ಟಿಸ್ ಮಾಡು, ಪ್ರಾಕ್ಟಿಸ್ ಮಾಡು ಎಂದು ತಲೆ ತಿನ್ನುತ್ತಿದ್ದಳು ಎಂದು ಯೋಚಿಸುತ್ತಾ ಆಟ ಆಡುವಾಗ ಕೆಲವೊಂದು ಫೌಲ್ ಮಾಡುತ್ತ ಆಟದ ರೂಲ್ಗಳನ್ನು ಮುರಿದಳು. ಆಟದಿಂದ ಹೊರಬಂದಳು.


ಆದರೆ ಸಂಜನಾ ಆಟದಲ್ಲಿ ದೃಢವಾಗಿ ಏಕಚಿತ್ತದಿಂದ ತುಂಬಾ ಹುಷಾರಾಗಿ, ಆತ್ಮವಿಶ್ವಾಸದಿಂದ ಆಡುತ್ತಿದ್ದಳು. ಪ್ರತಿಯೊಂದು ಹಂತಗಳನ್ನು ಗೆಲ್ಲುತ್ತ ಬಂದು ಫೈನಲನಲ್ಲಿಯೂ ಸಂಜನಾಳೆ ಗೆದ್ದು ಟ್ರೋಫಿಯೊಂದಿಗೆ ಊರಿಗೆ ಮರಳಿದಳು. ಸೌಭಾಗ್ಯ ನಿರಾಸೆ ಮತ್ತು ಹತಾಶೆಯಿಂದ ಹಿಂದಿರುಗಿದಳು.


ಸಂಜನಾಳನ್ನು ಊರವರು ಮತ್ತು ಶಾಲಾಡಳಿತ ಮಂಡಳಿಯವರು ಅಭಿನಂದಿಸಿ ಸನ್ಮಾನಿಸಿ, ಗೌರವಿಸಿದರು.


ಸೌಭಾಗ್ಯಳಿಗೆ ಈಗ ಅರಿವಾಗಿತ್ತು, ಹಸ್ತರೇಖೆ ಎಂದಿಗೂ ಭವಿಷ್ಯವನ್ನು ಬದಲಾಯಿಸುವುದಿಲ್ಲ, ನಾವು ಪ್ರಾಮಾಣಿಕ ಪ್ರಯತ್ನ, ಆತ್ಮವಿಶ್ವಾಸ, ನಂಬಿಕೆ ಹೊಂದಿದಾಗ ಮಾತ್ರ ಯಶಸ್ಸು, ಗೆಲುವು, ವಿಜಯದ ಕಿರೀಟ ನಮ್ಮದಾಗುತ್ತದೆ.. ಅದನ್ನು ಬಿಟ್ಟು ಈ ಜ್ಯೋತಿಷ್ಯ, ಹಸ್ತರೇಖೆ ನಂಬುವುದು, ಇದೆಲ್ಲ ನಮ್ಮ ಸಮಯವನ್ನು ಹಾಳು ಮಾಡುತ್ತದೆ.. ಜೊತೆಗೆ ಇದ್ದ ಆತ್ಮವಿಶ್ವಾಸವನ್ನು ಕೂಡ ಕಡಿಮೆ ಮಾಡುತ್ತದೆ ಎಂದು ಅರಿತುಕೊಂಡು ತಾನು ಮಾಡಿದ ತಪ್ಪನ್ನು ನೆನೆಸಿಕೊಂಡು ಮರುಗಿದಳು. ಆದರೆ ಗೆಳತಿ ಗೆದ್ದಿದ್ದಕ್ಕೆ ತುಂಬಾ ಖುಷಿ ಪಟ್ಟಳು. ಗೆಳತಿ ಹತ್ತಿರ ಹೋಗಿ ಅಭಿನಂದಿಸಿ, ಸಿಹಿ ತಿನ್ನಿಸಿ, ಸಂತೋಷ ಹಂಚಿಕೊಂಡಳು.



ಆದ್ದರಿಂದ ದಯವಿಟ್ಟು ಎಲ್ಲರೂ ನಿಮ್ಮ ನಿಮ್ಮ ಆತ್ಮವಿಶ್ವಾಸ, ನಿಮ್ಮ ಸಾಮರ್ಥ್ಯ, ನಿಮ್ಮ ಪ್ರಯತ್ನ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿ, ಯಾವುದೋ ಹಸ್ತ ರೇಖೆಯ ಮೇಲಲ್ಲ... ಗೆಲ್ಲಲು ಪ್ರಯತ್ನ ಬಹುಮುಖ್ಯ, ಹಸ್ತ ರೇಖೆಯಲ್ಲ.



  



Rate this content
Log in