Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Drama Classics Inspirational

4  

Shridevi Patil

Drama Classics Inspirational

ಕನಸು ನನಸಾದಾಗ

ಕನಸು ನನಸಾದಾಗ

2 mins
157



ಕನಸು ಕಾಣುವುದು ಮನುಷ್ಯನ ಸಹಜ ಸ್ವಾಭಾವಿಕ ಗುಣಗಳಲ್ಲಿ ಒಂದು. ಕನಸು ಕಾಣಲು ಕಾಸು ಕೊಡಬೇಕಾಗಿಲ್ಲ. ಯಾರ ಅಪ್ಪಣೆಯನ್ನು ತೆಗೆದುಕೊಂಡು ಕನಸು ಕಾಣಬೇಕಾಗಿಲ್ಲ. ಹೀಗಿರುವಾಗ ಕನಸು ಕಾಣುವುದು ತಪ್ಪೂ ಅಲ್ಲ ಅಲ್ಲವೇ.


ಕಂಡ ಕನಸುಗಳನ್ನು ಒಳ್ಳೆಯ ಮಾರ್ಗದಲ್ಲಿ ನನಸು ಮಾಡಿಕೊಳ್ಳುವತ್ತ ನಾವು ಸಾಗಬೇಕು.. ಕನಸು ನನಸಾದಾಗ ತಾನೇ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ಜೊತೆಗೆ ಕನಸು ನನಸಾದಾಗ ಮನಸ್ಸಿಗೆ ಖುಷಿ ನೆಮ್ಮದಿಯೂ ಸಿಗುತ್ತದೆ.


ದೇವಯಾನಿ ಶರತ್ ಒಂದು ಪುಟ್ಟ ಗೂಡಿನಲ್ಲಿ ತಮ್ಮ ಚಿಕ್ಕ ಸಂಸಾರ ಶುರು ಮಾಡಿದ್ದರು. ಚಿಕ್ಕ ಗೂಡು, ಅಚ್ಚುಕಟ್ಟಾದ ಗೂಡು, ನೋಡಿದವರಿಗೆ ಮತ್ತೊಮ್ಮೆ ತಿರುಗಿ ನೋಡಬೇಕು ಎನ್ನುವಷ್ಟು ನೀಟಾಗಿ, ಸ್ವಚ್ಛವಾಗಿ, ಚೆಂದವಾಗಿ ಒಪ್ಪ ಮಾಡಿ ಇಟ್ಟಿದ್ದ ದೇವಯಾನಿ ಯಾವಾಗ್ಲೂ ಮನೆ ಸಿಂಗರಿಸುವುದರಲ್ಲೇ ತನ್ನ ಸಮಯವನ್ನು ಕಳೆಯುತ್ತಿದ್ದಳು. ಶರತ್ ದೇವಯಾನಿ ಅನಾಥರು. ಅನಾಥಾಶ್ರಮದಲ್ಲಿ ಬೆಳೆದ ಇವರಿಬ್ಬರಿಗೂ ಮದುವೆ ಆಯಿತು. ಅನಾಥರಾಗಿ ಬೆಳೆದ ಇಬ್ಬರಿಗೂ ಪ್ರೀತಿ ಎಂದರೇನು, ? ಪ್ರೀತಿಯ ಅರ್ಥವೇನು? ಎಂಬುದರ ಸಂಪೂರ್ಣ ತಿಳುವಳಿಕೆ ಅವರಿಗಿತ್ತು. ಇಬ್ಬರೂ ಕೂಡ ತುಂಬಾ ಶಾಂತ ಸ್ವಭಾವದವರು. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು.


ಶರತ್ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಸಾಧಾರಣ ಸಂಬಳ ಬರುತ್ತಿತ್ತು. ಇದ್ದುದರಲ್ಲಿಯೇ ಖುಷಿಯ ಜೀವನ ಮಾಡಲು ಬಲ್ಲ ಶರತ್ ಮತ್ತು ದೇವಯಾನಿ ಅಲ್ಪ ಸ್ವಲ್ಪ ಹಣದ ಗಳಿಕೆ ಮಾಡಲು ಪ್ರಯತ್ನಿಸುತ್ತಿದ್ದರು. ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಅನ್ನುವ ಮಾತು ಇಬ್ಬರ ತಲೆಯಲ್ಲಿ ಬೇರೂರಿತ್ತು. ಹೀಗಾಗಿ ಇಬ್ಬರು ಕಷ್ಟ ಪಡುತ್ತಿದ್ದರು. ಈಗ ದೇವಯಾನಿಯೂ ಕೆಲಸಕ್ಕೆ ಹೊರಟಳು. ಇಬ್ಬರ ದುಡಿಮೆಯಿಂದ ಈಗ ತಲೆ ಮೇಲಿರುವ ಕಷ್ಟಗಳಲ್ಲಿ ಕೆಲವು ಹೆಗಲಿಗೆ ಬರತೊಡಗಿದವು.ಅಂದರೆ ಕಷ್ಟಗಳ ಪ್ರಮಾಣ ಇಳಿಕೆಯಾಗತೊಡಗಿತ್ತು.


ಈಗ ದೇವಯಾನಿಗೆ ತಮ್ಮ ಅಪೂರ್ಣ ಕುಟುಂಬವನ್ನು ಪೂರ್ಣ ಮಾಡಿಕೊಳ್ಳುವ ಬಯಕೆಯಾಗಿತ್ತು. ಶರತ್ ಜೊತೆ ಮಗು ಮಾಡಿಕೊಳ್ಳುವ ಕುರಿತು ಮಾತಾಡಿದಳು.


ಮಗು ಮಾಡಿಕೊಳ್ಳುವುದು ಇಬ್ಬರಿಗೂ ಒಪ್ಪಿಗೆ ಇತ್ತು. ಆದರೆ ಆ ಕನಸು ಈಡೇರುವ ಲಕ್ಷಣಗಳು ಇರಲಿಲ್ಲ.

ವೈದ್ಯರ ಮೊರೆ ಹೋದರು. ಚಿಕಿತ್ಸೆ ಪಡೆದರು. ದೇವಯಾನಿಗೆ ಸ್ವಲ್ಪ ಗರ್ಭಾಶಯದಲ್ಲಿ ಸಮಸ್ಯ ಇತ್ತು. ಹೀಗಾಗಿ ಮಕ್ಕಳಾಗುವುದು ಬಹುತೇಕ ಸಾಧ್ಯವಿಲ್ಲ ಎಂದು ಮೆಡಿಕಲ್ ರಿಪೋರ್ಟ್ ಬಂದಿತ್ತು.


ಶರತ್ ತನಗೆ ಮಗು ಆಗದಿದ್ರೂ ಪರಾವಾಯಿಗಿಲ್ಲ, ನೀನೇ ನನಗೆ ಒಂದು ಪುಟ್ಟ ಮಗುವಿದ್ದಂತೆ, ನೀನು ನಗುತ್ತ ಮನೆ ತುಂಬಾ ಓಡಾಡಿದರೆ ಸಾಕು ಎಂದು ತನ್ನ ಹೆಂಡತಿಗೆ ತಿಳಿಸಿ ಹೇಳಿ ಅವಳ ತಲೆಯಿಂದ ಮಗು ವಿಚಾರವನ್ನು ತೆಗೆದು ಹಾಕಿದನು.


ದಿನಕಳೆದಂತೆ ಈಗ ಅವರಿಗೆ ಮನೆ ಮಾಡಿಕೊಳ್ಳುವ ಕನಸೊಂದೆ ದೊಡ್ಡಾದಾಗಿ ಕಾಣಲಾರಂಭಿಸಿತ್ತು. ಇಷ್ಟಿಷ್ಟೇ ಹಣ ಒಟ್ಟುಗೂಡಿಸಿ ಮನೆಗಾಗಿ ಜಾಗ ಖರೀದಿಸಿದರು. ಸುಂದರವಾದ ಮನೆ ಕಟ್ಟಲು ಆರಂಭಿಸಿದರು. ಸ್ವಲ್ಪ ದಿನಗಳಲ್ಲಿ ಚಿಕ್ಕದಾದ ಸುಂದರ ಮನೆ ನಿರ್ಮಿಸಿದರು. ಅವರ ಆಸೆಯಂತೆ ಚೆಂದದ ಮನೆಯಂತೂ ಆಯಿತು. ಇಬ್ಬರಲ್ಲೂ ಖುಷಿ ಇದ್ದರೂ ಸಹ ಇಬ್ಬರ ಮನಸ್ಸಿನಲ್ಲಿ ಮಗು ಆಸೆ ಮಾತ್ರ ಹಾಗೆ ಇದ್ದಿತು. ಆದರೆ ಇಬ್ಬರೂ ತಮ್ಮ ನೋವನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಸುಂದರ ನಗುವಿನ ಹಿಂದೆ ನೋವಿದ್ದರೂ ಆ ನೋವು ಕಾಣದಂತೆ ನಗುವಿನ ಹೊದಿಕೆ ಹೊಚ್ಚಿದ್ದರು.


ಈಗ ದೇವಯಾನಿ ಶರತ್ ತಮ್ಮ ಸ್ನೇಹಿತರ ಜೊತೆಗೆ ಗೃಹ ಪ್ರವೇಶ ಮಾಡಲು ಸಿದ್ಧರಾಗಿದ್ದರು. ಬೆಳಗಿನ ಜಾವ ಬ್ರಾಹ್ಮಿ ಮೂಹೂರ್ತದಲ್ಲಿ ಹೊಸ ಮನೆಗೆ ಪ್ರವೇಶ ಮಾಡಿದರು. ಎಲ್ಲರೂ ಖುಷಿಯಾಗಿ ನಾಷ್ಟಾ ಮಾಡುವ ಸಮಯದಲ್ಲಿ ದೇವಯಾನಿ ತಲೆ ಸುತ್ತಿ ಬಿದ್ದಳು. ಶರತ್ ಗಾಬರಿಯಾಗಿ ಆಕೆಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿದ್ದನು. ಆಗ ದೇವಯಾನಿ ಸ್ನೇಹಿತೆಯೊಬ್ಬಳು ವೃತ್ತಿಯಲ್ಲಿ ವೈದ್ಯಯಾಗಿದ್ದಳು. ಗೃಹ ಪ್ರವೇಶಕ್ಕೆ ಆ ವೈದ್ಯೆ ಕೂಡ ಬಂದಿದ್ದರಿಂದ ಅವಳೇ ಚೆಕಪ್ ಮಾಡುತ್ತೇನೆಂದು ಹೇಳಿದಾಗ ಶರತ್ ನಿಟ್ಟುಸಿರು ಬಿಟ್ಟನು. ಡಾಕ್ಟರ್ ಚೆಕ್ ಮಾಡಿದ ಬಳಿಕ ಸಿಹಿಸುದ್ದಿಯೊಂದು ಹೊರಬಂದಿತ್ತು.


ಅವರ ಬಹಳ ವರ್ಷದ ಕನಸು ಈಡೇರಿತ್ತು. ದೇವಯಾನಿ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಶರತ್ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಕುಣಿದಾಡಿದನು. ದೇವಯಾನಿಯಂತೂ ಯಾವ ದೇವರನ್ನು ಬಿಡದೇ ಧನ್ಯವಾದ ಹೇಳುತ್ತಿದ್ದಳು.


ದೇವಯಾನಿ, ಶರತ್ ಇವರ ಮನೆ ಕಟ್ಟುವ ಕನಸು ಜೊತೆಗೆ ಮಗು ಮಾಡಿಕೊಳ್ಳುವ ಕನಸು ಎರಡು ನನಸಾಗಿದ್ದವು.


ಕನಸು ನನಸಾದಾಗ ಸಂತೋಷಕ್ಕೆ ಪಾರವೇ ಇರಲ್ಲ. ಜಗತ್ತನ್ನೇ ಗೆದ್ದಷ್ಟು ಸಂತೋಷ ತುಂಬಿ ತುಳುಕುತ್ತಿರುತ್ತದೆ. ಆದ್ದರಿಂದ ತಾಳ್ಮೆಯಿಂದ ಕನಸನ್ನು ನನಸು ಮಾಡಿಕೊಳ್ಳುವತ್ತ ಸಾಗಿ. ಆಗ ನೀವು ಕಂಡ ಕನಸು ನನಸಾಗಿ ಸಂತೋಷ ನಿಮ್ಮ ಕೈಸೆರೆಯಾಗುತ್ತದೆ.


Rate this content
Log in

Similar kannada story from Drama