Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract Classics Others

4  

Vijaya Bharathi

Abstract Classics Others

ಕನಸಿನ ಒಡೆಯ

ಕನಸಿನ ಒಡೆಯ

2 mins
585


'ಮುಗಿಯದ ಹಾದಿಯಲ್ಲಿ ಅವನನ್ನು ಹುಡುಕುತ್ತಾ ಏಕಾಂಗಿಯಾಗಿ ಹೋಗುತ್ತಿದ್ದ ಸ್ವಪ್ನ, ಸುತ್ತಲೂ ಒಮ್ಮೆ ಕಣ್ಣಾಡಿಸಿ ದಾಗ ಆ ರಸ್ತೆ ನಿರ್ಜನವಾಗಿದ್ದನ್ನು ನೋಡಿ ಅವಳಿಗೆ ಗಾಬರಿಯಾಯಿತು.ಸುಮಾರು ತಿಂಗಳುಗಳಿಂದಲೂ ಮನೆಗೆ ಬಾರದೇ ಅವಳನ್ನೂ ಮತ್ತು ಅವಳ ಮಕ್ಕಳನ್ನೂ ಸತಾಯಿಸುತ್ತಿದ್ದ ಅವಳ ಗಂಡನನ್ನು ಹುಡುಕಿಕೊಂಡು ಬರಲು ದೂರದ ಊರಿಗೆ ಹೊರಟಿದ್ದ ಸ್ವಪ್ನ ಳಿಗೆ ಈ ಹಾದಿ ತುಂಬಾ ಉದ್ದವಾಗಿದೆ ಎನಿಸತೊಡಗಿತು. 


ಅಷ್ಟರಲ್ಲಿ ಅವಳ ಪಕ್ಕದಲ್ಲೇ ಸರ್ಕಾರಿ ಕೆಂಪು ಬಸ್ ಒಂದು ' ಪುಂಯ್ ಪುಂಯ್' ಎಂದು ಹಾರನ್ ಮಾಡುತ್ತಾ ಹೋದಾಗ,‌ಸರ್ರನೆ ಫುಟ್ ಪಾತ್ ನಲ್ಲಿ ನಿಂತಳು. ಅದೇನಾಶ್ಚರ್ಯ! ಕಿಟಕಿಯ ಕಡೆ ಕುಳಿತಿದ್ದ ವ್ಯಕ್ತಿ ಯನ್ನು ನೋಡಿದಳು . ,'ಅವರೇ ಖಂಡಿತವಾಗಿ ನನ್ನವರೇ. ಅದೇ ಕಣ್ಣು, ಅದೇ ಕನ್ನಡಕ, ಅದೇ ನಗುಮುಖ, ಅಬ್ಬಾ ಕೊನೆಗೂ ಸಿಕ್ಕಿದರಲ್ಲಾ, ಅವರನ್ನು ಈಗಲೇ ಮಾತನಾಡಿಸಬೇಕು. ತಿಂಗಳುಗಳು ಕಳೆದರೂ ನಮ್ಮನ್ನು ನೋಡಲು ಬರದಿರುವ ಕಾರಣ ಕೇಳಬೇಕು, ಚೆನ್ನಾಗಿ ದಬಾಯಿಸಿ ಕೇಳಬೇಕು. ಅವರು ನನ್ನನ್ನು ಏನೆಂದುಕೊಂಡಿದ್ದಾರೆ ? ಮನೆ ಮತ್ತು ಮಕ್ಕಳ ಜವಾಬ್ದಾರಿ ನನ್ನದೊಬ್ಬಳ ದೇನಾ? ಈಗಲೇ ಅವರನ್ನು ಹಿಡಿಯಬೇಕು,ಮನೆಗೆ ಕರೆದುಕೊಂಡು ಹೋಗಬೇಕು.'ಒಂದೇ ಸಮನೇ ಯೋಚಿಸುತ್ತಾ, ಬಸ್ ನಿಲ್ಲಿಸಲು ಜೋರಾಗಿ ಕೂಗಿದಳು

"ಸ್ಟಾಪ್ ಸ್ಟಾಪ್". ಇವಳ ಕೂಗಿಗೆ ಕರಗಿದ ಕಂಡೆಕ್ಟರ್ ಬಸ್ ನಿಲ್ಲಿಸಿ ಡೋರ್ ತೆಗೆದು "ಎಲ್ಲಿಗಮ್ಮ"?ಎಂದು ಕೇಳಿದಾಗ, ಅವಳು

 "ಈ ಬಸ್ ಎಲ್ಲಿಗೆ ಹೋಗುತ್ತದೋ ಅಲ್ಲಿಗೆ"ಎಂದು ಹೇಳುತ್ತಾ, ಬಸ್ ಒಳಗೆ ನುಸುಳಿದಾಗ, "ಅಯ್ಯೋ ಎಂತೆಂತಹವರು ಇದ್ದಾರಲ್ಲ?,ಬಸ್ ಹೋಗುವ ಕಡೆಗೆ ಬರುತ್ತಾರಂತೆ. ಏನು ವಿಚಿತ್ರವಪ್ಪಾ " ಎನ್ನುತ್ತಾ, ಅವಳ ಹತ್ತಿರ ಬಂದು,

"ಏಯ್ ನೋಡಮ್ಮ ಈ ಬಸ್ ಚಿತ್ರದುರ್ಗಕ್ಕೆ ಹೋಗುತ್ತದೆ, ಟಿಕೆಟ್ ತೆಗೆದುಕೊಳ್ಳಬೇಕು, ನೂರು ರೂಪಾಯಿ ಕೊಡಮ್ಮ" ಕಂಡೆಕ್ಟರ್ ಒಂದೇ ಸಮನೆ ಕೇಳುತ್ತಿದ್ದರೂ, ಅವಳು ಅವನ ಕಡೆ ಗಮನ ಕೊಡದೆ ಅವಳ ಗಂಡ ಕುಳಿತಿದ್ದ ಕಿಟಕಿಯ ಬಳಿ ದಡದಡನೆ ಓಡಿದಳು. ಅರೆ, ಅಲ್ಲಿ ಅವನಿಲ್ಲ. ಸುತ್ತಲೂ ನೋಡುತ್ತಾಳೆ. ಅವನ ಸುಳಿವಿಲ್ಲ.

ಸ್ವಪ್ನ ಳ ವಿಚಿತ್ರ ವರ್ತನೆಯನ್ನು ನೋಡಿದ ಕಂಡೆಕ್ಟರ್ ಮತ್ತೆ ಅವಳಿಗೆ ಟಿಕೆಟ್ ಕೊಳ್ಳಲು ಹೇಳಿದಾಗ, ಅವಳು ತಬ್ಬಿಬ್ಬಾಗಿ 

"ನೋಡಿ, ಅಲ್ಲಿ ನನ್ನ ಮನೆಯವರು ಕುಳಿತಿದ್ದರು. ಅವರನ್ನು ಕೇಳಿ ದುಡ್ಡು ಪಡೆಯೋಣವೆಂದರೆ ಈಗ ಅವರು ಅಲ್ಲಿ ಕಾಣುತ್ತಿಲ್ಲ. ನಿಮಗೆ ಗೊತ್ತಾ ಅವರು ಎಲ್ಲಿ ಇಳಿದರು ಅಂತ .ಅದೇ ಸ್ಕೈ ಬ್ಲೂ ಶರ್ಟ,ಚೌಕಾಕಾರದ ಗೋಲ್ಡ್ ಫ್ರೇಂ ಕನ್ನಡಕದವರು. ನಾನು ಬಸ್ ಹೊರಗಿನಿಂದ ಅವರನ್ನು ನೋಡಿದ್ದೆ, ಈಗ ಇಲ್ಲಿ ಇಲ್ಲವೇ ಇಲ್ಲ" ಬಡಬಡಿಸುತ್ತಿರುವ ಇವಳನ್ನು ನೋಡಿ ಸಿಟ್ಟಿಗೆದ್ದ ಕಂಡೆಕ್ಟರ್ ಕೂಡಲೇ ಬಸ್ ಸ್ಟಾಪ್ ಮಾಡಿಸಿ, ಅವಳನ್ನು ಬಲವಂತದಿಂದ ಕೆಳಗಿಳಿಸಿದಾಗ , ಸ್ವಪ್ನ ಹತಾಶಳಾಗಿ ಚಲಿಸುತ್ತಿರುವ ಬಸ್ ನ ಅದೇ ಕಿಟಕಿಯ ಕಡೆ ನೋಡಿದಾಗ, ಮತ್ತೆ ಅವಳ ಗಂಡನ ನಗುಮುಖ. ಅವನು ಕಿಟಕಿಯ ಹೊರಗೆ ಕೈ ಹಾಕಿ ಅವಳಿಗೆ ಟಾಟಾ ಮಾಡಿದಾಗ, ಅವಳಿಗೆ ತುಂಬಾ ರೇಗಿ ಹೋಯಿತು.

"ರೀ, ಸುಮಂತ್ ನೀವು ಈ ರೀತಿ ಕಣ್ಣಾ ಮುಚ್ಚಾಲೆ ಆಡಿಸುತ್ತಾ ಇರುವುದು ಸರಿಯಲ್ಲ. ನಿಲ್ಲಿ ನಿಲ್ಲಿ ನಾನೂ ನಿಮ್ಮ ಜೊತೆಗೆ ಬರುತ್ತೀನಿ. ಪ್ಲೀಸ್ ನಿಲ್ಲಿ ಪ್ಲೀಸ್ ಹೋಗಬೇಡಿ" ..........


"ಸ್ವಪ್ನ, ಎಚ್ಚರ ಮಾಡಿಕೋ. ಏನೇನೋ ಕನವರಿಸಿಕೊಳ್ಳುತ್ತಿದ್ದೀಯಲ್ಲಾ,.ಏನಾದರೂ ಕೆಟ್ಟ ಕನಸು ಬಿತ್ತಾ? ಕಣ್ಣು ಬಿಡು. ಎಚ್ಚರ ಮಾಡಿಕೊಂಡು ಸ್ವಲ್ಪ ನೀರು ಕುಡಿ, ಕೈಕಾಲುಗಳನ್ನು ತೊಳೆದು ಕೊಂಡು ದೇವರನ್ನು ನೆನೆದುಕೊಂಡು ಮಲಗು "

ಸ್ವಪ್ನಳ ತಾಯಿ ಮಗಳನ್ನು ಎಬ್ಬಿಸಿ ನೀರು ಕೊಟ್ಟಾಗ, ಅವಳಿಗೆ ತಾನು ಇದುವರೆಗೂ ಕಂಡಿದ್ದು ಕನಸೆಂದು ತಿಳಿದು, ತುಂಬಾ ನಿರಾಶೆಯಾಯಿತು. ಆದರೆ ತನಗೆ ಬಿದ್ದ ಕನಸು ಕೆಟ್ಟದ್ದಂತೂ ಅಲ್ಲ ಎಂದು ತಾಯಿಗೆ ಹೇಳಬೇಕೆಂದು ಕೊಂಡರೂ ನಾಲಿಗೆ ಬರಲಿಲ್ಲ. ಮೌನವಾಗಿ ರೋದಿಸಿದಳು‌.ತಾಯಿಯ ಕೂಗಿಗೆ ಎಚ್ಚರ ಮಾಡಿಕೊಂಡು ನೀರು ಕುಡಿದು ಕಣ್ಣು ಬಿಟ್ಟು ಸುತ್ತಲೂ ನೋಡಿದಾಗ, ಗಂಧದ ಹಾರ ಹಾಕಿದ್ದ ಚಿತ್ರ ಪಟದೊಳಗಿನಿಂದ ಸುಮಂತ್ ಇವಳನ್ನು ನೋಡಿ ನಸು ನಗುತ್ತಿದ್ದರೆ, ಈಗ ಮೂರು ತಿಂಗಳ ಹಿಂದೆ ಕರೋನಾಗೆ ಬಲಿಯಾಗಿದ್ದ  ಗಂಡನ ನಗು ಮುಖವನ್ನು ನೆನಪಿಸಿಕೊಂಡು ಅವಳು ಕಣ್ಣೀರಿಟ್ಟಳು. ಅವಳು ಇದುವರೆಗೂ ಕಂಡ ಕನಸನ್ನು ಮೆಲುಕು ಹಾಕುತ್ತಾ ಮತ್ತೊಮ್ಮೆ ಅವನನ್ನು ಕನಸಿನಲ್ಲಿ ಅರಸುತ್ತಾ, ನಿದ್ರೆಗೆ ಜಾರಿದಳು. ಅವಳಿಗೆ ಗಂಡನಿಲ್ಲದ ವಾಸ್ತವಕ್ಕಿಂತ ಒಂದೆರಡು ಕ್ಷಣಗಳಾದರೂ ಅವನನ್ನು ಕಾಣ ಬಹುದಾದ ಸುಂದರ ಸ್ವಪ್ನಗಳೇ ಲೇಸೆನಿಸಿತು.




Rate this content
Log in

Similar kannada story from Abstract