Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Tragedy Classics Others

4  

Vijaya Bharathi

Tragedy Classics Others

ಏಕಾಂಗಿ

ಏಕಾಂಗಿ

2 mins
383


ಅಪ್ಪನ ಶ್ರಾದ್ಧ ಕರ್ಮಗಳನ್ನೆಲ್ಲಾ ಮುಗಿಸಿದ ನಂತರ ಮಗಳು, ಮಗ ಎಲ್ಲರೂ ತಮ್ಮ ತಮ್ಮ ಲಗ್ಗೇಜ್ ಹಿಡಿದುಕೊಂಡು ತಮ್ಮ ತಮ್ಮ ಊರುಗಳಿಗೆ ಹೊರಟಾಗ, ಸಾತಮ್ಮನವರಿಗೆ ಮನೆಯೆಲ್ಲಾ ಬಣ ಬಣಗುಟ್ಟಿತು. ಮುಂದೇನು? ಅವರಿಗೆ ಯೋಚನೆಯಾಯಿತು. ನಲವತ್ತೈದು ದಶಕಗಳಿಂದ

ಜೀವನಸಂಗಾತಿಯಾಗಿದ್ದ ತಮ್ಮ ಯಜಮಾನರು ಕರೋನಾಘಾತದಿಂದ ಮೃತರಾಗಿದ್ದರು . ಇದುವರೆವಿಗೂ ಗಂಡ ಜೊತೆಯಲ್ಲಿದ್ದುದ್ದರಿಂದ ತಮ್ಮ ಮಗನಿಗೂ ತೊಂದರೆ ಕೊಡಬಾರದೆಂದು ನಿರ್ಧರಿಸಿ ತಮ್ಮ ಸ್ವಂತ ಮನೆಯಲ್ಲಿ ಸ್ವತಂತ್ರವಾಗಿ ಬಾಳಿಬದುಕಿದ್ದ ಸಾತಮ್ಮ ನವರಿಗೆ ಮುಂದೆ ತಾನು ಹೀಗೇ ಏಕಾಂಗಿಯಾಗಿ ಬಾಳಬೇಕೆ?ಎಂಬ ಯೋಚನೆ ಹುಳದಂತೆ ಕೊರೆಯ ತೊಡಗಿತು. ಮಗನಾಗಲೀ ಮಗಳಾಗಲೀ ತನ್ನ ಬಗ್ಗೆ ಯೋಚಿಸಲೇ ಇಲ್ಲವಲ್ಲಾ ?ಮಗಳೇನೋ ಪರಾಧೀನ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅಂತಾಯಿತು. ಆದರೆ ಮಗ ಬಾಯಿ ಮಾತಿಗಾದರೂ ತನ್ನನ್ನು ಬರಹೇಳಲಿಲ್ಲವಲ್ಲಾ ?

ಸ್ವಾಭಿಮಾನಿಯಾದ ತಾನೂ ಸಹ ಅವನೊಂದಿಗೆ

ಹೋಗುವ ಬಗ್ಗೆ ಚಕಾರ ವೆತ್ತಲಿಲ್ಲ. ಅವನಿಗೆ ಅವನ ಹೆಂಡತಿ ಮಗುವಿನೊಂದಿಗೆ ಬೇರೆ ಯಾಗಿದ್ದು ರೂಢಿಯಾಗಿ ಹೋಗಿದೆ . ಈಗ ತಾಯಿಯೇ ಹೊರಗಿನವಳಂತಾಗಿರಬೇಕು.ಅಥವಾ ತನ್ನ ತಾಯಿಗೇನು ಕಡಿಮೆ ?ಆರಾಮವಾಗಿ ಇರುತ್ತಾಳೆ ಎಂಬ ಧೋರಣೆಯೋ ?ಅಥವಾ ಆದಷ್ಟು ಕಾಲ ಅಮ್ಮನ ಪಾಡಿಗೆ ಅಮ್ಮ ಇದ್ದುಕೊಂಡಿದ್ದರೆ, ತನ್ನ ಹೆಂಡತಿಗೆ ತೊಂದರೆಯಾಗದು ಎಂಬ ಲೆಕ್ಕಾಚಾರವೋ? ತಿಳಿಯಲಿಲ್ಲ.

 

ಗಂಡನನ್ನು ಕಳೆದುಕೊಂಡ ದು:ಖದೊಂದಿಗೆ ಇದೊಂದು ಚಿಂತೆಯೂ ಸೇರಿ, ಖಿನ್ನರಾದರು.

ಅವರಿಗೆ ಉಂಡುಟ್ಟು ಉಡಲು ಕೊರತೆಯಿರಲಿಲ್ಲ. ಹನ್ನೆರಡು ಚದುರಡಿಯ ದೊಡ್ಡ ಮನೆ, ಕೈ ತುಂಬಾ ಹಣಕಾಸು, ಬೀರುವಿನ ಭರ್ತಿ ತುಂಬಿದ್ದ ಒಡವೆ ವಸ್ತ್ರಗಳು....ಎಲ್ಲವೂ ಅವರಿಗಿದ್ದರೂ ಒಂಟಿತನದ ಹಿಂಸೆ ಅವರಿಗೆ ಭಯವನ್ನು ಹುಟ್ಟಿ ಸಿತು. ಹಾಗಂತ

ಯಾರನ್ನಾದರೂ ಜೊತೆಗೆ ಕರೆದು ತಂದಿಟ್ಟುಕೊಂಡು

ನೋಡಿಕೊಳ್ಳಲು ಆಗುವುದಿಲ್ಲ. ಏನು ಮಾಡುವುದೋ ?ತಾನೊಬ್ಬಳೇ ಇದ್ದಾಗ ಏನಾದರೂ ಹೆಚ್ಚು ಕಡಿಮೆಯಾದರೆ ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವವರು ಯಾರು?

ಸಾತಮ್ಮನವರಿಗೆ ಮುಂದಿನ ಏಕಾಂಗಿ ಜೀವನದ ಚಿಂತೆ ಅನುಗಾಲವೂ ಕೊರೆಯುವುದಕ್ಕೆ ಶುರುವಾಯಿತು.

ಅಯ್ಯೋ ತನಗೆ ಮಕ್ಕಳಿದ್ದೂ ಈ ರೀತಿ ಏಕಾಂಗಿಯಾಗಿರಬೇಕಲ್ಲಾ ಎಂದು ತುಂಬಾ ಚಿಂತಿಸತೊಡಗಿದರು.

ಸಾಲದ್ದಕ್ಕೆ ನೆರೆಹೊರೆಯವರು, ಅಕ್ಕ ತಂಗಿಯರು ಇದರ ಬಗ್ಗೆಯೇ ಕೇಳುವಾಗ ಅವರಿಗೆ ಹಿಂಸೆ ಹೆಚ್ಚಾಗುತ್ತಿತ್ತು. ಆದರೂ ಅವರ ಬದುಕು ಮುಂದಕ್ಕೆ ಸಾಗಲೇ ಬೇಕೆಂಬುದು ವಾಸ್ತವ.ಇವರ ಹತ್ತಿರ ಇರುವ ಹಣಕಾಸನ್ನು ಕಂಡ ಇವರ ಸಹೋದರ ಸಂಬಂಧಿ ಗಳು ತಮ್ಮ ಮಕ್ಕಳನ್ನು ಇವರ ಜೊತೆಗೆ ಇರಿಸಿಕೊಳ್ಳಲು ದುಂಬಾಲು ಬಿದ್ದಾಗ ,ಸಾತಮ್ಮನವರು ತಮ್ಮ ಈ ಇಳಿವಯಸ್ಸಿನಲ್ಲಿ ಜವಾಬ್ದಾರಿ ಬೇಡವೆಂದು ಹಿಂಜರಿದರು.


ಹಾಗೂ ಹೀಗೂ ಮನೆಗೆಲಸಗಳಿಗೆ ಬರುವ ಕೆಲಸದವಳ ಮಗಳನ್ನು ರಾತ್ರಿ ವೇಳೆ ತಮ್ಮ ಜೊತೆಗೆ ಇರುವಂತೆ ಏರ್ಪಾಡು ಮಾಡಿಕೊಂಡಾಗ ಸಾತಮ್ಮನವರಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಈ ಸಮಾಧಾನ ತುಂಬಾ ದಿನಗಳು ಉಳಿಯಲಿಲ್ಲ. ಇವರ ಏಕಾಂತ ಬದುಕನ್ನು ಗಮನಿಸುತ್ತಿದ್ದ ಮನೆಗೆಲಸದವರು ,ಇವರಿಂದ ಹಣವನ್ನು ದೋಚಲು ಪ್ರಾರಂಭಿಸಿದರು. ಸಾತಮ್ಮನವರಿಗಂತೂ ಆರುತಿಂಗಳೊಳಗೇ ಈ ಏಕಾಂಗಿ ಜೀವನದ ಪಾಡುಗಳು ಸಾಕಾದಂತಾಯಿತು.

ಕಡೆಗೊಂದು ದಿನ, ತಮ್ಮ ಆಸ್ತಿಯನ್ನು ವಿಲ್ ಮಾಡಿಸಿ, ಮನೆಗೆ ಬೀಗ ಹಾಕಿ, ಅತ್ಯಂತ ಅನುಕೂಲ ವಾಗಿರುವ ಓಲ್ಡ್ ಏಜ್ ಹೋಂಗೆ ಸೇರಿಯೇ ಬಿಟ್ಟರು.

ಅಲ್ಲಿಗೆ ಸೇರಿದ ಮೇಲೆ ಅವರಿಗೆ ಜೀವನೋತ್ಸಾಹ ಮತ್ತೆ ಪುಟಿಯಿತು. ತಮ್ಮದೇ ವಯಸ್ಸಿನವರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಾ, ತಮ್ಮ ಏಕಾಂಗಿತನವನ್ನು ಮರೆತರು.



Rate this content
Log in