ಚಿನ್ಮಯಿ .

Drama

2  

ಚಿನ್ಮಯಿ .

Drama

7- ಹೆಜ್ಜೆಗೊಂದು ಹೆಜ್ಜೆ

7- ಹೆಜ್ಜೆಗೊಂದು ಹೆಜ್ಜೆ

4 mins
207


ಮಹಿಮಾ ಸರಾಗವಾಗಿ ತನ್ನ ಪರಿಚಯವನ್ನ ಹೇಳುತ್ತಿದ್ದರೆ ಇವನು ಮಾತ್ರ ಅವಳನ್ನ ನೋಡಿ ಶಾಕಾಗಿ ನಿಂತುಬಿಟ್ಟಿದ್ದ. ಅವನ ಮನಸ್ಸಲ್ಲಿ ಈಗ ಕೊರೆಯುತ್ತಿದ್ದದ್ದು ಒಂದೇ ಪ್ರಶ್ನೆ, 'ಇವ್ಳು ಹೇಗೆ ಇಲ್ಲಿ?' ಅಂತ. ಅವಳು ಏನು ಹೇಳಿದಳೋ ಏನೂ ಗೊತ್ತಿಲ್ಲ ಇವನಿಗೆ. 


ಇವನ ಅನ್ಯಮನಸ್ಕತೆಯನ್ನ ಅರಿತ ಅನಿಕೇತ್ ತಾನೇ ಬಂದು ಎಚ್ಚರಿಸಿದ್ದ.

"ಸರ್...ಏನಾಯ್ತು ನಿಮ್ಗೆ? ಯಾಕ್ ಹಾಗೆ ನಿಂತಿದ್ದೀರಿ?"


ಈಗ ಈ ಮಾನವನಿಗೆ ಎಚ್ಚರವಾಗಿತ್ತು. ಎದುರಿಗೆ ತಲೆ ಎತ್ತಿ ನೋಡಿದರೆ ಮಹಿಮಾ ಇವನನ್ನೇ ಗೊಂದಲದಿಂದ ನೋಡುತ್ತಿದ್ದಳು.


"ಸಾರಿ..ಅದು ನೀವು ಏನು ಹೇಳಿದ್ರಿ ಕೇಳಿಸಲಿಲ್ಲ...ನಾನು ಬೇರೆ ಏನೋ ಯೋಚನೆ ಮಾಡ್ತಿದ್ದೆ...ಇಫ್ ಯು ಡೋಂಟ್ ಮೈಂಡ್ ನಿಮ್ಮ ಪರಿಚಯ ಇನ್ನೊಮ್ಮೆ ಹೇಳ್ತೀರಾ? ನಿಮ್ಮ ಹೆಸರೇನು? ಯಾವ ಡಿಪಾರ್ಟ್ಮೆಂಟ್?" ಕುತೂಹಲದಿಂದ ಕೇಳಿದ್ದ.


"ಮಹಿಮಾ....ಮಹಿಮಾ ಶರ್ಮಾ...ಫ್ರಮ್ ಫಿಸಿಕ್ಸ್ ಡಿಪಾರ್ಟ್ಮೆಂಟ್" 


'ಮಹಿಮಾ...ಮಹಿಮಾ' ತನ್ನ ಮನಸ್ಸಿನಲ್ಲೇ ಎರಡೆರಡು ಬಾರಿ ಉಚ್ಚರಿಸಿದ್ದ. ಅಲ್ಲಿಂದ ಮುಂದೆ ತಮ್ಮ ತಮ್ಮ ಪರಿಚಯ ಮಾಡಿಕೊಂಡ ಎಲ್ಲಾರಿಗೂ ಕೇವಲ ಯಾಂತ್ರಿಕವಾಗಿ ಪ್ರತಿಕ್ರಿಯಿಸಿದ್ದ. ಅವನ ಮನಸ್ಸು ಪೂರ್ತಿಯಾಗಿ ಮಹಿಮಾ ಸುತ್ತಲೂ ಸುತ್ತುತ್ತಿತ್ತು. 


"ನಿಂಗೇನು ತಲೆಲಿ ಸ್ವಲ್ಪನಾದ್ರು ಬುದ್ಧಿ ಇದ್ಯೆನೆ? ಯಾಕಲ್ಲಿ ಮೀಟಿಂಗ್ ಹಾಲಲ್ಲಿ ಆ ಹೊಸ ಲೆಕ್ಚರರ್ ನೋಡಿ ಆ ರೀತಿ ಆಡ್ತಿದ್ದೆ? ಯಾರಾದ್ರೂ ನಿನ್ನ ನೋಡಿದ್ರೆ ಹುಚ್ಚಿ ಅಂದ್ಕೊಳ್ತಾರೆ ಅಷ್ಟೇ...ಅಂದ್ಕೊಳೋದೇನೂ ಹುಚ್ಚಿನೆ ನೀನು ಬಿಡು...ಆದ್ರೆ ಅದು ಇಷ್ಟು ದಿನ ನಂಗೆ ಮಾತ್ರ ಗೊತ್ತಿತ್ತು...ಇವತ್ತು ಎಲ್ರಿಗೂ ಗೊತ್ತಾಗೋದು ರಜನಿ ಹುಚ್ಚಿ ಅಂತ..ಸ್ಟುಪಿಡ್. ಸ್ವಲ್ಪನೂ ಮ್ಯಾನರ್ಸ್ ಇಲ್ಲ ನಿಂಗೆ. ಎಲ್ಲಿ ಹೇಗಿರಬೇಕು ಅಂತಾನೂ ಗೊತ್ತಿಲ್ಲ...ಹೌದು ನೀನ್ಯಾಕೆ ಅವನನ್ನ ಹಾಗೆ ನುಂಗೋ ಥರ ನೋಡ್ತಿದ್ದೆ?" ಅರ್ಧ ಸಿಟ್ಟಿನಿಂದ ಅರ್ಧ ಹೊಟ್ಟೆ ಉರಿಯಿಂದ ಕೇಳಿದ್ದ ಅನಿಕೇತ್. 


"ನಿನ್ ಯಾಕೆ ನಂಗೆ ಎರಡು ವರ್ಷ ಲೇಟಾಗಿ ಸಿಗಲಿಲ್ಲ?" ಕೂಲಾಗಿ ಮರು ಪ್ರಶ್ನಿಸಿದ್ದಳು ರಜನಿ.


ಅನಿಕೇತ್ಗೆ ಈಗ ನಿಜಕ್ಕೂ ಸಿಟ್ಟು ಬಂದಿತ್ತು. 'ನಾನೇನ್ ಕೇಳ್ತಾ ಇದ್ದೀನಿ, ಇವಳೇನು ಹೇಳ್ತಾ ಇದ್ದಾಳೆ' ಅಂತ ಉರಿಗಣ್ಣಿನಿಂದ ಅವಳನ್ನು ನೋಡಿದ್ದ. ಅದನ್ನ ಅರ್ಥ ಮಾಡಿಕೊಂಡ ರಜನಿ ತಾನೇ ಮಾತನ್ನ ಪ್ರಾರಂಭಿಸಿದ್ದಳು. 


"ಆ ಮಾನವ್ ನೋಡಿದ್ಯಾ? ಎಷ್ಟು ಚಂದ ಇದ್ದಾನಲ್ವ. ಅವನ ಜೊತೆ ಮಾತಾಡೋಕೆ ಎಷ್ಟು ಖುಷಿಯಾಗುತ್ತೆ! ಈಗ ಹಾಲಿಂದ ಹೊರಗೆ ಬಂದ್ಮೇಲೆ ಕೂಡ ನಾವು ಮಾತನಾಡಿಸಿದ್ವಲ್ವಾ... ಅದೆಷ್ಟು ನೇರವಾಗಿ ಮಾತನಾಡ್ತಾನೆ...ನೋಡಿದ್ರೆ ನಿನಗಿಂತ ಒಂದೆರಡು ವರ್ಷ ದೊಡ್ಡವನು ಇರಬಹುದು ಅಷ್ಟೇ...ಅದಕ್ಕೆ ಕೇಳಿದ್ದು ನೀನ್ಯಾಕೆ ನಂಗೆ ಎರಡು ವರ್ಷ ಲೇಟಾಗಿ ಸಿಗಲಿಲ್ಲ ಅಂತ...ಇಲ್ಲಾಂದಿದ್ರೆ ಪಕ್ಕ ನಾನು ಅವ್ನಿಗೆ ಲೈನ್ ಹೊಡೀತಿದ್ದೆ...ಆದ್ರೆ ಎನ್ಮಾಡ್ಲಿ ಈಗ. ನಾನು ಹಾಗೇನಾದ್ರು ಮಾಡೋಕೆ ಹೋದ್ರೆ ನೀನೇ ನನ್ ಕಣ್ಮುಂದೆ ಬರ್ತಿಯ...ನಿಂಗೆ ಮೋಸ ಮಾಡೋಕೆ ಆಗೋಲ್ವಾಲ ಅದಕ್ಕೆ ಸುಮ್ನೆ ಇದ್ದೀನಿ ಅಷ್ಟೇ...ಆಮೇಲೆ ನಿಂಗೆ ಸಿಟ್ಟು ಬಂದು, ನನ್ನ ಮೇಲೆ ರಿವೆಂಜ್ ತಗೊತಿನಿ ಅಂತೆಲ್ಲ ಭೀಷ್ಮ ಪ್ರತಿಜ್ಞೆ ಮಾಡಿ, ನನ್ನ ಮತ್ತೆ ಮಾನವ್ ಲವ್ ಸ್ಟೋರಿಗೆ ವಿಲ್ಲನ್ ಆಗಬಾರದಲ್ವಾ..ಅದಕ್ಕೆ ನಾನು ನನ್ನ ಪ್ರೀತಿನ ತ್ಯಾಗ ಮಾಡಿಬಿಟ್ಟೆ" ಅಂತ ಏನೋ ದೊಡ್ಡ ತ್ಯಾಗಮೂರ್ತಿಯಂತೆ ಹೇಳಿದ್ದಳು ರಜನಿ.


ಇವಳು ಹೇಳೋ ಮಾತನ್ನೇ ಕಣ್ಣನ್ನು ದೊಡ್ಡದಾಗಿ ಮಾಡಿಕೊಂಡು ಕೇಳುತ್ತಿದ್ದ ಅನಿಗೆ 'ಎನ್ ಹುಡುಗಿನ ನಂಗೆ ಗಂಟು ಹಾಕಿದ್ಯಪ್ಪ ದೇವ್ರೇ' ಅನಿಸುತ್ತಿತ್ತು. 


"ತುಂಬಾ ಒಳ್ಳೆ ಕೆಲ್ಸನೇ ಮಾಡಿದ್ದಿಯ ಕಣೆ...ಇಲ್ಲಾಂದಿದ್ರೆ ನೀನು ಅಂದ್ಕೊಂಡ ಹಾಗೇನೇ ನಾನು ರಿವೆಂಜ್ ತಗೊಳೋಕೆ ಬಂದೆ ಬರ್ತಿದ್ದೆ...ಎಷ್ಟಂದ್ರು ನಂಗೆ ಅವನ ಮನೆ ಗೊತ್ತಿರೋದೇ ಅಲ್ವಾ?" ಅಂತ ಕೊನೆಯ ಮಾತನ್ನ ಮಾತ್ರ ತನಗೆ ಮಾತ್ರ ಕೇಳುವಂತೆ ಹೇಳಿದ್ದ. 


"ಏನೋ ಅಂದೆ ಅಲ್ವಾ ಕೊನೆಗೆ ಏನದು?" 


"ಏನಿಲ್ಲ...ನಿನ್ ಪ್ರೀತಿನ ತ್ಯಾಗ ಮಾಡಿ ತುಂಬಾ ನೋವಾಗ್ತಾ ಇರ್ಬೇಕೇನೋ ಅಲ್ವಾ? ಬಾ ಐಸ್ ಕ್ರೀಮ್ ತಿಂದು ಹೊಟ್ಟೆ ತಂಪು ಮಾಡ್ಕೊ" ಅಂತ ಹೇಳಿ ಅವಳಿಗಿಂತ ಮುಂದೇನೆ ನಡೆದಿದ್ದ. ಮೊದಲು ತನ್ನ ಹೊಟ್ಟೆನ ತಂಪು ಮಾಡ್ಕೊಬೇಕಿತ್ತಲ್ವಾ. 


ಅವನ ಅವಸ್ಥೆಯನ್ನು ನೋಡಿ ರಜನಿಗೆ ಜೋರಾಗಿ ನಗು ಬಂದರೂ ಅದನ್ನು ತಡೆಹಿಡಿಯುತ್ತಾ ಬಂದಿದ್ದಳು. ಇಷ್ಟೊತ್ತು ಅವಳು ಮಾಡಿದ್ದೆಲ್ಲ ಅವನನ್ನ ಉರಿಸಲೆಂದೇ ಎಂದು ಅನಿಗೆ ಹೇಗೆ ಗೊತ್ತಾಗಬೇಕು ಪಾಪ. ಅವಳ ತುಂಟಾಟ ಅವನ ಮೇಲೆ ಸರಿಯಾಗೇ ವರ್ಕ್ ಮಾಡಿತ್ತು. ಹಾಗೆಯೇ ನಗುತ್ತಾ ಅವನ ಜೊತೆ ಐಸ್ ಕ್ರೀಂ ಪಾರ್ಲರಿಗೆ ನಡೆದಿದ್ದಳು.


ಮಾನವ್ ಪರಿಸ್ಥಿತಿಯಂತೂ ಕೇಳೋದೇ ಬೇಡ. ಅವನು ಈಗ ಖುಷಿಯ ಉತ್ತುಂಗದಲ್ಲಿದ್ದ. ನಿನ್ನೆಯಷ್ಟೇ ಒಂದು ಹುಡುಗಿಯನ್ನು ನೋಡಿ, ಅವಳನ್ನ ಒಂದೇ ನೋಟದಲ್ಲಿ ಇಷ್ಟಪಟ್ಟು ಅವಳಿಗಾಗಿ ಏನೆಲ್ಲ ಸರ್ಕಸ್ ಮಾಡಿ ಬಂದಿದ್ದ...ಅದೂ ಒಂದು ದಿನದಲ್ಲಿ!! ಈಗ ನೋಡಿದರೆ ಅದೇ ಹುಡುಗಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕಿಕೊಂಡಂತೆ, ತಾನು ಸೇರಿರುವ ಕಾಲೇಜಿನಲ್ಲಿ ಅವನಿಗೆ ಸಿಕ್ಕಿದ್ದಳು. ಅವಳ ಹೆಸರನ್ನ ಹೇಗೆ ತಿಳಿದುಕೊಳ್ಳಲಿ ಅಂತ ಮಾಸ್ಟರ್ ಪ್ಲಾನ್ ಮಾಡುತ್ತಿದ್ದವನಿಗೆ ಇಂದು ಅವಳಾಗೆ ಸ್ವತಃ ಬಂದು ತನ್ನ ಪರಿಚಯವನ್ನು ಮಾಡಿಕೊಂಡಿದ್ದಳು. ಏನಾಗಬೇಡ ಅವನ ಪರಿಸ್ಥಿತಿ!! ಒಂದೇ ಅಟೆಂಪ್ಟ್ ಅಲ್ಲಿ ಯುಪಿಎಸ್ಸಿ, ಸಿಎ, ಎಲ್ಲ ಕಷ್ಟಕರವಾದ ಪರೀಕ್ಷೆಗಳನ್ನೂ ಪಾಸ್ ಮಾಡಿದಂತಿತ್ತು ಅವನ ಪರಿಸ್ಥಿತಿ.


ಹೌದು...ಹಿಂದಿನ ದಿನ ಮಹಿಮಾ, ಕೃತಿ, ನೇತ್ರಾ ಮತ್ತು ದಿವಾಕರ್ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಮಹಿಮಾಳನ್ನು ನೋಡಿ, ಅವಳನ್ನ ಫಾಲೋ ಮಾಡಿ, ಅವಳ ಫೋಟೋಗಳನ್ನು ತೆಗೆದಿದ್ದು ಬೇರೆ ಯಾರೂ ಅಲ್ಲ ಮಿಸ್ಟರ್ ಮಾನವ್ ರಾವ್! ಅದರ ನಂತರ ಅವರ ಕಾರ್ ನಂಬರ್ ಅನ್ನು ಸೇವ್ ಮಾಡಿಕೊಂಡಿದ್ದನಾದರೂ ಇದರಿಂದ ಏನೂ ಉಪಯೋಗವಾಗಿರಲಿಲ್ಲ. ಆ ಕಾರ್ ಅನ್ನು ಹುಡುಕಿಕೊಂಡು ಅವರ ಮನೆಯ ತನಕ ಹೋಗಿ ನೋಡಿದರೆ ಅಲ್ಲಿ ಮಹಿಮಾ ಇರಲೇ ಇಲ್ಲ. ಆ ಮನೆಯಲ್ಲಿರುವ ಸದಸ್ಯರಲ್ಲಿ ಇವಳನ್ನು ಕಾಣದೆ ಇದ್ದಾಗ ನಿರಾಸೆಯಿಂದ ವಾಪಸಾಗಿದ್ದ.


ಆದರೆ ಇವೆಲ್ಲದರಲ್ಲಿ ಅವನಿಗೆ ಖುಷಿ ಕೊಟ್ಟ ಒಂದು ವಿಚಾರವೆಂದರೆ ಅದು ತಾನು ಅವಳ ಹೆಸರನ್ನು ಸರಿಯಾಗಿ ಗುರುತಿಸಿದ್ದು. ಕೃತಿ ಮತ್ತು ಮಹಿಮಾ ಇವೆರಡರಲ್ಲಿ ಅವಳ ಹೆಸರು ಯಾವುದೆಂದು ಯೋಚಿಸುತ್ತಿದ್ದಾಗ ಅವನ ಮನಸ್ಸು ಸೂಚಿಸಿದ್ದು ಮಹಿಮಾ ಹೆಸರನ್ನ. ಈಗ ಅದೇ ಸರಿಯಾಗಿತ್ತು ಕೂಡ. ಅವಳು ತನ್ನ ಹೆಸರನ್ನ ಹೇಳಿಕೊಳ್ಳಬೇಕಾದರೆ ಅವನ ಹೃದಯದ ಬಡಿತ ಅವನಿಗೇ ಕೇಳಿಸುವಷ್ಟು ಜೋರಾಗಿತ್ತು. ಏನಾದರೂ ಅವಳ ಹೆಸರು ಕೃತಿ ಆಗಿದ್ದರೆ? ಅಂತ ಭಯ ಕಾಡುತ್ತಿತ್ತು. 


ಅದು ಅವನಿಗವನೇ ಹಾಕಿಕೊಂಡ ನಿಯಮ. 'ಅವಳ ನಿಜವಾದ ಹೆಸರು ಮಹಿಮಾ ಅಂತಲೇ ಆದರೆ ನನ್ನ ಮನಸು ಸರಿಯಾಗೇ ಸೂಚನೆ ಕೊಟ್ಟಿದೆ ಅಂತರ್ಥ. ಅಲ್ಲಿಗೆ ಈ ಜನ್ಮಕ್ಕೆ ಅವಳೇ ನನ್ನ ಲೈಫ್ ಪಾರ್ಟ್ನರ್. ಒಂದು ವೇಳೆ ಬೇರೆ ಆಗಿದ್ದರೆ? ಉಹುಂ...ಇಲ್ಲ ಆ ವಿಚಾರ ಮಾಡೋದೇ ಬೇಡ...ನನ್ನ ಮನಸ್ಸು ಹೇಳ್ತಾ ಇದೆ...ಅವಳ ಹೆಸರು ಮಹಿಮಾನೆ...ನಾನು ಕರೆಕ್ಟಾಗೆ ಗೆಸ್ ಮಾಡಿದ್ದೀನಿ' ಅಂತ ರಾತ್ರಿ ಇಡೀ ಹೊರಳಾಡಿ ತೀರ್ಮಾನಕ್ಕೆ ಬಂದಿದ್ದ.


"ಇನ್ನು ನಾಳೆಯಿಂದ 'ಮಿಷನ್ ಮಹಿಮಾ' ಸ್ಟಾರ್ಟ್...ಅವಳ ಬಗ್ಗೆ ಎಷ್ಟು ಆಗುತ್ತೋ ಅಷ್ಟು ಡಿಟೇಲ್ಸ್ ಕಲೆಕ್ಟ್ ಮಾಡ್ಬೇಕು. ಈಗಂತೂ ನಾನು ಫುಲ್ ಶ್ಯೂರ್ ಆಗಿದ್ದೀನಿ. ಅವಳೇ ನನ್ನ ಹೆಂಡತಿ" ಅಂತ ನಕ್ಕು ಹೇಳಿದವನು ತನ್ನ ಕರ್ತವ್ಯದ ಕರೆಗೆ ಓಗೊಟ್ಟು ಕ್ಲಾಸಿನ ಕಡೆಗೆ ನಡೆದಿದ್ದ. 


ಆ ದಿನ ಮಾನವ್ಗೆ ಹಾಗೆಯೇ ಉಲ್ಲಾಸದಿಂದ ಕಳೆದರೆ ಮಹಿಮಾಗೆ ಎಂದಿನಂತೆ ಯಾಂತ್ರಿಕವಾಗಿ ಸರಿದಿತ್ತು.


"ಅಮ್ಮ...ಅಮ್ಮಾ...ಬೇಗ ಬಾ...ಎಲ್ಲಿದಿಯ?" ಕೂಗುತ್ತಾ ಒಳಬಂದಿದ್ದಳು ರಜನಿ.


"ಏನಾಯ್ತೆ ನಿಂಗೆ? ಯಾಕ್ ಹಾಗೆ ಕುಗ್ತಾ ಇದೀಯ..." ಅಂತ ಬೈತ ಆಗ ತಾನೇ ಹೊರಗಡೆ ಬಂದವರು ಇನ್ನೂ ಏನೇನೋ ಹೇಳುವವರಿದ್ದರು ಆದರೆ ರಜನಿಯ ಪಕ್ಕದಲ್ಲಿದ್ದ ವ್ಯಕ್ತಿಯನ್ನು ನೋಡಿ ಸುಮ್ಮನೆ ನಿಂತುಬಿಟ್ಟರು. 


"ಅಮ್ಮಾ...ಇವಳು ಮಹಿಮಾ ಅಂತ ನನ್ನ ಬೆಸ್ಟ್ ಫ್ರೆಂಡ್...ನಾನು ಯಾವಾಗ್ಲೂ ಹೇಳ್ತಾ ಇರ್ತಿನಾಲ್ವ? ಅವಳೇ ಇವಳು" ತನ್ನ ಗೆಳತಿಯನ್ನು ಪರಿಚಯ ಮಾಡಿಸಿದ್ದಳು ರಜನಿ. 


"ಹೋ..ನೀನೇನಾ ಮಹಿಮಾ ಅಂದ್ರೆ? ರಜನಿ ಯಾವಾಗಲೂ ನಿನ್ನ ಬಗ್ಗೆ ಹೇಳ್ತಾ ಇರ್ತಾಳೆ...ಆದ್ರೆ ನಿನ್ನ ನೋಡೋಕೆ ಆಗಿರಲಿಲ್ಲ ಮಗಳೇ...ಇವತ್ತು ಆ ಕಾಲ ಕೂಡಿ ಬಂತು ಅನ್ಸುತ್ತೆ...ಬಾಮ್ಮ ಬಾ...ಕೂತ್ಕೋ...ನಿಮ್ಮಿಬ್ಬರಿಗೂ ಕುಡಿಯೋಕೆ ಏನಾದ್ರು ತರ್ತೀನಿ" ಅಂತ ಲಗುಬಗೆಯಿಂದ ಒಳಗೆ ಓಡಿದ್ದರು ಶ್ರೀದೇವಿ.


ಅವರು ಹೇಳಿದ 'ಮಗಳೇ' ಎಂಬ ಪದ ಕೇಳಿ ಅವಳಿಗೆ ನೇತ್ರಾ ಅವರ ನೆನಪಾಗಿತ್ತು. 'ಅತ್ತೆನೂ ಕೂಡ ನನಗೆ ಹೀಗೆ ಕರೆಯುತ್ತಾರೆ' ಅಂತ ಸಣ್ಣದಾಗಿ ನಕ್ಕಿದ್ದಳು ಮಹಿಮಾ. 


ಮುಂದಿನ ಸುಮಾರು ಎರಡು ಗಂಟೆಗಳಷ್ಟು ಸಮಯ ರಜನಿಯ ಮನೆಯಲ್ಲಿ ಸರಾಗವಾಗಿ ಕಳೆದುಹೋಗಿತ್ತು. ಅವಳು ಅಲ್ಲಿ ಇದ್ದಷ್ಟು ಸಮಯ ಸಂತೋಷದಿಂದಿದ್ದಳು. ರಜನಿಯ ತಂದೆ ತಾಯಿ ಅವಳಿಗೆ ಅಕ್ಕರೆ ಮತ್ತು ಮಮತೆಯ ಮಹಾಪೂರವನ್ನೇ ಹರಿಸಿದ್ದರೆ, ರಜನಿಯ ತಮ್ಮ ರಂಜಿತ್ ಅವಳಿಗೆ ತಮ್ಮನಾಗಿ ಒಡಹುಟ್ಟಿದವರಿಲ್ಲವೆಂಬ ನೋವನ್ನು ನೀಗಿಸಿದ್ದನು. 


ಸುಮಾರು 6:30ಯ ನಂತರ ಅವಳ ಪಯಣ ಮಮತಾ ಮ್ಯಾನ್ಶನ್ ದಾರಿ ಹಿಡಿದಿತ್ತು. ರಜನಿಯ ಮನೆಯಲ್ಲಿದ್ದಷ್ಟು ಹೊತ್ತು ಯಾವುದೇ ಯೋಚನೆಯಿಲ್ಲದವಳಿಗೆ ಈಗ ಮತ್ತೆ ಬೆಳಿಗ್ಗೆಯಿಂದ ಕಾಡುತ್ತಿದ್ದ ಪ್ರಶ್ನೆಯ ಬಗ್ಗೆಯೇ ಯೋಚಿಸಲು ಶುರು ಮಾಡಿದ್ದಳು


ಹೌದು...ಬೆಳಿಗ್ಗೆಯಿಂದ ಅವಳ ಮನಸ್ಸಿನಲ್ಲಿ ಒಂದು ಪ್ರಶ್ನೆಯು ಗಿರಕಿ ಹೊಡೆಯುತ್ತಿತ್ತು. ಈಗ ಮತ್ತೆ ಅವಳ ಮನಸು ಆ ವಿಷ್ಯದ ಬಗ್ಗೆ ಯೋಚಿಸಲು ಶುರು ಮಾಡಿತ್ತು. 


ಅದೇ....'ಮಿಸ್ಟರ್ ಮಾನವ್ ಶರ್ಮಾನ ನಾನು ಎಲ್ಲಿ ನೋಡಿದ್ದೀನಿ?'


ಸಶೇಷ


Rate this content
Log in

Similar kannada story from Drama