Prajna Raveesh

Classics Inspirational Others

4  

Prajna Raveesh

Classics Inspirational Others

ಬಾಳ ಸಂಗಾತಿ

ಬಾಳ ಸಂಗಾತಿ

2 mins
400


ಹೇಯ್ ವಾಣಿ ಅದೆಷ್ಟು ಅಂತ ಮಾತನಾಡುವುದಾ ನೀನು ಸ್ವಲ್ಪ ಬಾಯಿ ಮುಚ್ಕೊಂಡು ಇರ್ತಿಯಾ?!, ನೋಡೇ ಅಲ್ಲಿ ಟೀಚರ್ ನಮ್ಮನ್ನೇ ನೋಡ್ತಾ ಇದ್ದಾರೆ ನೋಡು ಈಗ ನಮ್ಮನ್ನು ಇಬ್ಬರನ್ನೂ ಕೂಡ ನಿಲ್ಲಿಸಿ ಬೈತಾರೆ ಆಯಿತಾ ನೀನು ಹೀಗೆ ಕೂಡ ಗುಸು ಗುಸು ಪಿಸು ಪಿಸು ಅಂತ ಮಾತನಾಡಿದ್ರೆ.


ಹೇಯ್ ವೀಣಾ ಸ್ವಲ್ಪ ಹೊತ್ತು ಸುಮ್ನೆ ಇರ್ತಿಯಾ?, ಹಂಗೆಲ್ಲಾ ಏನೂ ಆಗಲ್ಲ ಕಣೇ ಎಂದು ಪಿಸುಗುಟ್ಟಿದಳು ವಾಣಿ. ಹೇಯ್ ವೀಣಾ ನಮ್ಮ ಟೀಚರ್ ನ ತಲೆಕೂದಲು ಅದೆಷ್ಟು ಉದ್ದ, ದಪ್ಪ ಇದೆ ಅಲ್ವೇನೇ?, ಆಸೆಯಾಗುತ್ತೆ ಕಣೇ ನೋಡೋವಾಗ್ಲೆ, ನೋಡೋಕು ಅಷ್ಟೇ ಕಣೇ ದಂತದ ಬೊಂಬೆ ಥರ ಇದ್ದಾರಲ್ವಾ?!


ನೋಡು ವಾಣಿ ಪಾಠ ಮಾಡುವಾಗ ನೀನು ಹೀಗೆ ವಟ ವಟ ಅಂತಿದ್ರೆ ಟೀಚರ್ ನಮ್ಮನ್ನು ಲಾಯರ್ ಸಾಹೇಬ್ರು ಎಂಕ್ವಿರಿ ಮಾಡಿದಂತೆ ವಿಚಾರಣೆ ಮಾಡಿ, ಉಗ್ದು ಹೊರಗೆ ಹಾಕ್ತಾರೆ ಕಣೇ ಸ್ವಲ್ಪ ಹೊತ್ತು ಬಾಯಿ ಮುಚ್ಕೊಂಡು ಇರು ಮಾರಾಯ್ತಿ.


ವಾಣಿ, ವೀಣಾ ನಾನೂ ಅವಾಗಿಂದ ನೋಡ್ತಾ ಇದ್ದೀನಿ ಅದೇನದು ನಿಮ್ಮಿಬ್ರದ್ದು ಪಟ್ಟಾಂಗ?, ಪಾಠ ಕೇಳಲು ಇಷ್ಟವಿಲ್ಲದೇ ಇದ್ದರೆ ಹೊರಗೆ ನಡೆಯಿರಿ ಎಂದಾಗ ವಾಣಿ, ಟೀಚರ್ ಈ ಮಾತು ಹೇಳಿದ್ದೇ ಚಾನ್ಸ್ ಅಂದುಕೊಂಡು ಹೊರನಡೆದಳು!!, ಅಂತಹ ಮಾತಿನ ಮಲ್ಲಿ, ತರ್ಲೆ ಹುಡುಗಿ ನಮ್ಮ ವಾಣಿ!!, ವೀಣಾ ತರಗತಿಯಲ್ಲಿದ್ದು ಪಾಠವನ್ನು ಆಲಿಸತೊಡಗಿದಳು.


ಮನೆಯಲ್ಲಿಯೂ ಅಷ್ಟೇ ವಾಣಿ ಎಲ್ಲರ ಜೊತೆಗೆ ತುಂಟು ಮಾತಿನಲ್ಲಿ ತಂಟೆ ಮಾಡುತ್ತಿದ್ದಳು!!, ನಿಂತಲ್ಲಿ ನಿಲ್ಲದೆ ಹರಿಯುವ ನೀರಿನಂತೆ ಸಂಚರಿಸುವ ಮನಸ್ಸು ಹಾಗೆಯೇ ಬಾಯಿ ಕೂಡ!! ಒಂದೇ ಸಮನೆ ವಟ ವಟ ಅಂದು ಮನೆ ಮಂದಿಯ ಕಾಲೆಳೆದು, ತಲೆ ತಿನ್ನುತ್ತಿದ್ದಳು ವಾಣಿ!!


ಪದವಿ ಆದಂತೆ ಮನೆಯಲ್ಲಿ ವಾಣಿಯ ಮದುವೆ ಪ್ರಸ್ತಾಪ ಮಾಡಿದರು. ಅಂತೆಯೇ ಅವಳಿಗೆ ಪಟ್ಟಣದಲ್ಲಿ ನೌಕರಿ ಮಾಡುವ ಹುಡುಗನೊಂದಿಗೆ ವಿವಾಹ ಮಾಡಿಸಿದರು ಆಕೆಯ ಅಪ್ಪ, ಅಮ್ಮ.


ವಟ ವಟ ಎಂದು ಮಾತನಾಡುವ ವಾಣಿ, ತುಂಟಿಯಾದರೂ ಕೂಡ ಮುಗ್ಧೆ, ಕಲ್ಮಶವಿರದ ಪರಿಶುದ್ಧ ಮನಸ್ಸು ಅವಳದು. ಹೃದಯದೊಳಗೆ ಬಂಧಿಯಾಗಿರುವ ಅವೆಷ್ಟೋ ವಿಚಾರಧಾರೆಗಳನ್ನು ಮುಕ್ತವಾಗಿ ಎಲ್ಲರೊಂದಿಗೂ ಹೇಳಿಕೊಳ್ಳುವ ಗುಣ ಆಕೆಗೆ. ಮನಸ್ಸಿನಲ್ಲಿ ಯಾವುದನ್ನೂ ಮರೆಮಾಚುತ್ತಿರಲಿಲ್ಲ ವಾಣಿ.


ಮದುವೆಯಾಗಿ ಪಟ್ಟಣಕ್ಕೆ ಬಂದ ವಾಣಿಗೆ ಹಳ್ಳಿ ಜೀವನವೇ ಇಷ್ಟ ಹೊರತು ಪಟ್ಟಣದ ಜೀವನ ಇಷ್ಟವಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ವಾಣಿಗೆ ಅಲ್ಲಿಯ ವಾತಾವರಣವೆಂದರೆ ಬಲು ಪ್ರೀತಿ. ಆದರೆ ಈಗ ಪಟ್ಟಣದಲ್ಲಿ ಏಕಾಂತ ಭಾವ ಕಾಡತೊಡಗಿತು ವಾಣಿಗೆ.


ಗಂಡ ಬೆಳಗ್ಗೆ ಆಫೀಸ್ ಗೆ ಹೋದರೆ ಬರುವಾಗ ರಾತ್ರಿ, ರಾತ್ರಿ ಗಂಡ ಬಂದೊಡನೆ ಮಾತನಾಡುತ್ತೇನೆ ಎಂದರೆ ಅವನೋ ತುಂಬಾ ಬ್ಯುಸಿ ಮನುಷ್ಯ!!, ಮನೆಗೆ ಬಂದೂ ಕೆಲವೊಮ್ಮೆ ಅವನ ಆಫೀಸ್ ಕೆಲಸಗಳಲ್ಲಿ ತಲ್ಲೀನನಾಗುತ್ತಿದ್ದ. ಇಲ್ಲವೇ ಅವನ ಪಾಡಿಗೆ ಟಿವಿ, ಫೋನ್ ಎಂದು ಇರುತ್ತಿದ್ದ ಹೊರತು ಅವನಿಗೆ ಅಷ್ಟೊಂದು ಮಾತು ಇರಲಿಲ್ಲ, ಇವಳ ವಿರುದ್ಧ ಸ್ವಭಾವ ಅವನಿಗೆ!!, ಇವಳು ಮಾತಿನ ಮಲ್ಲಿಯಾದರೆ ಅವನೋ ಮೌನಿ!!


ಇವಳು ಹತ್ತು ಮಾತನಾಡಿದರೆ ಅವನು ಒಂದು ಮಾತನಾಡುತ್ತಾನೆ ಅದೂ ಕೆಲವೊಮ್ಮೆ ಅವನಿಗೆ ಮನಸ್ಸಾದಾಗ ಮಾತ್ರ!! ಇದರಿಂದ ಅವಳಿಗೆ ಪೇಟೆಯ ಜೀವನ ಬೋರ್ ಎಂದು ಅನಿಸಿಬಿಟ್ಟಿತ್ತು.


ಹೀಗೆ ಪಟ್ಟಣ ಜೀವನ ಬೋರ್ ಆಗುತ್ತದೆ ಎಂದು ಅವಳು ಟಿವಿ ನೋಡಲು ಶುರು ಮಾಡತೊಡಗಿದಳು. ನಾಲ್ಕು ಗೋಡೆಯ ಮಧ್ಯೆಯ ಪಟ್ಟಣದ ಜೀವನದಲ್ಲಿ ಅದೆಷ್ಟು ಅಂತ ಟಿವಿ ನೋಡುವುದು ಎಂದು ಬೋರ್ ಅನಿಸಿಬಿಟ್ಟಿತು ವಾಣಿಗೆ. ಇಲ್ಲಿ ಹಳ್ಳಿಯ ತರ ತೋಟ, ಗುಡ್ಡೆ, ಕಾಡು ಅಂತ ಇರ್ತಿದ್ರೆ ಹೋಗಿ ಸುತ್ತಾಡಿಯಾದ್ರೂ ಬರಬಹುದಿತ್ತು, ಆದ್ರೆ ಇಲ್ಲಿ ಅದೂ ಇಲ್ಲ!!, ಹೋಗ್ಲಿ ಪಕ್ಕದ ಮನೆಗೆ ಹೋಗಿ ಪಟ್ಟಾಂಗ ಹೊಡೆಯೋಣ ಅಂತಿದ್ರೆ ಪಕ್ಕದ ಮನೆಯ ಬಾಗಿಲಿಗೆಲ್ಲಾ ಬೀಗ!!, ಬಹುಶಃ ಎಲ್ಲರೂ ಹೊರಗಡೆ ಹೋಗಿ ದುಡಿಯುವವರೇ ಇರಬೇಕು ಅಂದುಕೊಂಡಳು ವಾಣಿ.


ಮುಂದೆ ವಾಣಿ ತನ್ನ ಮುಕ್ತ ಮಾತುಗಳನ್ನು ಆಲಿಸಲು, ಅವಳ ಜೊತೆ ಮಾತನಾಡಲು ಯಾರೂ ಇಲ್ಲವೆಂದು ಅರಿತು ತನ್ನ ಅಂತರಾಳದ ಮಾತುಗಳನ್ನು, ಕಷ್ಟ_ ಸುಖಗಳನ್ನು ಲೇಖನಿಯ ಮೂಲಕ ಅಕ್ಷರಗಳಲ್ಲಿ ಮುತ್ತುಗಳನ್ನಾಗಿ ಜೋಡಿಸಿ ಪ್ರಕಟಗೊಳಿಸತೊಡಗಿದಳು. ಮುಂದೆ ಬರವಣಿಗೆಯೇ ಅವಳ ಬಾಳಸಂಗಾತಿಯಾಯಿತು.


Rate this content
Log in

Similar kannada story from Classics