Shanthi Tantry

Drama

1  

Shanthi Tantry

Drama

"ಪ್ರತಿಕ್ರಿಯೆ"

"ಪ್ರತಿಕ್ರಿಯೆ"

2 mins
235


ಇದು ಹಳೇಯ ಕಥೆ.


ನನ್ನ ಮಗಳನ್ನು ಪ್ರೀ ಸ್ಕೂಲ್ ನಿಂದ ಮನೆಗೆ ಕರೆದುಕೊಂಡು ಬರುತ್ತಿದ್ದೆ. ಬರುವ ದಾರಿಯಲ್ಲಿ ಒಂದು ಇಳಿಜಾರಿನ ಮಾರ್ಗ, ಅದರಲ್ಲಿ ಆ ಮಧ್ಯಾಹ್ನ ಸಮಯದಲ್ಲಿ ಯಾವ ವಾಹನ ಚಲನೆಯೂ ಇಲ್ಲ. ಹಾಗಾಗಿ ನನಗರಿವಿಲ್ಲದೆಯೇ ಕಾರನ್ನು ಸ್ವಲ್ಪ ವೇಗವಾಗಿಯೇ ಚಲಾಯಿಸುತ್ತಿದ್ದೇನೆ ಎಂದು ಗೊತ್ತಾದದ್ದು ನನ್ನ ಹಿಂದೆ ಒಂದು ಪೋಲೀಸ್ ಕಾರಿನ ಸೈರನ್ ಕೇಳಿದಾಗಲೇ. ಕೂಡಲೇ ಕಾರನ್ನು ಪಕ್ಕಕ್ಕೆ ನಿಲ್ಲಿಸಿದೆ.


ಇದೇ ಮೊದಲ ಅನುಭವ ಆದ್ದರಿಂದ ಏನು ಎತ್ತ ಎಂದು ತಿಳಿದಿರಲಿಲ್ಲ. ನನ್ನ ಕಾರಿನ ಕಿಟಕಿಯ ಹತ್ತಿರ ಬಂದು, '೩೦ ಮೈಲಿ ಸ್ಪೀಡ್ ಲಿಮಿಟ್ ಇರುವಲ್ಲಿ ನೀವು ೪೫ ರಲ್ಲಿ ಕಾರು ಚಲಾಯಿಸುತ್ತಿದ್ದೀರಿ', ಎಂದು ಪೋಲೀಸ್ ಶಾಂತವಾಗಿಯೇ ತನ್ನ ಕೈಯಲ್ಲಿದ್ದ ರೇಡಾರ್ ತೋರಿಸಿ ಹೇಳಿದ. 'ಓ... ಹೌದೇ?', ಎಂದೆ. ನನ್ನ ಲೈಸೆನ್ಸ್ ರೆಜಿಸ್ಟ್ರೇಷನ್ ವಿವರಗಳನ್ನೆಲ್ಲಾ ತೆಗೆದುಕೊಂಡು, ಒಂದು ಟಿಕೆಟ್ ಬರೆದು ಕೊಟ್ಟ.


ಜೀವನದಲ್ಲಿಯೇ ಸಿಕ್ಕಿದ ಮೊದಲ ಸ್ಪೀಡಿಂಗ್ ಟಿಕೆಟ್. ಅದೇ ಬೇಜಾರಿನಲ್ಲಿ ಡ್ರೈವ್ ಮಾಡುತ್ತಾ ಮುಂದೆ ಬರುತ್ತಿದ್ದಂತೆಯೇ ನೋಡುತ್ತೇನೆ, ಯಾಕೋ ಕಾರಿನ ಬ್ರೇಕ್ ಹಿಡಿಯುತ್ತಲೇ ಇಲ್ಲ. ನಾನು ಸರಿಯಾದ ಪೆಡಲ್ ಒತ್ತುತ್ತಿದ್ದೇನೆಯೋ ಇಲ್ಲವೋ ಎಂದು ಪರೀಕ್ಷಿಸಲು ಮತ್ತೊಂದು ಪೆಡಲ್ ಒತ್ತಿದೆ. ಅದು ಆಕ್ಸಿಲರೇಟರ್ ಆಗಿದ್ದು, ಕಾರು ಒಮ್ಮೆಗೆ ಇನ್ನೂ ವೇಗದಲ್ಲಿ ಹೋಗ ತೊಡಗಿತು. ಕೂಡಲೇ ಮತ್ತೊಂದು ಪೆಡಲ್ ಒತ್ತಿದೆ - ಬ್ರೇಕ್ ಹಿಡಿಯಲು. ಊಹ್ಞೂ... ಸುತಾರಾಮ್ ಬ್ರೇಕ್ ಹಿಡಿಯುತ್ತಿಲ್ಲ.


ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಲ್ಲಿಸಲು ಬೇರೆ ಉಪಾಯ ಕಾಣದೇ, ಆ ಕ್ಷಣಕ್ಕೆ ತೋಚಿದ್ದು, 'ಯಾವುದಕ್ಕಾದರೂ ಹೋಗಿ ಗುದ್ದಿದರೆ ಕಾರು ನಿಲ್ಲಬಹುದಲ್ಲವೇ', ಎಂದು. ಕೂಡಲೇ ಪಕ್ಕದಲ್ಲಿದ್ದ ನಮ್ಮ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನ ಪ್ರವೇಶದ ದೊಡ್ಡ ಬೋರ್ಡ್ ಕಾಣಿಸಿ, ಸೀದಾ ಅದರೆಡೆಗೆ ಕಾರು ಚಲಾಯಿಸಿದೆ. ಕಾರು ಸೀದಾ ಹೋಗಿ ಆ ಬೋರ್ಡನ್ನು ಗುದ್ದಿ, ಸೀಳಿ, ಅದರ ಮಧ್ಯದಲ್ಲಿ ನಿಂತಿತು. ಪುಣ್ಯಕ್ಕೆ ಸುತ್ತ ಮುತ್ತ ಯಾರೂ ಇರಲಿಲ್ಲ.


ಪಕ್ಕ ಹಿಂದೆ ತಿರುಗಿ ನೋಡಿದೆ. ಕಾರ್ ಸೀಟ್ ನಲ್ಲಿ ಹಿಂದೆ ಕುಳಿತಿದ್ದ ನನ್ನ ಮಗು ಪಿಳಿ ಪಿಳಿ ಕಣ್ಣು ಬಿಟ್ಟು ಎಲ್ಲವನ್ನೂ ಕುತೂಹಲದಿಂದಲೇ ನೋಡುತ್ತಿತ್ತು. ಕಾರಿನಿಂದ ಇಳಿದು, ನನ್ನ ಮಗುವನ್ನೂ ನಿಧಾನಕ್ಕೆ ಇಳಿಸಿ, ಕೂಡಲೇ ನನ್ನ ಆಪದ್ಭಾಂದವರಾದ ನನ್ನ ಪತಿರಾಯರಿಗೆ ಕರೆ ಮಾಡಿ, 'ಬೇಗ ಬನ್ನಿ, ಆಕ್ಸಿಡೆಂಟ್ ಆಗಿದೆ', ಎಂದೆ.


ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದಂತೆಯೇ, ನನಗೆ ಟಿಕೆಟ್ ಕೊಟ್ಟ ಆ ಪೋಲೀಸ್ ಕಾರು ಅದೇ ಮಾರ್ಗದಲ್ಲಿ ಹೋಗುತ್ತಿದ್ದು, ನನ್ನ ಅವಾಂತರ ನೋಡಿ, 'ಏನಾಯಿತು?', ಎಂದು ಬಂದು ನಿಂತಿತು. ನಾನು ಏನು ಹೇಳಿದೆ ಎಂದು ನನಗೆ ಒಂದು ಚೂರೂ ನೆನಪಿಲ್ಲ. ಆ ಪೋಲೀಸ್ ಅಧಿಕಾರಿಯೇ, ನನ್ನ ಮುರಿದಿದ್ದ ಕಾರನ್ನು ರಿಪೇರಿಗೆ ಸಾಗಿಸಲು ಟೋ ಟ್ರಕ್ ಗಾಗಿ ಕರೆ ಮಾಡಿದ್ದಲ್ಲದೇ, ಅಪಾರ್ಟ್ ಮೆಂಟಿನ ಸಿಬ್ಬಂದಿಗೂ ಕರೆಮಾಡಿ ವಿಷಯ ತಿಳಿಸಿದ.


ಅಷ್ಟರಲ್ಲಿಯೇ ಅಲ್ಲಿ ಜನ ಸೇರಿದರು. ಅಪಾರ್ಟ್ ಮೆಂಟಿನ ಸಿಬ್ಬಂದಿ ಬರುತ್ತಲೇ ಇನ್ನೊಂದು ದೊಡ್ಡ ಬೋರ್ಡ್ ಹಿಡಿದುಕೊಂಡು ಬಂದರು. ಮುರಿದು ಬಿದ್ದಿದ್ದ ಬೋರ್ಡ್ ತುಂಡುಗಳನ್ನೆಲ್ಲಾ ಹೆಕ್ಕಿ, ಆ ಜಾಗ ಕ್ಲೀನ್ ಮಾಡಲು ಜನ, ಹೊಸ ಬೋರ್ಡ್ ಅಲ್ಲಿ ಕಟ್ಟಲು ಮತ್ತಿಬ್ಬರು ಜನ, ಎಲ್ಲರೂ ನಗು ಮೊಗದಿಂದಲೇ ಬಂದು ತಮ್ಮ ತಮ್ಮ ಕೆಲಸ ಮಾಡುವುದರಲ್ಲಿ ತೊಡಗಿದ್ದರು. 


ಆಗ ಗಾಬರಿಯಲ್ಲಿ ನಮ್ಮನ್ನು ಹುಡುಕಿಕೊಂಡು ಬಂದ ಪತಿರಾಯರ ಮುಖವನ್ನು ನೋಡಿ, 'ನಮಗೇನೂ ಆಗಲಿಲ್ಲ' ಎಂದು ಮಗುವನ್ನೂ ಹಿಡಿದುಕೊಂಡು ಅವರತ್ತ ನಡೆದೆ. ಅವರು ನಮ್ಮಿಬ್ಬರನ್ನೂ ಬಿಟ್ಟು, ಆ ಹೊಸ ಬೋರ್ಡ್ ಕಟ್ಟುತ್ತಿದ್ದ ಜನಸಂದಣಿಯತ್ತ ಧಾವಿಸಿ ಯಾರಿಗೆ ಏನಾಗಿದೆಯೋ ಎಂದು ಹುಡುಕುತ್ತಿದ್ದರು.


ಅಷ್ಟರಲ್ಲಿ ಟೋ ಟ್ರಕ್ ಬಂದು ಕಾರನ್ನು ಸಾಗಿಸಿ ಹೊರಟಿತು. 


ಚಕ ಚಕ ಎಂದು ಅಪಾರ್ಟ್ ಮೆಂಟಿನ ಸಿಬ್ಬಂದಿಯೂ ಹೊಸ ಬೋರ್ಡ್ ಹಾಕಿ, ಅಲ್ಲಿನ ಜಾಗವನ್ನೆಲ್ಲಾ ಸ್ವಚ್ಛ ಮಾಡಿ ಮೊದಲಿನಂತೆಯೇ ಮಾಡಿ ಹೊರಟರು. ಆ ನನ್ನ ಪೋಲೀಸ್ ಅಧಿಕಾರಿ ನನ್ನ ಬಳಿ ಬಂದು, 'ನಿಮಗೀಗಷ್ಟೇ ಒಂದು ಟಿಕೆಟ್ ಕೊಟ್ಟಿರುವ ಕಾರಣ, ಮತ್ತೊಂದು ಟಿಕೆಟ್ ಕೊಡುವುದಿಲ್ಲ', ಎಂದು ವಿನಯದಿಂದಲೇ ತಿಳಿಸಿ ನಮ್ಮನ್ನು ಬೀಳ್ಕೊಟ್ಟ.


ಒಂದರ್ಧ ಮುಕ್ಕಾಲು ಗಂಟೆಯಲ್ಲಿಯೇ ಅಲ್ಲಿ ಏನೂ ನಡೆದಿಲ್ಲವೇನೋ ಎಂಬಷ್ಟು ಸಹಜ ಸ್ಥಿತಿಗೆ ಎಲ್ಲವೂ ಬಂದು ನಿಂತಿತು.


ದಿನಗಳು ಉರುಳಿದವು. ಒಂದು ದಿನ ಕಿಟಕಿಯಿಂದ ಹೊರ ನೋಡುತ್ತಿದ್ದ ನನ್ನ ನಾಲ್ಕು ವರ್ಷದ ಮಗಳು, 'ಅಮ್ಮಾ, ಯಾರೋ ಬೋರ್ಡ್ ಗುದ್ದಿದ್ದಾರೆ', ಎಂದಳು.


ಏನಾಯಿತಪ್ಪ ಎಂದು ಬಂದು ನೋಡಲು...


ಮಾರ್ಗದಲ್ಲಿ ಒಂದು ಟೋ ಟ್ರಕ್ ಹೋಗುತ್ತಿತ್ತು!


Rate this content
Log in

Similar kannada story from Drama