Vaman Acharya

Inspirational Others Children

4  

Vaman Acharya

Inspirational Others Children

ನಿಜವಾಗಿಯೂ ಅದ್ಭುತ ವೈದ್ಯ

ನಿಜವಾಗಿಯೂ ಅದ್ಭುತ ವೈದ್ಯ

4 mins
412



( ಆದರ್ಶ ವಿಚಾರ ಇರುವ ಅಪರೂಪದ ಡಾಕ್ಟರ್ ಕಥೆ)

 

ಅಂದು ಬೆಳಗ್ಗೆ ಎಂಟು ಗಂಟೆಗೆ ರಾಘವಪುರ ನಗರದ ಸಂಜೀವನಿ ಕ್ಲಿನಿಕ್ ಮುಂದೆ ಗ್ರಾಮಸ್ಥರ ಸಣ್ಣ ಗುಂಪು ಸಂಭಾಷಣೆಯಲ್ಲಿ ನಿರತರಾಗಿದ್ದರು. ಅವರು ಮಾತನಾಡುವ ರೀತಿ ಪರಸ್ಪರ ಜಗಳವಾಡುವ ಹಾಗೆ  ಕಂಡು ಬಂದಿತು.

 ದಾರಿಹೋಕರೊಬ್ಬರು ಕೇಳಿದರು, "ಏನಯ್ಯಾ,ಇದು ಫಿಶ್ ಮಾರ್ಕೆಟ್ ಮಾಡುತ್ತ ಇದ್ದೀರಾ?"


 ಅವರಲ್ಲಿ ಒಬ್ಬ ಉತ್ತರಿಸಿದ,

"ಸರ್, ನಾವು ನಿಮ್ಮಂತೆ ವಿದ್ಯಾವಂತರಲ್ಲ.  ಗ್ರಾಮ್ಯಭಾಷೆಯಲ್ಲಿ  ಜೋರಾಗಿ ಮಾತನಾಡುವದರಲ್ಲಿ ಆನಂದಪಡುತ್ತೇವೆ."

 ಆ ಗುಂಪಿನಲ್ಲಿ  ಒಬ್ಬ ಗಂಭೀರ ರೋಗಿಯಾಗಿದ್ದ. ಒಂದು ಗಂಟೆ ತಡವಾದರೂ ಕ್ಲಿನಿಕ್ ತೆರೆದಿರಲಿಲ್ಲ. ಕಾಂಪೌಂಡರ್ ಕಮ್ ರಿಸೆಪ್ಶನಿಸ್ಟ ರಾಜು ಆಗಮಿಸಿ ಬಾಗಿಲು ತೆರೆದ.  ತಡ ಮಾಡಿದ್ದಕ್ಕೆ ಗ್ರಾಮಸ್ಥರು ಅವನಿಗೆ ಹಿಗ್ಗಾ ಮುಗ್ಗಾ ಬಯ್ದರು. ರಾಜುಗೆ ರೋಗಿಗಳನ್ನು ಸಮಾಧಾನ ಪಡಿಸಲು ಹರಸಹಾಸ ಮಾಡಬೇಕಾಯಿತು.  ತುಂಬಾ ಟೆನ್ಶನ್ ಆದರೂ ರಾಜೂ ಸುಮ್ಮನಾದ. ಬಾಗಿಲು ತೆರೆದು ಕುರ್ಚಿಗಳ ಮೇಲೆ ಕುಳಿತುಕೊಳ್ಳುವಂತೆ ಅವರೆಲ್ಲರಿಗೆ  ವಿನಂತಿ ಮಾಡಿದ. ಡಾಕ್ಟರ್ ರನ್ನು ಸಂಪರ್ಕಿಸುವ ಸತತವಾದ ಅವನ ಪ್ರಯತ್ನ ವಿಫಲವಾಯಿತು.

ಅಷ್ಟರಲ್ಲಿ  ಡಾ.ತೇಜಸ್ವಿ ಆಗಮಿಸಿ ಗಂಭೀರ ಪರಿಸ್ಥಿತಿಯಲ್ಲಿ  ಇರುವ ರೋಗಿಯನ್ನು ಒಳಗೆ ಕರೆದರು. ಸಂಪೂರ್ಣ ತಪಾಸಣೆಯ ಬಳಿಕ ರೋಗವನ್ನು ಕಂಡುಹಿಡಿದು ಔಷಧಿಗಳನ್ನು ನೀಡಿ ಮುಂದಿನ ಶುಶ್ರೂಷೆ ನಡೆಯಿತು. ಸರಿಯಾದ ರೋಗ ಪತ್ತೆ ಆದರೆ ಅರ್ಧ ರೋಗ ನಿವಾರಣೆ ಆದಹಾಗೆ ಎನ್ನುವ ಪ್ರತೀತಿ ಇದೆ. ಪ್ರಸ್ತುತ ಅದು ಹಾಗೆ ಆಯಿತು. 

 ರಾಜು ಎಲ್ಲಾ ರೋಗಿಗಳ ಪಟ್ಟಿಯನ್ನು ಸಿದ್ಧಪಡಿಸಿ ಡಾಕ್ಟರ್ ಗೆ ಕೊಟ್ಟ.  ತೇಜಸ್ವಿ ಅವರನ್ನು ಒಬ್ಬೊಬ್ಬರಾಗಿ ಒಳಗೆ ಕರೆದರು.  ತಪಾಸಣೆ ವೇಳೆ ಎಲ್ಲ ರೋಗಿಗಳು  ಅಪ್ರಸ್ತುತ ಪ್ರಶ್ನೆಗಳನ್ನು ಕೇಳುತ್ತಿದರೂ ಡಾಕ್ಟರ್ ತಮ್ಮ ಮೂಡ್ ಆಫ್ ಮಾಡಿ ಕೊಳ್ಳದೇ ಶಾಂತಿ ಯಿಂದ ತಪಾಸಣೆ ಮುಂದುವರೆಸಿದರು.  ಎಲ್ಲರ ತಪಾಸಣೆ ಮುಗಿಯಲು ಸಮಯ ಮಧ್ಯಾಹ್ನ ಒಂದು ಗಂಟೆ. ರೋಗಿಗಳು ಸಂತೋಷಪಟ್ಟು ಅಸಭ್ಯ ವರ್ತನೆಗಾಗಿ ಎಲ್ಲರೂ ಒಕ್ಕೊರಲಿನಿಂದ ಕ್ಷಮೆಯಾಚಿಸಿದರು.  ಗಂಭೀರ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಾಗ ಅವನ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. 

ಡಾಕ್ಟರ್  ಬಡ ರೋಗಿಗಳಿಗೆ ತೆಗೆದುಕೊಳ್ಳುವ ಫೀ  ಕೇವಲ ಹತ್ತು ರೂಪಾಯಿ. ಕೆಲವು ಸಂದರ್ಭಗಳಲ್ಲಿ ರೋಗಿಯ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತ. 

ವಿವಿಧ ಕಂಪನಿಗಳ ವೈದ್ಯಕೀಯ ಪ್ರತಿನಿಧಿಗಳು ತಮ್ಮ ವ್ಯಾಪಾರದ ಪ್ರಚಾರಕ್ಕಾಗಿ ನೀಡಿದ ಸ್ಯಾಂಪಲ್ ಮಾತ್ರೆಗಳು ಮತ್ತು ಲಿಕ್ವಿಡ್ ಬಾಟಲಿಗಳನ್ನು ಬಡ ರೋಗಿಗಳಿಗೆ ಉಪಯೋಗಿಸಿದರು.

ಎಲ್ಲಾ ರೋಗಿಗಳು ಹೊರಟುಹೋದ ಮೇಲೆ ಡಾಕ್ಟರ್ ಹಾಗೂ  ಕಾಂಪೌಂಡರ್ ಮಾತ್ರ ಉಳಿದರು.  ತೇಜಸ್ವಿ ತಮ್ಮ ರಿವಾಲ್ವಿಂಗ್ ಚೇರ್ ಮೇಲೆ ವಿಶ್ರಾಂತಿ ತೆಗೆದು ಕೊಳ್ಳುವಾಗ  ರಾಜುಗೆ ಡಿಸ್ಟರ್ಬ್ ಮಾಡಬೇಡ ಎಂದು ಹೇಳಿದರು. 

ಹತ್ತು ವರ್ಷಗಳ ಹಿಂದೆ ಸಂಜೀವಿನಿ ಕ್ಲಿನಿಕ್ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ತೆಗೆದ ಗ್ರೂಪ್ ಫೋಟೋ ಕಡೆಗೆ ಡಾಕ್ಟರ್ ಗಮನ ಸೆಳೆಯಿತು.

ತೇಜಸ್ವಿ ಆವರು ಎಮ್.ಡಿ. (ಜನರಲ್ ಮೆಡಿಸನ್) ಮುಗಿಸಿದ ನಂತರ ಆದ ಅವಿಸ್ಮರಣೀಯ ಘಟನೆಗಳು ಅವರ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು.  ತೇಜಸ್ವಿ ರಾಘವಪುರದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ತಾಯಿ ಆಹಾರ ಪದಾರ್ಥಗಳನ್ನು ಮನೆ ಮನೆಗೆ ಹೋಗಿ ಮಾರುತ್ತಿದ್ದರು. ತೇಜಸ್ವಿ ಅವರಿಗೆ ಸಂಪೂರ್ಣ ವೈದ್ಯಕೀಯ ಶಿಕ್ಷಣಕ್ಕಾಗಿ ಸರಕಾರದಿಂದ ವಿದ್ಯಾರ್ಥಿವೇತನ ಸಿಕ್ಕಿತು.  ಬಡತನದಲ್ಲಿ ಆಗುವ  ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಲು ಸ್ವಂತ ಆಸ್ಪತ್ರೆ ಪ್ರಾರಂಭ ಮಾಡಿ ಶ್ರೀಮಂತರಾಗುವ ಇಚ್ಚೆ ಆಯಿತು.

ಮುಂದೆ ಕೇವಲ ಹತ್ತು ರೂಪಾಯಿ ಫೀಸ್ ಪಡೆದು ಬಡವರ ಡಾಕ್ಟರ್ ಆದದ್ದು ಹೇಗೆ?

ಎಂ ಡಿ ಮುಗಿದ ತಕ್ಷಣ, ಒಂದು ದಿನ, ಅವರು ಬೆಂಗಳೂರಿನ ಪ್ರಸಿದ್ಧ ಚಕ್ರಪಾಣಿ ಹೃದ್ರೋಗ ಆಸ್ಪತ್ರೆಗೆ ರೋಗಿಯಾಗಿ ತಾನು ಡಾಕ್ಟರ್ ಎಂದು ಪರಿಚಯಿಸಿ

ಕೊಳ್ಳದೆ ಹೋದರು.  ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಚಕ್ರಪಾಣಿ ಅವರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುವದು ತೇಜಸ್ವಿ ಅವರ ಉದ್ದೇಶ. ಇತರ ರೋಗಿಗಳೊಂದಿಗೆ ತನ್ನ ಸರದಿಗಾಗಿ ಕಾಯುತ್ತಾ ಕುಳಿತರು. ಆ ಸಮಯದಲ್ಲಿ ಗಂಭೀರ ಸ್ಥಿತಿಯಲ್ಲಿ ಇರುವ ಓರ್ವ ರೋಗಿಯೊಬ್ಬರು ವೈದ್ಯರ ಕೋಣೆಗೆ ಪ್ರವೇಶಿಸಿದರು.  ಆ ಸಮಯದಲ್ಲಿ ವೈದ್ಯರು ಇನ್ನೊಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿದ್ದರು.  ಈ ಬಡ ರೋಗಿಯ ಪ್ರವೇಶವು ವೈದ್ಯರನ್ನು ಕೆರಳಿಸಿತು. ರೋಗಿಯು ತನ್ನ ಆರೋಗ್ಯ ಸ್ಥಿತಿ ಹದಗೆಟ್ಟಿರುವದರಿಂದ ಪರೀಕ್ಷಿಸಲು ಪರಿ ಪರಿ ಆಗಿ ಕೈ ಜೋಡಿಸಿ ವಿನಂತಿ ಮಾಡಿದ. ಅವನ ಹರಿದ ಉಡುಪು, ಬಾಚಿ ಕೊಳ್ಳದೇ ಅಸಹ್ಯವಾಗಿ ಬಿಟ್ಟ ದಟ್ಟವಾದ   ಕೂದಲು, ಹಾಗೂ ಪಾದರಕ್ಷೆಗಳು ಇಲ್ಲದ ಬರಿ ಕಾಲು. ಇದೆಲ್ಲವನ್ನು ನೋಡಿದರೆ ಅವನಲ್ಲಿ  ಚಿಕಿತ್ಸೆಗೆ ಬೇಕಾಗುವ ಹಣವಿಲ್ಲ ಎಂದು ಸ್ಪಷ್ಟವಾಗಿ ಗೋಚರವಾಗುವದು.  ಆಸ್ಪತ್ರೆ ಸಿಬ್ಬಂದಿಯೊಬ್ಬರು ಬಂದು ಬಡ ರೋಗಿಯನ್ನು ದೈಹಿಕವಾಗಿ ಹೊರಗೆ ಎಳೆದರು.  ಹಾಗೆ ಮಾಡುವದರಿಂದ ಅವನ  ಪರಿಸ್ಥಿತಿ ಇನ್ನೂ ಗಂಭೀರ ವಾಯಿತು.  ಇದೇ ತರಹ ಇರುವ ಕೆಲವು ಬಡ ರೋಗಿಗಳು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಹೊರಗೆ ಕಾಯುತ್ತಿದ್ದರು.  ತೇಜಸ್ವಿ, ಕುತೂಹಲದಿಂದ ರಿಸೆಪ್ಶನಿಸ್ಟ ಗೆ ಕೇಳಿದರು, 

"ಈ ಬಡ ರೋಗಿಗಳನ್ನು ಏಕೆ ನಿರ್ಲಕ್ಷಿಸಲಾಗಿದೆ?"


ಉತ್ತರ ಕೇಳಿದ ತೇಜಸ್ವಿ ದಿಗ್ಭ್ರಮೆಗೊಂಡರು.  

ಈ ಬಡ ರೋಗಿಗಳಿಗೆ ಕನಸಲ್ಟೇಶನ್ ಫೀ ಪಾವತಿಸಲು, ಅಗತ್ಯ ಔಷಧಿಗಳನ್ನು ಖರೀದಿಸಲು ಹಣವಿಲ್ಲ. ಅವರನ್ನು ಆಸ್ಪತ್ರೆಯೊಳಗೆ ಬಿಡದಂತೆ ವೈದ್ಯರು ಮೌಖಿಕವಾಗಿ ಸೂಚನೆ ನೀಡಿರುವರು.  ಸಮೀಪದಲ್ಲಿ ಇರುವ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪುಕ್ಕಟೆ ಎಂದರೂ ಈ ರೋಗಿಗಳು ಆಸ್ಪತ್ರೆಯನ್ನು ಪ್ರವೇಶಿಸುತ್ತಾರೆ. ಎಂಟು ವರ್ಷದ ಬಾಲಕನಾಗಿದ್ದಾಗ ತೇಜಸ್ವಿಯ ತಂದೆ ತಾಯಿಗೆ  ಇದೇ ರೀತಿಯ ಘಟನೆ ಆದದ್ದು ನೆನಪು ಬಂದು ಅವರ ಮನಸ್ಸು ವಿಹ್ವಲವಾಯಿತು. 

 ಈ ಬಡಪಾಯಿಗಳು ಎಲ್ಲಿಗೆ ಹೋಗಬೇಕು? ಆಸ್ಪತ್ರೆಗೆ ಬಂದ ರೋಗಿಗಳ ಶುಶ್ರೂಷೆ ಮಾಡುವದು ಡಾಕ್ಟರ್  ಅವರ ಆದ್ಯ ಕರ್ತವ್ಯ  ಎಂದು ತೇಜಸ್ವಿ ಗಂಭೀರವಾಗಿ ಯೋಚಿಸಿದ.

ಅವರ ಕಣ್ಣಲ್ಲಿ ನೀರು ತುಂಬಿತು. ಆ ಸಮಯದಲ್ಲಿ ತೇಜಸ್ವಿ ತಲೆಯಲ್ಲಿ ಎರಡು ವಿಚಾರ ಬಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲು ಸರಳ ಅಲ್ಲ ಎಂದು ಅಂದುಕೊಂಡ. ಡಾ.ಚಕ್ರಪಾಣಿಯವರಂತೆ ಬಿಡುವಿಲ್ಲದ ಕೆಲಸ ಮಾಡಿ ಹಣ ಗಳಿಸಿ, ದಾರಿದ್ರ್ಯ ಕ್ಕೆ ಗುಡ್ ಬೈ ಹೇಳುವದು. ಅದು ಬೇಗನೆ ಆಗದೇ ಇದ್ದರೂ ಮುಂದೆ ಆಗುವ ವಿಶ್ವಾಸ. ಇದೆಲ್ಲ ಬೇಡ ಎಂದರೆ ತಮ್ಮ ಹುಟ್ಟೂರಾದ ರಾಘವಪುರದಲ್ಲಿ ಬಡ ರೋಗಿಗಳ ಸೇವೆ ಮಾಡುವ ಪ್ರತಿಜ್ಞೆ ಮಾಡುವದು. ಎರಡನೇ ಆಯ್ಕೆಯಿಂದ ಮನಸ್ಸು ಶಾಂತಿ ಆಗುವದು ಅಷ್ಟೇ ಅಲ್ಲ ಜನರ ಆಶೀರ್ವಾದ ದೊರಕುವದು. ಬಡವರ ರೂಪದಿಂದ ಭಗವಂತನ ಕೃಪೆ ಆಗುವದು. ತೇಜಸ್ವಿ ಅವರು ಸ್ನೇಹಿತರ ಸಹಾಯದಿಂದ ಆರು ತಿಂಗಳು ನಂತರ ಒಂದು ಶುಭ ದಿನದಂದು ಸಂಜೀವನಿ ಕ್ಲಿನಿಕ್ ಶುಭಾರಂಭ ಮಾಡಿದರು. 

ಅಂದಿನ ಸಮಾರಂಭದ ಉದ್ಘಾಟನೆ ಶತಾಯುಷಿ ಮತ್ತು ಭಾರತೀಯ ಸೇನೆಯ ನಿವೃತ್ತ ಮೇಜರ್ ತಿಲಕ್ ರಾಜ್ ಅವರು ನೆರವೇರಿಸಿದರು.  ಅವರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು, "ವೈದ್ಯನಾಗುವುದು ಅತ್ಯಂತ ಕಠಿಣ ಮತ್ತು ಅತ್ಯಂತ ಜವಾಬ್ದಾರಿಯುತ ಕೆಲಸ. ಡಾ. ತೇಜಸ್ವಿ ಅವರು ಬಡ ರೋಗಿಗಳಿಗೆ ಕೇವಲ ಹತ್ತು ರೂಪಾಯಿಗಳಿಗೆ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ನನಗೆ ಅತೀವ ಸಂತೋಷವಾಗಿದೆ. ತೇಜಸ್ವಿ ನಿಜವಾಗಿ ಯೂ ಅದ್ಭುತ ವೈದ್ಯನಾಗುವದರಲ್ಲಿ ಯಾವ ಸಂಶಯವೂ ಇಲ್ಲ.  ನಾನು ಅವರಿಗೆ ಗುರಿಯನ್ನು ಸಾಧಿಸುವಂತೆ ಆಶೀರ್ವಾದ ಮಾಡುವೆ.  ಈ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ  ಶುಭಾಶಯ ಕೋರುತ್ತೇನೆ."

ನೆರೆದ ಗಣ್ಯರ ಶುಭ ಕೋರಿಕೆಯಿಂದ ಸಮಾರಂಭ ಮುಕ್ತಾಯಗೊಂಡಿತು.


 ಸಂಜೀವಿನಿ ಕ್ಲಿನಿಕ್‌ನ ಹತ್ತನೇ ವಾರ್ಷಿಕೋತ್ಸವದಂದು ತೇಜಸ್ವಿ ಅವರು ಒಂದು ಲಕ್ಷಕ್ಕೂ ಹೆಚ್ಚು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿ ತಮ್ಮ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದರು ಎಂದು ಹೇಳಿದ ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿ. ಇದನ್ನು ಕೇಳಿದ ನೆರೆದ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.

 ತೇಜಸ್ವಿ ಪತ್ನಿ  ಡಾ.ವೈಷ್ಣವಿ ಅವರು ಮಧ್ಯಾಹ್ನದ ಊಟಕ್ಕೆ ಬರಲು ಕರೆ ಮಾಡುವದರಿಂದ ಡಾ.ತೇಜಸ್ವಿ ತಮ್ಮ ಹಿಂದಿನ ನೆನಪುಗಳಿಂದ ಹೊರಬಂದರು. 

 ತೇಜಸ್ವಿ ಬಡವರ ಬಂಧು ಆಗುವಲ್ಲಿ ಯಶಸ್ವಿ ಆದ ಯಶೋಗಾಥೆ ರಾಘವಪುರ ನಗರದ ಸ್ಥಳೀಯ ಪತ್ರಿಕೆ 'ಸಿಂಹ ಗರ್ಜನೆ' ಯಲ್ಲಿ ಪ್ರಕಟವಾಗಿ ದೇಶ ವಿದೇಶಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರನಾದ.



Rate this content
Log in

Similar kannada story from Inspirational