PRASANNA KUMAR

Classics Inspirational Others

4  

PRASANNA KUMAR

Classics Inspirational Others

ಊಸರವಳ್ಳಿ

ಊಸರವಳ್ಳಿ

4 mins
438


                                    

            

        ಸಮಾಜದಲ್ಲಿ ಒಳಿತನ್ನು ಮಾಡುವ ಯೋಗ್ಯತೆ ಇಲ್ಲದಿದ್ದರೂ ಕೆಡುಕನ್ನು ಮಾಡಬಾರದು. ಇದು ಸಾಧು, ಸಾತ್ವಿಕ , ತಮ್ಮ ನೆರಳಿಗೆ ಅಂಜಿ ಬದುಕುವ ಜನರು ಆಡುವ ಮಾತು. ಆದರೆ ಕೆಲವರಿಗೆ ಕೆಡುಕನೆಸಗುವುದೇ ಉಸಿರಾಗಿರುತ್ತದೆ. ಅಂಥಹವರ ಗುಣಗಳು ಹೀಗೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರಿಗೆ ತಮ್ಮ ಲಾಭವೇ ಪರಮ ಶ್ರೇಷ್ಟ . ಆತ್ಮಪ್ರಪೀಡನಂ ಹಿಂಸಯೇತ್ ಎನ್ನುವ ತತ್ವವನ್ನು ಹೊಂದಿರುತ್ತಾರೆ. ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಮಾಟದ ಮಾತನಾಡುತ್ತಾ ನಯವಾಗಿ ನಾಜೂಕಿನಿಂದ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ. ಅವರು ದಿನಕ್ಕೊಂದು ರೀತಿ ಬದಲಾಗುತ್ತಾ ಹೋಗುತ್ತಾರೆ. ಆಡುವ ಮತ್ತು ಕೊಡುವ ಮಾತಿನಂತೆ ಅವರು ನಡೆಯುವುದಿಲ್ಲ. ಸ್ವಾರ್ಥ ವಿಪರೀತವಾಗಿರುತ್ತದೆ. ನಾಟಕದಲ್ಲಿ ಅಭಿನಯಿಸುವವನು ವೇದಿಕೆ ಅಥವಾ ರಂಗಮಂಚದಲ್ಲಿ ನಟಿಸುತ್ತಾನೆ. ನಟಿಸಿದ ನಂತರ ತನ್ನ ನಿಜಜೀವನಕ್ಕೆ ಬರುತ್ತಾನೆ. ಆದರೆ ಈ ಮೇಲೆ ಹೇಳಿರುವ ಜನ ಅಥವಾ ವ್ಯಕ್ತಿಗಳು ನಿಜ ಜೀವನದಲ್ಲಿ ನಟಿಸುತ್ತಾ ಮಂಕುಬೂದಿ ಎರಚುತ್ತಾರೆ. ಅವರ ಮಾತನ್ನು ಕೇಳುವವ ಎಂಥಹ ಬುದ್ಧಿವಂತನಾದರೂ ಅವರು ಬೀಸುವ ಬಲೆಗೆ ಬಿದ್ದೇ ಬೀಳುತ್ತಾನೆ. ಎಂದು ಅನಾಮಿಕ ಭಾಷಣ ಮಾಡುತ್ತಿದ್ದಳು. ಅವಳ ಮಾತುಗಳನ್ನು ಕೇಳುತ್ತಾ ಕುಳಿತಿದ್ದವರು ಮಿಕಮಿಕನೆ ನೋಡುತ್ತಿದ್ದರು. ಅವಳ ಮಾತು ಅವರ ಮನಸ್ಸನ್ನು ಚುಚ್ಚಿತೇನೋ ಅದೇನೆ ಇರಲಿ ಭಾಷಣ ಮುಗಿಯಿತು. ಅನಾಮಿಕಳ ಮಾತಿಗೆ ಜೋರಾದ ಚಪ್ಪಾಳೆ ಬಿತ್ತು. ಕೊನೆಯಲ್ಲಿ ಅವಳು ಹೇಳಿದಳು ನಾನು ನನ್ನ ಜೀವನದಲ್ಲಿ ಊಸರವಳ್ಳಿ ಗುಣದ ಜನರ ಬಲೆಗೆ ಬೀಳುವುದಿಲ್ಲ ಎಂದು ಹೇಳಿದಳು. 

     ಅವಳ ಎಂ.ಎ ಪದವಿ ಮುಗಿದ ನಂತರ ಪಿಎಚ್ ಡಿ ಮತ್ತು ಜರ್ನಲಿಜ಼ಂ ಮುಗಿಸುವುದು ಜೊತೆಗೆ ಯಾವುದಾದರೂ ಒಂದು ಕೆಲಸವನ್ನು ಹುಡುಕಿಕೊಂಡರೆ ಸ್ವಲ್ಪ ತನ್ನ ಮಟ್ಟದ ಖರ್ಚಿಗೆ ಆಗುತ್ತದೆ ಆನಂತರ ಉಳಿದ ವಿಚಾರ ಎಂದುಕೊಂಡಿದ್ದಳು. ಅದರಂತೆ ಅವಳ ಜೀವನದ ಗುರಿಗೆ ಮನೆಮಂದಿಯ ಒಮ್ಮತ ಸಮ್ಮತವಿತ್ತು.  ಕೆಲಸಕ್ಕೆ ಸೇರಿದಳು. ಸಂದರ್ಶನಕ್ಕೆ ಬಂದಾಗ ಅವಳ ಸ್ವವಿವರಗಳನ್ನು ತಿಳಿದ ನಿರ್ದೇಶಕ ಮತ್ತು ಅಧ್ಯಕ್ಷರು ಕೇಳಿದ ಪ್ರಶ್ನೆಗಳಿಗೆ ಅರಳು ಹುರಿದಂತೆ ಉತ್ತರಿಸಿದ್ದಳು. ಅವರು ಕೆಲಸ ಕೊಡುವುದಾಗಿ ಒಪ್ಪಿಕೊಂಡರು. ಮಾಸಿಕ ವೇತನ ೨೦ ಸಾವಿರ ಎಂದು ನಿಗಧಿ ಪಡಿಸಿದ್ದರು. 

       ಡ್ಯೂಟಿ ರಿಪೋರ್ಟ್ ಮಾಡಿಕೊಂಡು ಕೆಲಸಕ್ಕೆ ಹಾಜರಾದಳು ಆ ದಿನ ಅವಳಿಗೆ ಇಷ್ಟದ ದಿನವಾಗಿತ್ತು. ಸಪ್ತಮಿ ಗುರುವಾರ ವಿಶೇಷವಾಗಿ ಅವಳು ಸಾಯಿಬಾಬಾ ಗುರುವಿನ ಭಕ್ತೆ. ಹೊಸಬಳೆಂದು ಭಾವಿಸದೆ ಸಹೋದ್ಯೋಗಿಗಳು ಅವಳನ್ನು ತಮ್ಮ ಜೊತೆಯಲ್ಲೇ ಹೊಂದಿಸಿಕೊಂಡರು. ಅವರವರ ಕಷ್ಟಗಳನ್ನು ಸಂತೋಷಗಳನ್ನುಹಂಚಿಕೊಳ್ಳುತ್ತಿದ್ದರು . ಎಲ್ಲವೂ ಇವಳಿಗೆ ಹೊಸದಾಗಿದೆ. ಬೇರೆಯವರ ಮತ್ತು ತನ್ನ ಸಂಬಂಧಿಕರ ಮನೆಯ ವಾತಾವರಣವನ್ನು ಗುಣಗಳನ್ನು ತಿಳಿದಿದ್ದಳು. ಅವುಗಳನ್ನು ಇಲ್ಲಿ ಮಾತನಾಡುವವರ ರೀತಿ ನೀತಿಗೆ ತಾಳೆ ಹಾಕುತ್ತಿದ್ದಳು. ಆದರೆ ಹಿರಿಯ ಸಹೋದ್ಯೋಗಿಯೊಬ್ಬರು ಸಲಹೆ ನೀಡಿದಂತೆ ಏನನ್ನು ಮಾತನಾಡುತ್ತಿರಲಿಲ್ಲ ನಸುನಗುತ ಮೌನವಾಗಿ ಇರುತ್ತಿದ್ದಳು. ಹಾಗೂ ಹೀಗೂ ಒಂದು ತಿಂಗಳು ಕಳೆಯಿತು . ಸಂಬಳದ ದಿನವೂ ಬಂತು. ಅವಳ ಅಕೌಂಟಿಗೆ ೫೦೦೦ ರೂ ಕಡಿಮೆ ಜಮೆ ಆಗಿತ್ತು. ಗಾಭರಿಗೊಂಡವಳು ಲೆಕ್ಖಾಚಾರ ತಪ್ಪಾಗಿರಬೇಕು ಅದನ್ನು ಸರಿ ಮಾಡಿಸಿದರೆ ಆಯಿತು ಎಂದು ಮ್ಯಾನೇಜರ್ ಬಳಿ ಹೋದಳು. ಅವನು ನಮಗೆ ಹೇಳಿರುವಂತೆ ನಾವು ಪಗಾರವನ್ನು ನಿಮ್ಮ ಅಕೌಂಟಿಗೆ ಹಾಕಿದ್ದೇವೆ ಅಧ್ಯಕ್ಷರ ಬಳಿ ಹೋಗಿ ಅವರು ಹೇಳುತ್ತಾರೆ ಎಂದನು. ಆಗ ಅನಾಮಿಕ ಹೋದವಳೆ, ಅಧ್ಯಕ್ಷರನ್ನು ಕೇಳಿದಾಗ - “ ನೋಡ್ರಿ ಇಂಟರ್ ವ್ಯೂನಲ್ಲಿ ಅಂದಾಜು ೨೦ ಸಾವಿರ ಕೊಡುತ್ತೇವೆ ಎಂದು ಹೇಳಿದ್ದು ಉಳಿದದ್ದು ಕಮಿಟಿಯ ನಿರ್ಧಾರ . ನೋಡಿ ನಿಮ್ಮಿಷ್ಟ ಮಾಡುವುದಾದರೆ ಕೆಲಸ ಮಾಡಿ ಇಲ್ಲದಿದ್ದರೆ ೬ ತಿಂಗಳ ನಂತರ ಬಂದು ನಿಮ್ಮ ಒರಿಜಿನಲ್ಸ್ ಕಲೆಕ್ಟ್ ಮಾಡಿಕೊಳ್ಳಿ.” ಎಂಬ ಅವನ ಉತ್ತರಕ್ಕೆ ಶಾಕ್ ಆದಳು . ವಿಧಿಯಿಲ್ಲದೆ ಬಂದಷ್ಟು ಬರಲಿ ನೋಡೋಣ ಎಂದುಕೊಂಡು ಕೆಲಸ ಮುಗಿಸಿಕೊಂಡು ಸಂಜೆ ಮನೆಯ ಕಡೆಗೆ ಹೆಜ್ಜೆ ಹಾಕಿದಳು. 

   ದಾರಿಯಲ್ಲಿ ಹೋಗುತ್ತಿರುವಾಗ ನನ್ನ ಭಾಷಣದಲ್ಲಿ ಹೇಳಿದ ಗೋಸುಂಬೆ ಗುಣಕ್ಕೆ ಇದೂ ಸೇರುತ್ತದೆಯೇ ಎಂದು ಕೊಂಡಳು. ಶ್ರೀನಗರದ ಮನೆಗೆ ಬಂದಳು. ಬಾಗಿಲಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಎಲ್ಲರೂ ದಾರಿ ನೋಡುತ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ಸಂತೋಷಕ್ಕೆ ಕಣ್ಣಲ್ಲಿ ನೀರು ತುಂಬಿ ಕೊಂಡಿತು. ಮನೆಯೊಳಗೆ ನಡೆಯುತ್ತಾಳೆ. ಎಲ್ಲರೂ ಮೊದಲ ದಿನದ ಅವಳ ಖುಷಿ ಮತ್ತು ಅನುಭವವನ್ನು ಕೇಳಲು ಕಾತರಿಸಿರುತ್ತಾರೆ. ಕೈ ಕಾಲು ಮುಖ ತೊಳೆದು ಕೊಂಡು ಬಟ್ಟೆ ಬದಲಿಸಿ ಬಂದು ಕುಳಿತ ಮಗಳಿಗೆ ಅಮ್ಮ ಕಾಫ಼ಿಯ ಲೋಟವನ್ನು ನೀಡಲು ಮೌನವಾಗಿ ಕುಳಿತುಕೊಂಡು ಕಾಫ಼ಿಯನ್ನು ಕುಡಿಯುತ್ತಾಳೆ. ಸ್ವಲ್ಪ ಸಮಯದ ನಂತರ ಕೆಲಸದ ಜಾಗ ಹೇಗಿದೆಯಮ್ಮ ಎಂದು ಕೇಳಿದ ಅಪ್ಪನಿಗೆ ನಡೆದ ಘಟನೆಯನ್ನು ಹೇಳುತ್ತಾಳೆ. ಅದಕ್ಕೆ ಅವರು ಇವೆಲ್ಲಾ ಎಲ್ಲಾ ಕಡೆ ಇದ್ದೇ ಇರುತ್ತದೆ. ಕೆಲವು ವರ್ಷಗಳ ತನಕ ಕೆಲಸ ಮಾಡಿ ಒಳ್ಳೆಯ ಅನುಭವದೊಂದಿಗೆ ಬರಬೇಕಮ್ಮ ಎಂದಾಗ ಅವಳ ಮನಸ್ಸು ನಿರಾಳವಾಗಿ ಮರುದಿನದ ಬಗ್ಗೆ ಗಮನಕೊಟ್ಟಳು.

         ಶಾಲೆಯಲ್ಲಿ ಮಕ್ಕಳಿಗೆ ಯೂನಿಯನ್ ಎಲೆಕ್ಷನ್ ನಡೆಸುವ ಸಂದರ್ಭ ಬಂತು. ಆಗ ಅನಾಮಿಕಾಳಿಗೆ ಪತ್ರಕರ್ತೆಯ ರೀತಿಯಲ್ಲಿ ಸಂದರ್ಶನ ಮಾಡುವ ಜವಾಬ್ದಾರಿ ಬಂತು. ಅದರಂತೆ ಅವಳು ಚಾಕಚಕ್ಯತೆಯಿಂದ ತನ್ನ ಜವಾಬ್ದಾರಿಯನ್ನು ತೂಗಿಸಿ ಭಲೇ ಎನ್ನುವಂತೆ ಪೂರೈಸಿದಳು. ಲಕ್ಷಣವಾಗಿದ್ದವಳಿಗೆ ನೃತ್ಯದ ಪರಿಚಯವಿತ್ತು. ಭರತನಾಟ್ಯ ಮತ್ತು ಸಂಗೀತದ ಸೀನಿಯರ್ ಪರೀಕ್ಷೆಯಲ್ಲಿ ಪಾಸಾಗಿದ್ದಳು. ಯಕ್ಷಗಾನದ ಪರಿಚಯವಿತ್ತು. ನಾಟಕ ರಚನೆ, ಅಭಿನಯ, ನಿರ್ದೇಶನದಲ್ಲಿ ಅಭಿರುಚಿ ಮತ್ತು ಅನುಭವವಿತ್ತು. ಇಷ್ಟೇ ಅಲ್ಲದೆ ಧೈರ್ಯವಾಗಿ ಮಕ್ಕಳಿಗೆ ಪುಸ್ತಕಗಳನ್ನು ನೋಡದೆ ಪಿಪಿಟಿ ಮೂಲಕ ಪಾಠಗಳನ್ನು ಮಾಡುತ್ತಿದ್ದಳು. ಮಕ್ಕಳಿಗೆಲ್ಲಾ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಳು. ಅದನ್ನು ಕಂಡು ಕೆಲವರು ಕರುಬುತ್ತಿದ್ದರು.  ಕುಲ್ಲುವವರ ಮುಂದೆ ಕುಲುಕಿ ಸಾಯಬೇಕು ಎನ್ನುವಂತೆ ತನ್ನ ಸ್ವಂತಿಕೆಯನ್ನು ಬಿಡದೆ ಕೆಲಸದಲ್ಲಿ ತೊಡಗಿದ್ದಳು. ಎಲ್ಲರನ್ನೂ ನಗಿಸುತ್ತಾ ಪ್ರೀತಿಯಿಂದ ಮಾತನಾಡುತ್ತಿದ್ದಳು.

           ಮಾಸಗಳು ಮಿಸ್ಸಾಗದೆ ಉರುಳುತ್ತಾ ಶಿಕ್ಷಕರ ದಿನಾಚರಣೆ ಬಂತು. ಹಲವಾರು ವಿದ್ಯಾರ್ಥಿಗಳು ಉಡುಗೊರೆಯನ್ನು ಕೊಟ್ಟರೆ ಕೆಲವರಿಗೆ ಅದನ್ನು ಸಹಿಸಲಾಗಲಿಲ್ಲ. ಆದರೆ ಅವಳ ಮನಸ್ಸು ಶುದ್ಧ ಸ್ಫಟಿಕದಂತೆ ಇತ್ತು. ವಿದ್ಯಾರ್ಥಿಗಳನ್ನು ತಾಯಿ ಮಗುವನ್ನು ಕಾಣುವಂತೆ ನೋಡುತ್ತಿದ್ದಳು. ಕೆಲವು ಶಿಕ್ಷಕರು ಇವಳಿಗೆ ಮದುವೆಯಾಗಿ ತಾಯಿಯಾದರೆ ಇವಳು ಆ ಮಗುವನ್ನು ಹೇಗೆ ಸಲಹುವಳು ಎನ್ನುತ್ತಾ “ನ ಮಾತಾ ಪರ ದೇವತಾ” ಎಂದು ಕೈ ಮುಗಿಯುತ್ತಿದ್ದರು. ಅವರ ಮನಸ್ಸಿನಲ್ಲಿ ಗೌರವ ಇತ್ತೇ ಹೊರತು ಮತ್ಸರವಿರಲಿಲ್ಲ.  

          ಪ್ರಥಮ ವಾರ್ಷಿಕ ಪರೀಕ್ಷೆ ಮುಗಿದು ನವೆಂಬರ್ ತಿಂಗಳ ಮಕ್ಕಳದಿನಾಚರಣೆ ಕಾರ್ಯಕ್ರಮಕ್ಕೆ ಒಂದು ನಾಟಕವನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿದಳು. ಅದರಲ್ಲೂ ಜಯಭೇರಿ. ಅದನ್ನು ನೋಡಿದ ಶಾಲೆಯ ಅಧಿಕಾರಿ ವಾರ್ಷಿಕೋತ್ಸವಕ್ಕೆ ನೀವೊಂದು ನಾಟಕವನ್ನು ಮಕ್ಕಳಿಂದ ಆಡಿಸಿ ಎಂದಾಗ ಖುಷಿಯಿಂದ ಒಪ್ಪಿಕೊಂಡಳು ಅನಾಮಿಕ. ಹೇಳಿದಂತೆ ವಾರ್ಷಿಕೋತ್ಸವದ ದಿನವೂ ಹತ್ತಿರ ಹತ್ತಿರ ಬರುವ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ೫೫ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅಚ್ಚುಕಟ್ಟಾಗಿ ಒಂದು ರೂಪಕ್ಕೆ ತಂದಿದ್ದಳು. ಅದನ್ನು ನೋಡಿದ ಅಧಿಕಾರಿಗೆ ಅವನ ಮನಸ್ಸಿನ ಯಾವುದೋ ಮೂಲೆಯಲ್ಲಿ ಹೊಟ್ಟೆಕಿಚ್ಚು ಹೆಚ್ಚಾಗಿ ನಾಟಕ ಕೆಟ್ಟುಹೋಗಲೆಂದು ಸಮಯವನ್ನು ಮೊಟಕುಗೊಳಿಸಿದನು. ಆದರೆ ಕೆಲವು ಮಕ್ಕಳನ್ನು ನಾಟಕದಿಂದ ತೆಗೆಯುವಂತಾಯಿತು. ಬೇಸರಗೊಂಡವಳು ನಿರ್ಧರಿಸುತ್ತಾಳೆ ಈ ವಾತಾವರಣದಲ್ಲಿ ಕೆಲಸ ಮಾಡುವುದು ಕಷ್ಟ. ಬೆನ್ನ ಹಿಂದೆ ಹಲವಾರು ರೀತಿಯಲ್ಲಿ ಜನ ಮಾತನಾಡುತ್ತಾರೆ , ಎದುರಿಗೆ ಹೊಗಳಿಕೆ ನುಡಿಗಳನ್ನಾಡುತ್ತಾರೆ. ಮತ್ತು ಅವರವರ ಲಾಭಕ್ಕೆ ಲಾಭಿ ಮಾಡಿಕೊಂಡು ಕೆಲಸವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗೆಯೇ ಮಾಡುತ್ತಾ ಬಂದಿದ್ದಾರೆ. ಇನ್ನು ಸಾಕು ನನ್ನ ದಾರಿ ಬದಲಿಸ ಬೇಕು ಎಂದು ಕೊಂಡು ಎಲ್ಲರ ಜೊತೆಗೆ ಸಹಜವಾಗೆ ಇರುತ್ತಾಳೆ.  

       ಜಾಣತನದಿಂದ ಪ್ರೀ ಯೂನಿವರ್ಸಿಟಿ ಕಾಲೇಜಿಗೆ ಲೆಕ್ಚರರ್ ಪೋಸ್ಟ್ ಗೆ ಅಪ್ಲೈ ಮಾಡಿರುತ್ತಾಳೆ. ಕೆಲವು ದಿನಗಳ ನಂತರ ಆ ಕಾಲೇಜಿನಲ್ಲಿ ಅವಳ ಮಾದರಿ ಪಾಠವನ್ನು ಕೇಳಿದ ಎಲ್ಲರೂ ಖುಷಿಯಾಗುವುದರ ಜೊತೆಗೆ ಮೊದಲ ಪಾಠದಲ್ಲೇ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದ ಕಾರಣ ಅವಳಿಗೆ ಕೆಲಸ ನಿರ್ಧಾರವಾಗಿ ಅಪಾಯಿಂಟ್ ಮೆಂಟ್ ಲೆಟರ್ ಸಹ ಸಿಗುತ್ತದೆ.

        ದ್ವಿತೀಯ ವಾರ್ಷಿಕ ಪರೀಕ್ಷೆ ಮುಗಿದ ನಂತರ ಮಾರ್ಚ್ ೩೧ ರಂದು ಕೆಲಸ ಬಿಡುತ್ತೇನೆ ಎಂದು ಹೇಳುತ್ತಾ ರಾಜೀನಾಮೆ ಪತ್ರವನ್ನು ಅಧಿಕಾರಿಯ ಮುಂದೆ ಮರುದಿನ ಅವನ ಮೇಜಿನ ಮೇಲೆ ಇಡುತ್ತಾಳೆ. ಅದನ್ನು ಕಂಡ ಅಧಿಕಾರಿಗೆ ಶಾಕ್. ಕಪ್ಪು ಮನಸ್ಸಿನ ಅವನು ಕೆಲಸ ಬಿಡಬೇಡ ನೀನು ಒಳ್ಳೆಯ ಟೀಚರ್ ನಿನಗೆ ಬ್ರೈಟ್ ಫ಼್ಯೂಚರ್ ಇದೆ ಎಂದು ಪುಸಲಾಯಿಸುವ ಮಾತಿಗೆ ಅನಾಮಿಕ ಪಟ್ಟೆಂದು ಉತ್ತರಿಸುತ್ತಾಳೆ. “ ಸರ್ ಕಾಲೇಜಿನಲ್ಲಿ ನನಗೆ ಲೆಕ್ಚರರ್ ಪೋಸ್ಟ್ ಸಿಕ್ಕಿದೆ. ಒಳ್ಳೆಯ ಟೀಚರ್ ನಿಮಗೆ ಸಿಗುತ್ತಾರೆ. “ ಎಂದು ಹೊರಗೆ ಬರುತ್ತಾಳೆ.

        ಅವಳನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದ ಸಹೋದ್ಯೋಗಿಯೊಬ್ಬಳು ನಾಟಕೀಯವಾಗಿ ನೀನು ಕೆಲಸ ಬಿಡುವುದು ನನಗೆ ಬೇಸರದ ಸಂಗತಿಯಾಗಿದೆ ಎಂದಾಗ - “ ನಿನ್ನಂಥ ಗೋಸುಂಬೆಗಳು ಬಣ್ಣ ಬದಲಾಯಿಸುವುದು ನನ್ನ ಅನುಭವಕ್ಕೆ ಬಂದಿದ್ದಾಯ್ತು. ನಿನ್ನ ನಾಟಕ ಸಾಕು ಮಾಡು” ಎಂದು ಮನಸ್ಸಿನೊಳಗೆ ಹೇಳಿಕೊಳ್ಳುತ್ತಾ ಉತ್ತರಿಸುತ್ತಾಳೆ.  ಈ ಜಗತ್ತು ಒಂದು ನಾಟಕ ರಂಗ . ಇದರಲ್ಲಿ ನನ್ನದೊಂದು ಪಾತ್ರ ಮಾತ್ರ. ಜೀವನ ರೈಲು ಪ್ರಯಾಣವಿದ್ದಂತೆ ನಿಲ್ದಾಣ ಬಂದಾಗ ಇಳಿದು ಹೋಗಬೇಕಲ್ಲವೇ ? ನೀವೊಮ್ಮೆ ಅಂತರ್ಯಾಮಿಯವರ ಊಸರವಳ್ಳಿ ನಾಟಕವನ್ನು ಓದಿ ನಿಜ ತಿಳಿಯುತ್ತದೆ .  ಎಲ್ಲರ ಜೀವನದಲ್ಲೂ ಊಸರವಳ್ಳಿಗಳ ಪಾತ್ರ ನಿಂತಿಲ್ಲ ಅದಕ್ಕೆ ಒಂದು ಉತ್ತಮ ಉದಾಹರಣೆ ರಾಜಕಾರಣ . . . !!!??? ಎಂದು ನಗುತ್ತಾ ಅವಳಿಗೆ ಬೆನ್ನು ತೋರಿಸುತ್ತಾಳೆ.


Rate this content
Log in

Similar kannada story from Classics