Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Tragedy Inspirational Others

4  

JAISHREE HALLUR

Tragedy Inspirational Others

ದಶರಥ

ದಶರಥ

3 mins
354


ನಮಗೆಲ್ಲಾ ಗೊತ್ತಿರೋ ಹಾಗೆ, ದಶರಥ ಮಾಹಾರಾಜನಿಗೆ ಬಹಳ ವರ್ಷ ಮಕ್ಕಳಿರಲಿಲ್ಲ. ರಾಜಮನೆತನದ ಹಕ್ಕುದಾರನಿಲ್ಲದ ಚಿಂತೆ ಕಾಡಿತ್ತು ರಾಜನಿಗೆ. ಒಮ್ಮೆ, ಹೀಗೇ ಮನಸು ಮುದುಡಿದ ಕಾರಣ ವಿಹಾರಕ್ಕೆಂದು ಬೇಟೆಗೆ ಹೋಗುವ ತಯಾರಿ ನಡೆಯಿತು. ತನ್ನ ಆಪ್ತ ಕೆಲವು ಅನುಯಾಯಿಗಳೊಂದಿಗೆ ಕಾಡಿಗೆ ಪಯಣ ಬೆಳೆಸಿದ ದಶರಥ ಮಹಾರಾಜ. ದರಶಥನು ಬಿಲ್ಲು ವಿದ್ಯೆ ಪ್ರವೀಣನೂ ಹಾಗೂ ಶಬ್ದವೇಧಿ ವಿದ್ಯೆಯಲ್ಲಿ ನಿಸ್ಸೀಮನೆಂಬುದು ರಾಮಾಯಣದಲ್ಲಿ ಉಲ್ಲೇಖವಿರುವುದು ನಮಗೂ ನಮಗೂ ಗೊತ್ತಿರುವ ವಿಷಯವಷ್ಟೇ. ಹೀಗೇ ಕಾಡಿನ ದಟ್ಟವಾದ ಪ್ರದೇಶ ತುಲುಪಿದಾಗ, ಎಲ್ಲೋ ನೀರಿನ ಬುಳುಬುಳು ಸದ್ದು ಕೇಳಿತು. ರಾಜನ ಕಿವಿಗೆ ಈ ಶಬ್ದ ಬಿದ್ದದ್ದೇ ತಡ, ಯಾವುದೋ ಪ್ರಾಣಿ ಹತ್ತಿರದಲ್ಲೆಲ್ಲೂ ನೀರು ಕುಡಿಯಲು ಬಂದಿರಬಹುದೆಂಬ ಅನುಮಾನದಲ್ಲಿ, ಬಾಣವನ್ನು ಬಿಲ್ಲಿಗೆ ಹೂಡಿ ಝೇಂಕರಿಸಿದಾಗ, ಸೊಂಯ್ಯನೇ ಹೊರಟ ಬಾಣದ ದಿಕ್ಕನ್ನೇ ಎವೆಯಿಕ್ಕದೆ ನೋಡುತ್ತಿರುವಾಗ, ಆರ್ತನಾದವೊಂದು ಕೇಳಿಬರುತ್ತದೆ. ಯಾರೋ ಮನುಷ್ಯರ ದ್ವನಿಯಂತಿತ್ತು. ದಶರಥ ಮಹಾರಾಜ ದಿಗ್ಭ್ರಾಂತನಾಗುತ್ತಾನೆ. ತನ್ನ ಗುರಿ ತಪ್ಪಿ ಯಾವುದೋ ಮಾನವ ಪ್ರಾಣಿಯ ಹತ್ಯೆಯಾಗಿದೆಯೆಂದು ಆ ಶಬ್ದ ಬಂದೆಡೆಗೆ ಧಾವಿಸುತ್ತಾನೆ. ಹೊಳೆಯ ದಡದಲ್ಲಿ ರಕ್ತಪಾತದ ನಡುವೆ ಅಂಗಾತ ಬಿದ್ದ ಯುವಕ ಒಂದೇ ಸಮನೆ ಒದ್ದಾಡುತ್ತಿದ್ದ. ಓಡಿ ಹೋಗಿ ಅವನ ಬಳಿ ಮಂಡಿಯೂರಿ ದಶರಥ ಮಹಾರಾಜ ,"ಅಚಾತುರ್ಯವಾಗಿ ಹೋಯಿತು. ಕ್ಷಮಿಸು ಬಾಲಕ. ಅರಿಯದೇ ಪ್ರಾಣಿ ಎಂದು ತಿಳಿದು ಬಾಣ ಹೂಡಿಬಿಟ್ಟೆ". ಎಂದ. ಆ ಬಾಲಕನ ಎದೆಗೆ ನೆಟ್ಟ ಬಾಣ, ತನ್ನ ಕೆಲಸ ಮಾಡಿ ಮುಗಿಸಿತ್ತು. ಆತ ಬದುಕಿ ಉಳಿಯುವ ಸಾಧ್ಯತೆಯಿರಲಿಲ್ಲ. ಅವನು ರಾಜನತ್ತ ಕನಿಕರದಿಂದ ನೋಡುತ್ತ ಹೇಳಿದ.." ಮಹಾನ್, ನಾನೊಬ್ಬ ನತದೃಷ್ಟ. ನನ್ನ ಹೆತ್ತ ತಂದೆತಾಯಿ ಇಲ್ಲೇ ಹತ್ತಿರದಲ್ಲಿರುವರು. ಅವರಿಗೆ ಕಣ್ಣು ಕಾಣುವುದಿಲ್ಲ. ಬಾಯಾರಿಕೆ ನೀಗಿಸಲು ನೀರು ಕೊಂಡೊಯ್ಯಲು ನಾನಿಲ್ಲಿ ಬರಬೇಕಾಯಿತು. ಪಾಪ! ಅವರು ನನ್ನ ದಾರಿ ಕಾಯುತ್ತಿರುತ್ತಾರೆ. ದಯವಿಟ್ಟು , ನನ್ನ ಪರವಾಗಿ ಅವರಿಗೆ ನೀರು ತೆಗೆದುಕೊಂಡು ಹೋಗಿ ಕೊಡಿ. ನಿಮಗೆ ಪುಣ್ಯ ಬರುತ್ತೆ .." ಎಂದು ಕೈಮುಗಿದು ಅಂಗಲಾಚಿದ. ರಾಜನ ಹೃದಯ ಕಿತ್ತು ಬರುವಂತಾಯ್ತು. ಈ ಘೋರ ತನ್ನಿಂದ ನಡೆದು ಹೋಯ್ತಲ್ಲಾಂತ ವಿಲವಿಲನೆ ಒದ್ದಾಡಿದ. ಆ ಬಾಲಕನ ಕೈಹಿಡಿದು " ಮಗೂ ನಿನ್ನ ಹೆಸರೇನು ಹೇಳು. ನಿನ್ನ ತಂದೆತಾಯಿಯರನ್ನು ನಾ ನೋಡಿಕೊಳ್ಳುತ್ತೇನೆ. ಚಿಂತಿಸಬೇಡ. ನನ್ನನ್ನೊಮ್ಮೆ ಕ್ಷಮಿಸಿಬಿಡು ಕಂದಾ," ಎಂದ. ಆ ಹುಡುಗನ ಮುಖದಲ್ಲಿ ನಗು ಪ್ರಕಾಶಮಾನವಾಗಿತ್ತು. ನೋವಿನಲ್ಲೂ ನಗುತ್ತಿದ್ದ. 

" ರಾಜನ್! ನನ್ನ ಹೆಸರು ಶ್ರವಣಕುಮಾರ....ನಾನಿನ್ನು ಬದುಕಲಾರೆ , ತಂದೆತಾಯಿಯರನ್ನು ಕ್ಷೇಮವಾಗಿ ನೋಡಿಕೊಳ್ಳಿ.. " ಎಂದು ಪ್ರಾಣ ಬಿಟ್ಟ.

   ದಶರಥ ಮಾಹಾರಾಜನಿಗೆ ಕೈಕಾಲು ನಡುಗಲಾರಂಬಿಸಿತ್ತು. ದೇಶಗಳ ಮೇಲೆ ದಂಡೆತ್ತಿ ಹೋದಾಗ ಎಷ್ಟೋ ಸೈನಿಕರ ಕೊಲೆ ಮಾರಣಹೋಮ ನಡೆದಾಗ ಇಂತಹ ಆತಂಕವಾಗಿರಲಿಲ್ಲ. ಈಗ ಮಾತ್ರ ಮನಸು ಹಿಂದೇಟು ಹಾಕುತ್ತಿತ್ತು. ಹೇಗೆ ಆ ವೃಧ್ಧರನ್ನು ಸಮಾಧಾನಿಸುವುದೆಂಬ ತಳಮಳದೊಂದಿಗೆ ಅವರಿದ್ದಲ್ಲಿಗೆ ಹುಡುಕುತ್ತ ಹೊರಟ. ದೂರದಲ್ಲಿ ಮರದಡಿಯೊಂದರಲ್ಲಿ ಈರ್ವರು ಮುದುಕರು ಕುಳಿತದ್ದು ಕಂಡಿತು. ಮೆಲ್ಲನೆ ಹೆಜ್ಜೆ ಹಾಕುತ್ತ ಅಳುಕುವ ಮನದೊಂದಿಗೆ ಅಲ್ಲಿಗೆ ತಲುಪಿದಾಗ , ಆ ವೃದ್ದೆ..." ಯಾರೋ ಈ ಕಡೆಗೇ ಬರುತ್ತಿದ್ದಾರೆ. ಆದರೆ ಈ ನಡಿಗೆ ನನ್ನ ಕಂದ ಶ್ರವಣನದಲ್ಲ.." ಎಂದಳು. ಈ ಮಾತು ಕೇಳಿ ರಾಜನೆದೆ ದಸಕ್ಕೆಂದಿತು. ಅವರ ಚಾಣಾಕ್ಷತನಕ್ಕೆ ಆಶ್ಚರ್ಯವೂ ಆಯಿತು. ಅವರ ಕಾಲಡಿಯಲ್ಲಿ ಕುಳಿತು .." ಹೌದು ಮುನಿವರ್ಯರೇ.. ನಾನು ದಶರಥ . ಇಲ್ಲಿಗೆ ಬೇಟೆಗೆಂದು ಬಂದಾಗ ಅರಿಯದೇ ಅಚಾತ್ತುರ್ಯವೊಂದು ನಡೆದು ಹೋಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ. ತಗೊಳ್ಳಿ ನಿಮ್ಮ ಬಾಯಾರಿಕೆ ತೀರಿಸಿಕೊಳ್ಳಿ. ನೀರು ತಂದಿರುವೆ.." ಎಂದು ಪೀಟಿಕೆ ಹಾಕಿದ. ಈ ಮಾತು ಕೇಳಿ ಆ ವೃದ್ದರು ಚಿಂತೆಗೀಡಾಗುತ್ತಾರೆ. ಶ್ರವಣನಿಗೇನಾಯಿತೆಂದು ಅವರ ಊಹಾಬಲದಿಂದ ತಿಳಿಯಲು ಹೆಚ್ಚು ಸಮಯ ಬೇಕಿರಲಿಲ್ಲ. ತಾಯಿ ಈ ಮಾತು ಕೇಳಿ ಹೌಹಾರಿ ಅಲ್ಲೇ ಎದೆಯೊಡೆದು " ಕಂದಾ! " ಎಂದು ಚೀರಿ ಪ್ರಾಣಬಿಡುತ್ತಾಳೆ. ಪಾಪ! ಆ ಮುದುಕನ ಗೋಳು , ನೋವು , ಹತಾಶೆ ರಾಜನಿಂದ ನೋಡಲಾಗಲ್ಲಿಲ್ಲ. ಅವರ ಕಾಲುಗಳನ್ನು ಮುಟ್ಟಿ ದಶರಥ ಕ್ಷಮಿಸೆಂದು ಬೇಡುತ್ತಾನೆ.... ಆದರೆ ಆಕ್ರೋಷ ದುಃಖ ಎರಡೂ ಉಮ್ಮಳಿಸಿ ಆ ವೃಧ್ಧ ದಶರಥನಿಗೆ ಘೋರ ಶಾಪವೊಂದನ್ನು ಕೊಡುತ್ತಾನೆ. " ನಿನಗೂ ನಿನ್ನ ಅವಸಾನದ ಕಾಲದಲ್ಲಿ ನಿನ್ನ ಪುತ್ರನಿಂದ ದೂರವಾಗುತ್ತೀಯೇ. ನಿರ್ದಯೀ ನೀನು. ನನ್ನ ಮುದ್ದು ಕಂದನ ಬಲಿತೆಗೆದುಕೊಂಡೆ ಪಾಪೀ ...ಈ ಪುತ್ರಶೋಕ ನಿನಗೆ ತಟ್ಟದೇ ಬಿಡದು...." ಎಂದು ಹತಾಶೆಯಿಂದ ಆ ಮುದುಕನೂ ಪ್ರಾಣ ಬಿಡುತ್ತಾನೆ. ದಶರಥನಿಗೆ ಕಣ್ಣು ಕತ್ತಲಿಟ್ಟಂತಾಗುತ್ತದೆ. ಶಾಪದ ಭಯ ಆವರಿಸುತ್ತದೆ. ಗಾಭರಿಯಲ್ಲಿ ಅವರಿಬ್ಬರನ್ನು ಮತ್ತೆ ಮತ್ತೆ ಕ್ಷಮಿಸೆಂದು ಕೇಳುವಾಗ...ಒಮ್ಮೆಲೇ ಏನೋ ಒಂದು ಅನುಭೂತಿಯಾಗುತ್ತದೆ...

   ತಾನೇಕೆ ಹೆದರುತ್ತಿದ್ದೇನೆ. ತನಗೆ ಪುತ್ರನೇ ಇಲ್ಲವಲ್ಲಾ..ಎಂಬುದು ನೆನಪಾದಾಗ ಸ್ವಲ್ಪ ಸಮಾಧಾನವೂ ಆಗುತ್ತದೆ. ತನ್ನ ಅನುಯಾಯಿಗಳನ್ನು ಹುಡುಕುತ್ತ ಕುದುರೆಯೇರುವಾಗ ಮತ್ತೊಂದು ವಿಚಾರ ಮನಸಿಗೆ ಗೋಚರಿಸುತ್ತದೆ. ಆ ವೃದ್ದರಿತ್ತ ಶಾಪ ತನಗೆ ಮುಳುವಾಯಿತಾದರೂ ಒಂದಂತೂ ಖಚಿತವಾಯಿತಲ್ಲಾ...ತನಗೆ ಪುತ್ರನೊಬ್ಬ ಹುಟ್ಟಿ ಬರುವ ಕನಸಂತೂ ನಿಜವಾಗುತ್ತದೆಯೆಂಬ ಬೃಹತ್ ಬಯಕೆ ಈಡೇರುವ ಸಂತಸ ಅವನನ್ನು ಅರಮನೆಯೆಡೆಗೆ ಧೌಡಾಯಿಸಿತು... ಎಂತಹ ವಿಚಿತ್ರ ಅಲ್ಲವೇ ವಿಧಿಯ ಆಟ. ರಾಜನಿಗೆ ಶಾಪದಲ್ಲೂ ವರದಾನವಿತ್ತು. 

    ಈ ಕತೆ ನಾನ್ಯಾಕೆ ಹೇಳಬಯಸಿದೆನೆಂದರೆ...ಇಷ್ಟೇ..‌

ಯಾವುದೇ ನೋವು ದುಃಖ ನಮ್ಮನ್ನಾವರಿಸಿದಾಗ ಅದರ ಹಿಂದೇ ಒಂದು ಒಳ್ಳೆಯ ಸಂಗತಿಯೂ ಇರುತ್ತದೆ. ಅದನ್ನರಿಯವ ಪ್ರಯತ್ನ ನಾವು ಮಾಡಿದಾಗ ನೋವು ಉಪಶಮನವಾಗುವುದು ಖಂಡಿತ ಮಿತ್ರರೇ..



Rate this content
Log in

Similar kannada story from Tragedy