Revati Patil

Classics Inspirational Others

4  

Revati Patil

Classics Inspirational Others

ಅಪಶಕುನ ! ಸ್ವಲ್ಪ ಹೊತ್ತು ನಿಲ್ಲಿ

ಅಪಶಕುನ ! ಸ್ವಲ್ಪ ಹೊತ್ತು ನಿಲ್ಲಿ

2 mins
201



ಇವತ್ತು ಪ್ರಾಚಿಗೆ ಅದೆಂತಹ ಅವಸರ ಇತ್ತು ಎಂದರೆ  ಬೆಕ್ಕು ಅಡ್ಡ ಹೋದದ್ದು ನೋಡಿ ಅಪಶಕುನವಾಯಿತು, ಐದು ನಿಮಿಷ ಕೂತು ಹೋಗಮ್ಮಾ ಎಂದು ಅಜ್ಜಿ ಹೇಳಿದ ಮಾತನ್ನು ಪೂರ್ತಿ ಕೇಳಿಸಿಕೊಳ್ಳುವಷ್ಟು ವ್ಯವಧಾನವೂ ಇಲ್ಲದಂತೆ ಪ್ರಾಚಿ,


"ಅಜ್ಜಿ ಪ್ಲೀಸ್ ಏನೂ ಹೇಳ್ಬೇಡಿ , ಇವೆಲ್ಲ ಈಗ್ಲೂ ನಂಬ್ತಿರಲ್ಲ ನೀವು ! ಶುದ್ಧ ನಾನ್ಸೆನ್ಸ್ ನಂಬಿಕೆ ಇವು. ಈಗೇನು ಬೆಕ್ಕು ಅಡ್ಡ ಹೋದ್ರೆ ನಾನು ಹೋಗ್ಬಾರ್ದ? ಹೋದ್ರೆ ಸತ್ತೋಗ್ತೀನಾ? ಆಯ್ತು ನೋಡೇ ಬಿಡೋಣ ಇವತ್ತು, ಅದೇನ್ ಆಗತ್ತೆ ಅಂತ. ಆಯ್ತಾ ಅಜ್ಜಿ? "

ಎಂದು ಪ್ರಾಚಿ ಅಜ್ಜಿಗೆ ಪ್ರಶ್ನಿಸಿದಾಗ ಅಲ್ಲಿಯೇ ಇದ್ದ ಪ್ರಾಚಿಯ ತಾಯಿ ಸ್ವರೂಪಾ ಅವರು ಮಗಳಿಗೆ ಗದರಿಯೇ ಬಿಟ್ಟರು.


"ಪ್ರಾಚಿ ಅತಿಯಾಯ್ತು ನಿಂದು. ಎರಡು ಅಕ್ಷರ ಕಲ್ತಿದೀನಿ ಅಂತ ಹಳೇ ಆಚಾರ ವಿಚಾರಗಳನ್ನೆಲ್ಲ ನಾನ್ಸೆನ್ಸ್ ಅನ್ನೋವಷ್ಟು ದುರಹಂಕಾರ ಬಂತಾ ನಿನಗೆ? ಓದಿದ ತಕ್ಷಣ ಅಕ್ಷರಸ್ಥೆ ಆಗಲ್ಲ ಕಣೇ, ಅತ್ತೆ ಅನುಭವಕ್ಕೆ ಎದುರು ಹೇಳೋವಷ್ಟು ಬೆಳೆದ್ಯಾ? ನಮ್ಮ ಆಚಾರ ವಿಚಾರಗಳೆಲ್ಲ ನಿನಗೆ ನಾನ್ಸೆನ್ಸ್ ಪದ್ಧತಿಗಳಾ? ಸರಿ ಹಾಗಿದ್ರೆ, ನಾಳೆ ದಿನ ರಘುಗೆ ನೀನೇ ತಾಳಿ ಕಟ್ಟಿಬಿಡು. ಸಂಪ್ರದಾಯಗಳೆಲ್ಲ ನಾನ್ಸೆನ್ಸ್ ಅಲ್ವಾ ನಿನಗೆ? " ತುಂಬಾ ಕೋಪದಲ್ಲಿಯೇ ಮಾತಾಡಿದ್ದರು ಪ್ರಾಚಿಯ ತಾಯಿ ಸ್ವರೂಪ.


"ಒಹ್ ! ಏನಮ್ಮಾ ನೀನು ಮೊದಲೇ ಲೇಟ್ ಆಗಿದೆ. ರಘು ಬೇರೆ ವೆಡ್ಡಿಂಗ್ ಕಾರ್ಡ್ ಸೆಲೆಕ್ಟ್ ಮಾಡೋಕೆ ಲೇಟ್ ಆಗ್ತಿದೆ, ಬೇಗ ಬಾ ಅಂತ ತಲೆ ತಿಂತಿದಾನೆ, ಈಗಿವೆಲ್ಲ ಬೇಕಾ? ಓಕೆ ಸಾರಿ ಅಜ್ಜಿ. ನೀವು ಹೇಳಿದ್ದಕ್ಕಿಂತ ಜಾಸ್ತಿ ಹೊತ್ತೇ ನಿಲ್ಲಿಸಿಬಿಟ್ರಿ ನನ್ನ, ಈಗ್ಲಾದ್ರೂ ಹೋಗ್ಲಾ? ಹೋಗ್ತೀನಿ ಬಾಯ್ "


"ಥೂ ! ಮತ್ತೇ ಅಪಶಕುನ.

ಅಲ್ವೇ ಪಾಚು, ಲಗ್ನ ಪತ್ರ ನೋಡೋಕೆ ಹೋಗ್ತಿದೀಯಾ. ಶುಭ ಕಾರ್ಯಕ್ಕೆ ಹೋಗೋವಾಗ ಯಾರಾದ್ರೂ ಹೋಗ್ತೀನಿ ಅಂತಾರಾ? ಹೋಗ್ಬರ್ತೀನಿ ಅನ್ಬೇಕು ತಾಯಿ" ಎಂದು ಅಜ್ಜಿ ಮತ್ತೇ ಶುರು ಮಾಡುವಷ್ಟರಲ್ಲಿ ಪ್ರಾಚಿಯ ಗಾಡಿ ಮೂರು ಮನೆಗಳನ್ನು ದಾಟಿ ಮರೆಯಾಗಿತ್ತು.


ಪ್ರಾಚಿ ದೂರದಿಂದಲೇ ಮರದ ಬಳಿ ರಘು ನಿಂತಿದ್ದನ್ನು ನೋಡಿದವಳೇ ಅವನ ಬಳಿ ಹೋದಳು.

"ಸಾರೀ ರಘು. ನಮ್ಮ ಅಜ್ಜಿ, ಅಮ್ಮನ ಕಥೆ ಗೊತ್ತಲ್ವಾ ನಿನಗೆ? ಶಕುನ, ಅಪಶಕುನ ಅಂತೇನೇನೋ ಹೇಳ್ತಾ ತಲೆ ತಿಂದ್ರು. ಅವರನ್ನ ಸಮಾಧಾನ ಮಾಡಿ ಬರೋದ್ರೊಳಗೆ ಲೇಟ್ ಆಯ್ತು. ಸರಿ, ನಡಿ. ಬೇಗ ಹೋಗೋಣಾ ".


"ನಿನಗೆ ನಾನು ಹತ್ತು ಗಂಟೆಗೆ ತಾನೇ ಬರೋಕೆ ಹೇಳಿದ್ದು? ಈಗ ರಾಹುಕಾಲ ಅಂತೆ. ಈಗ ಹೋಗ್ಬೇಡಿ ಅಂತ ಅಮ್ಮ ಫೋನ್ ಮಾಡಿದ್ರು. ಸೋ ಬೇಡ ಅಷ್ಟೇ !"


"ಕಮಾನ್ ರಘು. ಬೀ ಪ್ರಾಕ್ಟಿಕಲ್. ದಿನ ಕೆಲಸಕ್ಕೆ ಹೋಗೋವ್ರು ಈ ರಾಹುಕಾಲ , ಗುಳಿಕಾಲ, ಅದು ಇದು ನೋಡ್ಕೊಂಡೆ ಹೋಗ್ತಾರಾ? ನಿಮ್ಮ ಅಮ್ಮನ ಬಿಡು, ಅವರಂತೂ ಹಳಬರು, ನಿಂಗೇನೋ ಆಗಿದೆ? ಇವೆಲ್ಲ ನೀನ್ಯಾಕೆ ನಂಬ್ತಿದಿಯಾ? ಅದೇನ್ ಆಗತ್ತೋ ಆಗ್ಲಿ, ನೋಡೇ ಬಿಡೋಣಾ. ನಡಿ ಇವಾಗ್ಲೆ ಶಾಪ್ ಕಡೆ ಬಿಡು ಗಾಡಿ "


"ಪ್ಲೀಸ್ ಪಾಚು. ಲೆಟ್ ಮಿ ಟಾಕ್. ಅಮ್ಮ ಇವನ್ನೆಲ್ಲ ತುಂಬಾ ಪಾಲಿಸ್ತಾರೆ. ಇದ್ರಲ್ಲಿ ವಾದ ಮಾಡ್ಬೇಡ "


"ರಘು ನೀನು ಸೈನ್ಸ್ ಓದಿನೂ ಹೀಗೆಲ್ಲ ಮಾತಾಡ್ತಿದೀಯಲ್ಲ. ಐ ಕಾಂಟ್ ಬಿಲೀವ್ ದಿಸ್ ! ಅದೆಲ್ಲ ಬೇಡ. ನಂಗಿವತ್ತು ಉತ್ತರ ಸಿಗ್ಬೇಕು ಅಷ್ಟೇ. ರಾಹುಕಾಲಾನಾ? ಬೆಕ್ಕು ಅಡ್ಡಾ ಹೋಗಿದ್ದಾ? ಹೋಗ್ತೀನಿ ಅಂತ ಹೇಳಿ ಬಂದಿದ್ದಾ? ಇವೆಲ್ಲ ಮಾಡಿದ್ರೆ ಏನಾಗತ್ತೆ ನೋಡ್ಬೇಕು, ನಡಿ.


ರಘು ಮುಂದೇನು ಮಾತಾಡದೇ ಕಾರ್ ಸ್ಟಾರ್ಟ್ ಮಾಡಿ ಯು ಟರ್ನ್ ಮಾಡಿಕೊಳ್ಳುತ್ತಿದ್ದಂತೆ ಹಿಂದಿನಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದ್ದೆ ತಡ, ರಘು, ಪ್ರಾಚಿ ಕೂತಿದ್ದ ಕಾರು ಎರಡು ಸಲ ಪಲ್ಟಿ ಆಯ್ತು. ಪ್ರಾಚಿ ಹೇಗೋ ಎದ್ದು ಸಾವರಿಸಿಕೊಂಡು ನೋಡಿದರೆ ರಘು ಪೂರ್ತಿ ರಕ್ತದ ಮಡುವಲ್ಲಿ ಬಿದ್ದಿದ್ದ ! ಜೋರಾಗಿ ಕಿರುಚಿಕೊಂಡಳು ಪ್ರಾಚಿ "ಅಮ್ಮಾ " ಎಂದು.


"ಏನಾಯ್ತೆ ಪ್ರಾಚಿ? ಯಾಕಮ್ಮ ಹೀಗೆ ಕೂಗಿಕೊಂಡೆ? ಏನಾದ್ರೂ ಕೆಟ್ಟ ಕನಸು ಬಿತ್ತಾ? ಟೈಮ್ ನೋಡು ಒಂಬತ್ತು ಗಂಟೆ. ರಘು ವೆಡ್ಡಿಂಗ್ ಕಾರ್ಡ್ ಸೆಲೆಕ್ಟ್ ಮಾಡೋಕೆ ಬಾ ಅಂದಿದ್ನಲ್ಲ ಹತ್ತು ಗಂಟೆಗೆ. ಏಳು ಬೇಗ, ಸ್ನಾನ ಮಾಡು, ತಿಂಡಿ ರೆಡಿಯಿದೆ. ತಿಂದು ಹೋಗಿಬಾ " ಸ್ವರೂಪಾ ಮಗಳ ತಲೆಯನ್ನು ನೇವರಿಸಿ ಹಣೆಗೊಂದು ಮುತ್ತು ಕೊಟ್ಟು ಹೋದರು.


ಪ್ರಾಚಿಗೆ ಇಷ್ಟೊತ್ತು ನಡೆದಿದ್ದು ಒಂದು ಕನಸೆಂದು ನಂಬಲು ಸಾಧ್ಯವಾಗುತ್ತಿರಲಿಲ್ಲ. ತುಂಬಾ ಭಯಗೊಂಡಿದ್ದಳು. ರಘುವಿಗೆ ಫೋನ್ ಮಾಡಿ ಮಾತಾಡಿದ ಮೇಲೆ ಸ್ವಲ್ಪ ಸಮಾಧಾನಗೊಳ್ಳುತ್ತಾಳೆ. ಹತ್ತು ಗಂಟೆಗೆ ಬಾ ಪ್ರಾಚಿ, ಇಲ್ಲ ಅಂದ್ರೆ ಆಮೇಲೆ ರಾಹುಕಾಲ ಸ್ಟಾರ್ಟ್ ಆಗತ್ತೆ ಅಂತ ಅಮ್ಮ ಹೇಳ್ತಿದಾರೆ ಎಂದಾಗ ಪ್ರಾಚಿ ಸುಮ್ಮನಾಗಿ ಬರ್ತೀನಿ ಎಂದಷ್ಟೇ ಹೇಳಿ ತಯಾರಾದಳು.


ಪ್ರಾಚಿ ಹೊರಡುತ್ತಿದ್ದಂತೆ ಬೆಕ್ಕೊಂದು ಅಡ್ಡ ಬರುತ್ತಲೇ "ಅಪಶಕುನವಾಯಿತು. ಐದು ನಿಮಿಷ ಕೂತು ಹೋಗಮ್ಮ " ಎಂದು ಮತ್ತೇ ಹೇಳಿದ ಅಜ್ಜಿಯ ಮಾತುಗಳು ಪ್ರಾಚಿಯನ್ನು ದಿಗಿಲುಗೊಳಿಸಿದವು !

ತನ್ನೆಲ್ಲ ವಾದಗಳಿಗೆ ಮೌನವೃತ ಕಲಿಸಿ, ಸುಮ್ಮನೇ ನಿಂತಲ್ಲೇ ನಿಂತುಬಿಟ್ಟಳು ಪ್ರಾಚಿ !


Rate this content
Log in

Similar kannada story from Classics