Revati Patil

Romance Classics Inspirational

3  

Revati Patil

Romance Classics Inspirational

ಹೆಂಡತಿಯ ಅಪ್ಪುಗೆ

ಹೆಂಡತಿಯ ಅಪ್ಪುಗೆ

2 mins
218


ಅಮರ್ ಆಗಷ್ಟೇ ಮದುವೆಯಾಗಿದ್ದ. ಮನೆತುಂಬ ಮದುವೆಗೆಂದು ಬಂದ ಸಂಬಂಧಿಕರೇ ಇದ್ದರು. ಎಲ್ಲರ ಕಣ್ಣು ತಪ್ಪಿಸಿ ಹೆಂಡತಿಯನ್ನೊಮ್ಮೆ ಅಪ್ಪಿಕೊಳ್ಳಬೇಕೆಂದು ಅಮರ್ ಏನೇನೋ ಕಸರತ್ತು ಮಾಡಿದ್ದ. ಮನೆದೇವರಿಗೆ ಹೋಗಿ ಬರುವತನಕ ಕೃತಿಯನ್ನು ಅಮರ್ ಜೊತೆ ಇರದಂತೆ ಅತ್ತೆ ತಾಕೀತು ಮಾಡಿದ್ದರು.


(ಅಮರ್ ಹಾಗೆಯೇ ತನ್ನವಳನ್ನು ನೋಡಿದ ದಿನದಿಂದ ಮದುವೆಯಾದ ದಿನದವರೆಗಿನ ನೆನಪುಗಳಿಗೊಮ್ಮೆ ಇಣುಕಿದ )

ಹೆಂಡತಿ ಕೃತಿಯನ್ನು ಮದುವೆಗೆ ಮೊದಲು ಹೆಣ್ಣು ನೋಡುವ ಶಾಸ್ತ್ರದಂದೇ ನೋಡಿದ್ದ ಅಮರ್ . ಅದು ಬಿಟ್ಟರೆ ತನ್ನವಳನ್ನು ನೋಡಲು ತನ್ನವಳ ಊರಿಗೆ ಹೋಗಲು ಸಮಯವೇ ಕೂಡಿರಲಿಲ್ಲ ಅಮರ್'ನಿಗೆ. ಕೃತಿಯನ್ನು ನೋಡಿದಾಗಲೇ ಅವಳು ಅವನ ಮನಸ್ಸು ಕದ್ದಿದ್ದಳು. ಸಾಧಾರಣ ವರ್ಣದ ಕೃತಿಯ ಮುಗುಳ್ನಗು, ಉದ್ದ ಜಡೆ ಅಮರ್'ನ ಮನಸ್ಸನ್ನು ಕದ್ದಿದ್ದವು.


ಅಮರ್ ಈಗಿನ ಜಮಾನದಂತೆ ಎರಡು ಹೆಜ್ಜೆ ಮುಂದೆ ಓಡಲು ಮನಸ್ಸು ಮಾಡಿದರೆ, ಹಳ್ಳಿಯ ಶಾಸ್ತ್ರ ಸಂಪ್ರದಾಯಗಳ ಕಟ್ಟಳೆಗಳ ನಡುವೆ ಬೆಳೆದ ಕೃತಿಗೆ ಇವೆಲ್ಲವೂ ಅಷ್ಟು ಸಲೀಸಾಗಿರಲಿಲ್ಲ. ಅದರಲ್ಲೂ ಕೃತಿಯ ಅಜ್ಜಿಯಂತೂ ಮದುವೆಗೂ ಮೊದಲ ಭೇಟಿ, ಒಂದೆಡೆ ಸೇರುವಿಕೆ ಇಷ್ಟವಾಗುತ್ತಿರಲಿಲ್ಲ. ಅಕಸ್ಮಾತ್ ಆಗಿ ಯಾವುದೋ ವಿಷಯಕ್ಕೆ ಮದುವೆ ನಿಂತು ಹೋದರೆ ಮೊದಲ ಬೆರಳು ಹುಡುಗಿಯ ಚಾರಿತ್ರ್ಯಕ್ಕೆ ತೋರುವ ಸಮಾಜ ನಮ್ಮದು, ಅಲ್ಲದೇ ಮುಂದೆ ಅಂತಹ ಹುಡುಗಿಗೆ ಮದುವೆಯ ಭಾಗ್ಯವೇ ಬರದಿರಬಹುದು ಎನ್ನುವ ಭಯ ಅಜ್ಜಿಯದು. ಆದರೂ ಹೆಣ್ಣುಮಕ್ಕಳು ಮದುವೆಯಾಗುವವರೆಗೆ ಹುಡುಗನೊಂದಿಗೆ ಹೆಚ್ಚು ಹೊರಗಡೆ ಸುತ್ತಾಡುವುದು ಬೇಡವೆಂದು ಹೇಳಿದ್ದರು. ಕೃತಿ ಸಹ ಅಜ್ಜಿಯ ಮಾತು ಮೀರುತ್ತಿರಲಿಲ್ಲ.


ಅಮರ್, ಕೃತಿಯ ಭೇಟಿಗೆ ಅಧಿಕೃತವಾಗಿ ನಿಶ್ಚಿತಾರ್ಥ ಆಯಿತು. ಅಮರನಿಗೆ ಕಾಲುಗಳು ನೆಲ ಮರೆತು ಆಗಸದಲ್ಲಿ ತೇಲಿದ ಅನುಭವ. ಭಾವಿ ಪತ್ನಿಯ ಮೊಬೈಲ್ ನಂಬರ್ ಪಡೆದು ಖಾಸಗಿಯಾಗಿ ಒಂದಷ್ಟು ಹೊತ್ತು ಮಾತಾಡಬೇಕು ಎಂದು ಬಯಸಿ ಬಯಸಿ ಅವಳಿಂದ ಮೊಬೈಲ್ ನಂಬರ್ ಪಡೆದಿದ್ದಾಗಿತ್ತು. ಇನ್ನೇನು ನಲ್ಮೆಯ ನಲ್ಲೆಯೊಂದಿಗೆ ಮಾತಾಡುವ ಹಂಬಲ ಅಮರನಿಗೆ.


ತಾನೇ ಮೊದಲಾಗಿ ಫೋನಾಯಿಸಿದ ಕೃತಿ ಕೊಟ್ಟ ನಂಬರಿಗೆ. ಆ ಕಡೆಯಿಂದ ಕೇಳಿದ್ದು ಕೃತಿಯ ತಂದೆಯ ಧ್ವನಿ! ಸುಮ್ಮನೆ ಲೋಕಾರೂಢಿಗೆ ಮನೆಯವರನ್ನು ಕೇಳಿದ ಅಮರ್, ಕೃತಿಯೊಂದಿಗೆ ಮಾತಾಡಬೇಕೆಂದು ಭಾವಿ ಮಾವನನ್ನು ಕೇಳಲು ಸಂಕೋಚ ಪಟ್ಟು ಹೆಚ್ಚು ಮಾತಾಡದೆ ಮಾತು ಮುಗಿಸಿದ್ದ.


"ಇವಳು ಈಗಿನ ಕಾಲದ ಹುಡುಗಿಯೇ ತಾನೇ? ತನ್ನ ಹುಡುಗ ಫೋನ್ ಮಾಡಬಹುದು ಅನ್ನೋದನ್ನು ಮರ್ತು ಹೇಗಿದ್ದಾಳೋ?" ಎಂದು ಅಮರ್ ತನ್ನಷ್ಟಕ್ಕೆ ತಾನೇ ಸಿಂಡರಿಸಿಕೊಂಡಿದ್ದ. ಅವನಿಗೆ ಕೃತಿಯನ್ನು ಮಾತಾಡಿಸುವ ಬಯಕೆ ಹೆಚ್ಚಾಗುತ್ತಿತ್ತು. ಮಾಡುವ ಕೆಲಸದಲ್ಲೂ ಏಕಾಗ್ರತೆ ಇರಲಿಲ್ಲ. ಫೇಸ್ಬುಕ್, ಇನ್ಸ್ಟಾಗ್ರಾಮ್ ಎಂದು ಇರುವ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅವಳ ಹೆಸರು ಹಾಕಿ ಹುಡುಕಿದ್ದಾಯ್ತು. ಅಲ್ಲೆಲ್ಲೂ ಕೃತಿ ಇರಲಿಲ್ಲ. ಒಂದು ಕ್ಷಣ ಅವಳ ಬಗ್ಗೆ ಕೋಪ ಬಂದರೂ ಅವಳು ಇಂತಹದರಲ್ಲಿ ಆಸಕ್ತಿ ಹೊಂದಿದವಳಲ್ಲ ಎನ್ನುವುದು ಅಮರನಿಗೆ ಒಂತರ ಸಂತೋಷ ಕೊಟ್ಟಿತ್ತು.

ತನ್ನವಳ ಬಗ್ಗೆ ತಾನು ಕನಸು ಹೆಣೆಯುತ್ತಲೇ ಇದ್ದ. ಮತ್ತೇ ಅವಳೊಂದಿಗೆ ಫೋನ್ ಮಾಡಿ ಮಾತಾಡುವ ಆಸೆ ಆಯಿತು ಅಮರನಿಗೆ. ಮತ್ತೇ ಮಾವನೇ ಫೋನ್ ರಿಸೀವ್ ಮಾಡಿದರೆ ಪದೇ ಪದೇ ಫೋನ್ ಮಾಡಿ ತಾನು ಅವರ ಮುಂದೆ ಚಿಕ್ಕವನಾಗುತ್ತೇನೆ ಎಂಬ ಅಳುಕಿನಿಂದ ಸಂಜೆ ತನ್ನ ತಾಯಿಯೊಂದಿಗೆ ಫೋನ್ ಮಾಡಿಸಿದರಾಯಿತು ಎಂದು ಲೆಕ್ಕಾಚಾರ ಹಾಕಿ ಮತ್ತೇ ಲ್ಯಾಪ್ಟಾಪ್ ಆನ್ ಮಾಡಿ ಕೆಲಸದಲ್ಲಿ ಮುಳುಗಿದ.


ಇತ್ತ ಮನೆಯಲ್ಲಿ ಕೃತಿಯ ತಂದೆ, ಅಮರ್ ಫೋನ್ ಮಾಡಿದ್ದನ್ನು ಹೇಳಿದರು. ಕೃತಿಯ ತಾಯಿ, ಅಜ್ಜಿ ಎಲ್ಲರೂ ಅಮರನ ಬಗ್ಗೆ ಕೇಳಿದರೆ, ಕೃತಿ ಮಾತ್ರ ಅಪ್ಪನನ್ನು ಹೆಚ್ಚು ಕೇಳಲು ನಾಚಿಕೊಂಡಳು. ತನ್ನ ಅಮರ್, ತನ್ನನ್ನು ಕೇಳಿರಬಹುದಾ? ಮನೆಗೆ ಭೇಟಿ ಮಾಡಲು ಬರುತ್ತಿರಬಹುದಾ? ಏನಾದರೂ ಬೇರೆ ಮಾತಾಡಿರಬಹುದಾ? ಮದುವೆ ದಿನಾಂಕವನ್ನು ಗೊತ್ತು ಮಾಡಿಬಿಟ್ಟರಾ? ಏನಾಗಿರಬಹುದು? ಹೇಗೆ ಅಪ್ಪನನ್ನು ಅಮರ್ ಬಗ್ಗೆ ಕೇಳುವುದು ಎಂದು ಸುಮ್ಮನಾದಳು. ಏನಾದರೂ ವಿಷಯವಿದ್ದರೆ ಅಪ್ಪ, ಅಮ್ಮನ ಬಳಿ ಹೇಳಿಯೇ ಹೇಳುತ್ತಾರೆ, ಆಗ ಕೇಳಿದರಾಯಿತು ಎಂದುಕೊಂಡು ಬಟ್ಟೆ ಒಗೆಯಲು ಕೆರೆಯತ್ತ ನಡೆದಳು.


(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)


Rate this content
Log in

Similar kannada story from Romance