MAITHILI RAGHUPATHI

Classics Fantasy Inspirational

4.3  

MAITHILI RAGHUPATHI

Classics Fantasy Inspirational

ಕಿಟ್ಟಣ್ಣನ ಬೇಸಿಗೆ

ಕಿಟ್ಟಣ್ಣನ ಬೇಸಿಗೆ

7 mins
434



ಚಳಿಗಾಲ ಕಳೆದು ಬೇಸಗೆಯ ಧಗೆ ಭೂ ತಾಯಿಯನ್ನು ಸ್ಪರ್ಷ ಮಾಡಿ ತಿಂಗಳು ಉರುಳಿತ್ತು. ಅಯ್ಯಪ್ಪಾ... ಸಾಕು ಈ ಬಿಸಿಲು ನಾಡಿನ ಸಹವಾಸ... ಅಂತ ಅನ್ನಿಸೋದಿಕ್ಕೆ ಪ್ರಾರಂಭವಾಗಿತ್ತು. ಕೂರುವಂತಿಲ್ಲ ನಿಲ್ಲುವಂತಿಲ್ಲ... ಸೆಖೆ ಸೆಖೆ ಸೆಖೆ. 25 ವರ್ಷದಲ್ಲಿ ಇಷ್ಟು ಸೆಖೆ... ಇಷ್ಟು ಬಿಸಿಲು ನೋಡಿದ್ದು ಇದೇ ಮೊದಲ ಬಾರಿ ನಾನು. ಹೀಗೆಯೇ ಬಿಸಿಲನ್ನು ಹಳಿಯುತ್ತ ಕುಳಿತವಳ ಮೊಬೈಲ್ ಎಂಬ ಭೂತ ಕಿರುಚತೊಡಗಿತು. ಯಾರಪ್ಪಾ ಈಗ ಅಂತ ನೋಡಿದ್ರೆ ಪಕ್ಕದ ಮನೆ ಕಿಟ್ಟಣ್ಣ. ಇನ್ನು ಒಂದು ತಾಸು ಮಾತಾಡ್ತಾನೆ ಅವ್ನು... ಏನ್ ಮಾಡೋದಪ್ಪ ರಿಸೀವ್ ಮಾಡೋದೋ ಬೇಡ್ವೋ ಅನ್ನೋ ಗೊಂದಲ ಶುರುವಾಯ್ತು. ನಮ್ಮ ಮನೆ ಫೋನ್ ಸರಿ ಇಲ್ಲ ಅಂದ್ರೆ ಅಪ್ಪಾಜಿ ಅವ್ನ ಮೊಬೈಲ್ ಇಂದನೇ ನನಗೆ ಕರೆ ಮಾಡ್ತಾ ಇದ್ರು. ಅದ್ಕೆ ಅಪ್ಪಾಜಿ ಕಾಲ್ ಮಾಡಿರೋ ಸಂಭವ ಕೂಡ ಇದೆ ಅಂತ ಯೋಚನೆ ಮಾಡಿ ರಿಸೀವ್ ಮಾಡ್ದೆ. ಅತ್ತ ಕಡೆಯಿಂದ ಪಿಟೀಲಿನ ನಾದದ 'ಹಲೋ ಅಪ್ಪು ಯಂತ ಮಾಡ್ತಾ ಇದ್ದೆ?' ಎಂಬ ಸ್ವರ ಬಂತು. ಹೌದು ಕಿಟ್ಟಣ್ಣ ಕಾಲ್ ಮಾಡಿದ್ದ. ಹಾಗೆ ನೋಡಿದರೆ ಕಿಟ್ಟಣ್ಣ ಮಾತನಾಡುವುದು ಊರಿನಲ್ಲಿ ನನ್ನ ಹೊರತು ನನ್ನ ಅಪ್ಪಾಜಿ ಅಮ್ಮ ಅಕ್ಕ ನನ್ನ ಕುಟುಂಬದವರೊಂದಿಗೆ ಮಾತ್ರ. ಇನ್ನು ಆತನ ಅಜ್ಜಿಯ ಬಳಿ. ಆದರೂ ಅದೇಕೋ ಆತ ಮಾತನಾಡತೊಡಗಿದರೆ ನನಗೆ ಏನೋ ಒಂದು ತರಹದ ಸಿಟ್ಟು. 'ತರಕಾರಿ ತಗತ್ತಾ ಇದ್ದಿ ಬೇಕಾ?' ಎಂದೆ ಸಿಟ್ಟಿನಿಂದ. 'ಅಯ್ಯೋ ಮರಾಯ್ತಿ ಯಂತಕೆ ಸಿಟ್ಟು? ಬೇಸಿಗೆ ಹ್ಯಾಂಗಿದ್ದು ಅಂತ ವಿಚಾರ ಮಾಡಲೆ ಕಾಲ್ ಮಾಡಿದ್ದು ಆನು' ಎಂದ ತಾಂಬೂಲ ತುಂಬಿದ ಬಾಯಿಂದ. ಬಿಸಿಲಿನ ತಾಪ ಬೇರೆ ಅಂತದ್ರಲ್ಲಿ ಇವನ ಕಾಟ ಬೇರೆ. ಆದ್ರೂ ಸಾವರಿಸಿಕೊಂಡು 'ಹು ಬರ್ತಿ ಬಿಸ್ಲು. ಈಗ್ಲೆ 40 ಡಿಗ್ರಿ ಹತ್ರ ಇದ್ದು.' ಎಂದೆ. ಓ ಹೌದನೇ ಹ್ಯಾಂಗೆ ಇರ್ತೆ ಅಲ್ಲಿ ಸಾಕು ಮರಾಯ್ತಿ ಅಲ್ಲಿಂದ ಬಿಟ್ಟಿಕ್ಕಿ ಬಾ... ಯಂತಕೆ ಸುಮ್ನೆ ಒದ್ದಾಡ್ತೆ? ಎಂದ. ಎಲ್ಲಿ ಅಡಗಿ ಕುಳಿತಿತ್ತೋ ನನ್ನ ಸಿಟ್ಟು 'ಯಂತ ಮಾತು ಅಂತ ಆಡ್ತೆ ಕಿಟ್ಟಣ್ಣ? ನಿಂಗೆ ಯಂತಕೆ ಹೊಟ್ಟೆಲಿ ಸಂಕಟ ನಂಗೆ ಶೆಖೆ ಆದ್ರೆ? ನಿನ್ ಕೆಲಸ ಏನಿದ್ದೋ ಅದ್ನ ಮಾಡು...' ಅಂತ ಬಾಯಿಗೆ ಬಂದಂಗೆ ಬೈದು ಇನ್ನೇನು ಫೋನನ್ನು ಇಡಬೇಕು ಅಷ್ಟರಲ್ಲಿ ಆತ 'ಅಪ್ಪು ಪ್ಲೀಸ್ ಫೋನು ಇಡಡ, ಆನು ನಿನ್ನ ಹತ್ರ ಮಾತಾಡವು.' ಎಂದ. ಈ ಬಾರಿ ಆತನ ದ್ವನಿಯನ್ನು ಕೇಳಿ ಆತನಲ್ಲಿ ಯಾವುದೋ ದುಃಖ ಇರುವುದು ಖಂಡಿತ ಎಂದು ನನಗೆ ಅನ್ನಿಸಿತು. ಹು ಹೇಳು ಯಂತ ಮಾತಾಡವು? ಅಂತ ಕೇಳಿದೆ. ಆದರೆ ಆತ ಮಾತನಾಡುವ ಮೊದಲೇ ನನಗೆ ಊರಿನ ಜನ ಮಾತನಾಡುವ ಮಾತು ನೆನಪಾಗ್ತಾ ಇತ್ತು. ಕಿಟ್ಟಣ್ಣನಿಗೆ ಹುಚ್ಚು ಹಿಡಿದಿದೆ. ಹೌದು ಆತನಿಗೆ ಹುಚ್ಚು ಹಿಡಿದಿದೆ. ಕಿಟ್ಟಣ್ಣ ಇದ್ದಕ್ಕಿದ್ದಂತೆ ಹುಚ್ಚನಾದವನಲ್ಲ. ಕ್ರಮೇಣವಾಗಿ ಮಾನಸಿಕವಾಗಿ ಕುಗ್ಗಿ ಹೋಗಿ ಹುಚ್ಚನೆಂಬ ಪಟ್ಟ ಕಟ್ಟಿಕೊಂಡವ. ಹಾಗೆ ನೋಡಿದರೆ ಹುಚ್ಚು ಹಿಡಿಯುವಂತದ್ದು ಏನೂ ಅಗಿರಲಿಲ್ಲ ಆತನ ಜೀವನದಲ್ಲಿ. ಆತ ಎಲ್ಲರ ಜೊತೆ ಬೆರೆತು ತನ್ನನ್ನು ತಾನು ಗಟ್ಟಿ ಮಾಡಿಕೊಂಡಿದ್ದರೆ ಆತನಿಗೆ ಮಾನಸಿಕ ಅಸ್ವಸ್ಥನೆಂಬ ಬಿರುದು ಸಿಕ್ಕುತ್ತಿರಲಿಲ್ಲ. ಎಂದು ನನಗೆ ಅನ್ನಿಸತೊಡಗಿತ್ತು.

ಕಿಟ್ಟಣ್ಣನಿಗೆ ಮೊದಲಿನಿಂದಲೂ ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಯಾವಾಗ ನೋಡಿದರೂ ಏನನ್ನಾದರೂ ಓದುತ್ತಲೇ ಇರುತ್ತಿದ್ದ. ಮಾತನಾಡುವುದು ಅತ್ಯಂತ ಕಡಿಮೆ. ಆತ ಎರೆಡೆರಡು ಡಿಗ್ರಿ ಪಡೆದುಕೊಂಡು ಕೆಲಸಕ್ಕಾಗಿ ಓಡಾಡಿದ್ದ. ಓದುವುದರಲ್ಲಿ ಬುದ್ದಿವಂತ ಹೌದು ಆದರೆ ಅಂಕ ಪಟ್ಟಿಯಲ್ಲಿ ಮಾತ್ರ ಆತನ ಅಂಕಗಳು ಕಡಿಮೆಯಾಗಿಯೇ ಇರುತ್ತಿದ್ದವು. ಆತ ಎಂದಿಗೂ ಮೊದಲ ದರ್ಜೆಯಲ್ಲಿ ಪಾಸಾದವನೇ ಅಲ್ಲ. ಈ ಎಲ್ಲಾ ಕಥೆಗಳನ್ನು ಆತನ ಬಾಯಿಯಿಂದ ನಾನು ಕೇಳುತ್ತಿರುವುದು 1000 ನೇ ಬಾರಿ ಇರಬಹುದು. ಆದರೂ ಏನೋ ಹೊಸತನ್ನು ಕೇಳುವಂತೆ ಈ ಬಾರಿಯೂ ಕೇಳುತ್ತಿದ್ದೆ. ಕಿಟ್ಟಣ್ಣ ತನ್ನ ಉನ್ನತ ಶಿಕ್ಷಣವನ್ನು ಮುಗಿಸಿ, ತನ್ನ ಎಲ್ಲಾ ಅಂಕಪಟ್ಟಿಗಳನ್ನೂ ಒಂದು ಕಡತದೊಳಗೆ ತುಂಬಿಸಿಕೊಂಡು ಕೆಲಸ ಹುಡುಕುತ್ತ ಶಿವಮೊಗ್ಗದ ಬೀದಿ ಬೀದಿಯಲ್ಲಿ ಅಲೆದಾಡಿದ್ದ. ಬೇಸಗೆಯ ಬಿಸಿಲು ಬೇರೆ. ತೊಟ್ಟಿಕ್ಕುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಒಂದು ಕಾಲೇಜಿನ ಮೆಟ್ಟಿಲು ಹತ್ತಿ ಒಳ ಬಂದ. ಏನು ಬೇಕಿತ್ತು? 'ಕೆಲಸ ಬೇಕಿತ್ತು........' ಎಷ್ಟು ವರ್ಷ ಅನುಭವವಿದೆ? ಅಂಕಗಳು ಎಷ್ಟು ಬಂದಿವೆ? ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆ. ಕಿಟ್ಟಣ್ಣನಿಗೆ ಸಂಬಂದಿಸಿದ ವಿಷಯ ಜ್ಞಾನದ ಕುರಿತ ಪ್ರಶ್ನೆಗಳಿಗೆ ಇಲ್ಲಿ ಜಾಗವಿರಲಿಲ್ಲ. ಆತ ಕುಸಿಯ ತೊಡಗಿದ. ಇದೇ ರೀತಿಯ ಅನುಭವ ಆತನಿಗೆ ಸತತವಾಗಿ ಆರು ವರ್ಷಗಳ ಕಾಲ ನಡೆಯಿತು. ಮಾನಸಿಕವಾಗಿ ನಿಧಾನವಾಗಿ ಕುಗ್ಗತೊಡಗಿದ. ಆರನೆಯ ವರ್ಷ ಆತ ತನ್ನ ಓದಿಗೆ ತಕ್ಕ ಕೆಲಸ ಸಿಗಲಿಲ್ಲ ಆದರೂ ಪರವಾಗಿಲ್ಲ ಬೇರೆ ಏನಾದರೂ ಕೆಲಸ ಮಾಡೋಣ ಎಂದು ಯೋಚಿಸಿ ಮತ್ತದೇ ಬೇಸಗೆಯಲ್ಲಿ ಊರಿನ ಅಂಗಡಿ ಮೆಟ್ಟಿಲುಗಳನ್ನು ಹತ್ತಿ ಇಳಿದ ಆದರೆ ಕೆಲಸ ಮಾತ್ರ ಆತನ ಪಾಲಿಗೆ ಮರೀಚಿಕೆಯಾಗಿ ಹೋಯ್ತು. ಕೊನೆಗೆ ಬಿಸಿಲಿನ ತಾಪ ತಡೆಯಲಿಕ್ಕಾಗದೆ ಹೋಟೇಲ್ ಒಂದನ್ನು ಹೊಕ್ಕ. ತಾನೇಕೆ ಹೋಟೇಲಿನಲ್ಲಿ ಪಾತ್ರೆ ತೊಳೆಯ ಬಾರದು ಎಂದು ಯೋಚಿಸಿ ಮ್ಯಾನೇಜರನ್ನು ಕೇಳಿದ. ಅಲ್ಲ ಮರಾಯ ಇಷ್ಟೆಲ್ಲ ಓದಿ ನೀನು ಪಾತ್ರೆ ತೊಳೆಯುವುದ? ಬ್ಯಾಡ ಮರಾಯ ಒಳ್ಳೆ ಕೆಲಸ ಸಿಕ್ಕುತ್ತೆ ಹೋಗು ಎಂದು ಕಳಿಸಿದ ಮ್ಯಾನೇಜರ್. ಅಂದರೆ ತಾನು ಪಾತ್ರೆ ತೊಳೆಯುವುದಕ್ಕು ಯೋಗ್ಯನಲ್ಲವೇ ಎಂದು ಕಿಟ್ಟಣ್ಣನ ಮನಸ್ಸಿನಲ್ಲಿ ನಿರಾಶಾಭಾವ ಮೂಡತೊಡಗಿತು. ಇದೆಲ್ಲ ಆಗಿ ಹತ್ತಾರು ವರ್ಷಗಳೇ ಕಳೆದಿವೆ. ನಮ್ಮ ಕಿಟ್ಟಣ್ಣನ ಬದುಕಿನಲ್ಲಿ ಬಂದ ಮತ್ತೊಂದು ಬಿಸಿಲಿನ ತಾಪ ಎಂದರೆ ಆತನ ಹೆಂಡತಿಯ ಸಾವು. ಅಪ್ಪ ಅಮ್ಮ ಇಲ್ಲದ ಕಿಟ್ಟಣ್ಣ ಮನೆಯಲ್ಲಿ ಇದ್ದು ತನ್ನ ವಯಸ್ಸಾದ ಅಜ್ಜಿಯ ಸೇವೆಯಲ್ಲಿ ತನ್ನ ನೋವನ್ನು ಮರೀತಿದ್ದ. ಆದರೆ ಇದ್ದಕ್ಕಿದ್ದಂತೆ ಬಂದೆರಗಿದ ಗರ್ಭಿಣಿ ಹೆಂಡತಿಯ ಸಾವು ಆತನನ್ನು ಸಂಪೂರ್ಣವಾಗಿ ಕುಗ್ಗಿಸಿಯೇ ಬಿಟ್ಟಿತು. ಆತನ ಜೀವನದಲ್ಲಿ ಬಂದ ಎಲ್ಲಾ ಘಟನೆಗಳು ಬೇಸಗೆಯ ಸುಡುಬಿಸಿಲಿನಲ್ಲಿಯೇ. ಆತನ ಅಪ್ಪ ಅಮ್ಮ ತೀರಿಕೊಂಡದ್ದು, ಹೆಂಡತಿ ಇಹಲೋಕ ತ್ಯಜಿಸಿದ್ದು ಎಲ್ಲವೂ ಈ ಕೆಟ್ಟ ಬೇಸಗೆಯ ಕಾಲದಲ್ಲಿಯೇ. ಮಾನಸಿಕವಾಗಿ ಕುಗ್ಗಿದ್ದ ಆತ ಅಂದಿನಿಂದ ಮಾತನಾಡಲು ಪ್ರಾರಂಭಿಸಿದ ( ಮಾತು ಮನೆಕೆಡಿಸಿತು ಎನ್ನುವರಲ್ಲ… ಮನೆ ಕೆಡಿಸುವ ಮಾತನಾಡಲಾರಂಭಿಸಿದ. . ಆತ ಸ್ವಾರ್ಥಿಕೂಡ ಆದ. ತನಗೆ ಸಿಗದೇ ಇರುವುದು ಬೇರೆ ಯಾರಿಗೂ ಸಿಗಬಾರದೆಂಬ ಭಾವ ಆತನಲ್ಲಿ ಮನೆ ಮಾಡಿತ್ತು. ಈತನ ಈ ಬುದ್ದಿಯಿಂದಾಗಿ ಬಹಳಷ್ಟು ಮಂದಿ ತಮ್ಮ ಕೆಲಸವನ್ನು ಕಳೆದು ಕೊಂಡಿದ್ದರು. ಬಹಳಷ್ಟು ಜನರ ಮದುವೆ ಮುರಿದು ಬಿದ್ದಿತ್ತು. ಇದೆಲ್ಲವನ್ನು ನೋಡಿಯೇ ಊರಿನಲ್ಲಿ ಆತನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಇದೇ ಕಥೆಯನ್ನು ಮತ್ತೆ ಕಿಟ್ಟಣ್ಣನ ಬಾಯಿಂದಲೂ ಕೇಳುತ್ತಿದ್ದ ನನಗೆ ಒಂದು ಕ್ಷಣ ಅಯ್ಯೋ ಎನಿಸಿತು. ನಾನು ಮಾತನಾಡುವುದಕ್ಕು ಮೊದಲು ಕಿಟ್ಟಣ್ಣ ಫೋನ್ ಇಟ್ಟು ಹೊರಟಿದ್ದ. ಸರಿ ಮತ್ತೊಂದು ದಿನ ಕಾಲ್ ಮಾಡಿ ಮಾತನಾಡಿದರೆ ಆಯ್ತು ಎಂದು ಎದ್ದು ನಿಂತರೆ ಮತ್ತೆ ಆ ಕಡೆ ಯಿಂದ ಕಾಲ್ ಬಂತು. ಮತ್ತೆ ಕಿಟ್ಟಣ್ಣ ಕಾಲ್ ಮಾಡಿದ್ದ. ಹಲೋ ಎಂದೆ 'ಅಪ್ಪು ಯನ್ ಅಜ್ಜಿ ಹೋಗ್ಬುಟ್ಲೆ......... ನೋಡು ಇದು ಬೇಸಿಗೆ' ಎಂದ ಕರುಳು ಚುರುಕ್ ಎಂದು ಒಂದು ಹನಿ ಕಣ್ಣೀರು ಕೆಳಗೆ ಬಿತ್ತು.

ಇದಾದ ನಂತರ ಮತ್ತೆ ಕಿಟ್ಟಣ್ಣನ ಸುಳಿವು ಇರಲಿಲ್ಲ, ಕಿಟ್ಟಣ್ಣನ ಅಜ್ಜಿ ತೀರಿಕೊಂಡು ಈಗ ಸುಮಾರು 5 ವರ್ಷಗಳೇ ಕಳೆದಿದೆ. ಅಜ್ಜಿ ಇಹಲೋಕದ ಯಾತ್ರೆ ಮುಗಿಸಿದ ಮೇಲೆ ಕಿಟ್ಟಣ್ಣ ಮಂಕಾಗಿ ಹೋಗಿದ್ದ. ಹಿರಿ ಜೀವದ ಅಪರ ಕ್ರಿಯೆಗಳು ಮುಗಿದು 7 ತಿಂಗಳಾದ ಮೇಲೆ ನಾನು ಊರಿಗೆ ಹೋಗಿದ್ದೆ. ಅಪ್ಪು ನನ್ನ ಅಜ್ಜಿ ಹೋಗಿ ಬಿಟ್ಲೆ… ನೋಡು ಇದು ಬೇಸಿಗೆ ಕಾಲ ಎಂದು ಕರುಳು ಕಿವುಚಿದಂತೆ ನುಡಿದು ಫೋನು ಇಟ್ಟ ಕಿಟ್ಟಣ್ಣ ಮತ್ತೆ ನನ್ನ ಬಳಿ ಮಾತನಾಡಿರಲಿಲ್ಲ. ಮೊದ ಮೊದಲು ಕಿಟ್ಟಣ್ಣನೆಂದರೆ ಒಂದು ತರಹ ಕಿರಿಕಿರಿಯಾಗುತ್ತಿದ್ದ ನನಗೆ ಇತ್ತೀಚೆಗೆ ಪಾಪ… ಆತನ ಸಮಾದಾನಕ್ಕೋಸ್ಕರವಾದರೂ ಒಂದೆರಡು ಮಾತನಾಡಬೇಕು ಎನಿಸುತಿತ್ತು. ಈ ಸಲ ಕಿಟ್ಟಣ್ಣನ ಮನೆಗೆ ಹೋಗಿ ಆತನನ್ನು ಮಾತನಾಡಿಸಿಕೊಂಡು ಬರಬೇಕು… ಆತನಿಗಿಷ್ಟವಾದ ಅಕ್ಕಿರೊಟ್ಟಿಯನ್ನು ಅಮ್ಮನ ಕೈಯಿಂದ ಮಾಡಿಸಿ ಮನೆಗೆ ತಿಂಡಿಗೆ ಕರೆಯಬೇಕು ಎಂದೆಲ್ಲ ಯೋಚಿಸುತ್ತಾ ಬಸ್ ಹತ್ತಿ ಕುಳಿತವಳಿಗೆ ಮನೆಯ ಹತ್ತಿರದ ಬಸ್ ಸ್ಟಾಪ್ ನಲ್ಲಿ ಕಂಡೆಕ್ಟರ್ ಬಂದು ಕರೆದಾಗ ಎಚ್ಚರವಾಗಿತ್ತು.

ಈ ಬಾರಿ ಮನೆಗೆ ಬಂದವಳೇ ಬ್ಯಾಗ್ ಇಟ್ಟು ಅಮ್ಮ ಕಿಟ್ಟಣ್ಣ ಹ್ಯಾಂಗಿದ್ದ? ಯಾರತ್ರನಾದ್ರೂ ಮಾತಾಡಿದ್ನಾ?... ಎಂದು ಕೇಳಿದೆ..

ಊಹು… ಅಜ್ಜಿಯ ಮರಣಾನಂತರ ಆತ ಮನೆಯಿಂದ ಹೊರಗೇ ಬಂದಿರಲಿಲ್ಲವಂತೆ. ಆತನ ಮನೆಯ ಕೊಟ್ಟಿಗೆಯ ಗೌರಿ ಹಸು ಅಂಬಾ ಎಂದು ಕರೆದಾಗ ಹೋಗಿ ಬಾಯಾರು ಕೊಟ್ಟು ಹುಲ್ಲುಹಾಕಿ ಹಾಲೂಡಲು ಕರು ಬಿಟ್ಟು ಬರುತ್ತಿದ್ದನಂತೆ… ಯಾರಾದರೂ ನೋಡಿದವರು ಕರುವಿಗೆ ಅಜೀರ್ಣವಾದೀತು ಎಂದು ಕಟ್ಟಿಹಾಕುತ್ತಿದ್ದರಂತೆ.. ಎಂತಹ ಪರಿಸ್ಥಿತಿ ತಲುಪಿಬಿಟ್ಟಿದ್ದ ಕಿಟ್ಟಣ್ಣ… ಅರೆಕ್ಷಣ ಹೃದಯ ತಿವಿದಂತಾಯ್ತು… ಅಂದು ಮದ್ಯಾಹ್ನದ ವರೆಗೂ ನಾನು ಕಿಟ್ಟಣ್ಣನ ಮನೆಯತ್ತ ಸುಳಿಯಲಿಲ್ಲ.. ಕಿಟ್ಟಣ್ಣನ ಕರುಣೆ ತುಂಬಿದ ನೋಟವನ್ನು ಎದುರಿಸುವ ಶಕ್ತಿ ನನಗಿರಲಿಲ್ಲ..

ಆ ದಿನ ಸಂಜೆ ಹೊತ್ತಿಗೆ ಹೊರಗಡೆ ಚಾವಡಿ ಮೇಲೆ ಕುಳಿತವಳಿಗೆ ಕಿಟ್ಟಣ್ಣನ ಮನೆಯ ಜಗಲಿಯ ದೀಪ ಹೊತ್ತಿದ್ದು ಕಂಡಿತು.. ಕಿಟ್ಟಣ್ಣ ಮನೆಯ ಒಳಗೆ ಇದ್ದಾನೆ,, ಓಡಾಡುತ್ತಿದ್ದಾನೆ… ಎಂದು ಅನ್ನಿಸಿತು.. ನಿಧಾನವಾಗಿ ಕಡವಾರ ದಾಟಿ ಕಿಟ್ಟಣ್ಣನ ಮನೆಯ ಬಾಗಿಲನ್ನು ಇಣುಕಿದೆ….ನೀಳ ಕಾಯದ.. ಇಸ್ತ್ರಿ ಮಾಡಿದ ಬಟ್ಟೆಯುಟ್ಟ,,, ಸ್ವಲ್ಪ ಗಡ್ಡ ಬಂದರೂ ಸಹಿಸದ ಶಿಸ್ತಿನ ಮನುಷ್ಯನಂತಿದ್ದ ನಮ್ಮ ಕಿಟ್ಟಣ್ಣ ಇವನೇನಾ???? ಎನ್ನುವಂತೆ ಬಿಟ್ಟ ಕಣ್ಣು ಬಿಟ್ಟಂತೆ ನೋಡ ತೊಡಗಿದೆ… ಮೈಯಲ್ಲಿ ಬರಿಯ ಮೂಳೆ ಮಾತ್ರ ಕಾಣುತಿತ್ತು…ತೊಟ್ಟ ಅಂಗಿ ಸುಕ್ಕುಗಟ್ಟಿತ್ತು… ಕೂದಲು ಕತ್ತರಿಸಿಲ್ಲ,,, ಗಡ್ಡ ಎದೆಯ ಹತ್ತಿರದವರೆಗೂ ಬೆಳೆದಿತ್ತು,,ನೋಡಿದರೆ ಭಯವಾಗುವಂತೆ ಇದ್ದ ಕಿಟ್ಟಣ್ಣ ಹುಚ್ಚನಂತಾಗಿದ್ದ. ಸ್ವಲ್ಪ ಹೆದರಿದೆ.. ಆದರೂ ಭಗವಂತನ ಮೇಲೆ ಭಾರ ಹಾಕಿ ಒಳಗಡಿಇಟ್ಟು ಕಿಟ್ಟಣ್ಣ ನಾನು ಎಂದೆ…

ಅಜ್ಜಿ ಹೋಗ್ಬುಟ.. ಇನ್ನು ನಾನು ಒಬ್ನೆಯ.. ನಾನೂ ಹೊಗಕಿತ್ತು.. ಯಂತಕಾದ್ರೂ ನಾನ್ ಇನ್ನೂ ಬದುಕಿದ್ನೇನಾ? ನನ್ನ ನೋಡಿದ ಕಿಟ್ಟಣ್ಣ ಸುಮಾರು ಅರ್ಧ ತಾಸು ಬಿಟ್ಟು ಈ ಮಾತು ಹೇಳಿದ್ದ… ಬೇಜಾರೆನಿಸ್ತು…ಆದರೂ “ಕಿಟ್ಟಣ್ಣ ಹುಟ್ಟಿದ ಮನುಷ್ಯ ಸಾಯಲೇಬೇಕು… ಹೋದವರ್ಷ ಕಡೆಮನೆ ಅಜ್ಜಿ ಈ ವರ್ಷ ನಿಮ್ಮನೆ ಅಜ್ಜಿ..ಹೋದ ಏನ ಮಾಡಕಾಗ್ತು? ಅಜ್ಜಿಗೂ ವಯಸ್ಸಾಗಿತ್ತು… ಬಿದಗಂಡಿದ್ರೆ ನಿಂಗೆ ಕಷ್ಟ ಆಗ್ತಿರ್ಲ್ಯಾ? ಪಾಪ ಅವ್ಳಿಗೂ ಅನುಭವಿಸಕೆ ಆಗ್ತಿರ್ಲೆ..ಅಜ್ಜಿ ಹೋದ ಅಂತ ನೀ ಹಿಂಗೆ ಕೂತ್ರೆ.. ನೀ ಹುಟ್ಟಿರದುಕ್ಕೆ ಉಪಯೋಗ ಯಂತು? ಏಳು ಮೊದ್ಲು ದೇವರಿಗೆ ದೀಪ ಹಚ್ಚು.. ಅಡ್ಗೆ ಏನಾದ್ರೂ ಮಾಡ್ಕೈಂದ್ಯಾ? ಇಲ್ಲ ಅಂದ್ರೆ ನಮ್ಮನಿಗೆ ಬಾ ಊಟಕ್ಕೆ.. ನೀನು ಊಟ ತಿಂಡಿ ಮಾಡದೆ ಹುಷಾರಿಲ್ಲೆ ಹೇಳಿ ಬಿದ್ಗಂಡ್ರೆ ನಿನ್ ನೋಡವ್ರು ಯಾರಿದ್ದ? ಸಾಕು ಹಿಂದಿನ ಬೇಸಿಗೆ ಮರ್ತು ಬುಡು.. ಹೊಸ ವೈಷಾಕ ಮಾಸ ನಿಂಗಾಗಿ ಕಾಯ್ತಾ ಇದ್ದಿಕ್ಕು.. ಏನೋ ಒಳ್ಳೆದಾಗ್ತಿಕ್ಕು.. ….” ಅಂತ ಏನೇನೋ ಒಂದಿಷ್ಟು ಆತನಿಗೆ ನಾನೇನೋ ಬಾರಿ ತಿಳಿದುಕೊಂಡವಳಂತೆ ಬುದ್ದಿವಾದ ಹೇಳಿದೆ…

ಇಷ್ಟೆಲ್ಲ ಆಗಿ ಒಂದು ವಾರ ಕಳೆದಿತ್ತು.. ನಾನೂ ಗುಲ್ಭರ್ಗ ಬಿಟ್ಟು ಊರಿಗೆ ಬಂದಿದ್ದೆ.. ದಿನಕ್ಕೊಂದ ಸಲನಾದ್ರೂ ಕಿಟ್ಟಣ್ಣನ ಮನೆಗೆ ನಾನು ನನ್ನ ತಂದೆ ತಾಯಿ ಹೋಗಿಬರ್ತಾ ಇದ್ವಿ…ನಿಧಾನವಾಗಿ ಕಿಟ್ಟಣ್ಣ ಮೊದಲಿನಂತಾಗ್ತಾ ಇದ್ದ ಅಂತ ಅನ್ನಿಸಿದರೂ ಅದನ್ನು ಮುಖವಾಡ ಎನ್ನಲು ಯಾವ ಸಂಶಯವೂ ನನಗಿರಲಿಲ್ಲ. ಅದಾಗಲೇ ಹುಚ್ಚನೆಂಬ ಪಟ್ಟ ಕಟ್ಟಿಕೊಂಡಿದ್ದ ಕಿಟ್ಟಣ್ಣ ಊರು ಬಿಟ್ಟರೆ ಮಾತ್ರ ನೆಮ್ಮದಿ ಕಾಣಲು ಸಾದ್ಯ ಎಂದು ನನ್ನ ಮನಸ್ಸಿಗೆ ಬಲವಾಗ ತೊಡಗಿತ್ತು. ಒಂದು ದಿನ ಸಮಯ ನೋಡಿ ಆತನ ಬಳಿ ಈ ಕುರಿತು ಮಾತನಾಡಬೇಕೆಂದು ಕೊಂಡೆ.

ಮಾರನೆಯ ದಿನ ಬೆಳಗ್ಗೆ ಕಿಟ್ಟಣ್ಣ ನಮ್ಮ ಮನೆಗೆ ಬಂದ ಅಪ್ಪು ನೀನು ನಾಳೆ ಪೇಟಿಗೆ ಹೋಗ್ತ್ಯಾ? ನಾನೂ ಬತ್ತಿ.. ನಂಗೆ ಒಬ್ನೆ ಹೋಗಕೆ ಹೆದ್ರಿಕೆ ಎಂದ.. ಅಮ್ಮನ ಮುಖ ನೋಡದೆ ಒಪ್ಪಿಗೆಯ ಸಿಗ್ನಲ್ ಬಂತು… ಹು… ಬಾ ಎಂದೆ.

ಮರದಿನ ಬೆಳಗ್ಗೆ ನಾನು ಕಿಟ್ಟಣ್ಣ ಮೊದಲನೇ ಬಸ್ ಗೆ ಪೇಟೆಗೆ ಹೊರಟಿದ್ವಿ…ಬಸ್ಟಾಪ್ ಹತ್ತಿರ ತೋಟದ್ ಮನೆ ಲಚ್ಚಕ್ಕ ಸಿಕ್ಕಿ ಏನೇ ಅಣ್ಣ ಅಣ್ಣ ಅಂತ ಹೇಳ್ತಾ ಇವ್ನ ಜೊತಿಗೆ ಬಾಳ ಓಡಾಡ್ತೆ? ಅವಂಗೆ ಮಂಡೆ ಸರಿ ಇಲ್ಲೆ.. ನಿಂಗೆ ಯಂತಾರು ಮಾಡ್ತ.. ಪೇಟಿಗೆಲ್ಲ ಅವ್ನ ಜೊತಿಗೆ ಹೋಗಡ…….” ಏನೋ ಒಂದಷ್ಟು ಪಿಸುಗುಟ್ಟಿದ್ಲು…ಸದ್ಯ ಮೊದಲೇ ನೊಂದಿದ್ದ ಕಿಟ್ಟಣ್ಣನಿಗೆ ಇದು ಗೊತ್ತಾಗಲಿಲ್ಲ..

ಬಸ್ ಹತ್ತಿ ಪೇಟೆಗೆ ಬಂದಿಳಿದ ನನ್ನ ಬಳಿ ಕಿಟ್ಟಣ್ಣ ಅಪ್ಪು ನಂಗೆ ಮೈಸೂರಿಗೆ ಒಂದು ಟಿಕೆಟ್ ಬುಕ್ ಮಾಡ್ಸಿ ಕೊಡ್ತ್ಯಾ? ಯಾಕೋ ಊರಲ್ಲಿ ಇದ್ರೆ ಜನ ತಲೆಗೊಂದು ಮಾತಾಡಿ ನನ್ನ ಹುಚ್ಚಾಸ್ಪತ್ರೆ ಸೇರುಸ್ತಾ ? ಹೌದು ನಾನೂ ಅದನ್ನೇ ಯೋಚಿಸಿದ್ದು.. ಹು.. ಸರಿ ಬಾ.. ಎಂದು ಮೈಸೂರಿಗೆ ಮಾರನೇ ದಿನ ರಾತ್ರೆ 10 ಗಂಟೆ ಬಸ್ ಗೆ ಟಿಕೇಟ್ ಬುಕ್ ಆಯ್ತು.

ಅಂದು ಪೇಟೆ ಕೆಲಸ ಮುಗಿಸಿಕೊಂಡು ನಾವಿಬ್ಬರೂ ಮರಳಿ ಊರಿನತ್ತ ಬರುವಾಗ ಶರಾವತಿ ಹಿನ್ನೀರಿನ ಮುಳುಗಡೆ ಸಂತ್ರಸ್ತರ ಲಾಂಚ್ ಆಗತಾನೇ ಬಂದು ನಿಂತಿತ್ತು... ಹೊರಡಲು ಇನ್ನೂ ಸ್ವಲ್ಪ ಸಮಯ ಬಾಕಿ ಇತ್ತು. ಏನೂ ಮಾತನಾಡದೇ ಮೌನವಾಗಿದ್ದ ಕಿಟ್ಟಣ್ಣನ ಕಣ್ಣಲ್ಲಿ ನೀರು ಹೊರಬರುವ ಸನ್ನಾಹದಲ್ಲಿತ್ತು. ಏ ಕಿಟ್ಟಣ್ಣ ಏನಾತು? ಎಂದೆ… ಇಲ್ಲಿ ಸೇತುವೆ ಆಗಿದ್ರೆ ಇವತ್ತು ನಾನು ಹಿಂಗೆ ಊರು ಬಿಡ ಸ್ಥಿತಿ ಬತ್ತಾಇರ್ಲೆ…ನನ್ನ ಹೆಂಡ್ತಿ ಹೆರಿಗೆ ನೋವಿಂದ ನರುಳ್ತಾ ಇದೇ ಹೊಳೆದಡದಲ್ಲೆ ಲಾಂಚ್ ಇಲ್ದೆ ರಾತ್ರೋ ರಾತ್ರಿ ಪ್ರಾಣ ಬಿಟ್ಟಿದ್ದು… ಎಂದು ಹನಿ ಸುರಿಸಿದ.. ಈ ಬಾರಿ ನಾನು ಮೌನವಾಗಿದ್ದೆ..ಸೇತುವೆ ಮಾಡದೆ ಇನ್ನು ಎಷ್ಟು ಬಲಿಗಾಗಿ ಕಾಯ್ತಾ ಇದೆಯೋ ಈ ಸರ್ಕಾರ ಎಂದು ಕುಪಿತಳಾದೆ.

ಮರುದಿನ ಊರಲ್ಲಿ ಒಬ್ಬರ ಮನೆಯಲ್ಲಿ ಕಾರ್ಯಕ್ರಮ ಇತ್ತು.. ನಾವೆಲ್ಲರೂ ಹೋಗಿದ್ವಿ.. ಬರುವಾಗ ಸಂಜೆಯಾಗಿತ್ತು.. ಕಿಟ್ಟಣ್ಣ ಹೊರಟುಹೋಗಿದ್ದ. ಪೇಟೆಯಿಂದ ಬರುವಾಗ ತಾನು ಊರು ಬಿಡುತ್ತಿರುವುದನ್ನು ಯಾರ ಬಳಿಯೂ ಹೇಳಬಾರದೆಂದು ಮಾತು ತೆಗೆದುಕೊಂಡಿದ್ದ. ಹಾಗೇ ನಾನು ಆ ವಿಷಯ ಮಾತನಾಡಲಿಲ್ಲ. ಊರವರು ಕಿಟ್ಟಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದುಕೊಂಡು ಊರಿನಲ್ಲಿರುವ ಎಲ್ಲಾ ಬಾವಿಗಳನ್ನೂ ಹುಡುಕಿದರು.. ಕಾಡಲ್ಲಿ ಹುಡುಕಿದರು.. ಕಿಟ್ಟಣ್ಣ ಪತ್ತೆಯಾಗಲಿಲ್ಲ. ಅಷ್ಟರಲ್ಲೇ ಊರಲ್ಲಿ ಹುಲಿ ಬಂದಿದೆ ಎಂಬ ವದಂತಿ ಹಬ್ಬಿತ್ತು.. ಅಂತೆ ಬೆಳಗ್ಗೆ ಕಿಟ್ಟಣ್ಣ ಕಾಡಿನತ್ತ ಹೋಗುತ್ತಿರುವುದನ್ನು ನೋಡಿದ ಮಂದಿ ಹುಚ್ಚ ಹುಲಿ ಬಾಯಿಗೆ ಸಿಕ್ಕ ಎಂದೂ ಮಾತನಾಡಿಕೊಂಡರು.. ಆದರೆ ನಾನು ಮಾತ್ರ ಸೊಲ್ಲೆತ್ತಲಿಲ್ಲ. ನನ್ನನ್ನು ಒಂದೆರಡು ಬಾರಿ ಕೇಳಿದರೂ ಯಾರಿಗೂ ಬೇಡವಾಗಿದ್ದ ಕಿಟ್ಟಣ್ಣ ನಾಲ್ಕು ದಿನಕ್ಕೆ ಎಲ್ಲರ ಮನಸ್ಸಿನಿಂದಲೂ ದೂರವಾಗಿದ್ದ.

ಈ ಘಟನೆ ನೆಡೆದು ಈಗ 5 ವರ್ಷ ಕಳೆದಿದೆ.. ಊರಲ್ಲಿ ಈಗ ಕಿಟ್ಟಣ್ಣ ಯಾರಿಗೂ ನೆನಪಿಲ್ಲ. ಆದರೆ ನನಗೆ ಅಣ್ಣನಂತೆಯೇ ಇದ್ದ ಕಿಟ್ಟಣ್ಣನನ್ನು ಮರೆಯುವುದು ಸುಲಭದ ಮಾತಾಗಿರಲಿಲ್ಲ. ಬೆಂಗಳೂರು ಸೇರಿದ್ದ ನನಗೆ ಕೆಲಸದ ಒತ್ತಡ.. ಸಂಸಾರದ ಜಂಜಾಟದಲ್ಲಿ ಕಿಟ್ಟಣ್ಣ ನಿಧಾನವಾಗಿ ಮಾಯವಾಗುತ್ತಿದ್ದ. ಏಕೆಂದರೆ ಊರು ಬಿಟ್ಟ ಮೇಲೆ ಮತ್ತೆ ಕಿಟ್ಟಣ್ಣ ನನ್ನನ್ನು ಭೇಟಿ ಮಾಡಿದ್ದಾಗಲೀ.. ನನಗೆ ಕರೆ ಮಾಡಿ ಮಾತನಾಡಿದ್ದಾಗಲೀ ಇಲ್ಲ. ಆದರೆ ಇತ್ತೀಚೆಗೆ ಬೆಂಗಳೂರಿನಂತ ಬೆಂಗಳೂರಿನಲ್ಲಿ ದೇವಸ್ಥಾನವೊಂದರಲ್ಲಿ ಕಿಟ್ಟಣ್ಣ ನನಗೆ ಸಿಕ್ಕಿದ್ದ. ಮೈಸೂರಿಗೆ ಹೋಗುವುದಾಗಿ ಬಸ್ ಬುಕ್ ಮಾಡಿದ್ದ ಕಿಟ್ಟಣ್ಣ ಶಿವಮೊಗ್ಗದಲ್ಲಿ ಬಸ್ ಇಳಿದು ಬೆಂಗಳೂರು ಬಸ್ ಹತ್ತಿ ನೇರವಾಗಿ ಬೆಂಗಳೂರು ಸೇರಿದ್ದ..ಅಲ್ಲಿ ಹೇಗೋ ಕಷ್ಟಪಟ್ಟು ದೇವಸ್ಥಾನದ ಅರ್ಚಕನಾಗಿ ನೇಮಕಗೊಂಡಿದ್ದ. ಸುಳ್ಳು ಇಲ್ಲ.. ಕಪಟವಿಲ್ಲ… ಮೋಸ ಇಲ್ಲ.. ಭಕ್ತರು ತನಗೆ ನೀಡಿದ ಹಣವನ್ನೆಲ್ಲ ದೇವಸ್ಥಾನದ ಆಡಳಿತ ಮಂಡಳಿಗೇ ನೀಡುತ್ತ.. ಈಗ ನೆಮ್ಮದಿಯಿಂದ ಇದ್ದಾನೆ. ಮತ್ತೊಂದು ಮದುವೆಯಾಗಿ ಕಳೆದ ಬೇಸಿಗೆಯಲ್ಲೇ ವಾರಸುದಾರನ ಆಗಮನವೂ ಆಗಿದೆಯಂತೆ.. ನನಗೆ ಸಿಕ್ಕಾಗ ಕಿಟ್ಟಣ್ಣ ಹೇಳಿದ್ದು ಅಪ್ಪು ನೋಡಿದ್ಯಾ ಈವಾಗ್ಲೂ ಬೇಸಿಗೆನೇ. ನಿಜ ನೀನು ಹೇಳಿದ್ದು ಇಷ್ಟು ದಿನ ಬೇಸಿಗೆ ನಿಗಿ ನಿಗಿ ಕೆಂಡ..ಈಗ .. ಬಿಸಿಲಿನ ಝಳ ಕಳದ್ದು… ಊರು ಬಿಟ್ಟ ಮೇಲಿನ ಎಲ್ಲ ವೈಶಾಕ ಮಾಸನೂ ತಂಗಾಳಿ ಬೀಸಿದ್ದು… ಎಂದ.. ಈಗ ನೆಮ್ಮದಿ ನನ್ನದಾಯ್ತು.. ತಂಪು ತಂಗಾಳಿ ಮತ್ತೆ ಅಣ್ಣ ತಂಗಿಯರನ್ನ ಒಂದು ಮಾಡಿತ್ತು.


Rate this content
Log in

Similar kannada story from Classics