Revati Patil

Abstract Tragedy Others

3  

Revati Patil

Abstract Tragedy Others

ಮಾಡದ ತಪ್ಪಿಗೆ ಖಳನಾಯಕಯಾದಾಗ

ಮಾಡದ ತಪ್ಪಿಗೆ ಖಳನಾಯಕಯಾದಾಗ

2 mins
326



ಅದೊಂದು ಕೂಡು ಕುಟುಂಬ. ಇದ್ದುದರಲ್ಲಿಯೇ ನೆಮ್ಮದಿ ಕಂಡಿದ್ದ ಕುಟುಂಬ. ಅತಿಯಾದ ಆಧುನಿಕತೆಗೂ ಒಗ್ಗದೇ, ಹಳೆಯ ಸಂಪ್ರದಾಯ ಎಲ್ಲವನ್ನೂ ಸತ್ಯವೆಂದು ಆಚರಿಸದೇ ಎಲ್ಲರ ಜೊತೆ ಹಿತ ಕಾಪಾಡಿಕೊಂಡ ಕುಟುಂಬ ಅದು. ಆ ಕುಟುಂಬದಲ್ಲಿ ಮನೆಹಿರಿಯನಿಗೆ ಇಬ್ಬರು ಮಕ್ಕಳು. ಮೊದಲನೆಯವನು ಗಂಡುಮಗ, ಮತ್ತೊಂದು ಹೆಣ್ಣು ಮಗು. ಸಹಜವಾಗಿಯೇ ತಂಗಿಯ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ಅಣ್ಣ. ತಂಗಿಗೂ ಅಣ್ಣನೆಂದರೆ ಪ್ರಾಣ. ಸಣ್ಣವರಿದ್ದ ಅಣ್ಣತಂಗಿಯರು ಬೆಳೆದಿದ್ದರು. ಮುದ್ದು ಮುದ್ದಾಗಿ ಅಣ್ಣನ ಜೊತೆ ತರಲೆ ಮಾಡಿಕೊಂಡಿದ್ದ ತಂಗಿಯನ್ನು ಮದುವೆ ಮಾಡುವಾಗ ಅಣ್ಣನ ಮನಸ್ಸು ಅದೆಷ್ಟು ನೊಂದಿತ್ತು. ಮಧ್ಯವರ್ತಿಯ ಮೂಲಕ ಪರಿಚಯವಾದ ವಿದ್ಯಾವಂತರ ಮನೆಯೆಂದು ತಂಗಿಯನ್ನು ಮದುವೆ ಮಾಡಲು ಮುಂದಾಗಿದ್ದ. ಅಪ್ಪ ಅಮ್ಮನ ಮುದ್ದಿನ ಮಗಳು ಮದುವೆಯಾಗಿ, ಬಿಕ್ಕುತ್ತಲೇ ತವರು ಮನೆಯನ್ನು ಬಿಟ್ಟು ದೂರದ ಗಂಡನೂರಿಗೆ ಹೊರಟಳು.


ದಾರಿಯಲ್ಲೆಲ್ಲ ಗಂಡನಿಗೆ ತನ್ನಣ್ಣ ಹೀಗೆ, ಹಾಗೆ ಎಂದು ಅಣ್ಣನ ಸಾಹಸಗಳನ್ನು ಹೇಳುತ್ತಲೇ ಇದ್ದಳು. ಅವಳ ಗಂಡನಿಗೆ ಅದು ಅಷ್ಟಾಗಿ ಇಷ್ಟವಾಗಲಿಲ್ಲ ಎನಿಸುತ್ತದೆ. ಅವನಿಗೆ ಹೆಂಡತಿಯ ತರುವಾಯ ಹೆಚ್ಚಿನ ಸಂಬಂಧಗಳು ಹತ್ತಿರಕ್ಕೆ ಬೇಕಿರಲಿಲ್ಲ. ಇವಳಷ್ಟು ಭಾವನಾ ಜೀವಿಯು ಅವನಲ್ಲ. ಪಕ್ಕಾ ಪ್ರಾಕ್ಟಿಕಲ್ ಅವನು !


ಇದನ್ನೆಲ್ಲ ಗಮನಿಸುವಷ್ಟು ಬುದ್ದಿವಂತೆಯಲ್ಲ ಈ ಹುಡುಗಿ. ಹಳ್ಳಿಯ ಆಚಾರವಿಚಾರಗಳ ಜೊತೆ ಮಿಂದೆದ್ದು ಬಂದಿದ್ದ ಈಕೆಗೆ ಪಟ್ಟಣದ ಜೀವನ ಕಷ್ಟವೆನಿಸಿತು. ಗಂಡ ಕೆಲಸ, ಸಂಬಳದ ಹೊರತು ಹೆಚ್ಚಿನ ಮಾತು, ಹಾಸ್ಯಕ್ಕೆ ಆಸ್ಪದ ನೀಡುತ್ತಲೇ ಇರಲಿಲ್ಲ. ಹೆಂಡತಿಯ ತವರು ಮನೆಯ ಫೋನ್ ಬಂದರೂ ತನಗೇನಾದರೂ ಕೆಲಸ ಇದೆಯೆಂದು ಜಾರಿಕೊಳ್ಳುತ್ತಿದ್ದ. ತನ್ನ ಹೆತ್ತವರನ್ನು ಸಹ ದೂರವೇ ಇಟ್ಟಿದ್ದ ಈ ಭೂಪ ಹೆಂಡತಿಯ ಹೆತ್ತವರನ್ನು ಆದಷ್ಟು ಅಂತರದಲ್ಲಿ ಇಟ್ಟಿದ್ದ.


ಹೆಂಡತಿ ಮತ್ತೇ ಮರೆತ ತನ್ನ ಅಣ್ಣನ ಗುಣಗಾನ ಶುರು ಮಾಡಿದ್ದಳು. ತನ್ನ ಅಣ್ಣ ಎಷ್ಟೇ ಕೆಲಸದಲ್ಲಿ ನಿರತನಾಗಿದ್ದರೂ ನನ್ನ ಮಾತನ್ನು ಎಲ್ಲ ಕೆಲಸ ಬಿಟ್ಟು ಕೇಳುತ್ತಿದ್ದ. ಅವನಂತ ಅಣ್ಣ ಜಗತ್ತಲ್ಲೇ ಇಲ್ಲ ಬಿಡಿ. ಎನ್ನುತ್ತಿದ್ದಂತೆ ಗಂಡನ ಮನಸ್ಸಲ್ಲಿ ಅದೇನೋ ಅಸಮಾಧಾನ ಭುಗಿಲೆದ್ದಿತ್ತು.


ಅಷ್ಟೊಂದು ಅಣ್ಣನ ಕಣ್ಮಣಿ ಆಗಿದ್ದವಳು ಅಣ್ಣನ ಕಣ್ಣಮುಂದೆಯೇ ಇರಬೇಕಿತ್ತು. ಮದುವೆ ಆಗುವ ಅವಶ್ಯಕತೆ ಏನಿತ್ತು ಎನ್ನುತ್ತಾನೆ. ತನ್ನ ಅಣ್ಣನನ್ನು ಈಕೆ ಸಮರ್ಥಿಸಿಕೊಂಡಷ್ಟು ಗಂಡನಿಗೆ ಅವಳ ಅಣ್ಣನ ಬಗ್ಗೆ ಅಸಮಾಧಾನ ಹೆಚ್ಚುತ್ತಲೇ ಹೋಯಿತು. ಅವಳ ಅಣ್ಣ ಇವನಿಗಿಂತ ಉನ್ನತ ಕೆಲಸದಲ್ಲಿದ್ದ. ಸಂಬಳವೂ ಹೆಚ್ಚಿತ್ತು. ಆದರೆ ಹೆಂಡತಿ ಯಾವತ್ತೂ ಅಣ್ಣನ ಪ್ರೀತಿಯ ಹೊರತಾಗಿ ಕೆಲಸದ ಬಗ್ಗೆ ಮಾತಾಡಿ ಗಂಡನನ್ನು ಚಿಕ್ಕವನನ್ನಾಗಿ ಮಾಡಿರಲಿಲ್ಲ.


ಹೀಗೆ ಅಣ್ಣನಿಗೆ ತಂಗಿಯ ಊರಿಗೆ ವರ್ಗಾವಣೆ ಆಯಿತು. ತಂಗಿಯ ಊರೆಂದಾಗ ಅಣ್ಣ ಹಿರಿ ಹಿರಿ ಹಿಗ್ಗಿದ್ದ. ತಂಗಿಗೆ ಸರ್ಪ್ರೈಸ್ ಕೊಡಲು ಅವಳ ಮನೆಗೆ ಹೇಳದೆ ಬಂದುಬಿಟ್ಟ. ತಂಗಿಗೆ ಅಣ್ಣನ ಕಂಡಿದ್ದೆ ಸಂತೋಷ ತಡೆಯಲಾಗಲಿಲ್ಲ. ತನ್ನ ಅಣ್ಣನ ಇಷ್ಟದ ಅಡಿಗೆ ಮಾಡಿ ಬಡಿಸಿದಳು. ತನ್ನ ಮನೆಯಿರುವಾಗ ಮತ್ತೊಂದು ಮನೆ ಮಾಡುವುದೇಕೆ? ನಮ್ಮ ಜೊತೆಯೇ ಇದ್ದುಬಿಡು ಎಂದು ಹಠ ಮಾಡುತ್ತಾಳೆ. ತಂಗಿಯ ಗಂಡನ ದಿವ್ಯ ಮೌನ ಅಣ್ಣನಿಗೆ ಪರಿಸ್ಥಿತಿ ತಿಳಿಸಿತ್ತು. ಅವನೆಷ್ಟೇ ಬೇಡ ಎಂದರೂ ತಂಗಿ ಕೇಳಲೇ ಇಲ್ಲ. ಅಣ್ಣ ಒಲ್ಲದ ಮನಸ್ಸಿನಿಂದ ಎರಡು ದಿನ ಇರುವುದಾಗಿ ಹೇಳಿದ.


ರಾತ್ರಿಯಾಗಿತ್ತು. ತಂಗಿಯ ಕೋಣೆಯಲ್ಲಿ ಜೋರಾಗಿ ಮಾತು ನಡೆದಿದ್ದು ಅಣ್ಣನಿಗೆ ಕೇಳಿತು.


"ಹೇಳದೆ ಕೇಳದೆ, ಮತ್ತೊಬ್ಬರ ಮನೆಗೆ ಬರಬಾರದು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ ನಿಮ್ಮ ಮನೆಯವರಿಗೆ ".


"ಅವನು ನನ್ನ ಅಣ್ಣ. ಅವನೇಕೆ ಅನುಮತಿ ಪಡೆದು ಬರಬೇಕು? "


"ಹಬ್ಬದಡಿಗೆ ಮಾಡುವ ಅವಶ್ಯಕತೆ ಇತ್ತಾ?

ಬೆಲೆ ಎಲ್ಲ ಜಾಸ್ತಿ ಆಗಿದೆ. ಯಾರೇ ಬಂದರೂ ಅತಿಯಾಗಿ ಮಾಡಬೇಡ, ನಾನು ದುಡಿಯೋದು ನಮ್ಮಿಬ್ಬರಿಗಷ್ಟೇ, ಹೊರಗಿನವರಿಗಲ್ಲ "


"ಅಪರೂಪಕ್ಕೆ ಬಂದ ಅಣ್ಣನಿಗೆ ಅಡಿಗೆ ಮಾಡಿದ್ದರಲ್ಲಿ ಏನು ತಪ್ಪು. ಅವನು ಹೊರಗಿನವನಲ್ಲ "


"ಅವನಿಗೆ ಜಾಸ್ತಿ ಸಂಪಾದಿಸ್ತಿದೀನಿ ಅಂತ ಕೊಬ್ಬು. ಅದನ್ನ ತೋರಿಸ್ಕೊಳೋಕೆ ಇಲ್ಲಿವರೆಗೂ ಬಂದಿದಾನೆ. ಒಟ್ಟಿನಲ್ಲಿ ನಿನ್ನಿಂದ, ನಿಮ್ಮ ಮನೆಯವರಿಂದ ನನಗೆ ನೆಮ್ಮದಿ ಇಲ್ಲ"


"ಯಾಕ್ರೀ ಹಾಗಂತೀರಿ. ನಮ್ಮ ಅಣ್ಣ ನಿಮ್ಮ ಬಗ್ಗೆ ಯಾವತ್ತೂ ಕೀಳಾಗಿ ಮಾತಾಡಿಲ್ಲ. ಅವನು ನಿಮ್ಮ ಜೊತೆ ಮಾತಾಡ್ಬೇಕು ಅಂದ್ರೂ ನೀವೇ ಮಾತಾಡಲ್ಲ, ನನ್ನ ಅಣ್ಣನ ಬಗ್ಗೆ ಹೀಗೆಲ್ಲ ಮಾತಾಡ್ಬೇಡಿ, ನಾಯಕ ಅವನು "


"ಶುದ್ಧ ಖಳನಾಯಕ ನಿಮ್ಮ ಅಣ್ಣ ನಮ್ಮಿಬ್ಬರ ಮಧ್ಯೆ. ನಿನಗೆ ಅವನೇ ಹೆಚ್ಚಾದರೆ ಅವನ ಜೊತೆಯಲ್ಲೇ ಹೋಗಿಬಿಡು. ದಿನ ದಿನ ನಿಮ್ಮ ಅಣ್ಣನ ಗುಣಗಾನ ಕೇಳುವ ತಾಪತ್ರಯವಾದ್ರೂ ತಪ್ಪುತ್ತದೆ "


ಗಂಡ ಹೆಂಡತಿಯ ಸಂಭಾಷಣೆಯನ್ನು ಕೇಳಿಸಿಕೊಂಡ ಅಣ್ಣನಿಗೆ ತಾನು ಬೇರೊಬ್ಬರ ಜೀವನದಲ್ಲಿ ಪ್ರವೇಶಿಸದೆಯೂ ಖಳನಾಯಕ ಆಗಿರುವುದಕ್ಕೆ ಬೇಸರ ಪಟ್ಟುಕೊಂಡ. ತಂಗಿಯ ಜೀವನ ಚೆನ್ನಾಗಿದ್ದರೆ ಸಾಕೆಂದು ದೇವರಲ್ಲಿ ಬೇಡಿಕೊಂಡು ಮಲಗಿದ.


ಬೆಳಗಿನ ಸುಪ್ರಭಾತ ಕೇಳುತ್ತ ತಂಗಿ ಕೋಣೆಯಿಂದಾಚೆ ಬಂದವಳಿಗೆ ಅಣ್ಣ, ಅಣ್ಣನ ಸಾಮಾನು, ಚಪ್ಪಲಿ ಕಾಣುವುದಿಲ್ಲ.

ತನ್ನ ಅಣ್ಣ ನೊಂದುಕೊಂಡಿದ್ದು ತಿಳಿದು ತಂಗಿಯು ನೊಂದುಕೊಳ್ಳುತ್ತಾಳೆ.

ಗಂಡ ಮಾತ್ರ ಮನೆ ಖಾಲಿಯಾಯಿತಲ್ಲ ಎಂದು ಉಸಿರು ಬಿಡುತ್ತಾನೆ.


Rate this content
Log in

Similar kannada story from Abstract