Jyothi Baliga

Horror Thriller

4.8  

Jyothi Baliga

Horror Thriller

ಆತ್ಮದ ಸೇಡು

ಆತ್ಮದ ಸೇಡು

12 mins
1.1K


ನಾನು "ಅಮಾವಾಸ್ಯೆ"ಯ ಕತ್ತಲಿನಲ್ಲಿ ಒಂಟಿಯಾಗಿ ಸಶ್ಮಾನದ ಹೊರಗೆ ಕೂತು ಒಂದೇ ಸಮನೆ ಅಳುತ್ತಿದ್ದೆ. ಶವ ಪೂಜೆ ಮುಗಿಸಿ ಬಂದ ಒಬ್ಬ ಸನ್ಯಾಸಿ ನನ್ನ ಬಳಿ ಬಂದು "ಹೆಣ್ಣು ಮಕ್ಕಳು ಬರುವ ಸ್ಥಳವಲ್ಲ" ಇದು ಎಂದು ಹೇಳಿದ.ಅವನ ಮಾತಿಗೆ ಕಿವಿಗೊಡದೇ ನಾನು ಅಳುತ್ತಲೇ ಇದ್ದೆ. ನನ್ನ ಮೌನ ಹಾಗೂ ಕಣ್ಣೀರು ಕಂಡು ಸನ್ಯಾಸಿ ಏನಾಯಿತು ? ಎಂದು ಕೇಳಿದ. ನನಗೂ ನನ್ನ ದುಃಖವನ್ನು ಯಾರ ಬಳಿಯಾದರೂ ಹೇಳಿ ಕೊಳ್ಳಬೇಕಾಗಿತ್ತು. ಸನ್ಯಾಸಿಯ ಬಳಿ ಹೇಳಲು ಶುರು ಮಾಡಿದೆ.


ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ನಾವು ಹತ್ತು ಜನ ಸ್ನೇಹಿತರು ಇನ್ನೂ ಎಲ್ಲರೂ ಒಟ್ಟಾಗಿ ಸೇರುವುದು ಅಪರೂಪ. ಊರಿಗೆ ಹೋಗುವ ಮೊದಲು ನಮ್ಮ ಕಾಲೇಜು ಜೀವನವನ್ನು ನೆನಪಿನಲ್ಲಿಡುವಂತೆ ಇರಬೇಕೆಂದು ಟ್ರೆಕ್ಕಿಂಗ್ ಹೋಗುವ ಪ್ಲಾನ್ ಮಾಡಿ, ಮರುದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎಲ್ಲರೂ ಪಾರ್ಕ್ ನಲ್ಲಿ ಸೇರುವುದೆಂದು ತೀರ್ಮಾನವನ್ನು ಮಾಡಿದೆವು.


ಗೀತಾ, ಸುಮ, ಅನಿಲ್, ತೇಜಸ್, ಸುನಿಲ್, ವರುಣ್, ರಾಹುಲ್ ,ವಿಕ್ರಮ್ ಅಲಿಯಾಸ್ ವಿಕ್ಕಿ, ನಾನು ಅಂದರೆ "ಸಿಂಚನ" ಇಷ್ಟೇ ಜನ ಬೆಳಿಗ್ಗೆ ಬಂದವರು. ಕಿರಣ್ ಗೆ ಎಷ್ಟೇ ಪೋನ್ ಮಾಡಿದರೂ ರಿಸೀವ್ ಮಾಡದೇ ಇರುವುದರಿಂದ ಅವನನ್ನು ಬಿಟ್ಟು ಎಲ್ಲರೂ ಹೊರಟೆವು.


ಎಲ್ಲರೂ ತಮಾಷೆ ಮಾಡಿ ನಗು ನಗುತ್ತಾ ಪ್ರಯಾಣದ ಮಧ್ಯೆದಲ್ಲಿ ಪ್ಯಾಕ್ ಮಾಡಿ ತಂದ ತಿಂಡಿಯನ್ನು ತಿಂದು ನಮ್ಮ ಚಾರಣವನ್ನು ಮುಂದುವರಿಸಿದೆವು. ತುಂಬಾ ಬಿಸಿಲು ಎಂದು ಮಧ್ಯಾಹ್ನದ ಸಮಯದಲ್ಲಿ ಚಾರಣವನ್ನು ಮುಂದುವರಿಸದೇ ಮರದ ನೆರಳಿನಲ್ಲಿ ಸ್ವಲ್ಪ ಹೊತ್ತು ಮಲಗಿದೆವು.ಎದ್ದು ನೋಡಿದಾಗ ಪ್ರಣಯ ಪಕ್ಷಿಗಳಾದ ಗೀತಾ ಮತ್ತು ಅನಿಲ್ ನಮ್ಮಿಂದ ದೂರದಲ್ಲಿ ಕೂತು ಪ್ರೇಮಸಾಗರದಲ್ಲಿ ಈಜುತ್ತಿದ್ದರು. ವರುಣ್ ನನ್ನ ಜೊತೆಯಲ್ಲಿದ್ದ ಸುಮಳಿಗೆ ಕಾಳು ಹಾಕಿ ಅವನು ಅವಳ ಜೊತೆಯಲ್ಲಿ ಲಲ್ಲೇ ಹೊಡೆಯಲು ಪ್ರಾರಂಭಿಸಿದ. ನಾನೊಬ್ಬಳು ಕಿರಣ್ ಬಾರದಿರಲು ಕಾರಣವೇನೆಂದು ಚಿಂತಿಸುತ್ತಾ ಕೂತಿದ್ದೆ.

ಎತ್ತರದಲ್ಲಿರುವ ಈ ಗುಡ್ಡದಿಂದ ಸೂರ್ಯಾಸ್ತದ ದೃಶ್ಯ ನೋಡುವುದೆ ಚಂದ. ಸೂರ್ಯಾಸ್ತವನ್ನು ನೋಡಿ ಬೇಕಾದ ಪೋಟೋಗಳನ್ನು ತೆಗೆದುಕೊಂಡು ಅಂತ್ಯಾಕ್ಷರಿ ಹಾಡಿ, ಕುಣಿದು ಕುಪ್ಪಳಿಸಿದೆವು. ನಡೆದು ನಡೆದು ತುಂಬಾ ಸುಸ್ತಾಗಿರುವುದರಿಂದ ವಿಕ್ಕಿ, "ನಾವು ಇವತ್ತು ಇಲ್ಲೇ ನಿಲ್ಲೋಣ" ಎಂದು ಹೇಳಿದ. ಕಿರಣ್ ಇಲ್ಲದೇ ನನಗೆ ಮುಜುಗರವಾಗಿ ಬೇಡಾ ಎಂದು ಹಠ ಮಾಡಿದೆ. ಬೇಕಾದಷ್ಟು ಆಹಾರ, ನೀರು ಮುಂಜಾಗ್ರತಾ ಕ್ರಮವಾಗಿ ಟೆಂಟ್ ಎಲ್ಲಾ ತಂದಿರುವುದರಿಂದ ಉಳಿದವರು‌ ರಾತ್ರಿ ಹೊತ್ತು ಗುಡ್ಡದಲ್ಲಿ ಕಳೆಯುವುದೆಂದು ತೀರ್ಮಾನಿಸಿದರು. ನಾನು ಅಸಮಾಧಾನ ವ್ಯಕ್ತಪಡಿಸಿದಾಗ ವಿಕ್ಕಿ ಸಿಟ್ಟಿನಿಂದ "ನಮ್ಮ ಮೇಲೆ ವಿಶ್ವಾಸ ಇಲ್ಲದಿದ್ದರೆ ನೀನು ಹೊರಡಬಹುದು" ಎಂದ. ಸಹಾಯಕ್ಕಾಗಿ ಉಳಿದವರ ಮುಖ ನೋಡಿದೆ. ಸುಮ ಹಾಗೂ ಗೀತಾ ನಾವು ಬರುವುದಿಲ್ಲ ಎಂದರು. ಕತ್ತಲೆಯಲ್ಲಿ ಒಂಟಿಯಾಗಿ ಹೋಗುವುದು ಸರಿಯಲ್ಲವೆಂದು ಸುಮ್ಮನಾದೆ. 


ಇನ್ಸ್ ಟೆಂಟ್ ಮ್ಯಾಗಿ ಪ್ಯಾಕೆಟ್ ಗೆ ಬಿಸಿ ನೀರು ಹಾಕಿ ಅದನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ವಿಪರೀತ ಚಳಿಯಿಂದ ರಕ್ಷಿಸಿಕೊಳ್ಳಲು ತೇಜಸ್ ತಾನು ತಂದ "ಡಿಂಕ್ಸ್" ಎಲ್ಲರಿಗೂ ಕುಡಿಯಲು ಕೊಟ್ಟ. ನನಗೆ ಅಭ್ಯಾಸ ಇಲ್ಲದೇ ಇರುವುದರಿಂದ ನಾನು ಕುಡಿಯಲಿಲ್ಲ.


ಕಿರಣ್ ಇಲ್ಲದೆ ಮನಸ್ಸು ಮೌನವನ್ನು ಬಯಸುತಿತ್ತು. ಕಾಡಿನ ನಡುವೆ ಜೀರುಂಡೆಗಳ ಝೀಂಗುಟ್ಟುವಿಕೆ , ಗೂಬೆಯ ಕೂಗು ಇವೆಲ್ಲವೂ ಪ್ರಿಯವೆನಿಸುತಿತ್ತು. ವಿಕ್ಕಿ ಹೇಳಿದ ಹಾಗೆ ಕ್ಯಾಂಪ್ ಫೈಯರ್ ಹಾಕಿ ಕುಣಿಯಲು ಪ್ರಾರಂಭಿಸಿದರು. ಕುಣಿದು ದಣಿದ ದೇಹಕ್ಕೆ ಮಂಪರು ಹತ್ತಿದ್ದರಿಂದ ಎಲ್ಲರೂ ಹೋಗಿ ಮಲಗಿದರು.ಸುಮ ಹಾಗೂ ವರುಣ್ ಒಂದು ಟೆಂಟ್ ಗೆ ಹೋದರೆ, ಗೀತಾ ಮತ್ತು ಅನಿಲ್ ಅವರೊಂದು ಟೆಂಟ್ ನಲ್ಲಿ ಮಲಗಿದರು. ಉಳಿದವರೆಲ್ಲ ಒಂದು ಟೆಂಟ್ ನೊಳಗೆ ಹೋದರು. ನಾನೊಬ್ಬಳೆ ಉಳಿದು ಬಿಟ್ಟೆ.


ಕ್ಯಾಂಪ್ ಫೈಯರ್ ನೋಡುತ್ತಾ ಕುಳಿತಿದ್ದೆ.ಸಶ್ಮಾನ ಮೌನ ನನ್ನಲ್ಲಿ ಹೆದರಿಕೆ ಹುಟ್ಟಿಸಿತು. ಬೆಂಕಿಯನ್ನು ಆರಿಸಿದ್ದರೂ, ಅದರ ತಾಪ ಹೆಚ್ಚಾಗಿದ್ದರಿಂದ ಆ ತಣ್ಣನೆಯ ರಾತ್ರಿಯಲ್ಲೂ ಬೆವರಿದೆ. ಬಾಯಾರಿದಂತಾಗಿ ನೀರಿಗಾಗಿ ಹುಡುಕಾಡಿದೆ. ಎಲ್ಲಿಯೂ ನೀರಿನ ಬಾಟಲಿ ಸಿಗದಿದ್ದರಿಂದ ಅಲ್ಲಿಯೇ ಇದ್ದ ಕೋಕಾಕೋಲಾವನ್ನು ಕುಡಿದು ನನಗಾಗಿ ಹಾಕಿದ್ದ ಟೆಂಟ್ ನಲ್ಲಿ ಮಲಗಿದೆ.


ಬೆಳಿಗ್ಗೆ ಎದ್ದು ನೋಡಿದರೆ ನನ್ನ ಬಟ್ಟೆಯೆಲ್ಲಾ ಅಸ್ತವ್ಯಸ್ತವಾಗಿತ್ತು.ವಿಪರೀತ ಮೈ ನೋವಿನಿಂದ ಹೆಜ್ಜೆ ಇಡಲು ಕಷ್ಟವಾಗಿತ್ತು. ಹೊರಗೆ ಬಂದು ನೋಡಿದಾಗ ಯಾರು ಎದ್ದ ಕುರುಹು ಕಾಣಿಸಲಿಲ್ಲ.


ನನ್ನ ಶೀಲಾ ಅಪಹರಣವಾಗಿದೆಯೆಂದು ಒಳಮನಸ್ಸು ಕೂಗಿ ಹೇಳುತಿತ್ತು. ರಾತ್ರಿ ಮಲಗುವ ಮೊದಲು ಕುಡಿದ ಕೋಲಾವನ್ನೇ ಯಾರೋ ಅಸ್ತ್ರವಾಗಿ ಬಳಸಿ ನನ್ನನ್ನು ಬಲಾತ್ಕಾರ ಮಾಡಿದ್ದಾರೆಂದು ತಿಳಿಯಿತು. ಅಳುತ್ತಾ ಕೂರುವಷ್ಟು ಸಮಯವಿರಲಿಲ್ಲ. ನನ್ನ ಮೊಬೈಲ್ ಒಂದನ್ನು ಹಿಡಿದು ಕಣ್ಣೀರಿನೊಂದಿಗೆ ಬಂದ ದಾರಿ ಹುಡುಕುತ್ತಾ ಹೊರಟೆ.ಕಿರಣ್ ಗೆ ಪೋನ್ ಮಾಡಿದರೂ ವ್ಯಾಪ್ತಿ ಪ್ರದೇಶದಲ್ಲಿಲ್ಲ ಎಂಬ ಸಂದೇಶ ಬಿಟ್ಟರೆ ಬೇರೇನೂ ಕೇಳಿಸುತಿರಲಿಲ್ಲ.

*************************************ಸುತ್ತ ಮುತ್ತ ಎಲ್ಲಾ ಕಡೆ ಹುಡುಕಿದರೂ ಸಿಂಚನಳ ಪತ್ತೆಯೇ ಇಲ್ಲದೆ ಉಳಿದವರು ಬೆವರಲು ಪ್ರಾರಂಭಿಸಿದರು.‌ಕಾಡು ದಾರಿಯಲ್ಲಿ 'ಸಿಂಚನಾ' ಎಂದು ಕರೆಯುತ್ತಾ ಬಂದರೂ ಎಲ್ಲೂ ಅವಳ ಸುಳಿವು ಸಿಗಲಿಲ್ಲ. ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ ಎಂಬ ಸಂದೇಶ ಬರುತಿತ್ತು. ಮುಂದೇನೂ ಮಾಡಬಹುದೆಂದು ಚರ್ಚಿಸಿದರು. ಇವತ್ತೊಂದು ದಿನ ಇಲ್ಲಿಯೇ ಹುಡುಕೋಣ ಎಂದು ಅನಿಲ್ ಹೇಳಿದರೆ, ನಮ್ಮ ಒಟ್ಟಿಗೆ ಅವಳು ಬರಲೇ ಇಲ್ಲ ಅಂತ ಹೇಳೋಣವೆಂದು ರಾಹುಲ್ ಹೇಳಿದ. ಇಬ್ಬರ ಮಾತಿನಂತೆ ಆದಿನವೆಲ್ಲಾ ಎಲ್ಲರೂ ಸೇರಿ ಸಿಂಚನಳನ್ನು ಹುಡುಕಿದರು. ಅವಳು ಸಿಗಲಿಲ್ಲವೆಂದು ತಮ್ಮ ಆಲೋಚನೆಯಂತೆ ಅವಳು ನಮ್ಮೊಂದಿಗೆ ಬರಲಿಲ್ಲವೆಂದು ಹೇಳೋಣ ಅಂತ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ತಮ್ಮ ತಮ್ಮ ಮನೆಗೆ ಹೋದರು.

*************************************ಸಿಂಚನಾಳನ್ನು ಕೇಳಿಕೊಂಡು ಯಾರ ಪೋನ್ ಬಾರದೆ ಇರುವುದರಿಂದ ಎಲ್ಲರೂ ಎರಡು ದಿನ ಸಮಾಧಾನದಿಂದ ಇದ್ದರು. ಮೂರನೆಯ ದಿನ ಎಲ್ಲರ ಮೊಬೈಲ್‌ ಗೂ ಸಿಂಚನಳ ಮೊಬೈಲ್ ನಿಂದ "ನಾ ಬಂದೆ" ಎಂಬ ಸಂದೇಶವನ್ನು ಓದಿ ಎಲ್ಲರೂ ಹೆದರಿದರು.ಈ ಬಗ್ಗೆ ಚರ್ಚಿಸಲು ವಿಕ್ಕಿಯ ಮನೆಯೇ ಸೂಕ್ತ. ಅವನ ಮನೆ ಊರಿನಿಂದ ಹೊರಗಿರುವುದಲ್ಲದೇ, ಬೇರೆ ಯಾರು ಇರುವುದಿಲ್ಲ ಎಂದು ವಿಕ್ಕಿಯ ಮನೆಗೆ ಬಂದರು. ರಾತ್ರಿ ಎಂಟರ ಹೊತ್ತು ಎಲ್ಲರೂ ಒಟ್ಟಾಗಿ ಬಂದು ಮನೆಯೊಳಗೆ ಕಾಲಿಡುತ್ತಿದ್ದಂತೆ ಬಾಗಿಲು ದಡಾರ್ ಎಂದು ಮುಚ್ಚಿಕೊಂಡಿತು‌. ಜೋರಾಗಿ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ.ಟ್ಯೂಬ್ ಲೈಟ್ ಹೋಗೋದು ಬರೋದು ಮಾಡುತ್ತಿತ್ತು. ಒಮ್ಮೆಲೇ ಕತ್ತಲೆಯಾವರಿಸಿ ಬಾಗಿಲು ತೆರೆದುಕೊಂಡಿತು.


ಒಳಗಿದ್ದವರೆಲ್ಲಾ ಆತಂಕದಿಂದ ಬಿಗಿ ಹಿಡಿದಿದ್ದ ಉಸಿರನ್ನು ಬಿಟ್ಟು ಸುಧಾರಿಸಿಕೊಂಡರು. ಇನ್ವರ್ಟರ್ ನಿಂದ ಪವರ್ ಖಾಲಿಯಾಗಿದೆ ಎಂದು "ಬಿಪ್" ಸದ್ದು ಕೇಳಿಸುತ್ತದೆ. ಅದನ್ನು ಸಧ್ಯಕ್ಕೆ ಉಪಯೋಗಿಸಲಾಗದು ಎಂದು ಮೇಣದಬತ್ತಿ ಹುಡುಕಲು ಹೆಜ್ಜೆ ಇಡುತ್ತಿದ್ದ ವಿಕ್ಕಿ. ಕಾಲಿಗೆ ಏನೋ ಅಡ್ಡಬಂದಂತಾಗಿ ಜೋರಾಗಿ ಕಿರುಚಿದ. ನಿಶ್ಯಬ್ಧ ವಾತಾವರಣದಲ್ಲಿ ಅವನ ಕೂಗು ಪ್ರತಿಧ್ವನಿಸಿದಾಗ ಎಲ್ಲರೂ ಅಂಜಿಕೆಯಿಂದಲೇ ಕೈ ಕೈ ಹಿಡಿದು ನಿಂತರು. ಅಷ್ಟರಲ್ಲಿ ರಾಹುಲ್ ಮೊಬೈಲ್ ಗೆ ಫೋನ್ ಬಂತು. ಮೊದಲೇ ಹೆದರಿದ್ದ ಎಂಟು ಜನರು ಆ ಶಬ್ದಕ್ಕೆ ಮತ್ತಷ್ಟು ಹೆದರಿದರು. 


ವಿಕ್ಕಿ ಎಲ್ಲರಿಗೂ ಜ್ಯೂಸ್ ತರಲೆಂದು ಅಡುಗೆಯ ಕೋಣೆಗೆ ಹೋದ.ಉಳಿದವರು ಅವನ ಹಿಂದೆಯೇ ಹೋದರು. ಫ್ರಿಡ್ಜ್ ಒಪನ್ ಮಾಡಿ ಜ್ಯೂಸ್ ಬಾಟಲ್ ತೆಗೆಯಲೆಂದು ಹೋದಾಗ ಫ್ರಿಡ್ಜ್ ಬಾಗಿಲಲ್ಲಿ ರಕ್ತದ ಕಲೆ ಕಾಣಿಸಿತು.ಜ್ಯೂಸ್ ಬಾಟಲ್ ನಲ್ಲೂ ರಕ್ತವನ್ನು ಕಂಡು ಗೀತಾ ಮತ್ತು ಸುಮ ಬಾಟಲ್ ಬಿಸಾಡಿ ಕೂಗಾಡಿದರು. "ನಿಜ ಹೇಳು ವಿಕ್ಕಿ ಸಿಂಚನ ಎಲ್ಲಿ ? ಈ ರಕ್ತ ಎಲ್ಲಿಂದ ಬಂತು ಹೇಳು‌?" ಎಂದು ಉಳಿದವರು ವಿಕ್ಕಿಯನ್ನು ತರಾಟೆಗೆ ತೆಗೆದುಕೊಂಡರು.

ನಾನೇನು ಮಾಡಲಿಲ್ಲ, ನನಗೇನು ಗೊತ್ತಿಲ್ಲ ಎಂದರೂ ವಿಕ್ಕಿಯ ಮಾತುಗಳನ್ನು ಯಾರು ನಂಬಲಿಲ್ಲ. ವಿಕ್ಕಿ ತನ್ನ ಕೋಣೆಗೆ ಹೋಗಿ ಬೀರುವಿನಲ್ಲಿಟ್ಟ ಸಿಂಚನಳ ಹಲವಾರು ಭಾವಚಿತ್ರವನ್ನು ಹೊರ ತೆಗೆದು ಕಣ್ಣೀರು ಹಾಕಿದ.

'ಸಿಂಚು ನನ್ನನ್ನು ಬಿಟ್ಟು ಯಾಕೆ ಹೋದೆ?' ಎಂದಾಗ ವಿಕ್ಕಿಯ ಮಾತು ಕೇಳಿ ಅಲ್ಲಿದ್ದವರು ಒಂದು ಕ್ಷಣ ಆಶ್ಚರ್ಯಪಟ್ಟರು. ಅಂದರೆ "ನೀನು ಸಿಂಚನಳನ್ನು ಪ್ರೀತಿಸುತ್ತಿದ್ದೆಯಾ?" ಎಂದು ಗೀತಾ ಕೇಳಿದಾಗ "ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ" ಎಂದನು ವಿಕ್ಕಿ.


"ನೀನು ಏನು ಹೇಳ್ತಾ ಇದ್ದಿಯ ಗೊತ್ತಿದೆಯಾ ನಿನಗೆ ವಿಕ್ಕಿ?" ಎಂದು ಗೀತಾ ಕೇಳಿದಾಗ, "ನಾನು ಸಿಂಚನಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದೆ‌. ಆದರೆ ಅವಳು ಕಿರಣ್ ನನ್ನು ಇಷ್ಟ ಪಡುತ್ತಾಳೆಂದು ತಿಳಿದು ನನ್ನ ಪ್ರೀತಿಯನ್ನು ಬಚ್ಚಿಟ್ಟೆ. ಸ್ನೇಹಿತರಾಗಿಯಾದರು ಇರೋಣವೆಂದು ಏನೂ ಹೇಳದೆ ಗೆಳೆತನ ಕಾಪಾಡಿದೆ. ಆದರೆ ನಮ್ಮಲ್ಲಿ ಯಾರೋ ಅವಳಿಗೆ ತೊಂದರೆ ಕೊಟ್ಟಿದ್ದಾರೆ. ಅವಳು ಸಾಯುವ ಹಾಗೆ ಮಾಡಿದ್ದಾರೆ" ಎಂದು ಕಣ್ಣೀರು ಹಾಕಿದ.

ಸಿಂಚನ ಸತ್ತು "ಆತ್ಮ" ಆಗಿರಬಹುದೇ ? ಎಂದು ಎಲ್ಲಾ ಮಾತನಾಡಿಕೊಂಡರು. ಸಿಂಚನಳನ್ನು ಕೇಳಿಕೊಂಡು ಆಗಲಿ, ನಮ್ಮನ್ನು ಭೇಟಿ ಮಾಡಲು ಕಿರಣ್ ಬಾರದಿರುವುದು ನೋಡಿದರೆ ಕಿರಣ್ ಕೈವಾಡ ಇದರಲ್ಲಿರಬಹುದು ಎಂದು ಗೀತಾ ಹೇಳಿದಾಗ ಉಳಿದವರು ಹುಂ ಗುಟ್ಟಿದರು.

ತಮ್ಮ ಜೀವಕ್ಕೇನು ಅಪಾಯ ಆಗದೆ ಇದ್ದದ್ದು ಮತ್ತು ಈ ಊರಿನಲ್ಲಿ ಇದ್ದರೆ ನಮ್ಮ ಮೇಲೆ ಅನುಮಾನ ಬರುವುದೆಂದು ಎಲ್ಲರೂ ಈ ಊರು ಬಿಡಲು ತೀರ್ಮಾನಿಸಿ ಅವರ ಮನೆಗೆ ಹೋದರು.

ಎಫ್ ಎಮ್ ರೇಡಿಯೋದಿಂದ ಹಾಡು ಕೇಳುತ್ತಾ ಸುನಿಲ್ ಒಬ್ಬನೇ ತನ್ನ ಮನೆಯ ದಾರಿ ಹಿಡಿಯುತ್ತಿದ್ದ.ಹಲ್ಲುಗಳನ್ನು ಕಚ್ಚಿದಾಗ ಬರುವ ಕಟ್ ಕಟ್ ಎಂಬ ಶಬ್ದ ತನ್ನ ಹಿಂದಿನಿಂದ ಬರುವುದನ್ನು ಕೇಳಿ ಹಿಂದಿರುಗಿ ನೋಡಿದ ಸುನಿಲ್. ತನ್ನ ಬಿಟ್ಟು ಕಾರಿನಲ್ಲಿ ಬೇರೆ ಯಾರು ಇಲ್ಲವೆಂದು ನೆನಪಾಗಿ , ಎಲ್ಲೋ ರೇಡಿಯೋದಲ್ಲೇ ತಾಂತ್ರಿಕ ತೊಂದರೆ ಇರಬಹುದು ಎಂದು ಸುಮ್ಮನಾದ. ಮತ್ತೊಮ್ಮೆ ಇದೇ ತರಹ ಶಬ್ದ ಬಂದಾಗ ಕಿರಿಕಿರಿಯಾಗಿ ರೇಡಿಯೋವನ್ನು ನಿಲ್ಲಿಸಿ, ಕೂದಲು ಸರಿಪಡಿಸಲು ತನ್ನೆದುರಿನಲ್ಲಿರುವ ಕನ್ನಡಿಯಲ್ಲಿ ಕಣ್ಣು ಹಾಯಿಸಿದ ಸುನಿಲ್. ಸೀಳಿರುವ ತುಟಿಯೊಂದಿಗೆ ರಕ್ತ ತುಂಬಿದ ಹೆಣ್ಣಿನ ಆಕೃತಿ ಕಂಡು ಹೆದರಿ ಒಮ್ಮೆಲೇ ಬ್ರೇಕ್ ಹಾಕಿದ. ನೂರಿಪ್ಪತ್ತು ಕಿಮೀ ಸ್ಪೀಡ್ ನಲ್ಲಿ ಹೋಗುತ್ತಿದ್ದ ಕಾರು ಸಡನ್ ಬ್ರೇಕ್ ಹಾಕಿದಾಗ ಸ್ಕಿಡ್ ಆಗಿ ಹತ್ತಿರದಲ್ಲೇ ಇದ್ದ ಮರಕ್ಕೆ ಬಡಿಯಿತು.ಸೀಟ್ ಬೆಲ್ಟ್ ಹಾಕದ ಸುನಿಲ್'ನ ತಲೆ ಸ್ಟೇರಿಂಗ್ ಗೆ ಬಡಿದು ರಕ್ತಸ್ರಾವವಾಗಿ ಅಲ್ಲೇ ಪ್ರಾಣಕಳೆದುಕೊಂಡ.

*************************************

" ಕುಡಿದ ಮತ್ತಿನಲ್ಲಿ ವಿಪರೀತ ವೇಗವಾಗಿ ಗಾಡಿ ಓಡಿಸಿದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿ ಸುನಿಲ್ ಎಂಬಾತನ ಸಾವು " ಎಂಬ ಶೀರ್ಷಿಕೆ ನೋಡಿ ಯಾರಿರಬಹುದು ಇಂಜಿನಿಯರಿಂಗ್ ವಿದ್ಯಾರ್ಥಿ ? ಎಂದು ತೇಜಸ್ ಪೋಟೋ ನೋಡಿದ. ಹಿಂದಿನ ರಾತ್ರಿ ತನ್ನೊಂದಿಗೆ ಇದ್ದ ಆತ್ಮೀಯ ಗೆಳೆಯ ಸುನಿಲ್ ನ ಪೋಟೋ...

ಒಂದು ಕ್ಷಣ ಉಸಿರು ನಿಂತಂತಾಗಿ ಹೆದರಿದ ತೇಜಸ್. ತಕ್ಷಣ ಎಲ್ಲರಿಗೂ ಪೋನ್ ಮಾಡಿ ಸುನಿಲ್ ಸಾವಿನ ಸುದ್ದಿ ತಿಳಿಸಿದ. ಈಗಾಗಲೇ ಎಲ್ಲರೂ ಊರು ಬಿಡಲು ತಯಾರಿ ನಡೆಸುತ್ತಿದ್ದರು. ಸುನಿಲ್ ಸಾವಿನ ವಿಷಯ ತಿಳಿದು ಮತ್ತೊಮ್ಮೆ ವಿಕ್ಕಿಯ ಮನೆಯಲ್ಲಿ ಸೇರಿದರು.

ಎಲ್ಲರ ಮುಖದಲ್ಲೂ ಕಳವಳ. ಸಿಂಚನ ಸತ್ತು ಪ್ರೇತಾತ್ಮವಾಗಿದ್ದಾಳೆ.ಯಾರೋ ಕೊಲೆ ಮಾಡಿ ಅವಳ ದೇಹವನ್ನು ಹೂತು ಹಾಕಿದ್ದಾರೆ. ನಮ್ಮಿಂದ ಅವಳಿಗೆ ಅನ್ಯಾಯವಾಗಿದೆ ಅದಕ್ಕೆ ಅವಳು ನಮ್ಮೆಲ್ಲರನ್ನು ಸಾಯಿಸಲು ನೋಡುತ್ತಿದ್ದಾಳೆ. ಸೇಡು ತೀರಿಸಿಕೊಳ್ಳುತ್ತಿದ್ದಾಳೆ ಎಂದು ಗೀತಾ ಹೇಳಿದಾಗ ಅಡುಗೆ ಮನೆಯಿಂದ ಪಾತ್ರೆಗಳು ಬೀಳುವ ಸದ್ದು ಕೇಳಿಸಿತು.ಸದ್ದು ಬಂದ ಕಡೆ ಹೋಗಿ ನೋಡಿದರೆ, ಗೋಡೆಯ ಮೇಲೆ ರಕ್ತದಿಂದ "ಸುಮ" ಎಂದು ಬರೆದದ್ದು ನೋಡಿ ಎಲ್ಲರೂ ಗಡಗಡನೇ ನಡುಗಿದರು. ಸುಮ ಅಂತೂ ವರುಣ್ ಕೈ ಹಿಡಿದು ಅಳಲು ಪ್ರಾರಂಭಿಸಿದಳು. ನನ್ನನ್ನು "ಕಾಪಾಡಿ ಪ್ಲೀಸ್" ಎಂದು ಎಲ್ಲರಿಗೂ ಹೇಳುತ್ತಿದ್ದಳು. ವಿಕ್ಕಿ ಎಲ್ಲರನ್ನೂ ಉದ್ದೇಶಿಸಿ "ತಡರಾತ್ರಿಯಾಗಿದೆ ಇನ್ನೂ ಯಾರು ಹೊರಗೆ ಹೋಗುವುದು ಬೇಡಾ. ಆರ್ಡರ್ ಮಾಡಿ ತಂದ ಊಟ ರೆಡಿ ಇದೆ,ಊಟ ಮಾಡಿ ಎಲ್ಲರೂ ಇಲ್ಲೇ ಮಲಗೋಣ" ಎಂದು ಹೇಳಿದ.ಊಟ ಮುಗಿಸಿದ ಎಲ್ಲರೂ ಮಲಗಲು ಹೊರಟರು. ಸುಮಾ, ಗೀತಾ ಇಬ್ಬರ ಆಚೆ ಈಚೆ ವರುಣ್ ಮತ್ತು ಅನಿಲ್ ಮಲಗಿದರೆ ರಾಹುಲ್, ತೇಜಸ್, ವಿಕ್ಕಿ ಸೋಫಾದಲ್ಲಿ ಮಲಗಿದರು.

ನಡುರಾತ್ರಿಯಲ್ಲಿ ಕರೆಂಟ್ ಆಫ್ ಆಯಿತು. ಸುತ್ತಲೂ ಕತ್ತಲು,ಬೆಕ್ಕು ಅಳುವ ಧ್ವನಿ ಕೇಳಿ ಎಲ್ಲರೂ ಎಚ್ಚರವಾದರು. ಕತ್ತಲೆಯನ್ನು ಕಂಡು, "ಈಗಲೇ ಪವರ್ ಹೋಗಬೇಕಾ ? ಎಂದು ಬೈಯುತಿರುವಾಗಲೆ, ತೋಳ ಊಳಿಡುವ ಧ್ವನಿ ಕೇಳಿ ಎಲ್ಲರೂ ಜಾಗ್ರತರಾದರು. ಒಮ್ಮೆಲೆ ಎಲ್ಲಾ ದೀಪಗಳು ಉರಿದವು. ಕಣ್ಣು ಮುಚ್ಚಿ ಬಿಡುವ ಹೊತ್ತಿನಲ್ಲಿ ಯಾವುದೋ ಶಕ್ತಿ ಸುಮಳನ್ನು ದರದರನೇ ಮೂರು ಸುತ್ತು ತಿರುಗಿಸಿ ಕೆಳಗೆ ಬಿಸಾಡಿಯಾಗಿತ್ತು. ಅವಳ ಚೀರಾಟ ಕಂಡು ಎಲ್ಲರ ಎದೆ ನಡುಗುತಿತ್ತು....!!

ಕೆಳಗೆ ಬಿದ್ದಿದ್ದ ಅವಳನ್ನು ವರುಣ್ ಎತ್ತಿ ಹಿಡಿದು ಏನು ಆಗದಂತೆ ತಬ್ಬಿಕೊಂಡು ನಿಂತ.ಅಷ್ಟರಲ್ಲಿ ಟ್ಯೂಬ್ ಲೈಟ್ ಗಳು ಒಂದೊಂದಾಗಿ ಒಡೆದು ಹೋದವು. ಗಾಜಿನ ತುಂಡು ಗಾಳಿಗೆ ಹಾರಿ ಬಂದು ಸುಮಾಳ ಮುಖದ ಮೇಲೆ ಗಾಯ ಮಾಡಿದವು.

ರಕ್ತ ನೀರಿನಂತೆ ಹರಿಯುತಿತ್ತು....!!

ನೋವು ತಡೆಯಲಾರದೆ ಸುಮ ಬೊಬ್ಬೆ ಹಾಕುವುದು ಕೇಳಲಾಗುತಿರಲಿಲ್ಲ. ಯಾರು? ಯಾವ ಕಡೆಯಿಂದ ‌ಪ್ರಹಾರ ಮಾಡುತ್ತಿದ್ದಾರೆ? ಎಂದು ತಿಳಿಯದೆ ಎಲ್ಲರೂ ಗಲಿಬಿಲಿ, ಹೆದರಿಕೆಯಿಂದ ಬೆವರುತ್ತಿದ್ದರು.

ಸುಮಳನ್ನು ಅಷ್ಟಕ್ಕೇ ಸುಮ್ಮನೆ ಬಿಡದೇ ಅವಳ ಕೈಯನ್ನು ತಿರುಚಿತು. ಹೊರಗಿನಿಂದ ಕಾರು ಸ್ಟಾರ್ಟ್ ಆದ ಸದ್ದು ಕೇಳಿದ್ದೆ ತಡ ಸುಮ ಗಾಳಿಗೆ ಹಾರಿ ಹೋದಂತೆ ಕಾರಿನ ಡ್ರೈವಿಂಗ್ ಸೀಟ್ ನಲ್ಲಿ ಕೂತಳು.ಉಳಿದವರು ಅವಳನ್ನು ತಡೆಯಲು ಹೋದಾಗ ಮನೆಯ ಹೊರಗಿನಿಂದ ಬಾಗಿಲು ಲಾಕ್ ಆಯಿತು. ಕಾರು ತುಂಬಾ ಸ್ಪೀಡ್ ಆಗಿ ಹೋಗಿ ನಿಂತಿದ್ದ ಟ್ಯಾಂಕರ್ ಗೆ ಗುದ್ದಿತು. ಗುದ್ದಿದ ರಭಸ ಹಾಗೂ ಮೊದಲೇ ಹೆದರಿದ್ದರಿಂದ ಹೃದಯಾಘಾತದಿಂದ ಸುಮ ಸಾವನ್ನಪ್ಪಿದಳು.

*************************************

"ನೀವು ಮಾಡಿರುವ ಉಪಕಾರ ಯಾವತ್ತೂ ಮರೆಯೋ ಹಾಗಿಲ್ಲ, ಆದರೆ ನನ್ನ ಸೇಡು ಮುಗಿಯಲಿಲ್ಲ ಬಾಬಾ. ಇನ್ನೂ ಕೆಲವರಿದ್ದಾರೆ. ನನ್ನ ಜೀವನ ಹಾಳು ಮಾಡಿದ ಯಾರನ್ನೂ ಬಿಡದೆ ಅವರ ಜೀವನದ ಅಂತ್ಯ ಮಾಡಬೇಕು ಬಾಬಾ" ಎಂದು ಅವರಲ್ಲಿ ಹೇಳಿದೆ. ಸನ್ಯಾಸಿಗಳು ನೋವು, ನಲಿವು, ಸುಖ ಯಾವುದಕ್ಕೂ ಜಗ್ಗದ ಜನಗಳು. ನನ್ನ ಕಣ್ಣೀರು ನೋಡಿ ಕರಗಿದ ಬಾಬಾ ನನಗೆ ಮುಂದೆಯೂ ಸಹಾಯ ಮಾಡಲು ಒಪ್ಪಿದರು.

*************************************

ಬೆಳಗಾಗುತ್ತಿದ್ದಂತೆ ಲಾಕ್ ಆಗಿದ್ದ ಬಾಗಿಲು ತೆರೆಯಿತು. ಹೊರ ಬಂದು ನೋಡಿದರೆ ಸುಮ ಬಂದ ಕಾರು ಇರಲಿಲ್ಲ. ಅವಳ ಕಾರನ್ನು ಹುಡುಕಿಕೊಂಡು ಹೋದಾಗ ದಾರಿಯಲ್ಲಿ ಜನ ಸಾಗರದಂತೆ ತುಂಬಿದ್ದರು. ಏನಾಗಿದೆ ಎಂದು ನೋಡಲು ಹೋದ ವಿಕ್ಕಿ ಮತ್ತು ವರುಣ್ ಕಾರಿನೊಳಗೆ ಸುಮಳನ್ನು ಕಂಡರು. ಅವಳ ಪ್ರಾಣಪಕ್ಷಿ ಹಾರಿ ತುಂಬಾ ಹೊತ್ತಾಗಿದೆಯೆಂದು ಅವಳ ದೇಹ ನೋಡಿದಾಗಲೇ ತಿಳಿದ ವಿಕ್ಕಿ, ಜನರ ಎದುರಿಗೆ ಯಾವ ಮಾತುಗಳು ಬೇಡವೆಂದು ವರುಣ್ ನನ್ನು ಎಳೆದುಕೊಂಡು ಬಂದ. 

ಮನೆಯೊಳಗೆ ಬಂದದ್ದೆ ತಡ ವರುಣ್ ಹುಚ್ಚನಂತೆ ಅಳಲು ಪ್ರಾರಂಭಿಸಿದ.ಅವನನ್ನು ಸಮಾಧಾನ ಮಾಡಿದರೂ ಎಲ್ಲರಿಗೂ ತಮ್ಮ ಪ್ರಾಣದ ಭಯವಿತ್ತು. ಹಾಗಾಗಿ ಸುಮಳ ವಿಚಾರ ಬಿಟ್ಟು ಅವರವರ ಜೀವ ಉಳಿಸುವ ವಿಚಾರ ಮಾತನಾಡಲು ಪ್ರಾರಂಭಿಸಿದರು.

*************************************

"ನನ್ನ ಇವತ್ತಿನ ಸ್ಥಿತಿಗೆ ಮುಖ್ಯ ಕಾರಣ ಒಬ್ಬನಿದ್ದಾನೆ ಬಾಬಾ. ಅವನ ಸಾವನ್ನು ನಾನು ನೋಡಬೇಕು.." ಎಂದು ಹೇಳಿದೆ. ಎಲ್ಲವೂ ಬಿಟ್ಟ ಸನ್ಯಾಸಿಗೆ ಅದೇನು ಅಕ್ಕರೆಯೋ ನನ್ನ ಮೇಲೆ. ನಾನು ಕೇಳಿದ ತಕ್ಷಣ ನನ್ನಿಚ್ಛೆಯಂತೆ ನಡೆಯುತ್ತಿದ್ದರು.ಮುಂದಿನ ಬೇಟೆಗಾಗಿ ಮರಣಮೃದಂಗ ಬಾರಿಸುತ್ತಿದ್ದೆ.

*************************************

ಸಿಂಚನಳಿಗೆ ನಮ್ಮ ಆರು ಮಂದಿಯಲ್ಲಿ ಯಾರು ಏನು ತೊಂದರೆ ಮಾಡಿದ್ದೇವೆ ? ಅಂತ ಹೇಳಿ ಬಿಡ್ರೋ ಎಂದ ವಿಕ್ಕಿ.ನಮ್ಮಿಂದ ನೋವು, ಅಪಕಾರ ಆಗಿದ್ದರೆ ನಾವೆಲ್ಲರೂ ಕ್ಷಮೆ ಕೇಳಿ ಅವಳ ಆತ್ಮಕ್ಕೆ ಶಾಂತಿಯಾದರೂ ಕೋರೋಣ, ನಮ್ಮ ಜೀವ ಉಳಿಸಿಕೊಳ್ಳೋಣ ಎಂದು ವಿಕ್ಕಿ ಹೇಳಿದಾಗ ಎಲ್ಲರೂ ಒಪ್ಪಿದರು.

ಸುಮ ಹೇಳಿದ ಕಾರಣ ನಾನು ಕೋಕಾ ಕೋಲಾಕ್ಕೆ ಸ್ವಲ್ಪ ಡಿಂಕ್ಸ್ ಬೆರೆಸಿದೆ. ತಮಾಷೆಗೆಂದು ನಾನು ಈ ರೀತಿಯಲ್ಲಿ ಮಾಡಿದೆ ಅಷ್ಟೇ ನನ್ನ ತಪ್ಪು ಎಂದು ತೇಜಸ್ ತಪ್ಪೊಪ್ಪಿಕೊಂಡ. ಅಂದರೆ ಆ ರಾತ್ರಿ ಸುಮ ಮತ್ತು ಸುನಿಲ್ ಇಬ್ಬರಿಂದ ಏನೋ ತೊಂದರೆ ಆಗಿದೆ ಸಿಂಚನಳಿಗೆ ಅದಕ್ಕೆ ಅವರ ಪ್ರಾಣ ತೆಗೆದಿದ್ದಾಳೆ ಎಂದು ಅನಿಲ್ ಹೇಳಿದ.ಆ ಮಾತು ಕೇಳಿದ ತೇಜಸ್ ಭಯಭೀತನಾದ.

ನನ್ನ ಸಾವು ತಡೆಯಬೇಕೆಂದರೆ ನಾನು ಈ ಊರು ಬಿಟ್ಟು ಹೋಗಬೇಕು ಎಂದು ಕಾರಿನ ಕೀ ಹಿಡಿದು ತೇಜಸ್ ಹೊರಟು ಹೋದ. ಕೇರಳದ ಪಂಚತಾರ ಹೋಟೆಲ್ ಗೆ ಬಂದ ತೇಜಸ್ ಸುಸ್ತಾಗಿರುವುದರಿಂದ ಸ್ನಾನ ಮಾಡಿ ತಿಂಡಿಗೆ ಆರ್ಡರ್ ಮಾಡಿದ. ತಿಂಡಿ ತಿಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದ. ಸ್ವಲ್ಪ ಹೊತ್ತಿನಲ್ಲಿ ಮಂಚದ ಕೆಳಗಿನಿಂದ ಮೇಲಕ್ಕೆ ಬಂದ ಎರಡು ಕೈಗಳು ತೇಜಸ್ ನನ್ನು ಗಟ್ಟಿಯಾಗಿ ಹಿಡಿದುಕೊಂಡವು. ಎಷ್ಟೇ ಪ್ರಯತ್ನ ಪಟ್ಟರೂ ಬಿಡಿಸಿಕೊಳ್ಳಲಾಗದೆ ಒದ್ದಾಡಿದ‌.ಕೂಗಿ ಯಾರನ್ನಾದರೂ ಕರೆಯೋಣವೆಂದರೆ ಸ್ವರವೂ ಹೊರಬರದೆ ಹೊರಳಾಡಿದ. ತಕ್ಷಣ ದೇವರ ನೆನಪಾಗಿ ಹನುಮಾನ್ ಚಾಲೀಸಾ ಹೇಳಲು ಪ್ರಾರಂಭಿಸಿದ. ಅವನು ಹೇಳುವುದನ್ನು ನಿಲ್ಲಿಸಿದಾಕ್ಷಣ ಮೇಲಿನಿಂದ ಕೆಳಗೆ, ಆಚೆಯಿಂದ ಈಚೆ ಗೋಡೆಗೆ ಬಲವಾಗಿ ದೂಡಿದ ಶಕ್ತಿಯು ತನ್ನ ಸೇಡು ತೀರಿಸಿಕೊಳ್ಳುತಿತ್ತು. ಮೇಲಿನಿಂದ ಕೆಳಗೆ ಬಿದ್ದ ರಭಸಕ್ಕೆ ತೇಜಸ್ ಬೆನ್ನ ಮೂಳೆಗಳು ಪುಡಿ ಪುಡಿಯಾದವು. ಸ್ವಲ್ಪ ಸಮಯದಲ್ಲಿ ಎಲ್ಲವೂ ಶಾಂತವಾಯಿತು. ಎದ್ದು ಹೊರಗೆ ಹೋಗಲು ಸಾಧ್ಯವಿಲ್ಲದೆ ಮಂಚದ ಮೇಲೆ ಹಾಗೆಯೇ ಮಲಗಿದ.ಕಣ್ಣು ಮುಚ್ಚುವುದರೊಳಗೆ ಸೀಲಿಂಗ್ ಫ್ಯಾನ್ ತೇಜಸ್ ನ ತಲೆಯ ಮೇಲೆ ಬಿದ್ದು ಅವನ ಪ್ರಾಣಪಕ್ಷಿ ಹಾರಿಹೋಯಿತು.

ಎರಡು ದಿನವಾದರೂ ತೇಜಸ್ ರೂಮ್ ಬಾಗಿಲು ತೆಗೆಯದ ಕಾರಣ ಮೆನೇಜರ್ ಡ್ಯೂಪ್ಲಿಕೇಟ್ ಕೀ ಬಳಸಿ ಕೋಣೆಯ ಬಾಗಿಲು ತೆಗೆಸಿದ. ಗೋಡೆಯ ಮೇಲೆಲ್ಲಾ ರಕ್ತದ ಕಲೆಗಳು ನೋಡಿ ಹೆದರಿ ಕೂಡಲೇ ಪೋಲಿಸಿನವರಿಗೆ ಕರೆ ಮಾಡಿ ವಿಷಯ ತಿಳಿಸಿದ. ಪೋಲೀಸ್ ಅಧಿಕಾರಿಗಳಿಗೂ ಬೇರೆ ಯಾವುದೇ ಕುರುಹು ಸಿಗದೆ ಫ್ಯಾನ್ ಮೇಲಿನಿಂದ ಬಿದ್ದು ಆಕಸ್ಮಿಕವಾಗಿ ಸಾವು ಸಂಭವಿಸಿತು ಎಂದು ರಿಪೋರ್ಟ್ ಮಾಡಿದರು. ಹಾಗೂ ತೇಜಸ್ ಗೆಳೆಯರಿಗೆ ಅವನ ಸಾವಿನ ಬಗ್ಗೆ ಮಾಹಿತಿಯನ್ನು ನೀಡಿದರು.

ಗೀತಾ, ವರುಣ್, ವಿಕ್ಕಿ, ರಾಹುಲ್ ವಿಷಯ ತಿಳಿದು ಹೌಹಾರಿದರು. "ಸಿಂಚನಳಿಗೆ ನೋವು ಕೊಟ್ಟ ಎಲ್ಲರ ಬಲಿ ಪಡೆದಿದ್ದಾಳೆ;ಇನ್ನಾದರೂ ನಮ್ಮನ್ನು ಬದುಕಲು ಬಿಡುವಳೆ ಅವಳು ?" ಎಂದ ವರುಣ್. ಅವನ ಮಾತಿಗೆ ಮೌನವಾದ ರಾಹುಲ್ ನನ್ನು ಕಂಡ ವಿಕ್ಕಿ ಅವನ ಶರ್ಟಿನ ಕಾಲರ್ ಹಿಡಿದು "ನಿಜ ಹೇಳು‌ ರಾಹುಲ್, ಸಿಂಚನಳಿಗೆ ನೀನೇನು ಮಾಡಿದೆ?" ಎಂದು ಕೇಳಿದ.


"ಅವತ್ತು ಕಾಲೇಜಿನಲ್ಲಿ "ಟ್ರೇಡಿಷನಲ್ ಡೇ " ದಿನ ಸಿಂಚನ ಸಾರಿ ಉಟ್ಟು ಗೊಂಬೆಯ ತರಹ ಕಾಣುತ್ತಿದ್ದಳು.ಅವಳ ಆಕರ್ಷಕ ಮೈಕಟ್ಟು ನನ್ನನ್ನು ಹುಚ್ಚು ಹಿಡಿಸುತಿತ್ತು. ನನ್ನ ಪ್ರೀತಿಯನ್ನು ಅವಳಿಗೆ ಹೇಗಾದರೂ ತಿಳಿಸಬೇಕೆಂದು ಪ್ರಯತ್ನ ಪಟ್ಟೆ. ಅವಳ ಸುತ್ತಲೂ ಸ್ನೇಹಿತರ ಹಿಂಡು ಬೇರೆ ಇತ್ತು. ಅವಳ ಬಳಿ ನನ್ನ ಪ್ರೀತಿಯ ಬಗ್ಗೆ ಹೇಳಿದಾಗ ಒಪ್ಪದಿದ್ದರೆ ಕಾಲೇಜಿನಲ್ಲಿ ನನ್ನ ಮರ್ಯಾದೆ ಹೋಗುವುದೆಂದು ಸುಮ್ಮನಾದೆ, ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದೆ. ಅಷ್ಟರಲ್ಲಿ ವಿಕ್ಕಿ ಅವಳನ್ನು ಪ್ರೀತಿಸುವ ವಿಷಯ ತಿಳಿಯಿತು. ವಿಕ್ಕಿ ಅವಳ ಗೆಳೆಯರ ಬಳಗದಲ್ಲಿ ಇದ್ದುದ್ದರಿಂದ ವಿಕ್ಕಿಯ ಸ್ನೇಹ ಸಂಪಾದಿಸಿದೆ. ಅವಳೊಂದಿಗೆ ಪ್ರೀತಿಯನ್ನು ಹೇಳಿಕೊಳ್ಳದಿದ್ದರೂ ಅವಳ ಜೊತೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತದೆ ಎನ್ನುವ ಹುಚ್ಚು ಆಸೆಯಿಂದ ಅವಳಿಗಾಗಿ ಪಾರ್ಟಿ ಮಾಡಿ ಬೇಕಾದಷ್ಟು ಹಣ ಹಾಳು ಮಾಡಿದೆ. ಹಗಲು ರಾತ್ರಿ ಕನಸಿನಲ್ಲಿ ಕಾಡುತ್ತಿದ್ದಳು ಸಿಂಚನ. ಕಾಲೇಜಿನಲ್ಲಿ ಟಾಪರ್ ಆಗಿದ್ದ ನಾನು ಜಸ್ಟ್ ಪಾಸ್ ಆಗುವ ಹಂತಕ್ಕೆ ತಲುಪಿದ್ದೆ. ಒಂದು ದಿನ ನನ್ನ ಪ್ರೀತಿಯನ್ನು ಕವನದ ರೂಪದಲ್ಲಿ ಬರೆದು ಸಿಂಚನಳಿಗೆ ಕೊಟ್ಟು ಅವಳ ಉತ್ತರಕ್ಕಾಗಿ ಕಾದೆ. ಇಷ್ಟವಿಲ್ಲವೆಂದು ಸುಮ್ಮನಿರದೆ ನನ್ನ ಮೇಲೆ ಪ್ರಾಂಶುಪಾಲರಿಗೆ ದೂರು ಕೊಟ್ಟಳು. ಪ್ರಾಂಶುಪಾಲರು ನನ್ನನ್ನು ಕರೆದು 'ಕಾಲೇಜ್ ಟಾಪರ್ ಎಂದು ಈ ಸಲ ಸುಮ್ಮನಿದ್ದೇನೆ,ಇದೇ ತರಹ ಮುಂದುವರಿದರೇ ಆಕ್ಷನ್ ತೆಗೆದುಕೊಳ್ಳುವೆ, ಡಿಬಾರ್ ಮಾಡುತ್ತೇನೆ' ಎಂದು ಪ್ರಾಂಶುಪಾಲರು ಹೇಳಿದರು.ಇಷ್ಟು ವರ್ಷ ಕಾಪಾಡಿಕೊಂಡು ಬಂದಿದ್ದ ಮರ್ಯಾದೆಯನ್ನು ಒಂದೇ ಕ್ಷಣದಲ್ಲಿ ತೆಗೆದಳು. ಸಿಂಚನಳ ವರ್ತನೆ ನನಗೆ ತುಂಬಾ ನೋವುಂಟು ಮಾಡಿತು.ದಿನೇ ದಿನೇ ನಾನು ಮೌನಿಯಾದೆ.

ನನ್ನಲ್ಲಿ ಯಾವುದೋ ನೋವಿದೆ ಎಂದು ತಿಳಿದ ವಿಕ್ಕಿ ಮತ್ತೆ ಮೊದಲಿನಂತೆ ಮನಸ್ಸು ಶಾಂತವಾಗಿರಲು ಜಾಗಿಂಗ್ ಮಾಡಲು ಸಲಹೆ ನೀಡಿದ.ಬೆಳಗಿನ ತಣ್ಣನೆಯ ಗಾಳಿಯಲ್ಲಿ ಜಾಗಿಂಗ್ ಮಾಡಿದ್ದರಿಂದಲೋ ಏನೋ ಮನಸ್ಸು ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಮತ್ತೆ ಮೊದಲಿನಂತೆ ಓದಿನ ಕಡೆ ಗಮನ ಕೊಡುತ್ತಿದ್ದೆ.ಪರೀಕ್ಷೆ ಮುಗಿದ ಸಂತೋಷದಿಂದ ಆ ದಿನ ಸ್ವಲ್ಪ ಬೇಗವೇ ಎದ್ದಿದ್ದೆ. ಸುಮ್ಮನೆ ಹೊರಳಾಡುವ ಬದಲು ಜಾಗಿಂಗ್ ಮಾಡಿ ಬರುತ್ತೇನೆಂದು ಬೇಗನೆ ಹೋದೆ. ನಸು ಕತ್ತಲಿನಲ್ಲಿ ಪ್ರೇಮಿಗಳಿಬ್ಬರೂ ಸರಸವಾಡುತ್ತಿದ್ದರು.ಎಲ್ಲೋ ಕೇಳಿದ ಧ್ವನಿಯೆಂದು ಮರೆಯಲ್ಲಿ ನಿಂತು ನೋಡಿದೆ. ಸಿಂಚನ ಬೇರೊಬ್ಬನ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಳು.ನನ್ನೆದೆಯಲ್ಲಿದ್ದ ಪ್ರೀತಿ ಸತ್ತು ಅವಳ ಮೇಲೆ ದ್ವೇಷ ಹುಟ್ಟಿತು. ಸರಿಯಾದ ಸಮಯಕ್ಕಾಗಿ ಒಂದು ವರ್ಷ ಕಾದೆ.ಕಿರಣ್ ಹಾಗೂ ಸಿಂಚನ ಪ್ರೀತಿಸುತಿರುವ ವಿಷಯ ತಿಳಿದಿದ್ದರಿಂದ ಅವರಿಬ್ಬರನ್ನು ಬೇರೆ ಮಾಡಬೇಕೆಂದು ಕಾಯುತ್ತಿದ್ದೆ. ಅವಳ ಹಾಗೂ ವಿಕ್ಕಿಯ ನಾನಾ ಬಗೆಯ ಪೋಟೋವನ್ನು ಎಡಿಟಿಂಗ್ ಮಾಡಿ ಅವನಿಗೆ ತೋರಿಸಿದೆ. ಅವನು ಅದನ್ನೆಲ್ಲಾ ನಂಬಲಿಲ್ಲ.ಕಿರಣ್ ಗೆ ಸಿಂಚನಳ ಮೇಲೆ ವಿಪರೀತ ಪ್ರೀತಿ ಹಾಗೂ ವಿಶ್ವಾಸವನ್ನು ಕಂಡು ನನ್ನೆದೆಯಲ್ಲಿದ್ದ ದ್ವೇಷದ ಕಿಡಿ ಮತ್ತೆ ಉರಿಯಿತು. ಅವತ್ತು ಟ್ರೆಕ್ಕಿಂಗ್ ಹೋಗೋಣ ಎಂದು ಪ್ಲಾನ್ ಮಾಡಿದಾಗಲೇ ಸಿಂಚನಳಿಗೆ ಒಂದು ಗತಿ ಕಾಣಿಸಬೇಕೆಂದು ಕಾಯುತ್ತಿದ್ದೆ.ಕಿರಣ್ ಗೆ ಪೋನ್ ಮಾಡಿ ಮರುದಿನ ಹೋಗುವಾಗ ಸ್ವಲ್ಪ ಡಿಂಕ್ಸ್ ತೆಗೆದುಕೊಂಡು ಹೋಗೋಣ , ಹಾಗೆ ಟೆಂಟ್ ಇನ್ನಿತರ ವಸ್ತುಗಳ ಖರೀದಿ ಮಾಡಲಿಕ್ಕಿದೆ ಬರುವೆಯಾ ? ಎಂದು ಕೇಳಿದೆ. ಡಿಂಕ್ಸ್ ಎಂದ ಕೂಡಲೇ ಬರುತ್ತೇನೆ ಎಂದು ಕಿರಣ್ ಹೇಳಿದ. ಮೊದಲಿಗೆ ಹೊಟ್ಟೆ ತುಂಬಿಸೋಣವೆಂದು ಹೊಟೇಲಿಗೆ ಕರೆದುಕೊಂಡು ಹೋದೆ.ಅವನಿಗೆ ಬೇಕಾದದ್ದು ತಿನ್ನಿಸಿದೆ.ಹಾಟ್ ಡಿಂಕ್ಸ್ ಬೇಡಾ ಎಂದು ಕಿರಣ್ ಹೇಳಿದರೂ ‌ಕೇಳದೆ‌ ಒತ್ತಾಯ ಮಾಡಿ ಕುಡಿಸಿದೆ.ಒಂದು ಬಾಟಲ್ ಕುಡಿದಾಗಲೆ ಕಿರಣ್ ತನ್ನ ದೇಹದ ಮೇಲೆ ಹಿಡಿತ ಕಳೆದುಕೊಂಡ. ಬಾತ್ ರೂಮ್ ಗೆ ಹೋಗಿ ಬರುತ್ತೇನೆಂದು ಒಳಬಂದು ಅವನು ಕುಡಿಯುವ ಬ್ರಾಂಡ್ ನ ಡಿಂಕ್ಸ್ ಗೆ ಇಪ್ಪತ್ತು ನಿದ್ರೆ ಮಾತ್ರೆ ಹಾಕಿ ತರಲು ಸಪ್ಲೈಯರ್ ಗೆ ಹೇಳಿದೆ .ಮೊದಲಿಗೆ ಒಪ್ಪದಿದ್ದರೂ ಕೈಯಲ್ಲಿ ಸಾವಿರದ ಐದು ನೋಟು ಕೊಟ್ಟ ಮೇಲೆ ತಂದು ಕೊಟ್ಟ. ಕಿರಣ್ ಗೆ ಒತ್ತಾಯ ಮಾಡಿ ಮಾತ್ರೆ ಹಾಕಿ ತಂದ ಡಿಂಕ್ಸ್ ನ್ನು ಕೂಡಾ ಕುಡಿಸಿದೆ. ಅಲ್ಲಿಂದ ಸೀದಾ ಅವನನ್ನು ಕರೆದುಕೊಂಡು ಹೊರಟೆ.

ಕಿರಣ್ ನಿದ್ರೆಯ ಮಂಪರಿನಲ್ಲಿದ್ದ. ಏನು ನಡೆಯುತಿದೆ? ಎಲ್ಲಿದ್ದೇನೆಂದು ತಿಳಿಯದಂತಹ ಸ್ಥಿತಿಯಲ್ಲಿದ್ದ.ದೊಡ್ಡ ಕೆರೆಯ ಹತ್ತಿರ ರಾತ್ರಿ ಹೊತ್ತಿನಲ್ಲಿ ಯಾರ ಸುಳಿವಿರುವುದಿಲ್ಲವೆಂದು ತಿಳಿದಿತ್ತು. ಹಾಗಾಗಿ ಅವನನ್ನು ಅಲ್ಲಿಗೆ ಕರೆದುಕೊಂಡು ಹೋದೆ.ಅವನ ಜೇಬಿನಿಂದ ಮೊಬೈಲ್ ತೆಗೆದು ಸಿಮ್ ತುಂಡು ಮಾಡಿದೆ. ಮೊಬೈಲ್ ಮತ್ತು ತುಂಡಾದ ಸಿಮ್ ಮೊದಲಿಗೆ ಕೆರೆಗೆ ಬಿಸಾಡಿದೆ.ಕಿರಣ್ ಹೊಟ್ಟೆಗೆ ದೊಡ್ಡ ಕಲ್ಲು ಕಟ್ಟಿ ನಂತರ ಜೋರಾಗಿ ಅವನನ್ನು ತಳ್ಳಿದೆ.ಅಮಲಿನಲ್ಲಿದ್ದ ಕಿರಣ್ ಯಾವುದೇ ರೀತಿಯಲ್ಲಿ ಹೋರಾಟ ಮಾಡದೆ ಕೆರೆಯೊಳಗೆ ಬಿದ್ದ. ಕಲ್ಲಿನ ಭಾರಕ್ಕೆ ಮೇಲೆ ಬರದೆ ಕೆರೆಯೊಳಗೆ ನೀರು ಕುಡಿದು ಸತ್ತು ಹೋದ. ಇಷ್ಟೆಲ್ಲಾ ಆಗುವಾಗ ರಾತ್ರಿ ಎರಡು ಗಂಟೆ ಕಳೆದಿತ್ತು.ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಲಿರುವುದರಿಂದ ಮನೆಗೆ ಬಂದು ಸ್ನಾನ ಮಾಡಿ,ಮರುದಿನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಜೋಡಿಸಿಟ್ಟೆ . ನಾಲ್ಕು ಗಂಟೆಗೆ ಭೇಟಿಯಾಗಲು ಹೇಳಿದ ಸ್ಥಳಕ್ಕೆ ಬಂದೆ. ಎಲ್ಲರೂ ಕಿರಣ್ ಬಗ್ಗೆ ಕೇಳಿದರೂ ನನಗೇನೂ ಗೊತ್ತಿಲ್ಲದಂತೆ ಸುಮ್ಮನಿದ್ದೆ. ಟ್ರೆಕ್ಕಿಂಗ್ ಮಾಡಿ ರಾತ್ರಿ ಗುಂಡಿನ ಪಾರ್ಟಿ ಮಾಡಿ ಅಲ್ಲಿಯೇ ನಿಲ್ಲುವ ಎಂದು ಮೊದಲೆ ಸುನಿಲ್ ಹಾಗೂ ತೇಜಸ್ ಗೆ ಹೇಳಿದ್ದೆ. ಗುಂಡಿನ ಆಸೆಗೆ ಅವರಿಬ್ಬರೂ ಒಪ್ಪಿದರು.ತೇಜಸ್ ಗೆ ಕೋಕಾ ಕೋಲಾಕ್ಕೆ ಮಿಕ್ಸ್ ಮಾಡಿ ಹುಡುಗಿಯರಿಗೆ ಕೊಡಲು ಹೇಳಿದ್ದೆ. ಗೀತಾ ಹಾಗೂ ಸುಮಾ ಮೊದಲೆ ಗುಂಡಿನ ರುಚಿಯನ್ನು ಕಂಡಿದ್ದರಿಂದ ಅವರ ನಡವಳಿಕೆಯಲ್ಲಿ ವ್ಯತ್ಯಾಸ ಆಗಲಿಲ್ಲ. ಸುಮಳಿಗೆ ಹಣದ ಆಮೀಷ ತೋರಿಸಿ ಸಿಂಚನಳಿಗೆ ನೀರಿನ ಬಾಟಲ್ ಸಿಗದಂತೆ ಮಾಡಿಸಿದೆ.ಡಿಂಕ್ಸ್ ಮಿಕ್ಸ್ ಮಾಡಿದ ಕೋಲಾ ಕುಡಿದಿದ್ದರಿಂದ ಅವಳಿಗೆ ಏನು ನಡೆಯುತ್ತಿದೆ ಎಂದು ತಿಳಿಯುತ್ತಿರಲಿಲ್ಲ. ರಾತ್ರಿ ಎಲ್ಲರೂ ಮಲಗಿದ ಮೇಲೆ ನಾನು ಸಿಂಚನಳ ಟೆಂಟ್ ಒಳಗೆ ಹೋಗಿ ಅವಳ ಶೀಲಾ ಕೆಡಿಸಿದೆ. ಮೋಸದಿಂದ ಅವಳನ್ನು ಪಡೆದರೂ ನನಗೇನೋ ಸಮಾಧಾನ ಸಿಕ್ಕಿತ್ತು. ನಾನು ಹೊರಗೆ ಬಂದಾಗ ಸುನಿಲ್ ನನ್ನನ್ನು ನೋಡಿದ. ನನಗೂ ಅವಳನ್ನು ಅನುಭವಿಸಬೇಕೆಂದ. ಅಡ್ಡಿ ಮಾಡಿದರೆ ಎಲ್ಲರಿಗೂ ಎಚ್ಚರಿಸುವೆ ಎಂದು ಹೆದರಿಸಿದ. ಕುಡಿದ ಮತ್ತಿನಲ್ಲಿ ಅವನಿಗೆ ಅನುಮತಿ ನೀಡಿದೆ. ಸಿಂಚನ ಈಗ ನಾಯಿ ಮುಟ್ಟಿದ ಮಡಕೆಯಾಗಿದ್ದಳು. ನನಗೆ ಅವಳನ್ನು ಪಡೆಯಬೇಕೆಂಬ ಆಸೆ ಸತ್ತು ಹೋಗಿತ್ತು, ಸುನಿಲ್ ನಿಗೆ ಏನು ಬೇಕಾದರೂ ಮಾಡಿಕೋ ಎಂದು ಹೇಳಿ ಮಲಗಿದೆ‌.ಸಿಂಚನಳಿಗೆ ಯಾವುದೇ ಘಟನೆಗಳು ನೆನಪಿಗೆ ಬರುವುದಿಲ್ಲ ಎಂದು ಖಾತ್ರಿಯಿತ್ತು. ಸುನಿಲ್ ಅವಳ ಶೀಲಾ ಕೆಡಿಸಿ ಅವಳನ್ನು ಏನು ಮಾಡಿದ ಎಂದು ನನಗೆ ಗೊತ್ತಿಲ್ಲ.." ಎಂದು ತನ್ನ ಕಥೆಯನ್ನು ಮುಗಿಸಿದ ರಾಹುಲ್.

ನಾನು ಹೊರಡುವ ಸಮಯ ಬಂತು ಬಾಬಾ. ನನ್ನ ಪ್ರೀತಿಯನ್ನು ಕಾಪಾಡಿದ ನಿಮಗೆ ವಂದನೆಗಳು ಎಂದು ಹೇಳಿ ನಾನು ಗೆಳೆಯರು ಸೇರಿರುವ ಕಡೆ ಬಂದೆ.

ಊರ ಹೊರಗೆ ದೊಡ್ಡಕೆರೆಯ ಬಳಿ ಎಲ್ಲರೂ ಸೇರಿ, ಸಿಂಚನಳ ಆತ್ಮವನ್ನು ಕರೆಯುತ್ತಿದ್ದರು. ಸಿಂಚನ ನಮ್ಮಿಂದ ತಪ್ಪಾಗಿದೆ, ನಮ್ಮನ್ನು ಕ್ಷಮಿಸು ಎಂದು ಕೇಳುತ್ತಿದ್ದರು. ಅಷ್ಟರಲ್ಲಿ ಸಿಂಚನ ಎಲ್ಲರ ಎದುರಿಗೆ ನಡೆದುಕೊಂಡು ಬಂದಳು. ಎಲ್ಲರಿಗೂ ಆಶ್ಚರ್ಯದಿಂದ ಮಾತೇ ಹೊರ ಬರಲಿಲ್ಲ.

ಸಿಂಚನ ನಡೆದುಕೊಂಡು ಬಂದಿದ್ದರೂ , ಅವಳ ಮಾತು ಕೇಳಿ ಎಲ್ಲರೂ ಹೆದರಿದರು. ರಾಹುಲ್ ನಿನ್ನನ್ನು ‌ಕ್ಷಮಿಸಲು ಬಂದಿಲ್ಲ ನಾನು,ನಿನ್ನ ಪ್ರಾಣವನ್ನೇ ಪಡೆದುಕೊಂಡೇ ಹೋಗುತ್ತೇನೆ ಎಂದು ಹೇಳಿದಾಗ, ಹೆದರಿಕೆಯಿಂದ ತಮಗೆ ಧ್ವನಿ ಬೇರೆ ಕೇಳಿಸುತ್ತಿದೆಯೋ ಅಥವಾ ಕಿರಣ್ ನಿಜವಾಗಿಯೂ ಬಂದಿದ್ದಾನಾ ಎಂದು ಎಲ್ಲರೂ ಸುತ್ತಲೂ ನೋಡಿದರು.

ಸಿಂಚನ ದೇಹದಲ್ಲಿದ್ದ ಕಿರಣ್ "ಆತ್ಮ" ಜೋರಾಗಿ ನಗುತ್ತಾ, ಹೌದು ನಾನೇ ಕಣೋ ರಾಹುಲ್, ನೀನು ಮೋಸ ಮಾಡಿ ಕೊಂದ ನಿನ್ನ ‌ಗೆಳೆಯ ಎಂದ. ರಾಹುಲ್ ಗಡಗಡ ನಡುಗುತ್ತಿದ್ದ. ಹತ್ತಿರ ಬಂದ ಸಿಂಚನ, ರಾಹುಲ್ ನನ್ನು ಒಂದೇ ಕೈಯಲ್ಲಿ ಎತ್ತಿ ನೆಲಕ್ಕೆ ಬಡಿಯುತ್ತಿದ್ದಳು.ಸಿಂಚನ ಉಗುರಿನಿಂದ ಪರಚಿದ್ದರಿಂದ ಮೈ ಕೈಯಿಂದ ರಕ್ತ ಹರಿಯುತಿತ್ತು.ಕಣ್ಣಿನೊಳಗೆ ಬೆರಳು ಹಾಕಿ ಎರಡೂ ಕಣ್ಣಗುಡ್ಡೆ ಹೊರತೆಗೆದಳು. ರಾಹುಲ್ ನೋವಿನಿಂದ ಚೀರಾಡುತ್ತಿದ್ದ,ಈ ಭೀಭತ್ಸ ದೃಶ್ಯ ನೋಡಲಾಗದೆ ಗೀತಾ ಕಣ್ಣು ಮುಚ್ಚಿದಳು. ವರುಣ್ ಮತ್ತು ವಿಕ್ಕಿ ಏನೂ ಹೇಳಲಾಗದೆ ನೋಡುತ್ತಾ ನಿಂತರು.ಕೈ ಕಾಲು ಮುರಿದ ಮೇಲೆ ರಾಹುಲ್ ನನ್ನು, ತನ್ನನ್ನು ಸಾಯಿಸಿದ ಅದೇ ದೊಡ್ಡ ಕೆರೆಗೆ ಹಾಕಿ ಜೋರಾಗಿ ನಗಲು ಪ್ರಾರಂಭಿಸಿದಳು ಸಿಂಚನ.

"ಇಷ್ಟೆಲ್ಲಾ ಕೊಲೆಗಳನ್ನು ನೀನೇ ಮಾಡಿದೆಯಾ?ನಾವೆಲ್ಲರೂ ಸಿಂಚನಳೇ ಪ್ರೇತಾತ್ಮವಾಗಿ ಕೊಲೆ ಮಾಡುತ್ತಿದ್ದಾಳೆಂದು ತಿಳಿದಿದ್ದೆವು.ನೀನು ಹೇಗೆ ಸಿಂಚನಳ ದೇಹದೊಳಗೆ ಸೇರಿದೆ ಕಿರಣ್ ?" ಎಂದು ವರುಣ್ ಕೇಳಿದ.

"ಸಿಂಚನಳೊಂದಿಗೆ ಜೀವನ ನಡೆಸಬೇಕೆಂದು ತುಂಬಾ ಕನಸು ಕಂಡಿದೆ ವರುಣ್. ರಾಹುಲ್ ನನ್ನನ್ನು ಮೋಸದಿಂದ ಕೊಂದು ಪ್ರೇತಾತ್ಮವಾಗಿ ತಿರುಗುವಂತೆ ಮಾಡಿದ.ನಾನು ಸತ್ತಿದ್ದೇನೆ, ನಾನು ಯಾರಿಗೂ ಕಾಣಿಸುವುದಿಲ್ಲ ಎಂದು ತಿಳಿಯುವಷ್ಟರಲ್ಲಿ ಒಂದು ದಿನ ಕಳೆದಿತ್ತು.ಅವನನ್ನು ಸಾಯಿಸಬೇಕೆಂದು ನಿಮ್ಮನ್ನು ಹುಡುಕಿಕೊಂಡು ಬಂದೆ. ಬೆಳಗಿನ ಹೊತ್ತು ‌ನಮಗೆ ಶಕ್ತಿ ಇರುವುದಿಲ್ಲ.ನಮ್ಮ ಶಕ್ತಿ ಏನಿದ್ದರೂ ಸೂರ್ಯಾಸ್ತದ ನಂತರ. ಹಾಗಾಗಿ ಮರುದಿನ ಸಂಜೆಹೊತ್ತು ನಾನು ರಾಹುಲ್ ನನ್ನು ಬಲಿ ಪಡೆಯಬೇಕೆಂದು ಗುಡ್ಡದ ಹತ್ತಿರ ಬಂದೆ.ನೋಡಿದರೆ ಸಿಂಚನ ಅರೆಶವವಾದಂತೆ ಮರದಡಿ ಬಿದ್ದಿದ್ದಳು. ನಾನೇನು ಮಾಡಬೇಕಾದರೂ ನನಗೊಂದು ದೇಹದ ಅವಶ್ಯಕತೆ ಇತ್ತು. ಹಾಗಾಗಿ ಸಿಂಚನಳ ದೇಹದೊಳಗೆ ಸೇರಿಕೊಂಡೆ.ಆ ದಿನ ಅಮವಾಸ್ಯೆ, ಎಲ್ಲಾ ಪ್ರೇತಾತ್ಮಗಳು ಸಶ್ಮಾನದಲ್ಲಿ ಸೇರಬೇಕಿತ್ತು. ನಾನು ಸಿಂಚನಳ ದೇಹದೊಂದಿಗೆ ಸಶ್ಮಾನಕ್ಕೆ ಹೋದೆ. ಸಶ್ಮಾನ ಕಾಯುವವ ನನ್ನ ಹೆಣ್ಣಿನ ದೇಹವನ್ನು ನೋಡಿ ಸಶ್ಮಾನದೊಳಗೆ ಹೋಗಲು ಬಿಡಲಿಲ್ಲ.ಅಲ್ಲಿ ಅಳುತ್ತಾ ಕೂತಿದ್ದೆ.ಶವ ಪೂಜೆ ಮುಗಿಸಿ ಹೊರ ಬಂದ ಸನ್ಯಾಸಿ ನನ್ನ ದೇಹವನ್ನು ನೋಡಿ ಚಕಿತನಾದ‌.

ಹೆಣ್ಣುಗಳಿಗೆ ಸಶ್ಮಾನದಲ್ಲಿ ಪ್ರವೇಶವಿಲ್ಲ ಎಂದು ಹೇಳಿದ.ನಾನು ನನ್ನ ನಿಜ ರೂಪ ತೋರಿಸಿ ನನ್ನ ನೋವು ಹೇಳಿಕೊಂಡೆ. ನನಗೆ ಸಹಾಯ ಮಾಡಬೇಕೆಂದು ಕೇಳಿಕೊಂಡೆ.ನನ್ನ ವಿಷಯ ತಿಳಿದ ಅವರು ಸಹಾಯ ಮಾಡಲು ಒಪ್ಪಿಗೆ ನೀಡಿದರು.ಅವರಿಂದಲೇ ನನ್ನ ಮತ್ತು ಸಿಂಚನ ಜೀವನ ಹಾಳು ಮಾಡಿದವರನ್ನು ನಾಶಮಾಡಿದೆ...ಇಂದು ನನ್ನ ಸೇಡು ತೀರಿತು, ಸಿಂಚನಳಿಗೂ ನ್ಯಾಯ ದೊರೆಯಿತು..." ಎಂದು ಕಿರಣ್ ಹೇಳಿದ.

ಸಿಂಚನಳ ಮುಖ ಶಾಂತಾವಾಯಿತು. ಅವಳ ದೇಹದಲ್ಲಿದ್ದ ಕಿರಣ್ ನ ಆತ್ಮದ ಧ್ವನಿ ಈಗ ಸೌಮ್ಯವಾಗಿ, ವಿಕ್ಕಿಯ ಬಳಿ ಬಂದು "ಇಲ್ಲಿ ಸಿಂಚನಳ ತಪ್ಪೇನೂ ಇಲ್ಲ ವಿಕ್ಕಿ, ಅವಳು ಬಲಿಪಶುವಾದಳು ಅಷ್ಟೇ. ಅವಳ ದೇಹವನ್ನು ನೋಡದೇ ಅವಳ ಆತ್ಮವನ್ನು ಪ್ರೀತಿಸು. ಅವಳಿಗೊಂದು ಬಾಳು ಕೊಡು. ನನ್ನ ಪ್ರೀತಿಯಂತೂ ನನಗೆ ಸಿಗಲಿಲ್ಲ.... ನಿನ್ನ ಪ್ರೀತಿಯಾದರೂ ನಿನಗೆ ಸಿಗಲಿ " ಎಂದು ಸಿಂಚನಳ ಕೈಯನ್ನು ವಿಕ್ಕಿಯ ಕೈಯಲ್ಲಿ ಕೊಟ್ಟಿತು.ವಿಕ್ಕಿ ಸಂತೋಷದಿಂದ ಸಿಂಚನಳ ಕೈಹಿಡಿದು ತನ್ನ ಒಪ್ಪಿಗೆಯನ್ನು ಸೂಚಿಸಿದ.

"ಪ್ರೀತಿಯನ್ನು ಪಡಿಬೇಕು ಅಂತ ಕೆಟ್ಟ ದಾರಿ ಹಿಡಿಯದೇ ಮನದಲ್ಲಿಯೇ ಆರಾಧಿಸುವ ನಿನ್ನಂತವರಿರುವುದರಿಂದಲೇ ಪ್ರೀತಿ ಇನ್ನೂ ಉಳಿದಿದೆ ವಿಕ್ಕಿ " ಎಂದು ಹೇಳಿ ಸಿಂಚನಳ ದೇಹದಿಂದ ಕಿರಣ್ ಆತ್ಮ ಬಿಟ್ಟು ಹೋಯಿತು. ಸಿಂಚನ ಬುಡ ಕಡಿದ ಮರದಂತೆ ದೊಪ್ಪನೆ ಕೆಳಗೆ ಬಿದ್ದಳು.ವಿಕ್ಕಿ ಅವಳನ್ನು ಎತ್ತಿ ಭುಜಕ್ಕೊರಗಿಸಿ ಕಾರಿನೊಳಗೆ ಕೂರಿಸಿದ.

ಹಳೆಯದನ್ನು ಮರೆತು ವಿಕ್ಕಿ ಮತ್ತು ಸಿಂಚನ ತಮ್ಮ ಹೊಸ ಜೀವನ ಪ್ರಾರಂಭಿಸಿದರು.



Rate this content
Log in

Similar kannada story from Horror