Achala B.Henly

Abstract Classics Inspirational

4.6  

Achala B.Henly

Abstract Classics Inspirational

ಭೀಮಜ್ಜನ ಬದುಕು

ಭೀಮಜ್ಜನ ಬದುಕು

3 mins
374


 

ಹಾಗೆ ನೋಡಿದರೆ ಭೀಮಜ್ಜ ಈಗಿರುವಂತೆ ಯೌವ್ವನದ ದಿನಗಳಲ್ಲಿ ಇರಲಿಲ್ಲ. ಬಹಳ ಉತ್ಸಾಹಿ ಮನುಷ್ಯ ಆತ. ತನ್ನ ಅಪ್ಪ ಅಮ್ಮ ಇಟ್ಟ ಭೀಮಶಂಕರ ಎಂಬ ಹೆಸರಿಗೆ ಅನ್ವರ್ಥವಾಗುವಂತೆ ಬಲ ಭೀಮನಂತೆಯೇ ಇದ್ದ. ಪ್ರಾಯಕ್ಕೆ ಬಂದಾಗ ಮದುವೆಯಾಗಿ, ರಾಜೇಶನಿಗೆ ತಂದೆಯೂ ಅನಿಸಿಕೊಂಡ. ಊರಲ್ಲಿ ಇದ್ದ ಶಾಲೆಗೆ ಕನ್ನಡ ಮೇಷ್ಟ್ರಾಗಿ ಎಲ್ಲರಿಗೂ ಪ್ರೀತಿಯ "ಭೀಮ್ ಸರ್" ಆಗಿದ್ದ. ಎಂದೂ ಕೋಪಗೊಂಡದ್ದನ್ನು ನೋಡಿರದಿದ್ದ ಮಕ್ಕಳು ಸಹ ಅವನನ್ನು ಇಷ್ಟಪಟ್ಟು, ಅವನು ಹೇಳಿಕೊಡುವ ಕನ್ನಡ ವ್ಯಾಕರಣಕ್ಕೆ ಸೋತು ಹೋಗಿದ್ದರು. ತಾನು ಮಕ್ಕಳಿಗೆ ಪ್ರಾಸಬದ್ಧವಾಗಿ ಹೇಳಿಕೊಡುತ್ತಿದ್ದ ಅ-- ಅರಸ, ಆ--ಆನೆ, ಇ--ಇಲಿ, ಈ--ಈಶ ಎನ್ನುವುದನ್ನು ಈಗಲೂ ನೆನಪು ಮಾಡಿಕೊಂಡು ಆಗಾಗ ತನ್ನ ತೆಂಗಿನ ತೋಟದಲ್ಲಿ ಹೇಳಿಕೊಳ್ಳುತ್ತಿರುತ್ತಾನೆ..!! ಮಗ ರಾಜೇಶ ಚೆನ್ನಾಗಿ ಓದಿ, ದೂರದ ದೆಹಲಿಯಲ್ಲಿ ಡಾಕ್ಟರ್ ಆಗಿದ್ದಾನೆ. ಪ್ರೀತಿಸಿ ದೆಹಲಿಯ ಹುಡುಗಿಯನ್ನೇ ಮದುವೆಯಾಗಿ, ಈಗ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ಊರಿನಲ್ಲಿರುವ ಏಕಾಂಗಿ ತಂದೆಯ ನೆನಪು ಅವನಿಗೆ ಏಕೋ ಅಷ್ಟಾಗಿ ಕಾಡುತ್ತಿಲ್ಲ. ರೋಗಿಗಳನ್ನು ಮುತುವರ್ಜಿವಹಿಸಿ ನೋಡಿಕೊಳ್ಳುವ ಅವನು ಊರಿನಲ್ಲಿರುವ ವಯಸ್ಸಾದ ತಂದೆಯ ಆರೋಗ್ಯದ ಬಗ್ಗೆ ಸಂಪೂರ್ಣ ಮರೆತುಬಿಟ್ಟಿದ್ದಾನೆ. ಅಥವಾ ತನ್ನ ಬ್ಯುಸಿಯಾದ ದಿನನಿತ್ಯದ ಟೈಮ್ ಟೇಬಲ್ ನಿಂದ ಹಾಗೆ ಆಗುತ್ತಿದೆಯೋ ಗೊತ್ತಿಲ್ಲ..! ಆದರೆ ತನ್ನ ಪಾಡಿಗೆ ತಾನು ತೋಟ ನೋಡಿಕೊಳ್ಳುತ್ತಾ ಕಾಲ ಕಳೆಯುತ್ತಿರುವ "ಭೀಮಜ್ಜನ ಬದುಕು" ಏಕೋ ನಿಂತ ನೀರಂತಾಗಿದೆ..!!


ಒಂದು ದಿನ ಹೀಗೆ ತೋಟಕ್ಕೆ ಹೋಗುತ್ತಿರಲು ಭೀಮಜ್ಜ ಲೋ ಬಿಪಿಯಿಂದಾಗಿ ತಲೆ ಸುತ್ತಿ ಬಿದ್ದು ತಲೆಗೆ ಏಟು ಮಾಡಿಕೊಂಡ. ಅಕ್ಕಪಕ್ಕದ ದಾರಿಹೋಕರು ಅವನನ್ನು ಮನೆಗೆ ಕರೆತಂದು ಹುಷಾರಾಗಿ ನೋಡಿಕೊಂಡರು. ನೆರೆಮನೆಯಾಕೆ ತಕ್ಷಣವೇ ರಾಜೇಶನಿಗೆ ಫೋನ್ ಮಾಡಿ ವಿಚಾರ ತಿಳಿಸಿದಳು. ಎರಡು ತಿಂಗಳಿನಿಂದ ಅಪ್ಪನಿಗೆ ಫೋನ್ ಮಾಡದೆ ಇದ್ದ ರಾಜೇಶನು, ಕಳವಳಗೊಂಡು ಪ್ರಯಾಣ ಬೆಳೆಸಿ ಎರಡು ದಿನದಲ್ಲೇ ತನ್ನ ತಂದೆಯ ಮುಂದೆ ನಿಂತಿದ್ದ. ಎಷ್ಟೋ ತಿಂಗಳ ನಂತರ ತನ್ನ ಮಗನನ್ನು ನೋಡಿದ ಭೀಮಜ್ಜ "ಚೆನ್ನಾಗಿದ್ದೀಯಾ ಕೂಸೇ" ಎಂದು ಕೈಹಿಡಿದು ಕೇಳಿದ.

ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ "ಅಪ್ಪಯ್ಯ ಇನ್ನು ನೀನಿಲ್ಲಿ ಇರುವುದು ಸರಿಯಲ್ಲ. ಈ ಒಂದೆಕೆರೆ ತೋಟವನ್ನು ನೋಡಿಕೊಳ್ಳಲು ನಾನು ಜನರ ವ್ಯವಸ್ಥೆ ಮಾಡುತ್ತೇನೆ. ಇದನ್ನು ಮಾರುವುದಾ ಅಥವಾ ಹೇಗೆ ಎಂದು ಯೋಚಿಸೋಣ. ಆದರೆ ನೀನು ನಾಳೆಯೇ ನನ್ನೊಂದಿಗೆ ದೆಹಲಿಗೆ ಬಂದುಬಿಡು. ನಿನಗೂ ಈಗ ಎಂಬತ್ತರ ಆಸುಪಾಸು. ಮತ್ತೆ ನೀನಿಲ್ಲಿರುವುದು ಸರಿ ಕಾಣುವುದಿಲ್ಲ. ನಿನ್ನ ಸೊಸೆ ಪ್ರಿಯ ಸಹ ಇದಕ್ಕೆ ಒಪ್ಪಿದ್ದಾಳೆ. ಮೊಮ್ಮಕ್ಕಳ ಜೊತೆ ಆಡಿಕೊಂಡು ಸುಖವಾಗಿರು. ಬೇಗ ನಿನ್ನ ಬಟ್ಟೆ, ವಸ್ತುಗಳನ್ನು ಎತ್ತಿಟ್ಟುಕೊಂಡು, ನಾಳೆಯ ರೈಲಿನಲ್ಲಿ ಹೋಗುವುದಕ್ಕೆ ಸಿದ್ಧವಾಗು" ಎಂದನು.


ಹೆಂಡತಿ ಕಾಲವಾದ ನಂತರ ಒಂಟಿ ಜೀವನ ನಡೆಸುತ್ತಾ, ಆಗಾಗ ತೋಟದಲ್ಲಿ ಕನ್ನಡ ಪದ್ಯಗಳನ್ನು ಹಾಡುತ್ತಾ ಜೀವನ ಸವೆಸುತ್ತಿದ್ದ ಭೀಮಜ್ಜ, ಈಗ ತಾನು ತನ್ನ ಮಗನ ಮನೆಗೆ ಹೋಗುತ್ತಿದ್ದೇನೆ ಎಂದು ಖುಷಿಪಟ್ಟ. ಅದರ ಜೊತೆಗೆ ಗೊತ್ತಿಲ್ಲದ ಊರು, ಗೊತ್ತಿಲ್ಲದ ಜನ, ಗೊತ್ತಿಲ್ಲದ ಹಿಂದಿ ಭಾಷೆ..! "ಹೇಗಪ್ಪಾ ನಾನು ಅಲ್ಲಿ ವ್ಯವಹರಿಸುವುದು?" ಎಂದು ಸಂಕಟಪಟ್ಟ. ದೆಹಲಿಯನ್ನು ತಲುಪಿ ಒಂದೆರಡು ದಿನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಿಗೆ ಭೀಮಜ್ಜನನ್ನು ಕರೆದುಕೊಂಡು ಸುತ್ತಾಡಿಸಿದ ರಾಜೇಶನ ಕುಟುಂಬ ನಂತರ ಮತ್ತೆ ಮೊದಲಿನ ಸ್ಥಿತಿಗೆ ಬಂದರು.

ಗಂಡ ಹೆಂಡತಿ ಬೆಳಿಗ್ಗೆ ಆಸ್ಪತ್ರೆಗೆ ತೆರಳಿದರೆ, ಬರುತ್ತಿದ್ದದ್ದು ಸಂಜೆ ಅಥವಾ ರಾತ್ರಿಯೇ. ಇಬ್ಬರು ಮಕ್ಕಳು ಶಾಲೆಯಿಂದ ಡ್ರೈವರ್ ನೊಟ್ಟಿಗೆ ಬಂದು, ಅಡುಗೆಯಾಕೆ ಕೊಡುತ್ತಿದ್ದ ಸ್ನಾಕ್ಸ್ ಮತ್ತು ಹಾಲನ್ನು ಕುಡಿದು, ಸಂಗೀತದ ಕ್ಲಾಸ್ ಅಥವಾ ಪೇಂಟಿಂಗ್ ಕ್ಲಾಸ್ ಗಳಿದ್ದರೆ ಅದಕ್ಕೆ ಹೋಗಿಬಂದು, ತಮ್ಮ ಪಾಡಿಗೆ ತಾವು ಓದಿಕೊಳ್ಳುತ್ತಿದ್ದರು. ನಂತರ ಬರುತ್ತಿದ್ದ ಗಂಡ ಹೆಂಡತಿ ಮಕ್ಕಳೊಟ್ಟಿಗೆ ಒಂದಷ್ಟು ಹರಟಿ, ಊಟ ಮಾಡಿದರೆ ಅಂದಿಗೆ ಆ ದಿನ ಮುಗಿಯುತ್ತಿತ್ತು. ಹೀಗೆ ದಿನವೂ ಒಂದೇ ರೀತಿಯಲ್ಲಿ ಯಾವುದೇ ಏರಿಳಿತಗಳಿಲ್ಲದೆ ಸಾಗುತ್ತಿದ್ದವು. ಮೊದಮೊದಲು ಟಿವಿ ಎಂಬ ಮಾಯಾಪೆಟ್ಟಿಗೆಗೆ ಆಕರ್ಷಿತನಾಗಿ ಸದಾ ಟಿವಿ ನೋಡುತ್ತಿದ್ದ ಭೀಮಜ್ಜ, ಈಗೀಗ ಅದನ್ನು ವೀಕ್ಷಿಸಲು ಬೇಸರಿಸುತ್ತಿದ್ದ. ಹೊರಗೆ ವಾಕಿಂಗ್ ಮಾಡಿಕೊಂಡು ಯಾರ ಜೊತೆಯಾದರೂ ಸ್ನೇಹ ಸಂಪಾದಿಸೋಣ ಎಂದರೆ, ತನಗೆ ಭಾಷೆಯ ತೊಡಕು..!! "ನನಗೆ ಗೊತ್ತಿರುವ ಕನ್ನಡ ಭಾಷೆ ಹಿಂದಿ ನಾಡಿನವರಿಗೆ ಗೊತ್ತಿಲ್ಲ. ಇದೇನಪ್ಪಾ "ದೂರದ ಬೆಟ್ಟ ನುಣ್ಣಗೆ" ಎಂದು ಸುಮ್ಮನೆ ಇಷ್ಟು ದೂರ ಬಂದೆನಲ್ಲ...?! ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ಳುತ್ತಾ ದಿನವೂ ತೆಂಗಿನ ತೋಟದಲ್ಲಿ ಕಾಲ ಕಳೆಯುತ್ತಿದ್ದ ಮಜವೇ ಬೇರೆ. ಆದರೆ ಈ ಮಾಲಿನ್ಯ ಪೀಡಿತ ದೆಹಲಿ ಎಂಬ ಸಿಟಿಗೆ ಬಂದು ತಪ್ಪು ಮಾಡಿಬಿಟ್ಟೆನೆ..?" ಎಂದು ಪ್ರಶ್ನಿಸಿಕೊಳ್ಳತೊಡಗಿದನು ಭೀಮಜ್ಜ.


ಇವನ ಕಷ್ಟಗಳನ್ನು ನೋಡಿ ಅರಿತ ಸೊಸೆಯು ಒಂದು ದಿನ ಪುಸ್ತಕದ ಅಂಗಡಿಗೆ ಹೋಗಿ ಐದಾರು ಕನ್ನಡ ಪುಸ್ತಕಗಳನ್ನು ತಂದು ಭೀಮಜ್ಜನ ಕೈಗಿತ್ತಳು. ಅವುಗಳನ್ನ ನೋಡಿದ್ದೇ ತಡ ನಿಧಿ ದೊರಕಿದಂತೆ ಧನ್ಯವಾದಗಳನ್ನು ತಿಳಿಸುತ್ತಾ ಒಂದೊಂದೇ ಪುಸ್ತಕವನ್ನು ಓದಲು ಶುರುಮಾಡಿದನು. ಮಕ್ಕಳು ಸಹ "ಇದೇನು ತಾತನಿಗೆ ಓದುವುದಕ್ಕೆ ಬರುತ್ತದೆಯೇ?" ಎಂದು ಆಶ್ಚರ್ಯಗೊಂಡಾಗ, "ಮಕ್ಕಳೇ ನಿಮ್ಮ ತಾತ ಒಂದು ಕಾಲದ ಕನ್ನಡ ಮೇಷ್ಟ್ರು. ಹೋಗಿ ಏನಾದರೂ ಅವರಿಂದ ಕಲಿತುಕೊಳ್ಳಿ" ಎಂದು ಹಿಂದಿಯಲ್ಲಿಯೇ ಹೇಳಿದಳು ಸೊಸೆ.

"ತಾತ ನಮಗೂ ಕನ್ನಡವನ್ನು ಬರೆಯಲು ಹೇಳಿಕೊಡು. ಇಲ್ಲಿ ಬರೀ ಹಿಂದಿ, ಇಂಗ್ಲೀಷ್ ನದ್ದೇ ಕಾರುಬಾರು. ಇನ್ನೊಂದು ಭಾಷೆಯನ್ನಾಗಿ ಕನ್ನಡವನ್ನು ಕಲಿಯಲು ಅಮ್ಮ ಹೇಳಿದ್ದಾಳೆ" ಎಂದಾಗ ದೆಹಲಿಯ ಸೊಸೆಯ ಕಡೆ ಅಭಿಮಾನದಿಂದ ನೋಡಿದರು ಭೀಮಜ್ಜ..!!

ಈಗ ಭೀಮಜ್ಜನ ಬದುಕು ಸ್ವಲ್ಪ ಸುಧಾರಿಸಿದೆ ಎನ್ನಬಹುದು. ಮೊಮ್ಮಕ್ಕಳಿಗೆ ಕನ್ನಡ ವರ್ಣಮಾಲೆಯನ್ನು ಕಲಿಸಿದ ಭೀಮಜ್ಜ, ಬರುಬರುತ್ತಾ ಸಣ್ಣ ಕಥೆ, ಪದ್ಯಗಳನ್ನು ಅವರ ವಯಸ್ಸಿಗೆ ಅನುಗುಣವಾಗಿ ಹೇಳಲು ಶುರು ಮಾಡಿದ್ದಾನೆ. ತನಗೆ ಗೊತ್ತಿಲ್ಲದ ಮೊಬೈಲ್, ಲ್ಯಾಪ್ ಟಾಪ್ ಅನ್ನು ಹೇಗೆ ಉಪಯೋಗಿಸಬೇಕೆಂದು ಮೊಮ್ಮಕ್ಕಳು ಹೇಳಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹಿಂದಿಯನ್ನು ಸಹ ಕಲಿಯುತ್ತಿರುವ ಭೀಮಜ್ಜ, ಈಗ ಇಡೀ ಅಪಾರ್ಟ್ಮೆಂಟ್ ನ ಪ್ರೀತಿಯ "ಭೀಮ್ ಸರ್" ಆಗಿ, ಎಲ್ಲರಿಗೂ ಕನ್ನಡ ಭಾಷೆಯ ಕಂಪನ್ನು ಬೀರುವ ಕನ್ನಡಾಭಿಮಾನಿಯಾಗಿ, ಮತ್ತೆ ತನ್ನ ಗತಕಾಲದ ಶಿಕ್ಷಕ ವೃತ್ತಿಗೆ ಮರಳುತ್ತಿದ್ದಾನೆ...!!

 



Rate this content
Log in

Similar kannada story from Abstract