Achala B.Henly

Abstract Classics Inspirational

4  

Achala B.Henly

Abstract Classics Inspirational

ಮಾತು ಬೆಳ್ಳಿ, ಮೌನ ಬಂಗಾರ...

ಮಾತು ಬೆಳ್ಳಿ, ಮೌನ ಬಂಗಾರ...

2 mins
358



ಭಾಸ್ಕರ್ ಮತ್ತು ಸ್ವರ ಇಬ್ಬರೂ ಹೊರಗಿನ ಪ್ರಪಂಚಕ್ಕೆ ಮಾದರಿ ಗಂಡ ಹೆಂಡತಿ. "ಅಬ್ಬಾ ಗಂಡ ಹೆಂಡತಿ ಎಂದರೆ ಈ ರೀತಿ ಅನ್ಯೋನ್ಯವಾಗಿ ಮಾತಾಡುತ್ತಾ, ರೇಗಿಸುತ್ತಾ, ಹೊರಗೆ ಸುತ್ತಾಡುತ್ತಾ, ತಿಂದುಂಡು, ಚೆನ್ನಾಗಿ ಕಾಲ ಕಳೆಯುತ್ತಾ ಇದ್ದಾರೆ. ಜೋಡಿ ಎಂದರೆ ಹೀಗಿರಬೇಕು..!!" ಎಂದು ಸುತ್ತಮುತ್ತಲಿನ ಮನೆಯವರು, ಅವರಿಬ್ಬರ ಬಂಧು-ಮಿತ್ರರು ಯಾವಾಗಲೂ ಹೇಳುತ್ತಿದ್ದರು.


ಮದುವೆಯಾಗಿ ವರ್ಷ ಕಳೆಯಲು ಇತ್ತೀಚಿಗೇಕೋ ದಂಪತಿ ಮಧ್ಯೆ ಯಾವಾಗಲೂ ಜಗಳ. ಎಷ್ಟೆಂದರೆ ಅಕ್ಕಪಕ್ಕದ ಮನೆಯವರಿಗೂ ಇವರ ವಾದ ವಿವಾದ ಕೇಳುತ್ತಿತ್ತು. ಇದೇಕೆ ಈ ರೀತಿ ಆಯಿತು..? ಸರಿಯಾಗಿಯೇ ಇದ್ದ ಈ ಜೋಡಿಯ ಮೇಲೆ ಯಾರ ಕೆಟ್ಟ ದೃಷ್ಟಿ ತಾಗಿತು ದೇವರೇ..?! ಎಂದು ದಿನವೂ ಅಂದುಕೊಳ್ಳುತ್ತಿದ್ದರು ಪಕ್ಕದ ಮನೆಯ ಪದ್ಮಕ್ಕ.


ಒಂದು ದಿನ ಆಫೀಸಿನಿಂದ ಮನೆಗೆ ಅರ್ಧ ದಿನ ರಜೆ ಹಾಕಿ ಬಂದ ಸ್ವರ, ಒಂದರ್ಧ ಗಂಟೆ ಮಲಗೋಣ ಎಂದುಕೊಂಡಳು. ಅವಳಿಗೋ ಅವತ್ತು ವಿಪರೀತ ತಲೆನೋವು. ಬೆಳಿಗ್ಗೆ ಬೆಳಿಗ್ಗೆಯೇ ಭಾಸ್ಕರನೊಂದಿಗೆ ಜಗಳ. ಹಾಗಾಗಿ ತಿಂಡಿಯನ್ನು ತಿನ್ನದೇ ಆಫೀಸಿಗೆ ಹೋಗಿದ್ದಳು. ಅಲ್ಲಿಯೂ ಏಕೋ ಅವತ್ತೇ ಬಾಸಿನಿಂದ ಕೆಲಸದ ಸಲುವಾಗಿ ಕಿರುಕಿರಿ ಆಯಿತು. ಆದಕಾರಣ ಮಧ್ಯಾಹ್ನವೇ ತನಗೆ ಹುಷಾರಿಲ್ಲ ಎಂದು ಮನೆಗೆ ಹಿಂತಿರುಗಿದಳು.


ಇವತ್ತಾದರೂ ಈ ಹುಡುಗಿಗೆ ಒಂಚೂರು ಸಮಾಧಾನ ಹೇಳೋಣ ಎಂದುಕೊಂಡ ಪದ್ಮಕ್ಕ, ತಾವು ತಯಾರಿಸಿದ್ದ ಪುಳಿಯೋಗರೆ ಮತ್ತು ಮೊಸರನ್ನವನ್ನು ತೆಗೆದುಕೊಂಡು ಅವಳ ಮನೆಗೆ ಹೋದರು.


"ಸ್ವರ, ಬಾಗಿಲು ತೆಗೆಯಮ್ಮ... ನಾನು ಪಕ್ಕದ ಮನೆ ಪದ್ಮ..!!" ಎಂದರು. "ಅಯ್ಯೋ, ಈ ಆಂಟಿ ಏಕೆ ಇಷ್ಟು ಹೊತ್ತಿಗೆ ಬಂದಿದ್ದಾರೆ..? ಊಟವಂತೂ ಇಲ್ಲ. ನಿದ್ದೆ ಮಾಡುವುದಕ್ಕೂ ಇವರು ಬಿಡುವುದಿಲ್ಲವಲ್ಲ..!!" ಎಂದುಕೊಳ್ಳುತ್ತಾ ಬಾಗಿಲು ತೆರೆದಳು ಸ್ವರ.


"ಹಾಂ ಆಂಟಿ, ಬನ್ನಿ... ಏನು ವಿಷಯ..?" ಎಂದಳು. "ಸ್ವರ ತಗೋ ಈ ಊಟವನ್ನು. ಮೊದಲು ಮಾಡು. ನಂತರ ಮಾತಾಡೋಣ" ಎಂದು ತಾವು ತಂದ ಆಹಾರವನ್ನು ಸ್ವತಃ ಅವರೇ ಆಕೆಗೆ ಬಡಿಸಿದರು. ಅದೇಕೋ ಸ್ವರಾಳಿಗೆ ತಕ್ಷಣ ತನ್ನ ತಾಯಿಯ ನೆನಪಾಗಿ, ಕಣ್ಣುಗಳು ತುಂಬಿ ಬಂದವು. ಹೊಟ್ಟೆ ಹಸಿವಿಗೋ ಅಥವಾ ಪದ್ಮಕ್ಕನ ಕೈ ರುಚಿಯೋ, ಸ್ವರ ಒಂದೇ ಗುಕ್ಕಿನಲ್ಲಿ ಊಟವನ್ನೆಲ್ಲ ಮಾಡಿ ಮುಗಿಸಿ, ತೃಪ್ತಿಗೊಂಡಳು.


ಮತ್ತೆ ಲವಲವಿಕೆಯಿಂದ ಕೂಡಿದ ಅವಳ ಮುಖವನ್ನು ನೋಡಿದ ಪದ್ಮಕ್ಕ, "ಸ್ವರ ಹೀಗೆ ಬೇರೆಯವರ ಮನೆಯ ವಿಷಯದಲ್ಲಿ ಮೂಗು ತೂರಿಸುತ್ತೇನೆ ಎಂದುಕೊಳ್ಳಬೇಡ. ಅದೇಕೆ ಇತ್ತೀಚಿಗೆ ನಿನ್ನ ಭಾಸ್ಕರ್ ನಡುವೆ ಅಷ್ಟು ಜಗಳ..? ಒಂದು ವರ್ಷ ಸರಿಯೇ ಇದ್ದರಲ್ಲ..! ಈಗ ಏಕೆ ಹೀಗೆ..?!" ಎಂದು ಕೇಳಿದರು.


"ಅಯ್ಯೋ ಆಂಟಿ ಏನೆಂದು ಹೇಳಲಿ... ಈ ಮಾತೇ ನಮಗೆ ಶತ್ರುವಾ ಅನಿಸಿಬಿಡುತ್ತದೆ..! ನಾನು ಏನೇ ಮಾತನಾಡಿದರೂ, ಅದಕ್ಕೊಂದು ಹೊಸ ಅರ್ಥ ಕಲ್ಪಿಸಿ ಜಗಳ ತೆಗೆಯುತ್ತಾನೆ ಭಾಸ್ಕರ್. ಇನ್ನು ಅವನು ಸುಮ್ಮನೆ ಮಾತನಾಡಿದರೂ ನನಗೇನೋ ಅದರಲ್ಲಿ ವ್ಯಂಗ್ಯವಿದೆ, ಅದೊಂದು ಚುಚ್ಚು ಮಾತು ಎನಿಸಿಬಿಡುತ್ತದೆ..?! ಈ ರೀತಿ ಇಬ್ಬರ ಮಾತುಗಳೇ ನಮ್ಮ ಜಗಳಕ್ಕೆ ಮುಖ್ಯ ಕಾರಣವಾಗಿಬಿಟ್ಟಿದೆ..!!"


"ನಿನ್ನ ಮಾತು ಜೇನಿನಂತೆ, ನಿನ್ನ ಧ್ವನಿ ಎಷ್ಟು ಇಂಪು, ಮಾತಾಡಿದರೆ ಹಾಡಿನಂತೆ ಕೇಳಿಸುತ್ತದೆ..! ಎನ್ನುತ್ತಿದ್ದ ಭಾಸ್ಕರ್, ಈಗ ನೀನೊಬ್ಬಳು ಬಾಯಿಬಡುಕಿ, ಜಗಳಗಂಟಿ ಎನ್ನುತ್ತಾನೆ..!!" ಎಂದು ಇರುವ ವಿಷಯಗಳನ್ನೆಲ್ಲ ಅರುಹಿದಳು ಸ್ವರ.


ಎಲ್ಲವನ್ನು ಕೇಳಿಸಿಕೊಂಡ ಪದ್ಮಕ್ಕ "ಓಹೋ ಹಾಗಾದರೆ ನಿಮ್ಮ ದಿನನಿತ್ಯದ ಜಗಳಕ್ಕೆ ಮುಖ್ಯ ಕಾರಣವಾಗಿರುವುದು ಹಣವಲ್ಲ, ಅನೈತಿಕ ಸಂಬಂಧವಲ್ಲ, ಅತ್ತೆ-ಮಾವರ ದಬ್ಬಾಳಿಕೆಯಲ್ಲ, ಬದಲಿಗೆ ನೀವಾಡುವ ಮಾತುಗಳೇ..!! ಹೆಚ್ಚು ಮಾತನಾಡಿದಷ್ಟು ತಪ್ಪುಗಳು ಜಾಸ್ತಿ ಆಗುತ್ತವೆ. ನಾವೆಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ತಪ್ಪುಗಳು ಕಡಿಮೆಯಾಗುತ್ತವೆ. ಅನಗತ್ಯವಾದ ಮಾತುಕತೆ ಸೋನೆ ಮಳೆ ಸುರಿದಂತೆ ಅನಿಸುತ್ತದೆ. ಮೌನವಾಗಿರುವುದು ಬಂಗಾರಕ್ಕೆ ಸಮಾನ ಎನ್ನುತ್ತಾರೆ ಸ್ವರ..!"


"ನೀವಿಬ್ಬರು ಗಂಡ ಹೆಂಡತಿಯರು ನೀವಾಡುವ ಮಾತುಗಳಿಂದಲೇ ಜಗಳ ಆಗುತ್ತಿದೆ ಎಂದರೆ, ಆದಷ್ಟು ಕಡಿಮೆ ಮಾತನಾಡಿ. ಬೇಕಿದ್ದು ಬೇಡದ್ದು ಎಲ್ಲಾ ಮಾತಾಡಿ ವಾದ ವಿವಾದಗಳಿಗೆ ಅನುವು ಮಾಡಿಕೊಡುವ ಬದಲು, 'ಮಾತು ಬೆಳ್ಳಿ ಮೌನ ಬಂಗಾರ' ಎಂಬಂತೆ, ಪರಿಸ್ಥಿತಿ ಹದಗೆಟ್ಟು ಕೈಮೀರಿ ಹೋಗುತ್ತಿದೆ ಎಂದರೆ, ಇಬ್ಬರಲ್ಲಿ ಒಬ್ಬರು ಮೌನ ತಾಳಿಬಿಡಿ. ಆಗ ತಾನು ಹೇಳಿದ್ದಕ್ಕೆ ಎದುರಿನವರಿಂದ ಪ್ರತ್ಯುತ್ತರ ಅಥವಾ ಪ್ರತಿಸ್ಪಂದನೆ ಬರುತ್ತಿಲ್ಲ ಎಂದಾಗ, ಜಗಳ ಎತ್ತುವವರು ಸುಮ್ಮನಾಗಿಬಿಡುತ್ತಾರೆ..!!"


"ಮೊದಮೊದಲು ಕಷ್ಟ ಆಗುತ್ತದೆ ನಿಜ. ಆದರೆ ಕಾಲ ಕ್ರಮೇಣ ಸರಿಯಾಗುತ್ತದೆ. ನಿನಗೆ ಭಾಸ್ಕರನ ಮಾತು ಹಿಡಿಸುತ್ತಿಲ್ಲವೆಂದು ಅನಿಸಿದರೆ, ಮಾತನ್ನು ಬೆಳೆಸಲಿಕ್ಕೆ ಹೋಗಬೇಡ. ಸುಮ್ಮನಿದ್ದು ಬಿಡು. ಕ್ರಮೇಣ ಅವನೂ ಜಗಳ ಆಡುವುದಕ್ಕೆ ಆಸಕ್ತಿ ಕಳೆದುಕೊಳ್ಳುತ್ತಾನೆ..!"


"ಒಂದೆರಡು ವಾರ ಈ ರೀತಿ ಪ್ರಯತ್ನಿಸಿ ನೋಡು. ನಂತರ ನಿನಗೇ ಅಭ್ಯಾಸವಾಗಿ ಬಿಡುತ್ತದೆ. ನೀನು ಜಗಳ ಮಾಡಲು ಇಷ್ಟಪಡುತ್ತಿಲ್ಲ ಎಂದರೆ, ಅವನೂ ಸಹ ಕ್ರಮೇಣ ಸುಮ್ಮನಾಗುತ್ತಾನೆ. ಜಗಳ ಕಡಿಮೆಯಾದೇಟಿಗೆ ನಿಮ್ಮಿಬ್ಬರ ನಡುವೆ ಮತ್ತೆ ಪ್ರೀತಿ ಹುಟ್ಟುತ್ತದೆ...!! ಒಳ್ಳೆಯದಾಗಲಿ ಸ್ವರ. ಏನೇ ತೊಂದರೆ ಇದ್ದರೂ, ನನ್ನೊಂದಿಗೆ ಹಂಚಿಕೋ. ಒಬ್ಬಳೇ ದುಃಖಿಸಬೇಡ..!!" ಎಂದು ಹೇಳಿ ತಮ್ಮ ಮನೆಗೆ ತೆರಳಿದರು ಪದ್ಮಕ್ಕ.



Rate this content
Log in

Similar kannada story from Abstract