Achala B.Henly

Children Stories Inspirational Children

4  

Achala B.Henly

Children Stories Inspirational Children

ಪಾತರಗಿತ್ತಿ ಪಕ್ಕ... (ಮಕ್ಕಳ ಕಥೆ)

ಪಾತರಗಿತ್ತಿ ಪಕ್ಕ... (ಮಕ್ಕಳ ಕಥೆ)

3 mins
297



ವರ್ಷಾಳಿಗೆ ಎಂಟರ ಹರೆಯ. ಮುದ್ದಾದ ಪುಟ್ಟ ಬಾಲೆ. ಅಪ್ಪ ಅಮ್ಮನೊಂದಿಗೆ ವಾಸ. ಮನೆಯ ಹತ್ತಿರವಿರುವ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ. ಓದುವುದರಲ್ಲಿ ತುಂಬಾ ಜಾಣೆ. ಆದರೆ ಆತುರ ಜಾಸ್ತಿ. ಪ್ರಶ್ನೆಪತ್ರಿಕೆ ಕೊಟ್ಟ ತಕ್ಷಣ ಸಾವಧಾನವಾಗಿ ಎಲ್ಲಾ ಪ್ರಶ್ನೆಗಳನ್ನು ಓದಿ, ನಂತರ ಉತ್ತರಿಸಬೇಕೆಂದು ಅವಳ ತಾಯಿ ಎಷ್ಟೇ ಹೇಳಿ ಕಳುಹಿಸಿದರೂ ಪ್ರಯೋಜನವಿಲ್ಲ.


ವರ್ಷ ಮಾಡಿದ ತಪ್ಪನ್ನೇ ಮಾಡುತ್ತಾಳೆ..! ಒಂದೆರಡು ಪ್ರಶ್ನೆ ಓದುತ್ತಾಳೆ, ತನಗೆ ಉತ್ತರ ಗೊತ್ತು ಎಂದ ತಕ್ಷಣ ಬರೆಯಲು ಶುರು ಮಾಡುತ್ತಾಳೆ. ಈ ದಿನವೂ ಅವಳು ವಿಜ್ಞಾನದ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಮಾಡಿದ್ದು ಅದನ್ನೇ..! ಮೊದಲ ಎರಡು ಪ್ರಶ್ನೆ ಓದಿದಳು. ನಂತರ ತನಗೆ ಎಲ್ಲಾ ಗೊತ್ತಿದೆ ಎಂದು ಆತುರದಲ್ಲಿ ಬರೆಯಲು ಪ್ರಾರಂಭಿಸಿದಳು. ಕೊಟ್ಟ ಅವಧಿಗಿಂತ ಇಪ್ಪತ್ತು ನಿಮಿಷ ಬೇಗನೆ ಪರೀಕ್ಷೆ ಮುಗಿಸಿಬಿಟ್ಟಳು..!


ಇನ್ನೇನು ಪರೀಕ್ಷೆ ಮುಗಿಯಲು ಐದು ನಿಮಿಷವಿದೆ ಎನ್ನುವಾಗ, ವರ್ಷಾಗೆ ಬಹಳ ಖುಷಿ. ಕಾರಣ ಪರೀಕ್ಷೆಗಳು ಮುಗಿದು ದಸರಾ ರಜೆ ನಾಳೆಯಿಂದಲೇ ಶುರುವಾಗುತ್ತದೆ ಎಂದು..!! ಉತ್ತರ ಪತ್ರಿಕೆಯನ್ನು ತನ್ನ ಟೀಚರ್ ಗೆ ಕೊಟ್ಟು ಖುಷಿಯಿಂದಲೇ ಹೊರಗೆ ಬಂದಳು ವರ್ಷ....


ತನ್ನ ಸ್ನೇಹಿತರಾದ ಸೌಮ್ಯ ಮತ್ತು ಸಿಂಧುವಿನ ಹತ್ತಿರ "ಹೇಗೆ ಮಾಡಿದ್ದೀರಾ ಎಕ್ಸಾಮ್..?" ಎಂದು ಕೇಳಿದಳು.

 ಅದಕ್ಕೆ ಸೌಮ್ಯ "ಹೂಂ, ಪರವಾಗಿಲ್ಲ ಚೆನ್ನಾಗಿ ಮಾಡಿದ್ದೀವಿ. ಏಳು ಮತ್ತು ಎಂಟನೇ ಪ್ರಶ್ನೆಗಳು ಬಹಳ ಸುಲಭವಾಗಿ ಇದ್ದವು ಅಲ್ವಾ..?!" ಎಂದಳು. "ಹೌದಾ, ಯಾವ ಪ್ರಶ್ನೆ ಹೇಳು..." ಎಂದು ವರ್ಷ ಕೇಳಿದಳು. ತನ್ನ ಬ್ಯಾಗಿನಿಂದ ಪ್ರಶ್ನೆಪತ್ರಿಕೆಯನ್ನು ತೆಗೆದು "ನೋಡು ಇದೆ..!" ಎಂದಳು ಸೌಮ್ಯ.


ಆ ಪ್ರಶ್ನೆಗಳನ್ನು ನೋಡುತ್ತಿದ್ದಂತೆಯೇ ವರ್ಷಾಗೆ ಶಾಕ್ ಆದಂತೆ ಆಯ್ತು. ಕಾರಣ ತನಗೆ ಚೆನ್ನಾಗಿ ಗೊತ್ತಿದ್ದ ಪ್ರಶ್ನೆಗಳು ಅವು. ಆದರೆ ಆತುರವಾಗಿ ಬರೆದು ಮುಗಿಸಬೇಕೆಂದುಕೊಂಡಿದ್ದರಿಂದ ಈ ಎರಡು ಪ್ರಶ್ನೆಗಳನ್ನು ಬಿಟ್ಟಿದ್ದಳು ವರ್ಷ..! ತಲಾ ಎರಡು ಮಾರ್ಕಿನ ಪ್ರಶ್ನೆಗಳು ಅವು. ಹಾಗಾದರೆ ಒಟ್ಟಿಗೆ ನಾಲ್ಕು ಮಾರ್ಕ್ಸ್ ಕಳೆದುಕೊಂಡೆನಲ್ಲ..!! ಛೇ, ಇದೇನಪ್ಪಾ ಹೀಗೆ ಮಾಡಿದೆ..?! ಎಂದು ಮುಖ ಸಪ್ಪಗೆ ಮಾಡಿಕೊಂಡಳು ವರ್ಷ.


ಅಷ್ಟರಲ್ಲಿ ವರ್ಷ ತಾಯಿ ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದರು. ಮಗಳು ಪರೀಕ್ಷೆ ಮುಗಿಯಿತು ಎಂದು ಖುಷಿಯಾಗಿ ಇರುತ್ತಾಳೆ ಎಂದುಕೊಂಡರೆ, ಇದೇಕೆ ಹೀಗೆ ಇದ್ದಾಳೆ..? ಎಂದು ಕಾರಣ ಕೇಳಿದರು.


"ಅಮ್ಮ ನೀನು ಎಷ್ಟೋ ಸಲ ಅರ್ಜೆಂಟ್ ಮಾಡದೆ, ಪೂರ್ತಿ ಪತ್ರಿಕೆಯನ್ನು ಓದಿ ಪರೀಕ್ಷೆ ಬರಿ ಎಂದಿದ್ದೆ. ಜೊತೆಗೆ ಪರೀಕ್ಷೆ ಮುಗಿದ ನಂತರ ಒಂದೆರಡು ಸಲ ಚೆಕ್ ಮಾಡು ಎಂದೂ ಹೇಳಿದ್ದೆ. ಆದರೆ ನಾನು ಹಾಗೆ ಮಾಡಲಿಲ್ಲ. ಈ ಸಲ ನನಗೆ ಸೈನ್ಸ್ ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬರುತ್ತದೆ ಅಮ್ಮ..!!" ಎಂದು ಅಳಲು ಶುರುಮಾಡಿದಳು.


ಮಗಳನ್ನು ಸಮಾಧಾನಿಸಿದ ವರ್ಷ ತಾಯಿ, "ವರ್ಷ ಬೇಸರ ಮಾಡಿಕೊಳ್ಳಬೇಡ. ಆಗಿದ್ದು ಆಯ್ತು. ಈಗ ಮನೆಗೆ ನಡೆ..." ಎಂದು ಮನೆಗೆ ಕರೆತಂದರು.


ವರ್ಷಗೆ ಊಟ ಮಾಡಲು ಮನಸ್ಸಿರಲಿಲ್ಲ. "ಛೇ ತನ್ನಿಂದ ಈ ರೀತಿ ಆಯ್ತಲ್ಲ..! ಸುಮ್ಮನೆ ಅರ್ಜೆಂಟ್ ಮಾಡಿ ಮಾರ್ಕ್ಸ್ ಕಳೆದುಕೊಂಡೆ..!!" ಎಂದುಕೊಳ್ಳುತ್ತಿದ್ದಳು.


ಮತ್ತೆ ಮಗಳಿಗೆ ಹುರುಪು ತರಿಸಬೇಕೆಂದರೆ, ತನ್ನ ಖಜಾನೆಯಲ್ಲಿರುವ ಕಥೆಗಳೇ ಸರಿ ಎಂದುಕೊಂಡರು ವರ್ಷ ತಾಯಿ. "ವರ್ಷ ಬಾ ಇಲ್ಲಿ, ಇವತ್ತು ನಾನೇ ನಿನಗೆ ಊಟ ಮಾಡಿಸುತ್ತೇನೆ. ಜೊತೆಗೆ ಒಂದು ಚೆಂದದ ನೀತಿ ಕಥೆ ಹೇಳ್ತೀನಿ..!!" ಎಂದರು.


"ಹೌದಾ ಹೇಳಮ್ಮ. ನನಗೂ ಬೋರ್ ಆಗ್ತಾ ಇದೆ..." ಎಂದಳು ವರ್ಷ. ನಮ್ಮ ತೋಟದಲ್ಲಿ ನೋಡುತ್ತೀಯಲ್ಲ ಚಿಟ್ಟೆ ಅದಕ್ಕೆ ಪಾತರಗಿತ್ತಿ ಎಂಬ ಪದದಿಂದಲೂ ಕರೆಯುತ್ತಾರೆ ವರ್ಷ. ಸರಿ ಈ ಕಥೆಗೆ ಹೆಸರು 'ಪಾತರಗಿತ್ತಿ ಪಕ್ಕ...!" ಎಂದೇ ಇಡೋಣ. ಇದಕ್ಕೆ ಸಂಬಂಧಿತ ಬೇಂದ್ರೆ ಅಜ್ಜನ ಒಂದು ಹಾಡು ಸಹ ಇದೆ..!! ಅದನ್ನು ಸಂಜೆ ಹೇಳಿಕೊಡುತ್ತೇನೆ. ಈಗ ನಾನು ಹೇಳುವುದನ್ನು ಗಮನವಿಟ್ಟು ಕೇಳು..."


"ದಿನವೂ ನಮ್ಮ ತೋಟದಲ್ಲಿ ನೋಡುವ ಚಿಟ್ಟೆಗಳು ಎಷ್ಟು ಸುಂದರವಾಗಿರುತ್ತದೆ ಅಲ್ವಾ..?!"


"ಹೌದು ಅಮ್ಮ, ಒಂದೊಂದು ಚಿಟ್ಟೆಯು ಒಂದೊಂದು ಬಣ್ಣ. ಹಿಡಿಯೋಣ ಎಂದರೆ ಕೈಗೆ ಸಿಗಲ್ಲ..! ಬಣ್ಣ ಬಣ್ಣದ ಚಿಟ್ಟೆಗಳು. ನನಗಂತೂ ತುಂಬಾ ಇಷ್ಟ..!" ಎಂದಳು ವರ್ಷ.


"ಆದರೆ ಈ ಚಿಟ್ಟೆಗಳು ಹುಟ್ಟುತ್ತಲೇ ಇಷ್ಟು ಚೆಂದಗೆ, ಆಕರ್ಷಕವಾಗಿ ಇರಲ್ಲ ವರ್ಷ..! ಹುಟ್ಟಿದಾಗ ಕಂಬಳಿ ಹುಳುಗಳಾಗಿ ಇರುತ್ತವೆ. ನಾವೆಲ್ಲ ಬಟ್ಟೆಗೆ ಹತ್ತುತ್ತವೆ ಎಂದು ಅವನ್ನು ಕಂಡರೆ ದೂರ ದೂರ ಹೋಗ್ತೀವಿ ಗೊತ್ತಾ..? ಅದೇ ಕಂಬಳಿ ಹುಳು. ನಂತರ ಒಂದಷ್ಟು ದಿನ ಚೆನ್ನಾಗಿ ತಿಂದು, ಕೋಶ ಕಟ್ಟಿಕೊಂಡು ದಿನಗಳನ್ನು ದೂಡುತ್ತವೆ. ಅದೆಷ್ಟೋ ದಿನಗಳು ಕಳೆದ ನಂತರ ಆ ಕೋಶದಿಂದ ಹೊರಬಂದು, ಸುಂದರ ಚಿಟ್ಟೆಯಾಗಿ ಹೂವುಗಳ ಸುತ್ತ ಸುತ್ತುತ್ತಾ, ನಮ್ಮೆಲ್ಲರನ್ನು ಖುಷಿಪಡಿಸುತ್ತವೆ. ಈ ಕೋಶವನ್ನು ಸಹ ನಿನಗೆ ತೋರಿಸಿದ್ದೇನೆ. ನಮ್ಮ ಕಾಂಪೌಂಡ್ ಮೇಲೆ ಕೆಲವು ಇರುತ್ತದೆಯಲ್ಲ ಅವೇ..!!"


"ಸರಿ ಈಗ ಕೇಳು... ಈ ಚಿಟ್ಟೆಯ ಬದುಕೇ ನಮಗೆಲ್ಲರಿಗೂ ಸ್ಪೂರ್ತಿ ಅಲ್ವಾ..?! ಗೆಲುವು ಎಂಬುದು ತಕ್ಷಣ ಬರಲ್ಲ. ಅದಕ್ಕಾಗಿ ಸತತವಾಗಿ ಪರಿಶ್ರಮ ಪಡಬೇಕು. ಧ್ಯಾನ ಮಾಡಿದಂತೆ ಅದರ ಕಡೆಯೇ ಗಮನ ಹರಿಸಬೇಕು. ಕಂಬಳಿ ಹುಳು ಕೋಶ ಕಟ್ಟಿಕೊಂಡು ಇರುತ್ತದೆಯಲ್ಲ ಆ ರೀತಿ..!!"


"ಆತುರವಾಗಿ ಮಾಡಿದರೆ ಯಾವುದೂ ಸಿಗುವುದಿಲ್ಲ. ಹಾಗೆಯೇ ನಿನ್ನ ಪರೀಕ್ಷೆಗಳು ಸಹ. ಬೇಗನೆ ಓದಿ, ಬರೆದು ಬಿಡುತ್ತೇನೆ ಎಂದರೆ ಆಗುವುದಿಲ್ಲ. ಮೊದಲು ಚೆನ್ನಾಗಿ ಓದಬೇಕು. ಪ್ರಶ್ನೆಗಳನ್ನು ಓದಿ ಅರ್ಥ ಮಾಡಿಕೊಂಡು ನಂತರ ಉತ್ತರಿಸಬೇಕು. ಎರಡೆರಡು ಸಲ ಚೆಕ್ ಮಾಡಬೇಕು. ಆಮೇಲೆ ಬರೆದೆ ಎಂದು ಖುಷಿಪಡುವುದು. ಮೊದಲೇ ಖುಷಿಪಟ್ಟರೆ ಈ ರೀತಿ ಆಗುತ್ತದೆ..!!"


"ಗೆಲುವು ಯಾವಾಗಲೂ ಹಂತ ಹಂತವಾಗಿ ಸಿಗಬೇಕು ವರ್ಷ. ಮೊದಲನೇ ಮೆಟ್ಟಿಲು ಹತ್ತುವಾಗಲೇ ನಾನು ಗೆದ್ದೆ ಎಂದು ಬೀಗಿದರೆ ಬೀಳುವ ಸಂಭವವೇ ಹೆಚ್ಚು. ಒಮ್ಮೆ ಎಲ್ಲವನ್ನು ಸರಿಯಾಗಿ ಪೂರೈಸಿದರೆ ನಂತರ ಗೆಲುವು ನಮಗೆ ಕಟ್ಟಿಟ್ಟ ಬುತ್ತಿ..! ಎಂದು ತಿಳಿಯಬೇಕು. ಇದೇ ಚಿಟ್ಟೆಯ ಬದುಕು ನಮಗೆ ತಿಳಿಸಿಕೊಡುವುದು. ಅರ್ಥವಾಯಿತು ಅಲ್ವಾ ವರ್ಷ..?!" ಎಂದು ಕಥೆಯನ್ನು ಮುಗಿಸಿದರು.


"ಹೂಂ ಅಮ್ಮ, ಇನ್ನು ಮೇಲೆ ನೀನು ಹೇಳಿದಂತೆ ಖಂಡಿತ ಕೇಳುತ್ತೇನೆ. ಎಲ್ಲದರಲ್ಲೂ ಅರ್ಜೆಂಟ್ ಮಾಡುವುದಿಲ್ಲ..!!" ಎಂದಳು ವರ್ಷ.


**ನಿಧಾನವೇ ಪ್ರಧಾನ ಮತ್ತು ಆತುರಗಾರರಿಗೆ ಬುದ್ಧಿಮಟ್ಟ ಎಂಬ ನೀತಿಗಳು ಅಡಕವಾಗಿದೆ**




Rate this content
Log in