mamta km

Classics Inspirational Others

4  

mamta km

Classics Inspirational Others

ದೀಪವು ನಿನ್ನದೇ, ಗಾಳಿಯು ನಿನ್ನದೇ

ದೀಪವು ನಿನ್ನದೇ, ಗಾಳಿಯು ನಿನ್ನದೇ

3 mins
286


ದೀಪವು ನಿನ್ನದೇ, ಗಾಳಿಯು ನಿನ್ನದೇ, ಆರದಿರಲಿ ಬದುಕು.. ಕಡಲು ನಿನ್ನದೇ, ಹಡಗು ನಿನ್ನದೇ..ಮುಳುಗದಿರಲಿ ಬದುಕು.. ಕೆ ಎಸ್ ನರಸಿಂಹಸ್ವಾಮಿಯವರ ಕವನ ಎಫ಼್ ಎಮ್ ರೇಡಿಯೋದಲ್ಲಿ ಅಲೆಯಲೆಯಾಗಿ ಕೇಳಿ ಬರುತ್ತಿತ್ತು..

  ಹಾಡಿನ ಮಾಧುರ್ಯದಲ್ಲಿ ಕಳೆದು ಹೋಗಿ ಹಾಡಿನಲ್ಲಿ ತನ್ಮಯಳಾಗಿ ತಾನೂ ಗುನುಗುತ್ತಾ ಇದ್ದ ಸ್ವಾತಿಗೆ ಪಟ ಪಟ ಎಂದು ಮಳೆ ಶುರುವಾದ ಶಬ್ದ ಕೇಳಲಿಲ್ಲ.

  ಅಷ್ಟರಲ್ಲಿ ಅವರ ಅತ್ತೆ ಬಂದು "ಹಿಂಗೆ ಹಾಡು ಕೇಳ್ತಾ ಅದರಲ್ಲೇ ಮುಳುಗಿದರೆ, ಊರು ಮುಳುಗಿದರೂ ಗೊತ್ತಾಗಲ್ಲ, ಮೂದೇವಿ", ಎಂದು ಜೋರಾಗಿ ಬೈದಾಗ, ವಾಸ್ತವಕ್ಕೆ ಬಂದ ಸ್ವಾತಿ ಗಡಬಡಿಸಿ ಹೊರಗೆ ಓಡಿ, ಮಹಡಿ ಮೇಲೆ ಬಂದಳು. ಬಾನೆಲ್ಲಾ ಕಪ್ಪಾದ ಮೋಡ ಕವಿದು ಮಳೆ ಬರಲು ಶುರುವಾಗಿತ್ತು. ಬಟ್ಟೆಗಳನ್ನೆಲ್ಲಾ ಬೇಗ ಬೇಗ ತೆಗೆದು ಸುತ್ತಲೂ ಒಮ್ಮೆ ದಿಟ್ಟಿಸಿದಳು. ಗಾಳಿಗೆ ಮರಗಳೆಲ್ಲಾ ಅಲ್ಲಾಡುತ್ತಾ, ಒಣಗಿದ ಎಲೆಗಳೆಲ್ಲಾ, ಗಾಳಿಗೆ ತೇಲುತ್ತಾ ಬರುತ್ತಿತ್ತು. ಹಕ್ಕಿಗಳೆಲ್ಲಾ ಗಡಿಬಿಡಿಯಲ್ಲಿ, ಚಿಲಿಪಿಲಿ ಗುಟ್ಟುತ್ತಾ ಹಾರಾಡುತ್ತಿದ್ದ ದೃಶ್ಯ ನೋಡಿ, ಈ ಮನೆಯಲ್ಲಿ ಅತ್ತೆಯ ಮಾತು, ಗಂಡನ ಮೌನ ನೋಡಿದಾಗ, ನನ್ನ ಪರಿಸ್ಥಿತಿಯು ಹೀಗೆ ಅದುರಿ ಹೋಗುವಂತೆ ಆಗುತ್ತದೆ ಅನ್ನಿಸಿತು.

 ಏನನ್ನೂ ಸಾಧನೆ ಮಾಡಲು ಆಗದಿದ್ದರೂ, ಕೊನೆಗೊಂದು ಹಾಡನ್ನು ಕೇಳಲು, ಆಸ್ವಾದಿಸಲು ತನಗೊಂದು ಸ್ವಾತಂತ್ರ್ಯವೂ ಇಲ್ಲವಾಯಿತಲ್ಲಾ ಎಂದು ಚಿಂತಿಸುತ್ತಾ, ಕೆಳಗಿಳಿದು ಬಂದು ಬಟ್ಟೆಗಳೆಲ್ಲಾ ಅದರ ಸ್ಥಾನದಲ್ಲಿ ಸೇರಿಸಿಟ್ಟಳು. 

  ಅಷ್ಟರಲ್ಲಿ ಬಂದ ಸುರೇಶನ ಬಳಿ ರೇಣುಕಮ್ಮ, "ನಿನ್ನ ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ, ಒಂದು ದಿನ ಹಾರಿ ಹೋಗುತ್ತಾಳೆ, ಹಾಡು ಕುಣಿತ ಅಂತ ಅವಳಿಗೆ ಈ ಲೋಕದ ಜ್ಞಾನವೇ ಇರಲ್ಲ".ಎಂದಾಗ, "ಏನಾಯಿತು, ಈಗ ಏನು ಮಾಡಿದಳು?"ಎಂದನು.

ಮತ್ತೆ ರುಕ್ಮಿಣಿಯವರು, "ಹಾಡು ಕೇಳುತ್ತಾ ಅದರಲ್ಲೇ ಮುಳುಗಿ ಹೋಗಿರುತ್ತಾಳೆ, ಮೈಮೇಲೆ ಪ್ರಜ್ಞೆ ಇರುವುದಿಲ್ಲ" ಎಂದಾಗ, "ಸುತ್ತಿ ಬಳಸಿ ಮಾತು ಯಾಕೆ ವಿಷಯ ಹೇಳಿ" ಅಂದಾಗ, ಮನೆಕೆಲಸ ಮಾಡಲು ಅವಳಿಗೆ ಗಮನವೇ ಇರುವುದಿಲ್ಲ, ಎಲ್ಲಾ ಕೆಲಸ ಮಾಡುವಾಗಲೂ ಹಾಡು ಕೇಳಿ ಕೊಂಡು ಹೇಳಿಕೊಂಡು ಕೆಲಸವೆಲ್ಲಾ ಹಾಳು, ಯಾವುದನ್ನು ಸರಿಯಾಗಿ ಮಾಡುವುದಿಲ್ಲ ಎಂದು ದೂರಿದರು. 


  ಸ್ವಾತಿಗೆ ಸಂಗೀತ ಎಂದರೆ ಪ್ರಾಣ. ಬಾಲ್ಯದಿಂದಲೂ ಸಂಗೀತ ಕಲಿತು ಅದರಲ್ಲಿ ಸಾಧನೆ ಮಾಡಿದವಳು. ಆದರೆ ದೈವ ಇಚ್ಚೆ ಏನಿತ್ತೋ ಏನೋ ಅವಳಿಗೆ, ಸಂಗೀತವೆಂದರೆ ಹೆಣ್ಣು ಮಕ್ಕಳಿಗಲ್ಲ. ಹೆಣ್ಣು ಮಕ್ಕಳು ದೇವರ ಕೀರ್ತನೆಗಳು ಭಜನೆ ಬಿಟ್ಟು ಇನ್ಯಾವ ಹಾಡನ್ನು ಹೇಳುವಂತಿಲ್ಲ, ಸಂಗೀತ ಕಚೇರಿಗಳನ್ನು ನಡೆಸುವುದು ನಮ್ಮಂತ ಮರ್ಯಾದಸ್ತರಿಗೆ ತರವಲ್ಲ ಎನ್ನುವ ಮನಸ್ಥಿತಿಯ ಕುಟುಂಬದೊಂದಿಗೆ ಕಂಕಣ ಭಾಗ್ಯ ಕೂಡಿ ಬಂತು. 


  ಸ್ವಾತಿಯನ್ನು ಒಂದು ವಿವಾಹ ಸಮಾರಂಭದಲ್ಲಿ ನೋಡಿದ ಸುರೇಶನಿಗೆ ಅವಳ ಅಂದ ಚಂದ ಕಣ್ಮನಸೆಳೆಯಿತು. ಜೊತೆಗೆ ತನ್ನ ವಿದ್ಯೆಗೆ ತಕ್ಕಂತೆ, ಅಂತಸ್ತಿಗೆ ತಕ್ಕ ಹುಡುಗಿ ಎಂದು ಅವಳನ್ನು ಮದುವೆಯಾಗುವುದಾಗಿ ಹೇಳಿದಾಗ, ಅವಳು ಸುರೇಶನಲ್ಲಿ ತನ್ನ ಸಂಗೀತದ ಬಗ್ಗೆ ಇರುವ ಆಸಕ್ತಿಯನ್ನು ತಿಳಿಸಿದಾಗ ಅವನು ಅದರ ಬಗ್ಗೆ ಅಷ್ಟಾಗಿ ಗಮನವೀಯದೆ ಸಮಯ ಬಂದಾಗ ನೋಡೋಣವೆಂದು ಹೇಳಿದ್ದನೇ ಹೊರತು ಸಂಗೀತವನ್ನು ಅಭ್ಯಾಸ ಮಾಡಬಾರದು ಎಂದು ಹೇಳಿರಲಿಲ್ಲ. ಆದರೆ ಅವನ ಮನೆಯವರಿಗೆ ಅವಳು ಸಂಗೀತದಲ್ಲಿ ಸಾಧನೆ ಮಾಡಿದ ಹುಡುಗಿ ಎಂದು ತಿಳಿದಿರಲಿಲ್ಲ. ಎರಡು ಕುಟುಂಬದವರು ಅದರ ಬಗ್ಗೆ ಹೆಚ್ಚಿಗೆ ಗಮನ ನೀಡದೇ, ಸ್ವಾತಿ ವಿವಾಹವನ್ನು ಸುರೇಶನೊಂದಿಗೆ ಅದ್ದೂರಿಯಾಗಿ ಮಾಡಿದರು. ಆದರೆ ಕುಳಿತಲ್ಲಿ ನಿಂತಲ್ಲಿ ಸಂಗೀತವನ್ನು ಉಸಿರಾಗಿಸಿಕೊಂಡಿದ್ದ ಸ್ವಾತಿಯ ಜೀವನದಲ್ಲಿ, ಹೆಣ್ಣು ಮಕ್ಕಳು ಹಾಡುವುದನ್ನು ತಿರಸ್ಕರಿಸುವ ಮನೆಯವರ ನಡುವೆ ಸಂಬಂಧ ಕೂಡಿ ಬಂದಿದ್ದು ವಿಷಾದ ಎನ್ನಿಸಿತು.

 ಅದಕ್ಕಾಗಿ ಅತ್ತೆ, ಮಾತು ಮಾತಿಗೂ ಹಂಗಿಸುವಾಗ ಇಷ್ಟಪಟ್ಟು ಕಲಿತ ಸಂಗೀತವನ್ನು ಹಾಡಲು ಕೇಳಲು ಅವಳಿಗೆ ಏನೋ ಹಿಂಜರಿಕೆ, ಕಸಿವಿಸಿ, ಮನದಾಳದಲ್ಲಿ ಹೇಳಲಾರದ ನೋವು. ಅಮ್ಮನ ಮಾತನ್ನು ತೆಗೆದು ಹಾಕದ ಸುರೇಶನಿಗೆ ಹೆಂಡತಿ ಹಾಡುವುದು ಅಭ್ಯಂತರವಿಲ್ಲದಿದ್ದರೂ ಪ್ರೋತ್ಸಾಹ ನೀಡುತ್ತಿರಲಿಲ್ಲ. ಹಾಗೂ ಅವಳ ತಂದೆ ತಾಯಿಯವರು ಮಗಳ ಇಷ್ಟದ ಹವ್ಯಾಸ ಮೂಲೆಗುಂಪಾಗಿದ್ದರೂ, ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು, ಅವಳಿಗೆ ಹೊಂದಿಕೊಂಡು ಹೋಗುವಂತೆ ಹೇಳುವಾಗ ಅವಳಿಗೆ ಒಮ್ಮೊಮ್ಮೆ ಮನಸ್ಸು ಭಾರವಾಗುತ್ತಿತ್ತು. 

 ಹೊರಗಡೆ ಹಾಡಲು ಅವಕಾಶವಿಲ್ಲದಿದ್ದರೂ ಅಷ್ಟು ಬೇಸರವೆನಿಸುತ್ತಿರಲಿಲ್ಲ, ಆದರೆ ಸಂಗೀತವೇ ಉಸಿರಾದ ತನಗೆ ಮನೆಯಲ್ಲಿ ತನ್ನಿಷ್ಟದಂತೆ ಹಾಡಿಕೊಳ್ಳಲು ಅವಕಾಶವಿಲ್ಲದಿರುವುದು ಕೊರಗಾಗಿ ಪರಿಣಮಿಸುತ್ತಿತ್ತು. ಇಷ್ಟೆಲ್ಲಾ ನೋವಾದರೂ ಅವಳ ಮನಸ್ಸಿಗೆ ಸಮಾಧಾನ ನೀಡುತ್ತಿದ್ದಿದ್ದು ಕೇವಲ ಸಂಗೀತವೊಂದೇ. ಸದಾಕಾಲ ಹಾಡಲಾಗದಿದ್ದರೂ, ಸಂಗೀತವನ್ನು ಕೇಳುತ್ತಾ ಕೆಲಸ ಮಾಡಿಕೊಳ್ಳುವ ಸೊಸೆಯನ್ನು ಕಂಡರೆ ರೇಣುಕಮ್ಮನವರಿಗೆ ಕಿರಿಕಿರಿ. ಕೇಳಿದ ಪ್ರಶ್ನೆಗೆ ತಟ್ಟೆಂದು ಉತ್ತರಿಸದೆ ಕೆಲಸ ಮಾಡುವಾಗ ಹಾಡಿನಲ್ಲಿ ಒಮ್ಮೊಮ್ಮೆ ಮೈಮರೆಯುವ ಅವಳನ್ನು ನೋಡಿದರೆ ಅವರು ಕೋಪಗೊಳ್ಳುತ್ತಿದ್ದರು. ಸುರೇಶ ಪತ್ನಿಯನ್ನು ವಹಿಸಿಕೊಳ್ಳಲಾಗದೆ, ತಾಯಿಯ ವಿರುದ್ಧವಾಗಿ ಮಾತನಾಡಲಾರದೆ ತಟಸ್ಥನಾಗಿ ಇದ್ದುಬಿಡುತ್ತಿದ್ದ. ಇದೇ ಕೆಲವೊಮ್ಮೆ ಅವಳಿಗೆ ನುಂಗಲಾರದ ತುತ್ತೆನಿಸುತ್ತಿತ್ತು. 


ಇದೆಲ್ಲಾ ಆಲೋಚನೆಗಳನ್ನು ಮಾಡುತ್ತಾ, ಮನೆ ಕೆಲಸದಲ್ಲಿ ತಲ್ಲಿನಾಳಾದ ಸ್ವಾತಿಗೆ ಮುಸ್ಸಂಜೆಯ ಹೊತ್ತಾಯಿತು ದೇವರಿಗೆ ದೀಪವಿಡಬೇಕೆನ್ನುವ ನೆನಪಾಗುತ್ತದೆ.ದೇವರ ನಾಮವನ್ನು ಹಾಡುತ್ತಾ, ದೇವರ ಮನೆ ಸೇರಿದವಳ ಮೊಬೈಲ್ನಲ್ಲಿ ದೇವರ ಭಕ್ತಿ ಗೀತೆಗಳು ಸುಶ್ರಾವ್ಯವಾಗಿ ಕೇಳಿ ಬರುತ್ತಿತ್ತು. ದೇವರ ಮುಂದೆ ತುಪ್ಪದ ದೀಪ ಹಚ್ಚುವಾಗ, ಅವಳ ಮನೆಯ ಮನದಲ್ಲಿ ತಲ್ಲಣಗಳು ಏಳುತ್ತಿತ್ತು. ಇಷ್ಟೊಂದು ಸಂಗೀತದ ಮೇಲೆ ಮೋಹವನ್ನು ಕೊಟ್ಟು, ಹಾಡಲಾರದ ಪರಿಸ್ಥಿತಿ ತಂದ ದೇವರ ಮೇಲೆ ಅವಳಿಗೆ ಬೇಸರವೆನಿಸುತ್ತಿತ್ತು. ಅವಳ ಮನಸ್ಸು ಭಾರವಾಗಿ ಕೈಗಳು ದೀಪ ಹಚ್ಚಿದರೂ, ಮನಸ್ಸು "ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕು ಎಂದು ದೇವರ ಕುರಿತಾಗಿ ಹೇಳಿಕೊಳ್ಳುತ್ತಾ, ನೀನೇ ಕೊಟ್ಟ ಸಂಗೀತದ ಆಸಕ್ತಿ ಇಂದು ನಿನ್ನಿಂದಲೇ ಕಮರಿ ಹೋಗುತ್ತಿದೆ.ನೀನು ಇಟ್ಟಂತೆ ನನ್ನ ಬದುಕು ಸಾಗುತ್ತಿದೆ. ಕಡಲು ನಿನ್ನದೇ ಹಡಗು ನಿನ್ನದೇ, ಅಂತೆಯೇ ನನ್ನ ಮನದಾಳದ ಆಸೆ ಹಾಡುವುದು, ಅದನ್ನು ಉಳಿಸುತ್ತೀಯೋ ಹಾಡಲಾಗದೆ ನನ್ನನ್ನು ಮುಳುಗಿಸುತ್ತೀಯೋ ನಿನಗೆ ಬಿಟ್ಟಿದ್ದು ಎಂದು ಪ್ರಾರ್ಥಿಸುತ್ತಾ..ದೀಪ ಹಚ್ಚಿ ಅಡುಗೆ ಮನೆಯತ್ತ ಸಾಗುವಾಗ, ಸುರೇಶ ತಾಯಿಯ ಬಳಿ, "ಅವಳು ಸಂಗೀತದಲ್ಲಿ ಅಷ್ಟೆಲ್ಲಾ ಸಾಧನೆ ಮಾಡಿದ್ದರೂ, ನಿಮಗಿಷ್ಟವಿಲ್ಲ ಎಂದು ಹೊರಗಡೆ ಹೋಗಿ ಹಾಡುವುದನ್ನು ಬಿಟ್ಟಿದ್ದಾಳೆ. ಆದರೆ ಮನೆಯೊಳಗೂ ಹಾಡಬಾರದು ಎಂದರೆ ಅವಳಿಗೆ ಬೇಸರವಾಗದೇನು? ಅವಳು ಹಾಡಿಕೊಂಡಿರಲಿ ಬಿಡಿ ಈ ವಿಷಯವಾಗಿ ನನ್ನಲ್ಲಿ ಇನ್ನು ಏನನ್ನು ಹೇಳಬೇಡಿ, ಎಂದು ಹೇಳುವುದನ್ನು ಕೇಳಿ ಸ್ವಾತಿಯ ಮನಸ್ಸು ತುಂಬಿ ಬಂತು.


 ಕೋಣೆಗೆ ಬಂದ ಸುರೇಶ ಸ್ವಾತಿಯ ಬಳಿ,ನಿನ್ನಿಷ್ಟದ ಸಂಗೀತ ಅಭ್ಯಾಸವನ್ನು ಸಮಯವಾದಾಗ, ನೀನೊಬ್ಬಳೇ ಇದ್ದಾಗ, ಹಾಡಿಕೊ.ಅಂತೆಯೇ ಮುಂದೆ ಸಂಗೀತದಲ್ಲಿ ಸಾಧನೆ ಮಾಡುವ ದಿನಗಳು ಬರಬಹುದು, ಅದಕ್ಕಾಗಿ ಈಗ ಕೊರಗದೇ, ಆದಷ್ಟು ಸಂತೋಷವಾಗಿರು ಎಂದಾಗ, ಅವಳ ಮನಸ್ಸು ಹಕ್ಕಿಯಂತೆ ಹಗುರಾಯಿತು.


Rate this content
Log in

Similar kannada story from Classics