Achala B.Henly

Abstract Romance Classics

4.5  

Achala B.Henly

Abstract Romance Classics

ಮೊದಲ ಮಳೆಯಂತೆ...

ಮೊದಲ ಮಳೆಯಂತೆ...

5 mins
404



ಅಂದು ಎಂದಿನಂತೆ ಓಡುತ್ತಲೇ ಕಾಲೇಜು ಬಸ್ಸನ್ನು ಹಿಡಿದು ನಿಲ್ಲಿಸಿದಳು ಸ್ವಾತಿ. ಸ್ವಾತಿಯ ಕಥೆಯೇ ಹಾಗೆ. ದಿನವೂ ರಾತ್ರಿ ಕಾಲೇಜಿನ ಪಾಠ-ಪರೀಕ್ಷೆ ಎಂದು ಮಲಗುವುದು ಲೇಟು. ನಂತರ ಬೆಳಿಗ್ಗೆ ಅವರಮ್ಮ ನಾಲ್ಕು ಕೂಗು ಹಾಕಿದರೂ ಅವಳಿಗೆ ಎಚ್ಚರವಾಗುವುದಿಲ್ಲ! "ಸ್ವಾತಿ ಏಳೇ, ಗಂಟೆ ಏಳಾಯಿತು?" ಎಂದು ಕಿರುಚಿದಾಗಲೇ ದಡಬಡಾಯಿಸಿಕೊಂಡು ಎದ್ದು ರೆಡಿಯಾಗುತ್ತಾಳೆ. ತಿಂಡಿಯನ್ನು ಶಾಸ್ತ್ರಕ್ಕೆಂದು ಮುಗಿಸಿ, ಲೈಟಾಗಿ ಸಿಂಗರಿಸಿಕೊಂಡು, ತನ್ನ ಮನೆಯ ಹತ್ತಿರವೇ ಇರುವ ಕಾಲೇಜಿನ ಸ್ಟಾಪಿಗೆ ಓಡುನಡಿಗೆಯಲ್ಲೇ ಬರುತ್ತಾಳೆ. ಅಷ್ಟೊತ್ತಿಗೆ ಎಂದಿನಂತೆ ಬಸ್ಸು ಹೊರಡಲು ಶುರುವಾಗಿರುತ್ತದೆ ಅಥವಾ ಹೊರಟೇ ಬಿಟ್ಟಿರುತ್ತದೆ! ಬಸ್ಸಿನಲ್ಲಿರುವ ಗೆಳತಿಗೆ ಫೋನ್ ಕರೆಯನ್ನು ಮಾಡಿ, ಬಸ್ಸನ್ನು ನಿಲ್ಲಿಸಲು ಯಶಸ್ವಿಯಾಗುತ್ತಾಳೆ. ಈ ಕಾರ್ಯಕ್ರಮ ಅವಳು ಇಂಜಿನಿಯರಿಂಗ್ ಗೆ ಸೇರಿದಾಗಿನಿಂದಲೂ ನಡೆಯುತ್ತಲೇ ಇದೆ.


ಈಗ ಸ್ವಾತಿ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ. ಆ ದಿನವೂ ಓಡಿಕೊಂಡೇ ಬಸ್ಸನ್ನು ಹತ್ತಿದಳು. ಸೀಟಿಗಾಗಿ ತಡಕಾಡಿ ಕೊನೆಗೆ ಖಾಲಿಯಿದ್ದ ಒಂದು ಸೀಟಿನಲ್ಲಿ ಸುಸ್ತಾಗಿ ಕೂತಳು. ಪಕ್ಕದಲ್ಲಿ ಯಾರೋ ಕೂತಿದ್ದಾರೆ ಎಂಬ ಅರಿವೇ ಇರಲಿಲ್ಲ ಅವಳಿಗೆ. "ಸೀಟು ಸಿಕ್ಕಿತಲ್ಲ ಅಷ್ಟು ಸಾಕು!" ಎಂಬ ಖುಷಿಯಲ್ಲಿ ಇದ್ದಳು. ಹತ್ತು ನಿಮಿಷ ಕಳೆಯಲು ಕಿಟಕಿ ಆಚೆಗೆ ನೋಡಲು ಹೊರಟವಳಿಗೆ, ಕಂಡಿದ್ದು ಒಂದು ಚೆಂದದ ಹುಡುಗನ ಮುಖ!! "ಇಲ್ಲಿಯವರೆಗೂ ತಮ್ಮ ಬಸ್ಸಿನಲ್ಲಿ ಬರದಿದ್ದವನು ಇಂದೇಕೆ ಬಂದ?" ಎಂದು ಪ್ರಶ್ನಾರ್ಥಕವಾಗಿ ಅವನನ್ನು ದಿಟ್ಟಿಸಿದಳು. ಕೊನೆಗೆ ಯಾರೋ ಟ್ರಾನ್ಸ್ಫರ್ ಕೇಸ್ ಅನಿಸುತ್ತೆ, ಹೊಸ ಹುಡುಗನಾದರೂ ನೋಡೋದಕ್ಕೆ ಬಲು ಸುಂದರ ಎಂದು ಮನಸ್ಸಿನಲ್ಲಿ ಅಂದುಕೊಂಡಳು!


ಆ ದಿನ ಮಧ್ಯಾಹ್ನ ಅವಳಿಗೆ ಕಂಪ್ಯೂಟರ್ ಲ್ಯಾಬ್ ಇತ್ತು. ಊಟವನ್ನು ಬೇಗ ಮುಗಿಸಿ, ರೆಕಾರ್ಡ್ ನಲ್ಲಿ ಬರೆಯಬೇಕಿದ್ದ ಎಲ್ಲಾ ಪ್ರೋಗ್ರಾಮ್ಗಳನ್ನು ನೀಟಾಗಿ ಬರೆದಿಟ್ಟು, ಗೆಳತಿಯರೊಂದಿಗೆ ಹೊರಟಳು. ಲ್ಯಾಬ್ ನ ಒಳಗೆ ಮತ್ತೆ ಆ ಹುಡುಗನೇ ಕಾಣಬೇಕೆ?! "ಎಂತಹ ಚೆಲುವನಿವ..!! ಆದರೆ ಇವನೇಕೆ ಹೀಗೆ ಫಾರ್ಮಲ್ಸ್ ನಲ್ಲಿ ಕಾಲೇಜಿಗೆ ಬಂದಿದ್ದಾನೆ?" ಎಂದುಕೊಂಡಳು. ಅಷ್ಟೊತ್ತಿಗಾಗಲೇ ಇವಳ ಗೆಳತಿಯರ ಕಣ್ಣು ಆ ಯುವಕನ ಮೇಲೆ ಬಿದ್ದಿತ್ತು. ಜೊತೆಗೆ ಆ ಹೊಸ ಹುಡುಗ ವಿದ್ಯಾರ್ಥಿಯಲ್ಲ, ತಮ್ಮ ಡಿಪಾರ್ಟ್ಮೆಂಟ್ ಗೆ ಬಂದಿರುವ ಹೊಸ ಅಧ್ಯಾಪಕನೆಂದು ಎಲ್ಲರಿಗೂ ಗೊತ್ತಾಯ್ತು!! ಸ್ವಾತಿಗಂತೂ ಒಂದು ರೀತಿಯಲ್ಲಿ ಸಂತೋಷ, ಇನ್ನೊಂದು ರೀತಿಯಲ್ಲಿ ನಾಚಿಕೆಯಾಯಿತು. "ಛೇ ಬೆಳಿಗ್ಗೆ ತನ್ನ ಪಕ್ಕದಲ್ಲಿ ಕೂತಿದ್ದರೂ, ತಮಗೆ ಪಾಠ ಮಾಡುವ ಹೊಸ ಸರ್ ಇವರು ಎಂದು ತಿಳಿಯದೇ ತನ್ನ ಪಾಡಿಗೆ ತಾನಿದ್ದುಬಿಟ್ಟೆನಲ್ಲ" ಎಂದುಕೊಂಡಳು. ಜೊತೆಗೆ ಒಳಒಳಗೆ ಖುಷಿಯೂ ಸಹ. "ಈ ಸರ್ ನಮ್ಮ ಡಿಪಾರ್ಟ್ಮೆಂಟ್. ಅದೂ ನಮಗೆ ಪಾಠ ಮಾಡುತ್ತಾರಲ್ಲ ಎಂದು!"


ಅಂತೂ ಕ್ಲಾಸಿನ ಬೆಲ್ ಹೊಡೆಯಲು ಆ ಯುವಕ ಇವರನ್ನುದ್ದೇಶಿಸಿ ತನ್ನ ಪರಿಚಯವನ್ನು ಮಾಡಿಕೊಂಡ. "ನನ್ನ ಹೆಸರು ವರುಣ್ ಅಂತ. ಲಾಸ್ಟ್ ಇಯರ್ ಎಂ.ಟೆಕ್ ಮುಗಿಸಿದೆ. ಈಗ ಈ ಕಾಲೇಜಿಗೆ ಅಪಾಯಿಂಟ್ ಆಗಿದ್ದೇನೆ. ನನ್ನನ್ನು ನಿಮ್ಮ ಸ್ನೇಹಿತನಂತೆ ತಿಳಿದು, ಏನೇ ಡೌಟ್ಸ್ ಇದ್ದರೂ ಸಂಕೋಚಪಡದೇ ಕ್ಲಾರಿಫೈ ಮಾಡಿಕೊಳ್ಳಿ!" ಎಂದನು. ಹುಡುಗರೆಲ್ಲರೂ ಅವನ ಸ್ವಚ್ಛವಾದ, ಆತ್ಮವಿಶ್ವಾಸದಿಂದ ಕೂಡಿದ ಮಾತುಗಳಿಗೆ ಮರುಳಾದರೆ, ಹುಡುಗಿಯರೆಲ್ಲರೂ ಅವನ ಮಾತಿಗಿಂತ ಅವನು ತೊಟ್ಟಿದ್ದ ಇಸ್ತ್ರಿ ಹಾಕಿದ್ದ ಬಟ್ಟೆ, ಅವನ ಮಡಚಿದ ಶರ್ಟ್ ತೋಳುಗಳು, ವಾಚು, ಹೇರ್ ಸ್ಟೈಲ್ ಗೆ ಮರುಳಾದರು!! ಇದ್ಯಾವುದರ ಪರಿವೆಯಿಲ್ಲದ ವರುಣ್ ತನ್ನ ಪಾಡಿಗೆ ತಾನು ಪ್ರೋಗ್ರಾಮ್ಗಳನ್ನು ವಿವರಿಸಿ ತನ್ನ ಪಾಠ ಮುಗಿಸಿದನು. ಕ್ಲಾಸ್ ಗಳನ್ನು ಮುಗಿಸಿ ಮನೆಗೆ ಬಂದ ಸ್ವಾತಿಗೆ ಅಂದೇಕೋ "ಏಕಿವತ್ತು ಕಾಲೇಜು ಇಷ್ಟು ಬೇಗ ಮುಗಿಯಿತು?" ಎಂಬ ವ್ಯಥೆಯಾಯಿತು. ಅಲ್ಲಿಯವರೆಗೂ ಕ್ಲಾಸ್ ಮುಗಿದರೆ ಸಾಕು ಮನೆಗೆ ಬಂದು ರೆಸ್ಟ್ ಮಾಡಬೇಕು ಎನ್ನುತ್ತಿದ್ದವಳು, ಅಂದು ಹಾಗನಿಸಲಿಲ್ಲ. ಅಂತಹ ಮಧುರವಾದ ಪ್ರೀತಿಯ ಸೆಳೆತದಲ್ಲಿ ಅದಾಗಲೇ ಬಿದ್ದಿದ್ದಳು ಸ್ವಾತಿ!


ಸ್ವಾತಿ ಮೊದಲಿನಿಂದಲೂ ಓದಿನಲ್ಲಿ ಚುರುಕು. ಹಾಗಾಗಿ ಆ ಸೆಮಿಸ್ಟರಿನ ಅಂಕಗಳು ಹೊರಬಂದಾಗ ಎಂದಿನಂತೆ ಅವಳು ಸಹ ಟಾಪರ್ ಆಗಿದ್ದಳು. ವರುಣ್ ಸರ್ ತೆಗೆದುಕೊಳ್ಳುತ್ತಿದ್ದ ವಿಷಯದಲ್ಲಿ ಅವಳೇ ಜಾಸ್ತಿ ಅಂಕಗಳನ್ನು ಪಡೆದಿದ್ದಳು. ಆ ವಿಷಯವನ್ನು ಬೋಧಿಸುವುದು ವರುಣ್ ಸರ್ ಎಂಬ ಕಾರಣವೇ ಅವಳಿಗೆ ಹೆಚ್ಚು ಅಂಕಗಳನ್ನು ಆ ವಿಷಯದಲ್ಲಿ ಪಡೆಯಲು ಕಾರಣವಾಗಿತ್ತು ಎಂದರೆ ಸುಳ್ಳಲ್ಲ!!ಎಂದಿನಂತೆ ತನ್ನ ಸಬ್ಜೆಕ್ಟ್ ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಯಾರೆಂದು ಶಿಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ವರುಣನಿಗೂ ಇತ್ತು. ತನ್ನ ಸಬ್ಜೆಕ್ಟ್ ನಲ್ಲಿ ಟಾಪರ್ ಆದವಳು ಸ್ವಾತಿ ಎಂದು ಗೊತ್ತಾದಾಗ, ಕ್ಲಾಸ್ನಲ್ಲಿ ವಿಶ್ ಮಾಡಿ, "ಮುಂದೆಯೂ ಹೀಗೆ ಚೆನ್ನಾಗಿ ಓದಿ" ಎಂದು ಹಾರೈಸಿದನು. ವರುಣ್ ಎಲ್ಲ ವಿದ್ಯಾರ್ಥಿಗಳನ್ನು ಮಾತಾಡಿಸುವಂತೆ ಅವಳನ್ನು ಮಾತನಾಡಿಸಿ ವಿಶ್ ಮಾಡಿದರೂ, ಅದರಲ್ಲೇನೋ ವಿಶೇಷ ಅರ್ಥವನ್ನು ಹುಡುಕಿದಳು ಸ್ವಾತಿ! ಪ್ರೀತಿಯಲ್ಲಿ ಬಿದ್ದವರ ಕಥೆ ಹೀಗೆಯೇ ಅನಿಸುತ್ತೆ ಎಂದು ತಲೆ ಕೊಡವಿಕೊಂಡಳು.


ಇಂತಹ ನವಿರಾದ ಪ್ರೇಮ ಭಾವನೆ ದಿನದಿಂದ ದಿನಕ್ಕೆ ಸ್ವಾತಿಯಲ್ಲಿ ಹೆಚ್ಚಾಗುತ್ತಿತ್ತು. ಎಲ್ಲೇ ಹೋದರು ತನ್ನ ಪ್ರೀತಿಯ ವರುಣ್ ಸರ್ ಕಣ್ಣಮುಂದೆ ಇದ್ದಾರೇನೋ ಎನಿಸುತ್ತಿತ್ತು. ಕೆಲವೊಮ್ಮೆ ಮನೆಯಲ್ಲಿ ಒಬ್ಬೊಬ್ಬಳೇ ಅವರೊಂದಿಗೆ ಮಾತನಾಡಿದಂತೆ ಕನಸು ಕಾಣುತ್ತಿದ್ದಳು. ಕೊನೆಗೆ ಸ್ವಾತಿಯ ತಾಯಿ ಬಂದು "ಯಾರೊಂದಿಗೆ ಮಾತನಾಡುತ್ತಿದ್ದೀಯೇ?" ಎಂದು ಗದರಿದಾಗ ತನ್ನ ಕನಸಿನ ಲೋಕದಿಂದ ಹೊರ ಬರುತ್ತಿದ್ದಳು. ತಾನು ವಿದ್ಯಾರ್ಥಿ, ಆತ ಶಿಕ್ಷಕ ಎಂಬ ವ್ಯತ್ಯಾಸವೇ ಅವಳಲ್ಲಿ ಭಾವನೆಗಳ ತಾಕಲಾಟವನ್ನು ಶುರುಮಾಡಿತ್ತು. "ತಾನು ಮಾಡುತ್ತಿರುವುದು ಸರಿಯೇ? ಇಂತಹ ಭಾವನೆ ಹುಡುಗಿಯರಾದ ಎಲ್ಲರಿಗೂ ಸಾಮಾನ್ಯ ಇರುತ್ತದೆ. ಆದರೆ ಈ ಪ್ರೀತಿಯೇ ಹೆಮ್ಮರವಾಗಿ ಬಿಟ್ಟಿದೆ ತನಗೆ! ಆದರೆ ಇದರ ಬಗ್ಗೆ ಒಂಚೂರು ಗೊತ್ತಿಲ್ಲದೆ, ತನ್ನ ಪಾಡಿಗೆ ತಾನಿರುವ ವರುಣ್ ಸರ್ ಮುಂದೊಂದು ದಿನ ತನ್ನಿಂದ ದೂರವಾಗಿಬಿಟ್ಟರೆ?! ಇನ್ನೊಂದೇ ವರ್ಷ ತಾನಿಲ್ಲಿ ವಿದ್ಯಾರ್ಥಿಯಾಗಿ ಇರುವುದು. ಮುಂದೆ ಏನಿದ್ದರೂ ಕೆಲಸ ಸಿಕ್ಕ ಕಡೆ ಹೋಗಬೇಕು. ಆಗ ನನ್ನ ಪ್ರೀತಿಯ ಗತಿ!!" ಎಂದು ಯಾರಿಗೂ ಹೇಳಿಕೊಳ್ಳಲಾಗದಂತಹ ತಳಮಳದಲ್ಲಿ ಬಿದ್ದಳು ಸ್ವಾತಿ.


ಆದರೆ ಕಾಲವು ಮುಂದೋಡುತ್ತಲೇ ಇತ್ತು. ಕೊನೆಯ ವರ್ಷವೂ ಮುಗಿದು "ಬೀಳ್ಕೊಡುಗೆಯ ದಿನ" ಸಹ ಬಂದುಬಿಟ್ಟಿತು. ಅಂದು ಎಲ್ಲ ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಕ್ಯಾಂಪಸ್ ಗೆ ಕಳೆತಂದು ಬಿಟ್ಟಿದ್ದರು. ಸ್ವಾತಿಯು ಸಹ ಚಂದದ ಹಳದಿ ಬಣ್ಣದ ಸೀರೆಯನ್ನು ಉಟ್ಟು ಝಗಮಗಿಸುತ್ತಿದ್ದಳು. ಹುಡುಗ-ಹುಡುಗಿಯರು ಎಂಬ ಬೇದ-ಭಾವ ಮರೆತು, ಎಲ್ಲರೂ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಶಿಕ್ಷಕರೂ ಸಹ ತಮ್ಮ ವಿದ್ಯಾರ್ಥಿಗಳ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಪಡುತ್ತಿದ್ದರು. ಅಂತೂ ಸ್ವಾತಿ ವರುಣ್ ಸರ್ ಜೊತೆಗೆ ಒಂದು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾದಳು! "ಸರ್ ಪ್ಲೀಸ್ ಒಂದು ಸೆಲ್ಫಿ!" ಎಂದ ತಕ್ಷಣ ತನ್ನ ಸರ್ ಕಣ್ಣುಗಳು ಮಿಂಚಿದವೇ ಅಥವಾ ಇದೂ ತನ್ನ ಭ್ರಮೆಯೇ ಎಂದುಕೊಂಡಳು ಸ್ವಾತಿ. ನಾಲ್ಕು ವರ್ಷಗಳು ಜೊತೆಯಾಗಿದ್ದು ಈಗ ಬೇರ್ಪಟ್ಟು ತಮ್ಮ ದಾರಿ ತಮಗೆಂದು ಈ ಕಾಲೇಜಿನಿಂದ ಹೊರಡಬೇಕು ಎಂದಾಗ ಎಲ್ಲರೂ ಭಾವುಕರಾದರು. ಅದೇ ಕ್ಷಣದಲ್ಲಿ ಗ್ರೂಪ್ ಫೋಟೋವನ್ನು ಸಹ ಸೆರೆ ಹಿಡಿದುಕೊಂಡರು.


ಸ್ವಾತಿಗಂತೂ ಎರಡೆರಡು ರೀತಿಯ ಬೇಸರ. ಒಂದು ತನ್ನ ಸಹಪಾಠಿಗಳಿಂದ ದೂರವಾಗುತ್ತಿದ್ದೇನೆ. ಮುಂದೆ ಇವರನ್ನೆಲ್ಲ ಮತ್ತೆ ಎಂದು ಭೇಟಿಯಾಗುವುದೋ ಎಂದು. ಇನ್ನೊಂದು ತನ್ನ ಮೊದಲ ಪ್ರೀತಿಯನ್ನು ಕಳೆದುಕೊಳ್ಳುವ ಭೀತಿ! ಮೊದಲ ಮಳೆಯಂತೆ ತನ್ನ ಹೃದಯದಲ್ಲಿ ಪ್ರೀತಿಯನ್ನು ಜಿನುಗಿಸಿದ ವರುಣ್ ಸರ್ ನನ್ನು ಮುಂದೆ ನೋಡುವುದಕ್ಕೆ ಆಗುವುದಿಲ್ಲ ಎಂಬ ಸಂಕಟ!! ಈ ಎರಡೂ ವರ್ಷದಲ್ಲಿ ತನಗೆ ಅವರ ಮೇಲಿದ್ದ ಪ್ರೀತಿ, ಗೌರವ, ಅಭಿಮಾನಗಳು ದುಪ್ಪಟ್ಟಾಗಿದೆ. ಆದರೆ ಅವರಿಗೆ ಅದರ ಬಗ್ಗೆ ಒಂದೇ ಒಂದು ಸೂಚನೆಯೂ ಇಲ್ಲ. ಈ "ಒನ್ ಸೈಡ್ ಲವ್" ಇಂದಿಗೆ ಕೊನೆಯಾಗುತ್ತದೆ ಅನಿಸುತ್ತೆ?! ಮುಂದೆ ತಾನವರನ್ನು ಭೇಟಿ ಮಾಡುವುದು ಸಂದೇಹವೇ! "ಫಸ್ಟ್ ಲವ್ ಇಸ್ ದಿ ಬೆಸ್ಟ್ ಲವ್" ಅನ್ನುತ್ತಾರೆ. ಆದರೆ ತನ್ನ ಈ ಪ್ರೀತಿ ತನಗೆ ಮಾತ್ರ ಗೊತ್ತಿರುವಂಥದ್ದು. ಮುಂದೆ ಇನ್ಯಾರಿಗೂ ಗೊತ್ತಾಗದೆ ಇರುವಂಥದ್ದು! ಒಂಥರ "ಅಮರ ಪ್ರೇಮ" ಎಂದು ನಿಟ್ಟುಸಿರುಬಿಟ್ಟಳು ಸ್ವಾತಿ!


ಮುಂದಿನ ದಿನಗಳಲ್ಲಿ ಸ್ವಾತಿ ತನಗೆ ಸಿಕ್ಕಿದ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಳು. ತಾನಾಯಿತು, ತನ್ನ ಕೆಲಸವಾಯಿತು ಎನ್ನುತ್ತಾ ಸುಮ್ಮನಿರುತ್ತಿದ್ದಳು. ಪುರುಷ ಸಹೋದ್ಯೋಗಿಗಳು ಎಷ್ಟೇ ಇವಳನ್ನು ಮಾತಾಡಿಸಿ, ಸ್ನೇಹ ಸಂಪಾದಿಸಲು ಪ್ರಯತ್ನಿಸಿದರೂ, ಇವಳೇನು ಅದಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಸಮಯ ಸಿಕ್ಕಾಗ ಫೇಸ್ಬುಕ್ನಲ್ಲಿ ತನ್ನ ವರುಣ್ ಸರ್ ಫೋಟೋಗಳನ್ನು, ಅಪ್ಡೇಟ್ಸ್ ಗಳನ್ನು ನೋಡಿ ಖುಷಿಪಡುತ್ತಿದ್ದಳು. ಹೀಗೆಯೇ ಎರಡು ವರ್ಷ ಕಳೆಯಲು ಸ್ವಾತಿಗೆ ಗಂಡು ಹುಡುಕುವ ಕಾರ್ಯಕ್ರಮವು ಶುರುವಾಯಿತು. ಆದರೆ ಸ್ವಾತಿಗೆ ಇದರಲ್ಲಿ ಆಸಕ್ತಿಯೇ ಇರಲಿಲ್ಲ. ವೈರಾಗ್ಯ ಬಂದವಳಂತೆ ಯಾವುದಕ್ಕೂ ಆಸಕ್ತಿ ತೋರಿಸುತ್ತಿರಲಿಲ್ಲ. "ಇಷ್ಟು ಬೇಗ ತನಗೆ ಮದುವೆ ಏಕೆ?" ಎಂದು ಪೋಷಕರಿಗೆ ಕೇಳುತ್ತಿದ್ದಳು. ಇವಳೇನೇ ಅಂದರೂ ಅವರಮ್ಮ ಸುಮ್ಮನಿರುತ್ತಿರಲಿಲ್ಲ. "ಹೆಣ್ಣು ಮಗಳು ನೀನು. ಕೆಲಸಕ್ಕೆ ಸೇರಿ ಅದಾಗಲೇ ಎರಡು ವರ್ಷವಾಯಿತು. ಈಗಿನಿಂದ ಗಂಡು ನೋಡಲು ಶುರು ಮಾಡಿದರೆ, ಇನ್ನೆರಡು ವರ್ಷಕ್ಕೆ ಮದುವೆಯಾಗುತ್ತೆ! ಸುಮ್ಮನೆ ನಾನು ಹೇಳಿದಂತೆ ಕೇಳು" ಎನ್ನುತ್ತಿದ್ದರು.


ಹೀಗೆಯೇ ಒಂದು ಭಾನುವಾರ. "ಸಂಜೆ ಗಂಡಿನ ಮನೆಯವರು ನಿನ್ನನ್ನು ನೋಡಲಿಕ್ಕೆ ಬರುತ್ತಾರೆ ಸ್ವಾತಿ. ಬೇಗ ರೆಡಿಯಾಗು. ತಲೆ ಮೇಲೆ ಬೆಟ್ಟ ಬಿದ್ದಂತೆ ಇರಬೇಡ. ನಗುನಗುತ್ತ ಬಂದವರನ್ನು ಮಾತಾಡಿಸು. ಈಗ ಊಟ ಮಾಡಿ, ಒಂದು ಸ್ವಲ್ಪ ರೆಸ್ಟ್ ಮಾಡು. ಆಗ ಸಂಜೆ ಫ್ರೆಶ್ ಆಗಿ ಇರುತ್ತೀಯಾ" ಎಂದರು ಸ್ವಾತಿಯ ತಾಯಿ. ಕಣ್ಣು ಮುಚ್ಚಿಕೊಂಡು ಮಲಗಲು ಯತ್ನಿಸಿದರೂ ಅಂದೇಕೋ ಸ್ವಾತಿಗೆ ತನ್ನ ಮೊದಲ ಪ್ರೀತಿ ವರುಣ್ ಸರ್ ತುಂಬಾ ನೆನಪಿಗೆ ಬರುತ್ತಿದ್ದರು! "ಛೇ ಅದೊಂದು ರೀತಿಯ ಪ್ರಾಯದ ಸೆಳೆತವಾಗಿತ್ತು ಅಷ್ಟೇ. ಅದನ್ನೇ ಏಕೆ ನಾನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ? ಬೇಡವೆಂದರೂ ಕಾಡುವ ಈ ನೆನಪುಗಳು ನನ್ನನ್ನೇಕೆ ಈ ರೀತಿ ಸತಾಯಿಸುತ್ತಿವೆ. ಇನ್ನು ಸಾಕು. ಮತ್ತೂ ತಾನು ಅವರ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುವುದು ಬೇಡ! ನನಗೆ ನನ್ನದೇ ಆದಂತಹ ಜೀವನವಿದೆ. ಎಲ್ಲವನ್ನು ಮರೆತು ಇನ್ನು ಮುಂದೆ ಹೊಸ ಜೀವನ ಪ್ರಾರಂಭಿಸುತ್ತೇನೆ. ಅಪ್ಪ-ಅಮ್ಮ ಹೇಳಿದ ಹುಡುಗನೊಂದಿಗೆ ಮದುವೆಯಾಗುತ್ತೇನೆ. ಸಾಕು ಈ ಮನಸ್ಸಿನ ತಳಮಳಕ್ಕೆ ಬ್ರೇಕ್ ಹಾಕಿ, ನನ್ನ ಒನ್ ಸೈಡ್ ಲವ್ ಗೆ ಫುಲ್ ಸ್ಟಾಪ್ ಇಡುತ್ತೇನೆ!!" ಎಂದು ನೆಮ್ಮದಿಯಿಂದ ಅರ್ಧಗಂಟೆ ನಿದ್ದೆ ಮಾಡಿದಳು.


ಸಂಜೆ ಗಂಡಿನವರು ಬರುವಷ್ಟರಲ್ಲಿ ಸ್ವಾತಿ ಚೆನ್ನಾಗಿ ರೆಡಿಯಾದಳು. ಆದಷ್ಟು ತಾನು ಖುಷಿಯಾಗಿರಬೇಕು, ಬಂದವರ ಮುಂದೆ ನಗುತ್ತಾ ಇರಬೇಕು ಎಂದು ಮತ್ತೆ ಮತ್ತೆ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಳು. ಗಂಡಿನ ಕಡೆಯವರು ಆಗಮಿಸಿದಾಗ ಸ್ವಾತಿಯ ತಂದೆ ಅವರ ಕುಶಲೋಪರಿಯನ್ನು ಚೆನ್ನಾಗಿ ವಿಚಾರಿಸಿಕೊಂಡರು. ನಂತರ ಸ್ವಾತಿಗೆ ಕಾಫಿ-ತಿಂಡಿಗಳನ್ನು ತರಲು ಹೇಳಿದರು. ಹಿಂದೆ ಬಂದಿದ್ದ ಒಂದೆರಡು ಗಂಡುಗಳಿಗೆ ಕಾಫಿ ಕೊಡುವಾಗ ಆಗದಿದ್ದ ಸಂಕೋಚ, ಇಂದೇಕೋ ಸ್ವಾತಿಗೆ ಆಗುತ್ತಿತ್ತು. ಅಂತೂ ಕಾಫಿ-ತಿಂಡಿಯ ಟ್ರೇಯನ್ನು ಗಂಡಿನ ಅಪ್ಪ ಮತ್ತು ಅಮ್ಮನ ಹತ್ತಿರ ಹೋಗಿ ಹಿಡಿದಳು. ನಂತರ ಗಂಡಿನ ಹತ್ತಿರ ತೆಗೆದುಕೊಂಡು ಹೋಗಿ ವಿಶ್ ಮಾಡುತ್ತಾ ಕಾಫಿಯನ್ನು ಕೊಡಲು ಹೋದಳು.


ಆದರೆ ತಾನು ನೋಡಿದ್ದಾದರೂ ಏನು?! ಅಂದೊಮೆ ತನ್ನ ಪ್ರೀತಿಯ ಆರಾಧ್ಯ ದೈವನಾಗಿದ್ದ ವರುಣ್ ಸರ್!! ಕಾಲೇಜಿನಲ್ಲಿ ತೊಟ್ಟಂತೆ ಅದೇ ರೀತಿಯ ಫಾರ್ಮಲ್ಸ್ ನಲ್ಲಿ ನೀಟಾಗಿ ಕುಳಿತು, "ಹಾಯ್ ಸ್ವಾತಿ ಹೇಗಿದ್ದೀರಿ?" ಎನ್ನಬೇಕೆ! ಸ್ವಾತಿಗಂತೂ ಇದು ಕನಸೋ ನನಸೋ ಎಂದು ಮೊದಲಿಗೆ ಗೊತ್ತಾಗಲಿಲ್ಲ. ಈ ನಾಲ್ಕು ವರ್ಷ ಅವರ ನೆನಪಿನಲ್ಲಿ ಇದ್ದ ಸ್ವಾತಿಗೆ ಇಂದು ಅವರೇ ವರನಾಗಿ, ತನ್ನ ಬದುಕಿಗೆ ವರವಾಗಿ ಬಂದದ್ದು ಸಂತೋಷವನ್ನು ಹೆಚ್ಚು ಮಾಡಿತ್ತು. ಅಂತೂ ತನ್ನ 'ಮೊದಲ ಪ್ರೀತಿ' ಬರೀ ನೆನಪಿಗೆ ಮಾತ್ರ ಅನ್ನುವ ಹಾಗಾಗದೇ ಜೀವನವಿಡಿ ಸವಿಯುವ ಪ್ರೇಮವಾಗಿ ಬದಲಾಯಿತಲ್ಲ ಎಂದು ತುಂಬಾ ಖುಷಿಪಟ್ಟಳು!! "ಮೊದಲ ಮಳೆ" ಒಂದರೆಕ್ಷಣ ಬಂದು ನಿಲ್ಲಲಿಲ್ಲ. 'ವರುಣ' ದೇವನ ದಯೆಯಿಂದ ಈ ಸ್ವಾತಿಯ ಬದುಕಿನುದ್ದಕ್ಕೂ ಇನ್ನೂ ಮುಂದೆ ಬರುತ್ತಲೇ ಇರುತ್ತದೆ ಎಂದು ನಸುನಗುತ್ತಾ ವರುಣ್ ಸರ್ ಗೆ ಪ್ರತಿ ವಂದಿಸಿದಳು..!!




Rate this content
Log in

Similar kannada story from Abstract