Vadiraja Mysore Srinivasa

Romance Tragedy Classics

4.4  

Vadiraja Mysore Srinivasa

Romance Tragedy Classics

ಭೂಮಿ

ಭೂಮಿ

5 mins
303


ವಯಸ್ಸಾದ ಆ ಪೋಸ್ಟ್ಮನ್ ತನ್ನ ಹಳೆ ಸೈಕಲ್ಅನ್ನು ಕಷ್ಟಪಟ್ಟು ತುಳಿಯುತ್ತಾ, ಕಣ್ಣಿಗೆ ರಾಚುತ್ತಿದ್ದ ಬಿಸಿಲಿಗೆ ತನ್ನ ಕೈ ಅಡ್ಡ ಹಿಡಿಯುತ್ತಾ, ಆ ಅಡ್ರೆಸ್ಗೆಗಾಗಿ ಹುಡುಕಾಡಿದ.

ಆ ಏರಿಯಾ ಅವನಿಗೆ ಹೊಸದೇನಲ್ಲ. ಆ ಸಣ್ಣ ಊರಿನಲ್ಲಿದ್ದಿದ್ದೆ 25 ಮನೆಗಳು. ಕಳೆದ 15 ವರ್ಷಗಳಿಂದ ಆ ಊರಿನಲ್ಲಿ ಕೆಲಸಮಾಡುತ್ತಿದ್ದ ಅವನಿಗೆ, ಈ ಅಡ್ರೆಸ್ ಮಾತ್ರ ಯಾಕೊ ಅರ್ಥವಾಗಲಿಲ್ಲ. ಬಹುಶಃ ಯಾರೂ ಹೊಸದಾಗಿ ಬಂದಿರಬೇಕೆಂದುಕೊಂಡು, ಪತ್ರದಲ್ಲಿದ್ದ ಅಡ್ರೆಸ್ ಹತ್ತಿರ ಸೈಕಲ್ ನಿಲ್ಲಿಸಿ ವಠಾರದ ಮನೆಯ ಹತ್ತಿರ ಹೋಗಿ ಇನ್ನೊಮ್ಮೆ ನೋಡಿದ.

 ಬಾಗಿಲು ಹಾಕಿದ್ದರಿಂದ, ಅಲ್ಲೇ ಇಟ್ಟು ಹೋಗೋಣವೆಂದುಕೊಂಡವನಿಗೆ, ಯಾರು ಹೊಸದಾಗಿ ಬಂದಿದ್ದಾರೆ ನೋಡೋಣವೆನ್ನುವ ಕುತೂಹಲದಿಂದ, ಬಾಗಿಲು ತಟ್ಟಿದ.

ಬಾಗಿಲು ತೆಗೆದವಳು ಸುಮಾರು 20 ವರ್ಷದ ಹುಡುಗಿ. "ಭೂಮಿ ಎಂದರೆ ನೀನೇನಾ?" ಕೇಳಿದ ಪೋಸ್ಟ್ಮನ್. ನಗುತ್ತಾ ಹೇಳಿದಳು ಹುಡುಗಿ. "ಹೌದು ಚಾಚಾ. ಯಾಕೆ?

"ನಿನಗೆ ಒಂದು ಪತ್ರ ಬಂದಿದೆ. ಹೊಸದಾಗಿ ಬಂದಿದೆಯೇನು ಈ ಊರಿಗೆ? ಮುಂಚೆ ಯಾವತ್ತೂ ನಿನನ್ನು ನೋಡಿದ ನೆನಪಿಲ್ಲ." ಹೇಳಿದ ಪೋಸ್ಟ್ಮನ್ ಪತ್ರವನ್ನು ಭೂಮಿಯ ಕೈಗಿಡುತ್ತಾ.

"ಹೌದು ಚಾಚಾ. ನಾನು ಬಂದು ಒಂದು 15 ದಿನವಾಯಿತಷ್ಟೆ. ಬನ್ನಿ ಚಹಾ ಮಾಡಿಕೊಡುತ್ತೇನೆ." ಭೂಮಿ ನಗುತ್ತ ನುಡಿದಳು.

ಅವಳ ಮಾತು ಅವಳಸ್ಟೆ ಸರಳ ವಾಗಿತ್ತು. "ನಗುತ್ತ ನುಡಿದ ಪೋಸ್ಟ್ಮನ್. “ಬೇಡ ಭೇಟಿ. ಖಂಡಿತ ಮುಂದಿನ ಸಾರಿ ಬಂದಾಗ ಕುಡಿಯುತ್ತೇನೆ. ಒಂದು ಲೋಟ ನೀರು ಕೊಟ್ಟರೆ ಸಾಕು."

ಭೂಮಿ ಒಳಗಿನಿಂದ ಒಂದು ಚೊಂಬಿನಲ್ಲಿ ನೀರು ತಂದುಕೊಟ್ಟಳು. ನೀರು ಕುಡಿದ ಪೋಸ್ಟ್ಮನ್ ಅವಳಿಗೆ ಶುಭ ಹರಿಸಿ, ಹೊರಟ

ಪೋಸ್ಟ್ಮನ್ ಆಕಡೆ ಹೋಗುತ್ತಿದ್ದಂತೆ, ಭೂಮಿ ಮನೆಗೆ ಬೀಗ ಹಾಕಿ, ಪತ್ರವನ್ನು ಕೈಯಲ್ಲಿ ಹಿಡಿದು, ನದಿಯ ಕಡೆ ನಡೆದಳು.

ನದಿಯ ದಂಡೆಯಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತು, ಎಂವೆಲೋಪ್ ಅನ್ನು ಓಪನ್ ಮಾಡಿ ಪತ್ರವನ್ನು ಹೊರತೆಗೆದು ನೋಡಿದಳು. ಅದು ಅವಳ ಗಂಡ ಸುಖದೇವ್ ಬರೆದಿದ್ದ ಮೊದಲ ಪತ್ರ.

ಭೂಮಿ ಓದಲು ಶುರು ಮಾಡಿದಳು.

ನನ್ನ ಪ್ರೀತಿಯ ಭೂಮಿ

ಹೇಗಿದ್ದೀಯಾ? ಭೂಮಿ, ನಂಬಿದರೆ ನಂಬು ಬಿಟ್ಟರೆ ಬಿಡು, ನನ್ನ ಕಳೆದ 5 ವರ್ಷಗಳ ಸೆರ್ವಿಸ್ನಲ್ಲಿ, ನಾನು ಬರೆಯುತ್ತಿರುವ ಮೊದಲನೇ ಪತ್ರ ಇದು. ಯಾರಿಗೆ ತಾನೇ ಬರೆಯಬೇಕು? ಯಾರಿದ್ದರು ನನಗೆ ಬರೆಯಲಿಕ್ಕೆ ನೀನು ನನ್ನ ಜೀವನದಲ್ಲಿ ಬರುವುದಕ್ಕೆ ಮುಂಚೆ?

ನಿಜ ಹೇಳಬೆಂದರೆ, ನನಗೆ ಪತ್ರ ಬರೆಯುವುದಕ್ಕೆ ಬರುವುದಿಲ್ಲ. ಅದರಲ್ಲೂ, ಕೇವಲ 15 ದಿನದ ಹಿಂದೆ ಮದುವೆಯಾದ ಹೆಡತೀಗೆ ಹೀಗೆ ಬರೆಯಬೇಕೆಂಬುದೇ ಸಮಸ್ಯೆ ಯಾಗಿ, ಮೂರು ದಿವಸ ಯೋಚನೆ ಮಾಡಿ ಈ ಪತ್ರ ಬರೆಯುತ್ತಿದ್ದೇನೆ. 

ಅರ್ಜೆಂಟ್ ಆಗಿ ಈ ಬಾರ್ಡರ್ ಊರಿಗೆ ನಮ್ಮನ್ನು ಕರೆಸಿದ್ದಾರೆ; ಬಹಳ ಮುಖ್ಯವಾದ ಯಾವುದೂ ಒಂದು ಆಪರೇಷನ್ ಗೋಸ್ಕರ. ಹಾಗಾಗಿ, ಇಲ್ಲಿ ಮೊಬೈಲೆಫೋನ್ ಉಪಯೋಗಿಸುವ ಹಾಗಿಲ್ಲ. ಪತ್ರಗಳನ್ನು ಕೂಡ ಬರೆಯುವಾಗ ನಾವು ಹುಷಾರಾಗಿರಬೇಕು. ನಮ್ಮ ವ್ಯಕ್ತಿಕ ವಿಚಾರಗಂಳನ್ನು ಬಿಟ್ಟು ಬೇರೆ ಏನನ್ನು ಬರೆಯುವಹಾಗಿಲ್ಲ.

ನಿನ್ನೊಟ್ಟಿಗೆ ಮಾತನಾಡಬೇಕೆಂಬ ನನ್ನಹಂಬಲವನ್ನು ಇನ್ನು ಕೆಲವು ದಿವಸಗಳ ಕಾಲ ಮುಂದೂಡಬೇಕಾಗುತ್ತೆ. 

ಪತ್ರಿಕೆಗಳಲ್ಲಿ, ಟಿವಿ ಮತ್ತೆ, ಈ ಸೋಶಿಯಲ್ ಮೀಡಿಯಾ ಅಂತಾರಲ್ಲ ಅದರಲ್ಲಿ, ದೇಶ ಕಾಯುವ ನಮ್ಮಂಥಹ  ಯೋದ್ಧರ ಬಗ್ಗೆ ಸಾಕಷ್ಟು ಬರೆಯುತ್ತಾರೆ; ನಾವು ಮಾಡಿರುವ, ಮಾಡುತ್ತಿರಿವ ತ್ಯಾಗದಬಗ್ಗೆ. ಖಂಡಿತವಾಗಿಯೂ ನಮಗೆ ಹೆಮ್ಮೆ ತರುವ ವಿಷಯವೇ. ಆದರೆ, ಈ ತ್ಯಾಗ ಮತ್ತು ಬಲಿದಾನ ಕೊಡುವ ನಮ್ಮ ಹಿಂದೆ ಇರುವ ತಂದೆ, ತಾಯಿ, ಹೆಂಡತೀ  ಹಾಗು ಮಕ್ಕಳ ಬಗ್ಗೆ ಬರೆಯುವುದು ಬಹಳ ಕಡಿಮೆ.

ನಾನು ಈ ಊರಿಗೆ ಬರುವುದಕ್ಕೆ ಮುಂಚೆ ಒಂದು ಗ್ರಾಮದ ಹತ್ತಿರ ಬಿಡಾರ ಮಾಡಿದ್ದೆವು. ಸುಮ್ಮನೆ ಕುಳಿತಿದ್ದ ನಾನು, ಅಲ್ಲಿಯೇ ತನ್ನ ಗುಡಿಸಿಲಿನ ಮುಂದೆ ನಿಂತಿದ್ದ ಒಬ್ಬ ಹೆಂಗಸು, ತವಕದಿಂದ ನಿಂತಿರುವುದನ್ನು ಕಂಡೆ. ಬಹುಷಃ, ಶಾಲೆಗೇ ಹೋಗಿರುವ ತನ್ನ ಮಗಳಿಗೋ, ಮಗನಿಗೋ ಕಾಯುತಿದ್ದಾಳೆಂದು ಅಂದುಕೊಂಡೆ. ನಾನಂದುಕೊಂಡ ಹಾಗೆ, ಸ್ವಲ್ಪ ಸಮಯ ನಂತರ, ದೂರದಲ್ಲಿಸ್ಕೂಲ್ ಬ್ಯಾಗ್ ಹಾಕಿಕೊಂಡು  ಬರುತ್ತಿದ್ದ ಅವಳ ಮಗಳನ್ನು ನೋಡಿ ಅವಳ ಮುಖ ಅರಳಿತು. . ಬಂದ ಮಗಳನ್ನು ಗಟ್ಟಿಯಾಗಿ ಕಟ್ಟಿಕೊಂಡು ಕಣ್ಣೀರು ಸುರಿಸಿದ ಆ ತಾಯಿಯನ್ನು ನೋಡಿ ನನಗೆ ಆಶ್ಚರ್ಯ ವಾಯಿತು.

ಊರುಗಳಲ್ಲಿ, ಆಫೀಸಿಗೆ ಅಥವಾ ಶಾಲೆ ಕಾಲೇಜುಗಳಿಗೆ ಹೋದ ಮಕ್ಕಳು ಮನೆಗೆ ಲೇಟ್ ಆಗಿ ಬಂದರೆ ತಾಯಿ ಬಾಗಲಲ್ಲೇ ನಿಂತು ಅವರು ಬರುವ ತನಕ ಊಟ ತಿಂಡಿ ಇಲ್ಲದೆ ನಿಂತಿರುತ್ತಾಳೆ.

ಆದರ, ಮಿಲಿಟರಿ ಡ್ಯೂಟಿಗೆ ಮಗನ್ನು ಕಳಿಸಿದ ತಂದೆ ತಾಯಿ ಹಾಗು ಹೆಡತಿಯರು ಕೆಲವು ಸಾರಿ ತಿಂಗಳು ಗಟ್ಟಲೆ ತಮ್ಮ ಮಕ್ಕಳಿಂದ ಸುದ್ದಿ ಬರದೇ ಇದ್ದರು ಜೀವ ಗಟ್ಟಿಯಾಗಿ ಹಿಡಿದುಕೊಂಡು, ದೇವರಿಗೆ ಪ್ರಾಥಿಸುತ್ತಾರೆ. ಅವರ ಬಗ್ಗೆ ನಮ್ಮ ಮೀಡಿಯಾ ಎಳ್ಳಸ್ಟೂ ಬರೆಯುವುದಿಲ್ಲ.

ಭೂಮಿ , ನನಗೆ ನಿನ್ನ ಮೇಲೆ ನಿಜವಾಗಲೂ ತುಂಬಾ ಹೆಮ್ಮೆ. ಮದುವೆಯಾಗಿ ಕೇವಲ 15 ದಿನಗಳಿಗೆ, ನನ್ನ ನಿನ್ನ ಭೇಟಿ ಮತ್ತೆ ಯಾವಾಗ ಎಂದು ತಿಳಿಯದೆ ನಿನ್ನ ಗಂಡನ್ನ ಖುಶಿಯಾಗಿ ಬೀಳ್ಕೊಟ್ಟಿದ್ದೀಯ. ಹೊಸದಾಗಿ ಮದುವೆಯಾದ ಹೆಣ್ಣಿಗೆ ಏನೆಲ್ಲಾ ಆಸೆ ಇರುತ್ತದೆ? ನಿನ್ನನ್ನು ಬಿಟ್ಟು ಬಂದಾಗ ನನ್ನ ಹೃದಯವೇ ಕಿತ್ತು ಬಂದಂತಾಗಿತ್ತು.

ಆದರೇನು ಮಾಡುವುದು ಭೂಮಿ?. ಡ್ಯೂಟಿ ಫಸ್ಟ್. 

ಪ್ರತಿಸಾರಿ, ನನ್ನ ಸ್ನೇಹಿತರು ಪತ್ರಗಳ ಗಂಟನ್ನು ಹೊತ್ತು ಪೋಸ್ಟ್ಮನ್ ಬಂದ ಕೂಡಲೇ, ಓಡೋಡಿ ಹೋಗಿ ಪತ್ರಗಳನ್ನು ಓದುತ್ತಿದ್ದರಾದರೂ, ಓದಿದ ನಂತರ ಅವರ ಮುಖದ ಭಾವನೆ ಬದಲಾಯಿಸುತಿತ್ತು.

ಬಹುಶ ಮನೆಯಲ್ಲಿನ ಪರಿಸ್ಥಿತಿ ಅರಿತು ಅವರಿಗೆ ಬೇಜಾರಾಗುತ್ತಿತ್ತು ಅಂತ ಕಾಣತ್ತೆ. 

ಭೂಮಿ….. ಪತ್ರದ ಮೊದಲಿನಲ್ಲೇ ನಾ ಹೇಳಿದೆ. ನನಗೆ ಪತ್ರ ಬರೆಕ್ಕೆ ಬರೋದಿಲ್ಲ ಅಂತ. ಈಗ ನೋಡು?...ಎಲ್ಲೊ ಶುರುವಾದ ವಿಷಯ… ಎಲ್ಲಿಗೋ ಹೋಯಿತು.

ನನಗೆ ಬರೆಯೋದಿಕ್ಕೆ ಎಷ್ಟೊಂದ್ ವಿಷಯ ಇದೆ ಗೊತ್ತಾ. ನಿನ್ನಬಗ್ಗೆ ನನಗೆ ಏನೇನು ಗೊತ್ತೇ ಇಲ್ಲ. ನೀನು ಇಡೀ ದಿವಸ ಏನ್ ಮಾಡ್ತಿಯಾ? ನಿನ್ನ ಇಷ್ಟಗಳೇನು? ನಿನ್ನ ಬಗ್ಗೆ ತಿಳಿದುಕೊಳ್ಳೋದಿಕ್ಕೆ ಸಮಯವೇ ಇರಲಿಲ್ಲ. ಹೌದು, ನಿಮ್ ಅಪ್ಪ ಅಮ್ಮ ಹೇಗಿದ್ದಾರೆ? ನೀನೊಬ್ಬಳೇ ಇಲ್ಲಿ ಇರೋದು ಅವರಿಗೆ ತುಂಬಾ ಆತಂಕ ಆಗಿರಬೇಕು ಅಲ್ವ?

ಆದರೆ ಒಂದಂತೂ ನಿಜ  ಭೂಮಿ. ನೀನು ಮಾತ್ರ ಪತ್ರ ಬರೆಯುವಾಗ ಎಲ್ಲ ವಿಷಯಗಳನ್ನೂ ವಿಶದವಾಗಿ ಬರಿ. 

ಇವತ್ತು ನನಗೆ ಫ್ರೀ. ಹಾಗಾಗಿ ಪತ್ರ ಬರೆಯುತಿದ್ದೇನಿ. ನಾನು ಕುಳಿತಿರುವ ಜಾಗದಲ್ಲಿ ಗುಂಡಿನ ಶಬ್ದ ಕೇಳಿಸುತ್ತಿದೆ. 

ನೀನು ತುಂಬಾ ಧೈರ್ಯವಂತೆ ಭೂಮಿ. ಮದುವೆಯ ದಿನ, ನಿಮ್ಮ ಅಪ್ಪ ಹೇಳಿದರು. ನೀನು ಒಬ್ಬ ಯೋದ್ಧನ ಜೊತೆಗೇನೆ  ಮದುವೆಯಾಗ ಬೇಕೆಂದು ಹಠ ಹಿಡಿದಿದ್ದೀಯೆಂತೆ? ನಮ್ಮಂತವರಿಗೆ ಧೈಯ ತುಂಬಲು ಇದಕ್ಕಿಂತ ಬೇರೆ ಏನು ಬೇಕು?

ನನಗೆ ರೋಮ್ಯಾಂಟಿಕ್ ಆಗಿ ಪತ್ರ ಬರೆಯಲು ಬರುವುದಿಲ್ಲ ಭೂಮಿ. ಆದರೆ, ಒಂದು ಮಾತು ಮಾತ್ರ ಸತ್ಯ; ನಾನು ನಿನ್ನನ್ನು ನನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತೇನೆ. ಇಂತಿ ನಿನ್ನವನೇ ಆದ

ಸುಕ್ದೇವ್

ಪತ್ರವನ್ನು ಓದಿ ಮುಗಿಸಿದಾಗ ಭೂಮಿಯ ಕಣ್ಣುಗಳು ಒದ್ದೆಯಾಗಿದ್ದವು. ಪತ್ರವನ್ನು ಮಡಿಚಿ ಕೈಲಿಟ್ಟುಕೊಂಡು ಹರಿಯುತ್ತಿರುವ ನೀರನ್ನೇ ನೋಡುತ್ತಾ ಸ್ವಲ್ಪ ಸಮಯ ಕುಳಿತಿದ್ದಳು. ಯೂನಿಫಾರ್ಮ್ನಲ್ಲಿ ಹೊರಟು ನಿಂತಿದ್ದ ತನ್ನ ಗಂಡನ ಮುಖವನ್ನು ನೆನೆದು ಅವಳ ಮುಖ ಅರಳಿತು.

ಮುಂದಿನ 10 ದಿನಗಳ ಕಾಲ ಭೂಮಿ ಪತ್ರಕ್ಕಾಗಿ ಕಾಯುತ್ತಲಿದ್ದರೂ, ಯಾವ ಪತ್ರವೂ ಬರಲಿಲ್ಲ. ಹನ್ನೊಂದನೇ ದಿನ, ಪೋಸ್ಟ್ಮನ್ ನಸುನಗುತ್ತಾ ಪತ್ರವನ್ನು ಕೊಟ್ಟು, ಅವಳ ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸಿ ಹೋದ ಕೂಡಲೇ, ಭೂಮಿ, ತನ್ನ ಕೆಲಸವನ್ನೆಲ್ಲ ಮುಗಿಸಿ, ನದಿಯ ಹತ್ತಿರ ಹೋದವಳು ಬೆಂಚಿನ ಮೇಲೆ ಕುಳಿತು, ಪತ್ರ ವನ್ನು ಓದಲು ಶುರು ಮಾಡಿದಳು.

ಈ ಬಾರಿಯ ಪತ್ರ ಕೇವಲ ಒಂದೇ ಪೇಜಿನದಾಗಿತ್ತು

ಪ್ರೀತಿಯ ಭೂಮಿ

ವಾವ್ ಭೂಮಿ; ನಿನ್ನ ಪತ್ರ, ನೀನು ಬರೆದಿರುವ ಶೈಲಿ ಹಾಗು ವಿಷಯಗಳು ನನ್ನನ್ನು ಬೇರೆ ಲೋಕಕ್ಕೆ ಕರೆದೊಯ್ಯಿತು. ನಿನ್ನ ಪತ್ರ ಬರುವವರೆಗೂ, ನಾನು ಬರೆದಿದ್ದ ಪತ್ರ ಇನ್ನೂ ಪೋಸ್ಟ್ ಮಾಡಿರಲಿಲ್ಲ. ನಿಜವಾಗಲೂ ಭೂಮಿ, ನೀನು ತುಂಬಾ ಜಾಣೆ. 

ನಿನ್ನ ಬಿಡುವಿನ ಸಮಯದಲ್ಲಿ, ಅಲ್ಲಿನ ಮಕ್ಕಳಿಗೆ, ಡ್ರಾಯಿಂಗ್ ಹೇಳಿಕೊಡೋದು, ಸಂಜೆ ಸಂಗೀತದ ರಿಯಾಜ್, ಅವಿದ್ಯಾವಂತ ವಯಸ್ಸಾದ ಹೆಣ್ಣುಮಕ್ಕಳಿಗೆ ಮಧ್ಯಾಹ್ನದ ಸಮಯ ಬರಹದ ಅಭ್ಯಾಸ ಒಹ್, ಸಮಯದ ಉಪಯೋಗ ಹೇಗೆ ಮಾಡಿಕೊಳ್ಳಬೇನೆಂಬುದನ್ನು ನಿನ್ನಿಂದ ಕಲಿಯ ಬೇಕು. ನನಗೆ ನಿನ್ನನ್ನು ಹೆಂಡತಿಯಾಗಿ ಪಡೆದಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ.

ನೀನು ಬರೆದೆರುವ ನಮ್ಮಿಬ್ಬರ ಡ್ರಾಯಿಂಗ್, ಯಾವ ಫೋಟೊಗೊ ಕಡಿಮೆ ಇಲ್ಲ. ಎಂಥ ನಿಪುಣತೆ? ತುಂಬಾ ಖುಷಿಯಾಯಿತು. ನಿನ್ನಬರಹ ಎಷ್ಟು ಸುಂದರವಾಗಿದೆ? 

ನಿಮ್ಮ ತಂದೆಯ ಅನಾರೋಗ್ಯದ ವಿಷ್ಯ ಕೇಳಿ ಬೇಜಾರಾಯಿತು. ದೇವರು ಅವರಿಗೆ ಬೇಗ ಗುಣ ಮಾಡಲಿ. 

ಹೌದೂ, ನಾನು ಫ್ಲ್ಯೂಟ್ ಎಲ್ಲೂ ನೋಡಿದ ಜ್ಞಾಪಕವೇ ಇಲ್ಲವಲ್ಲಾ? ಸೊ, ಹೇಗೆ ನಡೀತಿದೆ ನಿನ್ನ ಅಭ್ಯಾಸ? ನಿನ್ನ ಕೊಳಲು ಕೇಳಬೇಕೆಂದು ಆಸೆ ಯಾಗುತ್ತಿದೆ. 

ಇಲ್ಲಿ ಹೆಚ್ಚಿನ ವಿಷಯವೇನು ಇಲ್ಲ. 

ನಿನ್ನನ್ನು ತುಂಬಾ ಪ್ರೀತಿಸುವ

ಸುಕ್ದೇವ್

ಭೂಮಿ ಎಂದಿನಂತೆ, ಪತ್ರವನ್ನು ಮಡೆಚಿ ತಾನು ತಂದಿದ್ದ ಕ್ಲಿಪ್ ಬೋರ್ಡ್ ಹಾಗು ಪೆನ್ ತೆಗೆದು ಮತ್ತೊಂದು ಪತ್ರ ಬರೆಯಲು ಶುರು ಮಾಡಿದವಳು, ಮಕ್ಕಳಿಗೆ ಪಾಠದ ಸಮಯ ವಾಯಿತೆಂದು, ಅಲ್ಲಿಗೆ ನಿಲ್ಲಿಸಿ ಸರ ಸರನೆ ಮನೆಗೆ ಹೊರಟಳು.

ಮತ್ತೆ 10 ದಿನ ಕಾಯ ಬೇಕಾಯಿತು ಸುಕ್ದೇವ್ನ ಪತ್ರಕ್ಕೆ. ಪತ್ರವನ್ನು ಕೊಟ್ಟ ಪೋಸ್ಟ್ಮನ್, ಕೆಲವು ಕ್ಷಣ ಅವಳನ್ನೇ ನೋಡುತ್ತಿದ್ದವನು, ಹೇಳಿದ, "ಈ ಪತ್ರಗಳು ಸೇನೆಯಲ್ಲಿರುವ ನಿನ್ನ ಗಂಡನದೆಂದು ಕಾಣುತ್ತದೆ? ಹೌದ?"

ಭೂಮಿಯ ಮುಖ ಅರಳಿತು. "ಹೌದು ಚಾಚಾ. ಇವತ್ತಾದರೂ, ಒಳಗೆ ಬಂದು ಚಹಾ ಕುಡಿದು ಹೋಗಿ."

ಪೋಸ್ಟ್ಮನ್ ನಸುನಗುತ್ತಾ ಹೇಳಿದ. "ಖಂಡಿತವಾಗಿಯೂ ಮಗು. ಇನ್ನೂ ನನ್ನಿಂದ ನಿರಾಕರಣೆ ಮಾಡಲಾಗುವಿದಿಲ್ಲ."

ಭೂಮಿ ಮಾಡಿಕೊಟ್ಟ ಚಹಾ ಸ್ವಾದಿಸುತ್ತ ಹೇಳಿದ ಪೋಸ್ಟ್ಮನ್. "ನಿನ್ನ ಉತ್ತರದ ಪತ್ರವೇನಾದ್ರೂ ಇದ್ದರೆ ಕೊಡು. ನೀನು ಪೋಸ್ಟಾಫಿಸತನಕ ನಡೆದು ಬರುವುದು ಬೇಡ."

ನಗುತ್ತಾ ಹೇಳಿದಳು ಭೂಮಿ. "ಇಲ್ಲ ಚಾಚಾ. ಉತ್ತರ ಇನ್ನೂ ಬರ್ದಿಲ್ಲ. ಪರವಾಗಿಲ್ಲ ಬಿಡಿ. ನಾನೇ ಬಂದು ಪೋಸ್ಟ್ ಮಾಡ್ತೀನಿ." 

ಪೋಸ್ಟ್ಮನ್ ಹೋದಕೂಡಲೇ, ಭೂಮಿ ನದಿಯ ಹತ್ತಿರ ಹೋಗಿ ಪತ್ರ ಹೊರ ತೆಗೆದಳು.

ಪ್ರೀತಿಯ ಭೂಮಿ

ನಿನ್ನ ಪತ್ರ ನೋಡಿ ಕುಣಿದಾಡಿದೆ. ನೀನು ಬರೆದಿದೆಲ್ಲವನ್ನು ನಿನ್ನ ಬಾಯಿಂದಲೇ ಕೇಳಬೇಕೆಂದು ಆಸೆಯಾಯಿತು. 

ಇಲ್ಲಿನ ವಿಷಯದ ಬಗ್ಗೆ ಬರೆಯಲು ಹೇಳಿದ್ದಿ. ಆದರೆ, ಭೂಮಿ, ನಮಗೆ ಬರೆಯಲು ನಿರ್ಬಂಧವಿರುತ್ತದೆ. ಇಷ್ಟು ಮಾತ್ರ ಹೇಳಬಲ್ಲೆ. ನಮ್ಮ ಟೀಮಿನ ಒಬ್ಬ ನನ್ನ ಸ್ನೇಹಿತ ಶತ್ರುಗಳ ಗುಂಡಿಗೆ ಬಲಿಯಾದ. ಪಾಪ, ತಂದೆ ತಾಯಿಗೆ ಒಬ್ಬನೇ ಮಗ ಅವನು. ಅವನು ಕೂಡ ನನ್ನೊಟ್ಟಿಗೆ ಫೌಜಿಗೆ ಸೇರಿಕೊಂಡವನು. ಕಳೆದ ವಾರವೆಲ್ಲ ಬಹಳ ಬೇಜಾರಿನಲ್ಲಿದ್ದೆ. ನಮ್ಮ ಸಾಹೇಬರು ಅವನ ತಂದೆ ತಾಯಿಯ ಹತ್ತಿರ ಮಾತನಾಡಿದರು. ಈ ವರ್ಷದಲ್ಲಿ ಹುತಾತ್ಮನಾದ ನಮ್ಮ ಬ್ಯಾಚಿನ ಐದನೆಯವನು ಆ ಹುಡುಗ.

ನಿನ್ನ ವಿವರಣೆ ಎಷ್ಟು ಚಂದ. ನಿನ್ನ ಬರವಣಿಗೆ ನಿನ್ನಷ್ಟೇ ಸರಳ. 

ನಮ್ಮ ಮುಂದಿನ ಪ್ರಾಜೆಕ್ಟ್ ತುಂಬಾ ಮಹತ್ವದೆಂದು ನಮಗೆ ರೆಡಿ ಯಾಗಿರಲು ಹೇಳಿದ್ದಾರೆ. ಯಾವಾಗ ಇಲ್ಲಿಂದ ಹೊರಡಬೇಕಾಗುವುದೋ ಗೊತ್ತಿಲ್ಲ.

ನೀನು ಕಳುಹಿಸಿದ ವಿಧಾನದಿಂದ ಇವತ್ತು ಅಡುಗೆ ಮಾಡಿದೆ; ತಿಂದವರೆಲ್ಲರೂ, ನನಗಿಂತ ನಿನ್ನನ್ನೇ ಹೊಗಳಿದ್ದನ್ನು ಕೇಳಿ ಖುಷಿಯಾಯಿತು. ನನ್ನನ್ನು ಪರ್ಮನೆಂಟ್ ಕುಕ್ ಆಗಿ ನೇಮಕ ಮಾಡುವಂತೆ ನನ್ನ ಸ್ನೇಹಿತರು ತಮಾಷೆಗಾಗಿ ನಮ್ಮ ಸಾಹೇಬರನ್ನು ಕೇಳುತ್ತಿದ್ದರು. 

ನೀನು ಬರೆಯುವ ಪತ್ರಗಳನ್ನು ತಂದು ಕೊಡುವ ಪೋಸ್ಟ್ಮನ್ ಯಾರು ಗೊತ್ತಾ? ನಮ್ಮ ಊರಿನಲ್ಲಿರುವ ಪೋಸ್ಟ್ಮಾನ್ನ ತಮ್ಮ. ಇಲ್ಲಿಗೆ ಬಂದು ಆರು ತಿಂಗಳಾಯಿತಂತೆ. 

ನಿನ್ನಿದ ಪ್ರಚೋದಿತನಾಗಿ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಒಂದು ಚಿತ್ರ ಬಿಡಿಸಿದ್ದೇನೆ. ದಯವಿಟ್ಟು ನೋಡಿ ನಗಬೇಡ. ನಿನ್ನಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲ. ನೋಡಿ ನಿನ್ನ ಅಭಿಪ್ರಾಯ ತಿಳಿಸು.

ನಿನ್ನನ್ನು ತುಂಬಾ ಪ್ರೀತಿಸುವ, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುವ

ಸುಕ್ದೇವ್ 


ಭೂಮಿ ಬರುತ್ತಿದ್ದ ಕಣ್ಣೆರನ್ನು ಒರೆಸಿಕೊಂಡಳು. ಎದ್ದು ಹೊರಡ ಬೇಕೆಂದು ನಿಂತವಳು, ತಲೆ ಸುತ್ತಿ ಬೀಳುವಂತಾಗಿದ್ದರಿಂದ, ಅಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದು ನಿಂತಳು.

ಈ ರೀತಿ ತಲೆ ಸುತ್ತಿದ್ದು, ಅವಳಿಗೆ ಇದೆ ಮೊದಲ ಬಾರಿ. ಮಧ್ಯಾಹ್ನ ಪಾಠ ಮುಗಿದ ಕೂಡಲೇ ಅಮ್ಮನ ಜೊತೆ ಮಾತನಾಡಿ ವಿಷಯ ತಿಳಿಸಬೇಕೆಂದುಕೊಂಡಳು.

ಸಂಜೆ ಒಬ್ಬಳೇ ಕುಳಿತಿದ್ದಾಗ, ಪೇಪರ್, ಪೆನ್ ಹಿಡಿದು ಪತ್ರ ಬರೆಯಬೇಕೆಂದು ಯೋಚನೆ ಮಾಡುತ್ತಾ ಕುಳಿತಳು. ಏನು ಬರೆಯುವುದು?

ಕಾಗದವನ್ನು ಬರೆದು ಮುಗಿಸಿ, ಪೋಸ್ಟ್ ಮಾಡಲು ಪೋಸ್ಟ್ ಆಫೀಸಿಗೆ ಹೊರಟಳು. ಯಾವಾಗಲೂ ಬರುವ ಪೋಸ್ಟ್ಮನ್, ಪತ್ರಗಳನ್ನು ವಿಂಗಡಣೆ ಮಾಡುತ್ತಲಿದ್ದವನು, ಭೂಮಿಯನ್ನು ನೋಡಿ ಎದ್ದುಬಂದ. "ಏನು ಮಗು? ನಿನ್ನ ರಿಪ್ಲೈ ರೆಡಿ ಆಯ್ತಾ?" ನಗುತ್ತ ಹೇಳಿದಳು ಭೂಮಿ. "ಹೌದು ಚಾಚಾ. ರೆಡಿ. ಚಾಚಾ ನಿಮ್ಮನ್ನು ಒಂದು ಪ್ರಶ್ನೆ ಕೇಳಬೇಕು? ನಿಮ್ಮ ತಮ್ಮ ಗಡಿಯಲ್ಲಿ ಪೋಸ್ಟ್ಮನ್ ಆಗಿ ಕೆಲಸ ಮಾಡುತ್ತಿದ್ದಾರಂತೆ ಹೌದ? ನನ್ನ ಗಂಡ ಪತ್ರ ದಲ್ಲಿ ಬರೆದಿದ್ದರು.”

ಪೋಸ್ಮ್ಯಾನ್ ನಗುತ್ತಾ ನುಡಿದ "ಹೌದು ಮಗು. ಸುಕ್ದೇವ್ ಹೇಳುವಂತೆ ಅವನು ನನ್ನ ತಮ್ಮನೇ ಇರಬೇಕು. ಯಾಕೆಂದರೆ, ನಮ್ಮಿಬ್ಬರನ್ನು ನೋಡಿದ್ದಾನೆ ಸುಕ್ದೇವ್. ನಾವೆಲ್ಲರೂ ಇದೆ ಊರಿನವರು ತಾನೇ."

ಭೂಮಿ ಆಲೋಚನೆ ಮಾಡುತ್ತಾ ಮನೆಯತ್ತ ನಡೆದಳು. ಅವಳಿಗೆ ಯಾವ ಪೋಸ್ಟ್ ಇರಲಿಲ್ಲ.

ಭೂಮಿ ಮತ್ತೆರಡು ದಿನ ಪತ್ರಕ್ಕಾಗಿ ಕಾದು ಕುಳಿತಿದ್ದಳು. ಪೋಸ್ಟ್ಮನ್ ದೂರದಲ್ಲಿ ಬರುತ್ತಿದ್ದವನು, ಅವಳ ಮನೆ ಕಡೆ ಬರದೇ, ಬೇರೆ ರಸ್ತೆಯ ಕಡೆ ಸೈಕಲ್ ತಿರುಗಿಸಿಕೊಂಡು ಹೋದ.

ಸುಮ್ಮರು 20 ದಿನದ ನಂತರ ಪೋಸ್ಟ್ಮನ್ ಪತ್ರ ತಂದುಕೊಟ್ಟು ಸರಸರನೆ ಹೊರಟು ಹೋದ.

ಪತ್ರದಲ್ಲಿ ಕೆಲವೇ ಸಾಲುಗಳಿದ್ದವು. ತಾನು ಬರೆದಿದ್ದ ಪತ್ರದ ಬಗ್ಗೆ ಉಲ್ಲೇಖವೇ ಇರಲಿಲ್ಲ. ಮೊದಲು ಬೇಸರ ಗೊಂಡ ಭೂಮಿ, ನಂತರ, ಕೆಲಸದ ಒತ್ತಡವಿರಬೇಕೆಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು.

ಮುಂದಿನ ಮೂರು ಪತ್ರಗಳು ಕೂಡ ಬಹಳ ಚಿಕ್ಕದಿದ್ದವು. ನದಿಯ ದಂಡೆಯಲ್ಲಿ ಕುಳಿತ ಭೂಮಿ ಯೋಚಿಸಿದಳು; ಇದೇನು ಪತ್ರಗಳು ಬರ ಬರುತ್ತಾ ಇಷ್ಟು ಚಿಕ್ಕದಾಗುತ್ತಲಿದೆಯಲ್ಲ?

ನಂತರದ 15 ದಿನ ಪತ್ರದ ಸುಳಿವೇ ಇಲ್ಲ. ಪೋಸ್ಟ್ಮನ್ ದೂರದಲ್ಲಿ ಕಂಡರೂ, ಅಲ್ಲಿಂದಲೇ ಕೈ ಬೀಸಿ ಹೇಳಿದ, ಏನು ಇಲ್ಲವೆಂದು.

ಇನ್ನೂ ಒಂದು ವಾರ ಕಳೆದರು ಪತ್ರವೂ ಬರಲಿಲ್ಲ, ಪೋಸ್ಟ್ಮಾನ್ನ ಸುಳಿವೂ ಇಲ್ಲ. ಚಿಂತೆಯೊಳಗಾದ ಭೂಮಿ ಪೋಸ್ಟಾಫಿಸಿಗೆ ಯಾಕೆ ಹೋಗಬಾರದೆಂದು ಆಲೋಚಿಸುತ್ತಿದ್ದಳು. ದೂರದಲ್ಲಿ ಪೋಸ್ಟ್ಮನ್ ಬರುತ್ತಿದ್ದುದನ್ನು ನೋಡಿ ಓಡಿ ಹೋದ ಭೂಮಿಯನ್ನು ನೋಡಿ, ಪೋಸ್ಟ್ಮನ್ ಜೋರಾಗಿ ಸೈಕಲ್ ತುಳಿದುಕೊಂಡು ಹೊರಟುಹೋದ.

ಪಕ್ಕದ ಊರಿನಲ್ಲಿ ಮಿಲಿಟರಿಗೆ ಸಂಬಂದಿಸಿದ ಆಫೀಸ್ ಇರುವುದು ತಳಿದು, ಅಲ್ಲೇಕೆ ಹೋಗಿ ವಿಚಾರಿಸಬಾರದೆಂದು ಭೂಮಿ ಆಲೋಚಿಸಿದಳು. ಕಳೆದ ಪತ್ರ ಬಂದು ಸುಮಾರು 25 ದಿನಗಳೇ ಕಳೆದಿದವೋ.

ಏನು ತೋಚದೆ, ಭೂಮಿ ನದಿಯ ದಂಡೆಯಲಿನ್ ಕುಳಿತು ಹರಿಯುವ ನೀರನ್ನೇ ನೋಡುತಿದ್ದವಳಿಗೆ, ಇದ್ದಕಿದ್ದಂತೆ, ತನ್ನ ಮೊಬೈಲ್ ರಿಂಗ್ ಆಗಿದ್ದು ಕೇಳಿ ಭಯ ವಾಯಿತು.

ನಂಬರ್ ನೋಡಿದರೆ, ಯಾವುದೋ ಅಪರಿಚಿತವಾದ ನಂಬರ್. ಸುಕ್ದೇವ್ ಅಥವಾ ಅವಳ ತಂದೆ ತಾಯಿಯರನ್ನು ಬಿಟ್ಟರೆ ಬೇರೆ ಯಾರಿಗೂ ಅವಳ ನಂಬರ್ ಗೊತ್ತಿರಲಿಲ್ಲ.

ಆತಂಕದಿಂದ ಫೋನ್ ಕಿವಿಗಿಟ್ಟು ಹೇಳಿದಳು "ಯಾರು?"

“ಭಾಭಿಜೀ ನನ್ನಹೆಸರು ಪರಮೇಶ್. ನಾನು ಸುಕ್ದೇವ್ ಇಬ್ಬರು ಒಂದೇ ತುಕುಡಿಯವರು. ಆರ್ಮಿಗೆ ಕೂಡ ನಾವಿಬ್ಬರು ಒಟ್ಟಿಗೆ ಸೇರಿಕೊಂಡವರು…. ಭಾಭಿಜೀ …. ಪರಮೇಶ್ ಅನುಮಾನಿಸುತ್ತ ನುಡಿದ. " ಭಾಭಿಜೀ ನನಗೆ ಹೇಗೆ ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲ.”

ಆತಂಕದ ಧ್ವನಿಯಲ್ಲಿ ನುಡಿದಳು ಭೂಮಿ, " ಪರಮೇಶಿ ಭಾಯ್, ಪರವಾಗಿಲ್ಲ ಹೇಳಿ ಏನಾಯ್ತು?"

ಪರಮೇಶ್ ನಡುಗುವ ಧ್ವನಿಯಲ್ಲಿ ಹೇಳಿದ, "ನಿಮ್ಮ ನಂಬರ್ ಕೊಟ್ಟಿದ್ದು ಸುಕ್ದೇವ್," ಆ ಕಡೆಯೆಂದ ತುಂಬಾ ದೀರ್ಘವಾದ ನಿಶಬ್ದತೆಯನ್ನು ಕೇಳಿ, ಬೂಮಿಯ ಎದೆ ಜೋರಾಗಿ ಬಡಿಯಲು ಶುರುವಾಯ್ಯಿತು. "ದಯವಿಟ್ಟು ಹೇಳಿ ಏನಾಯಿತು ಅಂತ?" ನಡುಗುವ ಧ್ವನಿಯಲ್ಲಿ ಹೇಳಿದಳು.

ಪರಮೇಶ್ ಜೀವವಿಲ್ಲದ ಧ್ವನಿಯಲ್ಲಿ ಹೇಳಿದ, " ಭಾಭಿಜೀ, ಸುಕ್ದೇವ್ಅನ್ನು ನಮ್ಮ ಇನ್ನೂ ಆರು ಸೈನಿಕರ ಜೊತೆ ಶತ್ರುಗಳು ಅಪಹರಿಸಿದ್ದಾರೆ. ಇದಾಗಿ ಸುಮಾರು ಒಂದು ತಿಂಗಳಾಯಿತು."

ಭೂಮಿಗೆ ನೆಲವೇ ಕುಸಿಯುವಂತಾಯಿತು. ಅಳುವಿನ ಧ್ವನಿಯಲ್ಲಿ ಕೇಳಿದಳು "ಒಂದು ತಿಂಗಳಾ? ಆದರೆ, ನನಗೆ ಈ ಮಧ್ಯೆ ಎರಡು ಮೂರು ಪತ್ರ ಬಂದಿದೆಯೆಲ್ಲ?"

ಪರಮೇಶ್ ಹೇಳಿದ, "ಹೌದು ಭಾಭಿಜೀ ಸುಕ್ದೇವ್ ಸುಮಾರು 2 ತಿಂಗಳ ಮುಂಚೆ ನನಗೆ ಅವನು ಬರೆದಿಟ್ಟಿದ್ದ 4 ಪತ್ರಗಳನ್ನು ಪೋಸ್ಟ್ ಮಾಡಲಿಕ್ಕೆಂದೇ ಕೊಟ್ಟಿದ್ದ. ಅದನ್ನು ನಾನೇ ಪೋಸ್ಟ್ ಮಾಡ್ತಾಯಿದ್ದೆ ಈಗ ಪೋಸ್ಟ್ಮಾಡಲು ನನ್ನ ಬಳಿ ಪತ್ರಗಳಿಲ್ಲ...ಅದಿಕ್ಕೆ ತಮಗೆ ಫೋನ್ ಮಾಡಿದೆ."

ಭೂಮಿ ಎದ್ದು ನಿಂತಳು. ಕಣ್ಣೀರನ್ನು ಒರೆಸಿಕೊಂಡು ಮಾತನಾಡಿದಾಗ ಅವಳ ಧ್ವನಿಯಲ್ಲಿ ನಡುಕ ಇರಲಿಲ್ಲ. " ಪರಮೇಶಿ ಭಾಯ್, ನೀವು ಎಂದಾದರೋ ಮತ್ತೆ ನನ್ನ ಗಂಡನನ್ನು ಭೇಟಿ ಮಾಡಿದರೆ, ದಯವಿಟ್ಟು ನನ್ನ ಪರವಾಗಿ ಒಂದೇ ಒಂದು ಮಾತು ಹೇಳಿ." ನಿಧಾನವಾಗಿ ತನ್ನ ಹೊಟ್ಟೆ ಸವರುತ್ತಾ ಹೇಳಿದಳು ಭೂಮಿ. "ನನ್ನ ಹೊಟ್ಟೆಯಲ್ಲಿ ಅವರ ಮಗು ಬೆಳಿಯುತ್ತಿದೆ. ಅದು ಹೆಣ್ಣಾಗಲಿ ಅಥವಾ ಗಂಡಾಗಲಿ, ಒಂದಂತೂ ನಿಶ್ಚಿತ. ದೊಡ್ಡವರಾದ ಮೇಲೆ, ಅವರ ತಂದೆಯ ಹಾಗೆ ಅವರೂ ಮಿಲಿಟರಿಗೆ ಸೇರುತ್ತಾರೆಂದು!”


Rate this content
Log in

Similar kannada story from Romance