Harish Bedre

Romance Classics Others

4  

Harish Bedre

Romance Classics Others

ಇದು ಪ್ರೀತಿನಾ.....!?

ಇದು ಪ್ರೀತಿನಾ.....!?

5 mins
495



ಎಂದಿನಂತೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕೆಲಸಕ್ಕೆ ಹೋಗುವ ಸಲುವಾಗಿ ಸ್ಟಾಂಡಿಗೆ ಬಂದು ನಿಂತಿದ್ದೆ, ನನ್ನ ಹಾಗೆ ಶಿಕಾರಿಪುರದ ಹತ್ತಿರದ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಟೀಚರ್, ಸರ್ ನಮಸ್ಕಾರ ಅಂದರು. ನಾನು, ಮೇಡಂ ನಮಸ್ಕಾರ ಅಂದೆ...

ಸರ್ ಮೂರು ದಿನ ಕಾಣಲಿಲ್ಲ, ರಜಾ ಇದ್ರಾ...

ಇಲ್ಲ, ಹೈದರಾಬಾದ್ ಹೋಗಿದ್ದೆ, ಅಲ್ಲಿ training ಇತ್ತು.

ಹೌದಾ..........‌ ಮುಂದೆ ಮಾತನಾಡಲು ತಿಳಿಯದವರಂತೆ ಸುಮ್ಮನಾದರು. ನನ್ನ ಮೂರು ವರ್ಷದ ಓಡಾಟದಲ್ಲಿ ಕೇವಲ ಒಮ್ಮೆ ಮಾತ್ರ ಅವರ ಬಳಿ ಮಾತನಾಡಿದ್ದೆ, ಒಂದೆರಡು ಬಾರಿ ಶಿವಮೊಗ್ಗದಲ್ಲೇ ಸಿಕ್ಕಾಗ ಹುಣ್ಣಿಮೆಯಂತ ನಗೆ ಸೂಸಿದ್ದರು. ಖಂಡಿತವಾಗಿಯೂ ಆ ನಗುವಿಗೆ ಸಂಪೂರ್ಣವಾಗಿ ಸೋತು ಶರಣಾಗದವರೇ ಇಲ್ಲ, ಮತ್ತೆ ನನ್ನದ್ಯಾವ ಲೆಕ್ಕ. ಆದರೂ ನಾನು ಸುಮ್ಮನಿದ್ದೆ. ಆಗ ತಿರುವಿನಲ್ಲಿ ನಮ್ಮ ಬಸ್ಸು ಬರುವುದು ಕಂಡಿತು. ಎರಡು ಹೆಜ್ಜೆ ಮುಂದಿಟ್ಟ ಅವರು, ಸರ್ ಇವತ್ತು ಜೊತೆಗೆ ಕೂರುವ ಅಂದರು. ಬಯಸದೇ ಬಂದ ಭಾಗ್ಯ, ನಾನು ಆಯಿತೆಂಬಂತೆ ತಲೆ ಆಡಿಸಿದೆನಾದರೂ, ಮನದಲ್ಲಿ ಯಾಕಿರಬಹುದೆಂಬ ಹೊಯ್ದಾಟ ಶುರುವಾಯಿತು.....

ನನಗಿಂತ ವಯಸ್ಸಲ್ಲಿ ಹತ್ತು ಹನ್ನೆರಡು ವರ್ಷ ಚಿಕ್ಕವರು, ನೋಡಲು ಸುಂದರವಾಗಿದ್ದ ಹೆಣ್ಣು, ತುಂಬಾ ಗಂಭೀರ ವ್ಯಕ್ತಿತ್ವದವರು, ಮೂರು ವರ್ಷದಲ್ಲಿ ಒಮ್ಮೆಯೂ ಸೀರೆಯ ಹೊರತಾಗಿ ಬೇರೆ ಬಟ್ಟೆಯನ್ನು ಉಟ್ಟಿದ್ದಾಗಲಿ. ವಿನಃ ಕಾರಣ ಯಾರೊಂದಿಗೂ ಮಾತನಾಡಿದ್ದಾಗಲಿ, ಕೈಯಲ್ಲಿ ಐಫೋನ್ ಇದ್ದರೂ ಅದರಲ್ಲಿ ಮಾತನಾಡಲು ಬಿಟ್ಟು, ಹಾಡು ಕೇಳಲಾಗಲಿ, ವಾಟ್ಸಾಪ್, ಫೇಸ್ಬುಕ್ ನೋಡಿದ್ದಾಗಲಿ ಎಂದೂ ನೋಡಿರಲಿಲ್ಲ. ಎಲ್ಲದರಲ್ಲೂ ಹಿತ ಮಿತ. ಹಾಗಾಗಿ, ಇವರು ಯಾಕೆ ಜೊತೆಗೆ ಕೂರುವ ಎಂದರೆಂದು ಯೋಚಿಸುತ್ತಾ ಬಸ್ಸ್ ಹತ್ತಿದೆ. ಚಾಲಕನ ಹಿಂದಿನ ಸೀಟಲ್ಲಿ ಕುಳಿತಿದ್ದ ಅವರು, ಸರ್ ಇಲ್ಲಿ ಎಂದು ಕರೆದರು. ನಾನು ವಿಧೇಯ ವಿದ್ಯಾರ್ಥಿಯಂತೆ ಹೋಗಿ ಕುಳಿತೆ.


ಮಾತು ಆರಂಭಿಸುವ ಸಲುವಾಗಿ, ಮೇಡಂ ನಾನು ವಿಶಾಲ್ ಎಂದು ಕೈಚಾಚಿದೆ

ಅವರು ನನ್ನ ಕೈಕುಲಕುತ್ತಾ, ಸರ್ ಗೊತ್ತು, ನೀವು ಎಲ್.ಐ.ಸಿ.ಯಲ್ಲಿ ಕೆಲಸ ಮಾಡೋದೂ ಗೊತ್ತು.

ನಿಮ್ಮ ಹೆಸರು?

ಯಾಕೆ ಸರ್, ನಿಮಗೆ ಗೊತ್ತಿಲ್ವಾ?

ಅನುರಾಧ ಅಲ್ವಾ?

ಅಲ್ಲ ಸರ್, ಅನುರಾಗ....

ಟಿಕೆಟ್ ಕೊಡಲು ಕಂಡಕ್ಟರ್ ಬಂದಾಗ, ನಾನು ನನ್ನ ಜೇಬಿಗೆ ಕೈ ಹಾಕುವ ಮೊದಲೆ, ಅವರು ಎರಡು ಟಿಕೆಟಿಗೆ ಹಣ ಕೊಟ್ಟರು. ನಾನು ಎಷ್ಟು ಬೇಡವೆಂದರೂ ಕೇಳಲೇ ಇಲ್ಲ, ದುಡ್ಡೂ ತೆಗೆದುಕೊಳ್ಳಲಿಲ್ಲ. ಕಂಡಕ್ಟರನು ಎಂದೂ ಇಲ್ಲದ್ದು ಇಂದೇನೂ ಅನ್ನುವಂತೆ ನೋಡಿ ಮುಂದೆ ಹೋದ.

ಅವರ ಮುಖದಲ್ಲಿ ಇನ್ನಿಲ್ಲದ ಭಾವೋದ್ವೇಗ ಎದ್ದು ಕಾಣುತ್ತಿತ್ತು. ಇದು ನನ್ನ ಉದ್ವೇಗಕ್ಕೂ ಕಾರಣವಾಗಿ, ಇಬ್ಬರಿಂದಲೂ ಐದು ನಿಮಿಷ ಮಾತೆ ಹೊರಡಲಿಲ್ಲ. ಕಾರಣ ಗೊತ್ತಿದ್ದರೆ ಏನಾದರೂ ಮಾತನಾಡಬಹುದು, ಏನು ಗೊತ್ತಿಲ್ಲದೆ ಏನೇನೋ ಯೋಚನೆಯಲ್ಲಿ ಮಾತೇ ಬಾರದವನಂತೆ ಸುಮ್ಮನಿದ್ದೆ. ಇದು ಬದುಕಿನ ಹೊಸ ಅನುಭವ. ಯಾವತ್ತೂ, ಯಾರೊಂದಿಗೂ ಆಗಿರಲಿಲ್ಲ. ಅವರ ಮುಖ ನೋಡಲು ಹೆದರಿಕೆ...... ಎರಡು ಬಾರಿ ನನ್ನ ಮುಖವನ್ನು ನೋಡಿದರು. ನಾನು totally blank.

ಅವರೇ ಕಷ್ಟಪಟ್ಟು ಮಾತು ಆರಂಭಿಸಿದರು.

ಸರ್, ನೀವು ಕತೆ ಕವನ ಬರಿತಿರ ಅಲ್ವಾ, ನಾನು ಒಂದೆರಡು ಓದಿರುವೆ, ಚೆನ್ನಾಗಿ ಬರಿತಿರಿ.....

ಬಹಳ ಅಪರೂಪಕ್ಕೆ ಬರಿತಿನಿ, ಹೇಗಿರುತ್ತೆ ಅಂತ ನೀವೇ ಹೇಳಬೇಕು..... ಹೌದು, ನಾನು ಯಾವ ಪೇಪರಿಗೂ ಕಳಿಸುವುದಿಲ್ಲ, ಆದರೆ ನೀವು ಎಲ್ಲಿ ಓದಿದ್ರಿ.....

ನನ್ನ ಫ್ರೆಂಡ್ ಫೇಸ್ಬುಕ್ ಅಕೌಂಟಲ್ಲಿ ನೋಡಿದೆ. ಅವರು ನಿಮ್ಮ mutual friend....

ನಿಮ್ಮ ಫ್ರೆಂಡ್ ಹೆಸರು....

ಗೀತಾ, ಮೈಸೂರಿನವರು....

ಯಾರೆಂದು ಆ ಕ್ಷಣಕ್ಕೆ ಹೊಳೆಯಲಿಲ್ಲ, ಅದೇ ಯೋಚನೆಯಲ್ಲಿ ಮತ್ತೆ ಮಾತು ನಿಂತಿತು.

ಪ್ರತಿದಿನ ಜಟಕಗಾಡಿಯಂತೆ ಸಾಗುತ್ತಿದ್ದ ಬಸ್ಸು, ಇಂದು ಬುಲೆಟ್ ಟ್ರೈನ್ ಗಿಂತ ವೇಗವಾಗಿ ಸಾಗುತ್ತಿರುವ ಅನುಭವ. ಇಬ್ಬರ ವೃತ್ತಿಗೆ ಮಾತೇ ಬಂಡವಾಳ. ಎದುರಿಗೆ ಯಾರೇ ಇದ್ದರೂ, ಸುಲಲಿತವಾಗಿ ಗಂಟೆಗಟ್ಟಲೆ ಮಾತನಾಡುವ ಕಲೆ ಕರಗತವಾಗಿಸಿಕೊಂಡವರಿಬ್ಬರೂ stock ಖಾಲಿಯಾದವರಂತೆ ಪರದಾಡುವ ಪರಿಸ್ಥಿತಿ. ನಾನೇ ಕೇಳಿದೆ, ಮೇಡಂ ಏನೋ ಮಾತನಾಡಬೇಕು ಅಂತ ಕರೆದಿರಲ್ಲವೆ..... ಅವರು ಹೌದೆನ್ನುವಂತೆ ತಲೆ ಹಾಕಿದರು. ಮತ್ತೆ ನಾನೇ ಕೇಳಿದೆ, ಹೇಳಿ ಏನು ಸಮಾಚಾರ......... ಆಗಲೂ ಅವರು ದೀರ್ಘವಾಗಿ ಉಸಿರು ತೆಗೆದುಕೊಂಡು, ನನ್ನನ್ನು ತುಂಬಾ ಭಾವನಾತ್ಮಕವಾಗಿ ನೋಡಿದರೆ ಹೊರತು ಮಾತನಾಡಲಿಲ್ಲ. ಆ ನೋಟದಲ್ಲಿ ಸಾವಿರ ಭಾವಗಳು ತುಂಬಿದ್ದವು. ಕಣ್ಣಿನಲ್ಲಿ ಕಂಡು ಕಾಣದಂತಿದ್ದ ನೀರಿನ ಒರತೆ, ಏನೋ ಗಾಡವಾದ ವಿಚಾರ ಹೇಳಬೇಕು, ಆದರೆ ಹೇಳಿಕೊಳ್ಳಲು ಆಗದಂತ ಸಂಧಿಗ್ದತೆ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಕಾಲದ ಜೊತೆ ಜೊತೆಗೆ ಬಸ್ಸು ತನ್ನ ಗುರಿಯತ್ತ ಸಾಗುತ್ತಿತ್ತು.

ನಾನು ಎಲೈಸಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ತಮ್ಮ ಪಾಲಿಸಿಗಳ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಸಹಜ. ಅದೂ, ಪಾಲಿಸಿದಾರರು ಮರಣಹೊಂದಿರುವಾಗ ಕ್ಲೇಮ್ ಪಡೆಯುವ ಬಗ್ಗೆ ವಿಚಾರಿಸುವುದು ಹೆಚ್ಚು. ಕೆಲವರು ತಮಗೆ ಬೇಕಾದ ಎಲ್ಲಾ ವಿಚಾರಗಳನ್ನು ನೇರವಾಗಿ ಕೇಳುತ್ತಾರೆ. ಕೆಲವರು, ವ್ಯಕ್ತಿ ಸತ್ತ ಕೂಡಲೇ ದುಡ್ಡಿಗಾಗಿ ಕೇಳುತ್ತಿದ್ದಾರೆಂದು, ನಾನೆಲ್ಲಿ ಅಂದುಕೊಳ್ಳುವೆನೆಂದು ತುಂಬಾ ಸಂಕೋಚದಿಂದ ಕೇಳಲು ಪರದಾಡುತ್ತಾರೆ. ಬಹುಶಃ ಇವರದು ಅಂತಹ ವಿಚಾರವೇ ಇರಬೇಕು, ಅದರಲ್ಲೂ ತುಂಬಾ ಹತ್ತಿರದವರೇ ಹೋಗಿರಬೇಕು ಹಾಗಾಗಿ, ತಮ್ಮವರನ್ನು ಕಳೆದುಕೊಂಡ ಸಂಕಟ, ನನ್ನ ಬಳಿ ಹೇಗೆ ಕೇಳಬೇಕೆಂಬ ಸಂಕಟ ಎರಡೂ ಸೇರಿ ಹೀಗಾಡುತ್ತಿರಬೇಕು, ಆದರೆ ನಾನಾಗಿ ಕೇಳುವುದು ಸರಿಯಾಗುವುದಿಲ್ಲ ಎಂದು ಸುಮ್ಮನೆ ಕುಳಿತುಬಿಟ್ಟೆ.

ಅವರೂ ಮೌನವೇ ಆಭರಣವೆಂಬಂತೆ ಸುಮ್ಮನೆ ಕುಳಿತಿದ್ದರು.

ಅವರು ಇಳಿಯುವ ಹಳ್ಳಿ ಬಂದೇಬಿಟ್ಟಿತು. ಆಗ ದಡಬಡನೆ ತಮ್ಮ ವ್ಯಾನಿಟಿ ಬ್ಯಾಗಿನಿಂದ ಕವರನ್ನು ತೆಗೆದು ನನ್ನ ಕೈಗಿಟ್ಟು, ಸರ್ ಎಲ್ಲಾ ಇದರಲ್ಲಿದೆ, ದಯವಿಟ್ಟು ಪುರಸತ್ತಲ್ಲಿ ತೆಗೆದು ನೋಡಿ.

ಮರೆಯಬೇಡಿ bye ಎಂದು, ಅವರೇ ನನ್ನ ಕೈ ಎಳೆದುಕೊಂಡು ಕುಲುಕಿ, ಹಿಂದಿರುಗಿ ನೋಡದೆ ಬಸ್ಸ್ ಇಳಿದು ಹೋದರು. ಈ ಯಾವ ಪ್ರಕ್ರಿಯೆಗಳನ್ನು ನಿರೀಕ್ಷೆ ಮಾಡದ ನಾನು ತಬ್ಬಿಬ್ಬಾದೆ..... ಮತ್ತೊಮ್ಮೆ blank ಆದಾಂತ ಭಾವ.

ತಕ್ಷಣವೇ ಕವರ್ ತೆರೆದು ನೋಡುವ ಹಂಬಲವಾದರೂ, ಬೇಡ ಕಛೇರಿಗೆ ಹೋದ ಮೇಲೆ ನೋಡಿದರಾಯಿತು, ಇನ್ನೂ ಹದಿನೈದು ನಿಮಿಷ ಆಷ್ಟೇ ಅಲ್ಲವೇ ಎಂದುಕೊಂಡು ಸುಮ್ಮನಾದೆ. ಆದರೆ, ಬೇಡವೆಂದ ಮನಸ್ಸೇ, ಮತ್ತೆ ಮತ್ತೆ ತೆರೆದು ನೋಡುವಂತೆ ಪ್ರೇರೆಪಿಸುತ್ತಿತ್ತು. ಈ ಬೇಕು ಬೇಡಗಳ ನಡುವೆ ಹದಿನೈದು ನಿಮಿಷ ಕಳೆದಿದ್ದು ಒಂದು ಯುಗವೇ ಕಳೆದಂತೆ ಭಾಸವಾಯಿತು.... ಅವರ ಪಕ್ಕದಲ್ಲಿದ್ದಾಗ ಬುಲೆಟ್ ಟ್ರೈನ್ ಅನಿಸಿದ್ದ ಬಸ್ಸು, ಈಗ ಪಕ್ಕಾ ಡಕೋಟ ಎಕ್ಸಪ್ರೆಸ್ ಅನಿಸತೊಡಗಿತು. ಅವರು ಕೊಟ್ಟ ಕವರ್ ತೆರೆಯದೆ ಕಛೇರಿಗೆ ಹೇಗೆ ಬಂದೆನೊ ಖಂಡಿತಾ ತಿಳಿಯದು....

ಕಛೇರಿಯಲ್ಲಿ ನಾನು ಮೊದಲ ಮಹಡಿಯಲ್ಲಿರುತ್ತೇನೆ, ಹಾಗಾಗಿ ನನ್ನ ಜಾಗಕ್ಕೆ ಹೋಗಿ ಕೂರುವ ಮುನ್ನ, ಕೆಳಗಡೆ ಎಲ್ಲರನ್ನು ಮಾತನಾಡಿಸುವುದು ಪ್ರತಿನಿತ್ಯದ ಪದ್ಧತಿ. ಆದರೆ ಇಂದು, ಕೈಯಲ್ಲಿ ಅವರು ಕೊಟ್ಟ ಕವರ್ ಇದ್ದ ಕಾರಣ, ಅದನ್ನು ತೆರೆದು ಓದುವ ಸಲುವಾಗಿ ಸೀದಾ ನನ್ನ ಜಾಗಕ್ಕೆ ಹೋಗಿ ಕುಳಿತೆ. ಪಾಪಿ ರಾಮೇಶ್ವರಕ್ಕೆ ಹೋದರು, ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನುವಂತೆ, ಇನ್ನೇನು ಕವರ್ ತೆರೆಯಬೇಕು ಅಂದುಕೊಳ್ಳುವಾಗಲೇ ಶಾಖಾಧಿಕಾರಿಗಳು ಕರೆಬಂದು ಅವರಿರುವ ಜಾಗಕ್ಕೆ ಹೋಗಿ ಬರುವ ವೇಳೆಗೆ ಅರ್ಧ ಗಂಟೆ ಆಗಿತ್ತು. ನನ್ನ ಟೇಬಲ್ ಹತ್ತಿರ ಬಂದಾಗ, ನನಗಾಗಿ ಇಬ್ಬರು ಕಾಯುತ್ತಿದ್ದರು. ಅವರನ್ನು ಮನಸಿಲ್ಲದ ಮನಸ್ಸಿನಲ್ಲಿ ಮಾತನಾಡಿಸಿ ಕಳಿಸುವ ವೇಳೆಗೆ ಮತ್ತೊಬ್ಬರು ಬಂದರು. ಕವರ್ ತೆಗೆದು ನೋಡುವ ಅಂದರೆ ಜನಗಳ ಕಾಟ ಶುರುವಾಯಿತಲ್ಲ ಎಂದು ಸಿಟ್ಟು ಬರಲು ಆರಂಭವಾಯಿತು. ಬಂದವರು ಪರಿಚಿತರೇ ಆಗಿದ್ದರಿಂದ ಅವರನ್ನು ಐದು ನಿಮಿಷ ಇರುವಂತೆ ವಿನಂತಿಸಿ, ಕವರ್ ತೆಗೆದುಕೊಂಡು ಯಾರು ನೋಡದಿರಲಿ ಎನ್ನುವ ಕಾರಣಕ್ಕೆ ಸೀದಾ ಟೆರೆಸ್ಸಿಗೆ ಹೋದೆ. 

ನಿಧಾನವಾಗಿ ಕವರ್ ತೆಗೆದು ನೋಡಿದಾಗ ಅದರಲ್ಲಿ, ಮುದ್ದಾದ ಅಕ್ಷರಗಳಿಂದ ಬರೆದ ಕಾಗದ ಇತ್ತು. ಒಮ್ಮೆ ದೀರ್ಘವಾಗಿ ಉಸಿರು ತೆಗೆದುಕೊಂಡು ಪತ್ರದ ಕಡೆ ಗಮನ ಹರಿಸಿದೆ. ಅದರಲ್ಲಿ....

ಸರ್,

ನನಗೆ ಗೊತ್ತು, ನಾನು ಮನಬಿಚ್ಚಿ ನಿಮ್ಮ ಬಳಿ ಮಾತನಾಡಲಾರೆ ಎಂದು. ಹಾಗಾಗಿ ಈ ಪತ್ರ ಬರೆದಿರುವೆ. ಇದನ್ನು ಓದಿದ ಮೇಲೆ, ನಿಮಗೆ ನಾನು ಹುಚ್ಚಿಯಂತೆ ಕಾಣಬಹುದು, ಆದರೆ ಇದರಲ್ಲಿ ಬರೆದಿರುವುದೆಲ್ಲಾ ಸತ್ಯ......

ನನಗೆ ಮದುವೆಯಾಗಿ ಹತ್ತು ವರ್ಷ, ಎಂಟು ವರ್ಷದ ಮಗಳಿದ್ದಾಳೆ. ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗಂಡ, ನನ್ನ ಕಷ್ಟಸುಖಗಳಿಗೆಲ್ಲ ಸ್ಪಂದಿಸುವ ತಂದೆ, ತಾಯಿ ಮತ್ತು ತಮ್ಮ ಇದ್ದಾರೆ. ಮದುವೆಯಾಗಿದ್ದರೂ ತಂದೆ ತಾಯಿ ಮನೆಯಲ್ಲಿದ್ದೇ ಪ್ರತಿದಿನ ಕೆಲಸಕ್ಕೆ ನಿಮ್ಮಗಳ ಜೊತೆ ಓಡಾಡುತ್ತಿದ್ದೆ. ಈಗ ದೇವರ ದಯೆ, ನನ್ನ ಗಂಡನ ಸತತ ಪ್ರಯತ್ನದಿಂದಾಗಿ, ಅವರ ಊರಿನ ಹತ್ತಿರದ ಹಳ್ಳಿಗೆ ವರ್ಗಾವಣೆ ಸಿಕ್ಕಿದೆ. ಇದೇ ಗುರುವಾರ ಈಗಿನ ಸ್ಥಳದಿಂದ ಬಿಡುಗಡೆಗೊಂಡು ಮುಂದಿನ ಸೋಮವಾರ ಹೊಸ ಶಾಲೆಯಲ್ಲಿ ಕೆಲಸ ಆರಂಭಿಸುವೆ. ನಿಮ್ಮ ಆಶೀರ್ವಾದ ಹಾಗೂ ಶುಭ ಹಾರೈಕೆಗಳು ಸದಾ ನನ್ನ ಮೇಲಿರಲಿ.

ಈಗ ಈ ಪತ್ರ ಏಕೆಂದು ನಿಮಗೆ ಅನಿಸುತ್ತಿರಬಹುದು, ಕಾರಣ ಇದೆ ಸರ್. ಏಕೆ, ಎಲ್ಲಿ, ಹೇಗೆಂದು ಕೇಳಬೇಡಿ, ನನಗೆ ಗೊತ್ತಾಗದಂತೆ ನನ್ನ ಮನಸ್ಸನ್ನು ನಿಮಗೆ ಅರ್ಪಿಸಿಬಿಟ್ಟಿರುವೆ. ಹುಚ್ಚು ಪ್ರೇಮವೆಂದರೆ ಇದೇನೊ ಅಥವಾ ಪ್ರೇಮ ಕುರುಡು ಅನ್ನುವುದಕ್ಕೆ ಇದೇ ಸಾಕ್ಷಿಯೋ ಗೊತ್ತಿಲ್ಲ. .....‌‌

ನೀವು ಹಿರಿಯ ಅಧಿಕಾರಿಯಾಗಿದ್ದು, ಅದನ್ನು ಎಲ್ಲಿಯೂ ತೋರಿಸಿಕೊಳ್ಳದ ರೀತಿ, ಸದಾ ನಿಮ್ಮ ಮುಖದಲ್ಲಿ ಮಿನುಗುವ ಮಂದಹಾಸ, ಯಾರಿಗೂ ತೊಂದರೆಯಾಗದಿರಲ್ಲೆಂದು ನೀವು ಪರದಾಡುವ ರೀತಿ, ತೀರಾ ಸರಳ, ಸಜ್ಜನನನ್ನು ನೋಡಿದಾಗ ಮರಳಾಗದವರು ಯಾರು.........

ನನಗೆ ಗೊತ್ತು ನಿಮಗೂ ಮದುವೆಯಾಗಿ, ಹೈಸ್ಕೂಲ್ ಓದುವ ಮಗನಿರುವನೆಂದು. ನನ್ನ ಮದುವೆಯಾಗುವ ಮೊದಲೇ ನೀವು ಕಣ್ಣಿಗೆ ಬಿದ್ದಿದ್ದರೆ, ಖಂಡಿತವಾಗಿಯೂ ನಿಮ್ಮನ್ನು ಬಿಡುತ್ತಿರಲಿಲ್ಲ. ನಿಮಗೆ ಮದುವೆಯಾಗಿದ್ದರೂ ಬಿಟ್ಟುಬಿಡದೆ ಎರಡನೇ ಹೆಂಡತಿಯಾಗಿ ಬರುತ್ತಿದ್ದೆ. ಆದರೆ ವಿಧಿಯಾಟ ನೋಡಿ, ನನ್ನ ಮದುವೆಯಾಗಿ ಮಗಳು ಬಂದ ಮೇಲೆ ಸಿಕ್ಕಿದ್ದಿರ. ಹಾಗಾಗಿಯೇ ಮನದಲ್ಲಿ ನಿಮ್ಮ ಬಗ್ಗೆ ಬೆಟ್ಟದಷ್ಟು ಆಸೆಯಿದ್ದರೂ ಒಮ್ಮೆಯೂ ಹೇಳುವ ಪ್ರಯತ್ನ ಮಾಡಲಿಲ್ಲ. ವರ್ಗಾವಣೆಯಾಗಿ ಗುರುವಾರ ಹೊರಡುವುದು ಖಾತ್ರಿಯಾದ ಮೇಲಷ್ಟೇ ಈ ಕಾಗದ ಬರೆದಿರುವೆ. ನಿಮ್ಮ ತಿಳಿನೀರಿನಂತೆ ಇದ್ದ ಮನಸ್ಸಿಗ ರಾಡಿಯಾಗಿಸಿರುವೆ, ಇದಕ್ಕೆ ಕ್ಷಮೆಯಿರಲಿ. ನಿಮ್ಮ ವಿಶಾಲವಾದ ಮನದ ಯಾವುದಾದರೂ ಮೂಲೆಯಲ್ಲದರೂ ಸರಿ ನನಗೊಂದು ಶಾಶ್ವತ ಸ್ಥಾನ ಸಿಗಲಿ ಎಂಬ ದುರಾಸೆಯಿಂದ ಇಷ್ಟೂ ದಿನ ನನ್ನ ಮನದಲ್ಲಿ ಮುಚ್ಚಿಟ್ಟುಕೊಂಡ ಸತ್ಯವನ್ನು ತಿಳಿಸಿ, ನನ್ನ ಎದೆಯ ಭಾರವನ್ನು ಕಡಿಮೆ ಮಾಡಿಕೊಳ್ಳುತ್ತಿರುವೆ. ಮುಂದೆ ಎಂದಾದರೂ ಎದುರುಗಡೆ ಸಿಕ್ಕಾಗ, ನಿಮ್ಮ ಪರಿಚಯದ ಮುಗುಳ್ನಗೆ ಸಿಕ್ಕರೆ ಆಷ್ಟೇ ಸಾಕು ಈ ಜನ್ಮಕ್ಕೆ......

ನನ್ನ ಇಷ್ಟ ದೇವರಾದ ನಿಮ್ಮಲ್ಲಿ ನನ್ನದೊಂದು ಅರಿಕೆ, ದಯಮಾಡಿ ನನ್ನ ಮರೆಯಬೇಡಿ. ಮರೆತೂ ಮರೆಯದಿರಿ, ಸದಾ ನೆನಪಿರಲಿ.



Rate this content
Log in

Similar kannada story from Romance