Vadiraja Mysore Srinivasa

Romance Inspirational Others

4.7  

Vadiraja Mysore Srinivasa

Romance Inspirational Others

ಹೌಸ್ ವೈಫ್ ರಮೇಶ್

ಹೌಸ್ ವೈಫ್ ರಮೇಶ್

5 mins
784


ಇದೆಲ್ಲಾ ಶುರುವಾಗಿದ್ದು, ಆ ನನ್ನ ಸ್ನೇಹಿತ, ಭಾಸ್ಕರ್ನಿಂದ!

ಸುಖಾ ಸುಮ್ಮನೆ ಶುರುವಾದ ಮಾತುಕತೆ, ಮದುವೆಯಾದ ಗಂಡಸಿನ ಪಾಡಿನ ಬಗ್ಗೆ, ನಮಗರಿವಿಲ್ಲದಂತೆ, ಎಳೆದುಕೊಂಡು ಹೋಯಿತು.

ಭಾಸ್ಕರನ ಪ್ರಕಾರ, ಮನೆಯ ಹೊಣೆಗಾರಿಕೆಯಲ್ಲಿ, ಸಿಂಹ ಪಾಲು ಹೊರಗೆ ದುಡಿಯುವ ಗಂಡಸಿನ ತಲೆಯ ಮೇಲಿರುತ್ತದೆ. ಮನೆಯಲ್ಲಿರುವ ಗೃಹಿಣಿಯ ಕೆಲಸ ಅಷ್ಟೇನು ಕಷ್ಟಸಾಧ್ಯವಲ್ಲದ್ದು.

"ಅಲ್ಲಾಕಣಯ್ಯಾ,, ಒಂದೇ ಸಾರಿ ತಿಂಡಿ, ಊಟ ರೆಡಿ ಮಾಡಿ ಅದೂ, ಮಕ್ಕಳು ಸ್ಕೂಲ್ಗೆ ಹೋಗೋಕೆ ಮುಂಚೆ, ಗಂಡನ್ನ ಪ್ಯಾಕ್ ಮಾಡಿ ಹೊರಗೆ ಕಳ್ಸಿಬಿಟ್ರೆ ಆಯಿತು. ನಾವು ಅಂಬೋ ಅಂತ ಬೆವರು ಸುರಿಸಿ ದುಡಿದು  ಸಾಯಂಕಾಲ ಕೆಲಸ ಮುಗ್ಸಿ, ಆ ಹಾಳು ಟ್ರಾಫಿಕ್ ನಲ್ಲಿ ಕಷ್ಟ ಪಟ್ಟು ಮನೆಗೆ ಬಾರೋ ತನಕ ಏನಪ್ಪಾ ಕೆಲಸ ಮನೆ ಹೆಂಗಸಿಗೆ? ಬಂದ್ ಕೂತು ಒಂದ್ ಲೋಟ ಕಾಫೀ ಕುಡಿಯೋಕೆ ಮುಂಚೆ, ಆ ಕೆಟ್ಟ ಬಾಸ್ ಫೋನ್ ಬೇರೆ! ಅಲ್ಲವಯ್ಯಾ, ಈ ಹೆಂಗಸರು ಮನೇಲಿ ಸುಮ್ಮನೆ ಟೀವಿ ನೋಡುದ್ ಬಿಟ್ಟು, ಬೇರೆ ಏನ್ ತಾನೇ ಮಾಡ್ತಾರೆ ? ನೀನೆ ಹೇಳು."

ಒಂದೇ ಉಸಿರಿನಲ್ಲಿ, ತನ್ನ ಪ್ರಲಾಪವನ್ನ ಹೇಳಿ ಮುಗಿಸಿ, ಉತ್ತರಕ್ಕಾಗಿ, ನನ್ನ ಮುಖ ನೋಡಿದ, ಭಾಸ್ಕರ.

ಅವನು ಹೇಳಿದ್ದೆಲ್ಲ ಸರಿಯೆನಿಸಿತಾದರೂ, ಅದನ್ನು ಅಲ್ಲಿಗೆ ಬಿಡದಿದ್ದು, ನನ್ನ ತಪ್ಪೇ.

ಕೇಳಿ, ಮುಂದೇನಿಯಿತೆಂದು.

ಮನೆಗೆ ಬಂದವನೇ, ಹೆಂಡತಿಯೊಡನೆ, ಭಾಸ್ಕರನ ಜೊತೆ ನಡೆದ ಸಂಬಾಷಣೆಯ ಕೇವಲ ಸಂಕ್ಷಿಪ್ತ ವಿಚಾರ ಹೇಳಿದ್ದೆ ತಡ, ನನ್ನ ಹೆಂಡತಿ ಶೂರ್ಪನಖಿಯಾದಳು.

"ಏನ್ರಿ ಹಾಗಂದ್ರೆ? ನಿಮ್ ಪ್ರಕಾರ ನಾವು, ಹೌಸ್ ವೈಫ್ ಸುಮ್ಮನೆ ಟೀವಿ ನೋಡ್ಕೊಂಡ್ ಕಾಲ ಕಳೀತೀವ? ಏನಂದ್ರೀ? ಒಂದ್ ತಿಂಡಿ ಒಂದ್ ಊಟ ಬೆಳಿಗ್ಗೆ ರೆಡಿ ಮಾಡಿದ್ ಮೇಲೆ ನಂಗೇನು ಕೆಲ್ಸನೆ ಇರಲ್ಲ ಅಲ್ವ?"

"ಅದು ಹಾಗಲ್ಲ ಕಣೇ?" ಸಮರ್ಥಿಸಿಕೊಳ್ಳಲು ಹೋದ ನನಗೆ ಸುಮ್ಮನಿರುವಂತೆ ಗುಡುಗಿದಳು ನನ್ನ ಭಾರ್ಯೆ.

"ಜಾಸ್ತಿ ಬೇಡ, ಒಂದ್ ಹತ್ತು ದಿವಸ ಸಾಕು. ನಾನು ನಿಮಗೆ ಚಾಲೆಂಜ್ ಮಾಡ್ತೀನಿ. ನಾನು ನೋಡ್ಕೊಳೋ ಹಾಗೆ, ಹತ್ತೇ ದಿನ ನೀವು ಮನೆ ನಿಭಾಯಿಸಿ ಸಾಕು."

ಹದಿನಾಲ್ಕು ವರ್ಷಗಳಾದರೂ, ನಮ್ಮಿಬ್ಬಿರ ದಾಂಪತ್ಯ ಇಂದಿಗೂ ಹೊಸದಾಗೆ ಇದೆ; ಯಾಕಂದ್ರೆ, ಅಷ್ಟೊಂದು ಅಂಡರ್ಸ್ಟ್ಯಾಂಡಿಂಗ್ ನಮ್ಮಿಬ್ಬರ ಮಧ್ಯೆ!. ನನಗೂ ರೋಸಿ ಹೋಯಿತು.

"ಆಯಿತು ಬಿಡು,. ಅದೇನ್ ಮಹಾ ನಾನು ನೋಡೇ ಬಿಡ್ತೀನಿ. ಹೇಗೂ ದೆಹಲಿಯಲ್ಲಿರೂ ನಿಮ್ಮ ಅಣ್ಣನ ಮನೆಗೆ ಹೋಗ್ಬೇಕು ಅಂತ ಇದೆಯೆಲ್ಲ, ಹೋಗ್ಬಿಟ್ಟ ಬಾ. ಮನೇನ ನಾನು ನಡಿಸ್ತೀನಿ, ನಿಂಗಿಂತ ಚೆನ್ನಾಗಿ! ಹೇಗೂ ಲೀವ್ಸ್ ತುಂಬಾ ಪೆಂಡಿಂಗ್ ಇದೆ, 10 ದಿನ ರಜಾ ಹಾಕ್ತೀನಿ. ಅದೇನ್ ಘನ ಕಾರ್ಯ ಮಾಡ್ತೀರಿ, ನೀವು ಹೆಂಗಸರು ಅಂತ ನೋಡೇ ಬಿಡೋಣ. ಎಷ್ಟೊಂದ್ ಜನ ಸಿಂಗಲ್ ಪೇರೆಂಟ್ ಇಲ್ವಾ?"

ತಲೆ ಎತ್ತಿ ಮಾತನಾಡುತಿದ್ದ ನನಗೆ, ಎದಿರುಗಿದ್ದ ಕುರ್ಚಿಯ ಮೇಲೆ ನನಗಿಂತ ಎತ್ತರವಾಗಿ ನಿಂತು ಗುಡುಗಿದಳು ನನ್ನಾಕೆ. " ನೋಡಿ, 10 ದಿನ ಯಾವಾಗ್ಲೋ ಮಕ್ಕಳಿಗೆ ರಜಾ ಬಂದಾಗ ಅಲ್ಲ. ಅವ್ರು ಸ್ಕೂಲ್ಗೆ ಹೋಗ್ತಾಇರೋವಾಗ. ನನಗೆ ಮುಂದಿನ ಭಾನುವಾರ ರಾತ್ರಿಗೆ ರಿಸರ್ವೇಶನ್ ಮಾಡ್ಸಿ. ಮನೆ ನಡೆಯೋದೆ ಹೆಗಸರಿಂದ. ಬರೀ ದುಡಿದು ತಂದರೆ ಸಾಲದು. ಈ ವಿಷ್ಯ ನಿಮ್ಮ ತಲೆಯಲ್ಲಿ ಎಲ್ಲಿ ಬರಬೇಕು. ಗಂಡಸು ಅನ್ನೋ ಇಗೋ. 10 ದಿನ ಯಾಕೆ, ಮೂರ್ ದಿನದಲ್ಲಿ, ಫೋನ್ ಬರುತ್ತೆ ನಿಮ್ಮದು. ಶಾಲು, ದಯವಿಟ್ಟು ಬೇಗ ಬಾರೆ, ಪ್ಲೀಸ್ ಅಂತ."

ಸರಳವಾದ ನೇರ ಮಾತುಕತೆ, ಬಹುಶ ನಮಗೆ, ಗಂಡಸಿರಿಗೆ ಸುಲಭವಾಗಿ ಅರ್ಥ ಆಗುವುದಿಲ್ಲ ಅಂತ ಅವತ್ತೇ ಗೊತ್ತಾಗಿದ್ರೆ, ಮುಂದಿನ ಕಥೆ ನಡೀತಾನೇ ಇರಲಿಲ್ಲ

ಮೂರನೇ ಮಹಾ ಯುದ್ಧವನ್ನು ಗೆಲ್ಲುವ ರೀತಿಯಲ್ಲಿ ಉಡಾಫೆಯಿಂದ ಹೇಳಿದೆ. "ಲೇ, ನನ್ನನ್ನ ಏನ್ ಅನ್ಕೊಂಡಿದೀಯ? ಆಫೀಸ್ನಲ್ಲಿ 50 ಜನಗಳನ್ನ ಮೈಸೋ ಆಫೀಸರ್ ನಾನು; ನನಗೆ, ಇಬ್ರು ಮಕ್ಕಳ್ಳನ್ನ ನೋಡ್ಕೊಳಕ್ಕೆ ಆಗಲ್ವ? ನೋಡ್ತಾ ಇರು, ಅವ್ರು ನಿನ್ನನ್ನೇ ಮರ್ತ್ಬಿಡ್ಬೇಕು ಹಾಗ್ ನೋಡ್ಕೋತೀನಿ. " ಜಂಬದಿಂದ ತಲೆ ಎತ್ತಿ ಹೇಳಿದೆ.

ನಾನು ತಲೆ ಎತ್ತಿ ಮಾತನಾಡಿದ್ದು ಅಂದೇ ಕೊನೆ.

ಭಾನುವಾರ ಸ್ಟೇಷನ್ನಲ್ಲಿ ಗಾಡಿ ಹೋಗುತ್ತಿದ್ದಂತೆ, ಗಾಳಿಯಲ್ಲಿ ತೇಲಿಹೋಗುವ ಹಾಗೆ ನಡೆಯುತ್ತಾ, ಮುಂದಿನ 10 ದಿನಗಳ ಸ್ವೇಚ್ಚಾಚಾರವನ್ನೇ ನೆನೆಯುಯುತ್ತ, ಮನೆಯತ್ತ ಶಿಳ್ಳೆ ಹಾಕುತ್ತ ನಡೆದೆ.

ನನ್ನ ಹೌಸ್ ವೈಫ್ ಕೆಲಸದ ಮೊದಲನೇ ದಿನ ಬಹಳವೇ ಅಪಶಕುನದಿಂದ ಶುರುವಾಯಿತು.

ಆರಾಮವಾಗಿ ಮುಸುಕಿ ಹಾಕಿ ಮಲಗಿದ್ದ ನನಗೆ, ನನ್ನ 6 ವರ್ಷದ ಮಗಳು ಬಂದು ನನ್ನನ್ನು ಅಲುಗಾಡಿಯಿಸಿ ಎಬ್ಬಿಸಿ ಹಾಲು ಕೊಡಲು ಕೇಳಿದಾಗಲೇ ಗೊತ್ತಾಗಿದ್ದು, ಅಂದು ಸೋಮವಾರ, ನನ್ನ ಹೊಸ ಅವತಾರದ ಮೊದಲನೇ ದಿನ ಎಂದು

ದಡಬಡಾಯಿಸಿಕೊಂಡು ಎದ್ದು ಹೊರನಡೆದೆ.

ಯುನಿಫಾರ್ಮ್, ಬೆಲ್ಟ್, ಬ್ಯಾಡ್ಜ್ ಇವೆಲ್ಲವನ್ನು ಹುಡುಕಿ, ಜೋರಾಗಿ ಆಲಾಪಿಸುತ್ತಿದ್ದ ನನ್ನ ಮಗಳನ್ನು ಸಮಾಧಾನ ಮಾಡುವಷ್ಟರಲ್ಲಿ, ಬಟನ್ ಕಿತ್ತು ಹೋಗಿದ್ದ ಯುನಿಫಾರ್ಮ್ ಶರ್ಟ್ ಹಿಡುದು ನನ್ನ ಮುಂದೆ ಬಂದು ನಿಂತ ನನ್ನ 10 ವರ್ಷದ ಮಗ.

ಇದೆಲ್ಲವನ್ನು ಸರಿ ಪಡಿಸುವುದರಲ್ಲಿ, ಅಡುಗೆ ಮನೆಯಿಂದ ಏನೋ ವಾಸನೆ ಬಂದಂತಾಯಿತು ಸುಟ್ಟು ಕರ್ಕಾಗಿದ್ದ ಬ್ರೇಕ್ಫಾಸ್ಟ್ ಕಸದ ಬುಟ್ಟಿಗೆ ಎಸೆದು, ಬ್ರೆಡ್ ಗೆ ಜಾಮ್ ಹಚ್ಚಿ ಜಗಳವಾಡುತ್ತಿದ್ದ ನನ್ನ ಮಕ್ಕಳನ್ನು ಬಿಡಿಸಿ, ಹೊರಗಡೆ ಶಂಖನಾದ ಮಾಡುತ್ತಿದ್ದ ಸ್ಕೂಲ್ ಬಸ್ನಲ್ಲಿ ಹತ್ತಿಸಿ ಒಳಗೆ ಬರುವಷ್ಟರಲ್ಲಿ, ನನ್ನಲಿದ್ದ ಎನರ್ಜಿ ಖಾಲಿಯಾಗಿತ್ತು.

ಬೆಳಿಗಿನಿಂದ ಒಂದು ಕಪ್ ಟೀ ಕೂಡ ಕುಡಿದಿರಲಿಲ್ಲ.

ಕುರ್ಚಿಯ ಮೇಲೆ ಕುಳಿತು ಹಾಗೆ ಕಣ್ಣು ಮುಚ್ಚಿದಷ್ಟೇ, ತಕ್ಷಣ ಎದ್ದೆ; "ನಾಳೆ ವೈಟ್ ಯುನಿಫಾರ್ಮ್ ಹಾಕ್ಕೊಂಡ್ ಹೋಗ್ಬೇಕು. ಮಳೆ ಬಾರೋ ಹಾಗಿದೆ. ನೀಟಾಗಿ ಒಗೆದು ಐರನ್ ಮಾಡಿಟ್ಟಿರಿ" ಎಂದು ಚಿತಾವಣೆ ಕೊಟ್ಟು ಹೋಗಿದ್ದ ಮಗನ ಮಾತು ಜ್ಞಾಪಕ ಬಂತು.

ವೈಟ್ ಯುನಿಫಾರ್ಮ್ ಹುಡುಕಲು ಹೋದಾಗ ಕಾದಿತ್ತು ನನಗೆ ಶಾಕ್

ಮಕ್ಕಳ ರೂಮು ದೈತ್ಯ ತುಫಾನೊಂದು ಬಂದು ನೆಲ ಸಾಮ ಮಾಡಿದ್ದ ಊರಿನ ಹಾಗಿತ್ತು.

ಎಲ್ಲ ಕಡೆ ಹರಡಿದ್ದ ಬಟ್ಟೆ, ಆಟದ ಸಾಮಾನು, ಸಾಕ್ಸ್, ಬೆಡ್ ಶೀಟ್ ಒಹ್, ಅದನೆಲ್ಲವನ್ನು ಓರಣ ಮಾಡಿ ಹೊರಗೆ ಬರುವಷ್ಟರಲ್ಲಿ, ಘಂಟೆ 12.

ಹೊಟ್ಟೆಯಲ್ಲಿ ಇಲಿಗಳು ಕಬಡ್ಡಿ ಆಡುತಿದ್ದವು.

ಒಂದು ಕಪ್ ಟೀ ಮಾಡಿ, ಒಣಗಿ ಹೋಗಿದ್ದ ಎರಡು ಬ್ರೆಡ್ ತುಂಡನ್ನು ಅದರಲ್ಲಿ ಅದ್ದಿ ತಿಂದು, ಹೊರಟೆ ನನ್ನ ಬಟ್ಟೆ ಒಗೆಯುವ ಕಾರ್ಯಕ್ರಮಕ್ಕೆ.

ಬಟ್ಟೆ ಒಗೆದು, ಮನೆ ಕ್ಲೀನ್ ಮಾಡಿ ಸಾಕಾಗಿ, ಹಾಗೆ ಸೋಫಾ ಮೇಲೆ ಮಲಗಿ ನಿದ್ದೆ ಮಾಡಿದೆ, ಊಟವನ್ನು ಮಾಡದೆ; ಅಡುಗೆ ಮಾಡಿದ್ದರೆ ತಾನೇ, ಊಟದ ಮಾತು!

ಜೋರಾಗಿ ಬೆಲ್ ಆಯಿತು; ಹೋಗಿ ತೆಗೆದರೆ, ನನ್ನ ಮಗ ನಾನಿರುವುದನ್ನೋ ನೋಡದವನಂತೆ, ಜೋರಾಗಿ ಕೇಳಿದ; "ಎನಿ ಬಡಿ ಹೋಂ?"

ಹಿಂದೆಯೇ ಬಂದ ಮಗಳಿಗೂ ನಾನು ಕಾಣಿಸಲೇ ಇಲ್ಲ!

"ಅಪ್ಪ, ಹೊಟ್ಟೆ ತುಂಬಾ ಹಸಿವಾಗ್ತಾಯಿದೆ. ನೀವು ಕೊಟ್ಟಿದ್ ಎರಡ್ ಪೀಸ್ ಬ್ರೆಡ್ ಜಾಮ್ ಕರಗಿ ಎಷ್ಟೋ ಕಾಲ ಆಗಿದೆ. ಏನ್ ಮಾಡಿದ್ದೀರಿ ತಿಂಡಿ?"

ಸೋತ ಧ್ವನಿಯಲ್ಲಿ ಹೇಳಿದೆ. "ನೀನೆ ಬೈಟೊ ಕಾಫಿ ಹೋಟೆಲ್ ನಿಂದ ಇಡ್ಲಿ ತೊಂಗಡ್ ಬಾರೋ ನಾನು ಏನು ತಿಂದಿಲ್ಲ."

"ಅಪ್ಪ... ಕಾಂಟಾಕ್ಟ್ ಪ್ರಕಾರ, ನಾವಿಬ್ರು ನಿಮಗೆ ಏನು ಸಹಾಯ ಮಾಡೋ ಹಾಗಿಲ್ಲ; ಅಮ್ಮ ನಂಗ್ ಎಲ್ಲ ಹೇಳಿದ್ದಾರೆ." ಹೆಮ್ಮೆಇಂದ ನುಡಿದ ನನ್ನ ಸುಪುತ್ರ.

ನಾನೇ ಹೋಗಿ ತಿಂಡಿ ತಂದು, ಅವರಿಬ್ಬರಿಗೂ ಹಾರ್ಲಿಕ್ಸ್ ಮಾಡಿ ಕೊಟ್ಟು, ನಾನು ತಣ್ಣಗಾಗಿದ್ದ ಟೀ ಕುಡಿಯುವಷ್ಟರಲ್ಲಿ, ನನ್ನ ಮಗ ಇನ್ನ್ನೊಂದು ಬಾಂಬ್ ಎಸೆದ. " ರಾತ್ರಿ ನಾವಿಬ್ರು ಚಪಾತೀನೇ ತಿನ್ನೊದು. ಗೊತ್ತಲ್ವಾ. ಹಾನ್, ಅಮ್ಮ ಹೇಳಿದ್ರು, ಬೆಂಡೆಕಾಯಿ ಪಲ್ಯ ಮಾಡಿಸ್ಕೊಳಿ ಅಂತ."

ಕೆಲಸದವಳಿಗೆ, ಬೇಕೆಂದೇ ಎರಡು ದಿನ ರಜಾ ಕೊಟ್ಟವು ನಾನು; ಕಿಚನ್ ಸಿಂಕ್ ತುಂಬಾ ತುಂಬಿದ್ದ ಪಾತ್ರೆಗಳನ್ನು ನೋಡಿ ತಲೆ ತಿರುಗಿತು.

"ಇವತ್ತು. ರಾತ್ರಿ, ವೀ ವಿಲ್ ಡೈನ್ ಔಟ್ಸೈಡ್." ಅಂಜುತ್ತ ಸಲಹೆ ನೀಡಿದೆ. ಒಮ್ಮೆಗೆ, ಇಬ್ಬರ ಮುಖದಲ್ಲೂ ನಗು ಬಂತು. ಸಧ್ಯ ಬದುಕಿದೆ ಅಂತ ಅಂದ್ಕೊಂಡ್, ಹೊರಗೆ ಡಿನ್ನರ್ ಮಾಡಿಕೊಂಡು ಬಂದು, ಮರದಂತೆ ಮಲಗಿದೆ.

ಮಲಗಿ 10 ನಿಮಿಷಕ್ಕೆ ಬೆಳಗಾಗಿತ್ತು!

ಬ್ರೇಕ್ಫಾಸ್ಟ್ ಟೇಬಲ್ ಮೇಲೆ ಕುಳಿತು, ನಾನು ಮಾಡಿದ್ದ ಉಪ್ಪಿಟ್ಟನ್ನ, ಅನುಮಾನದಿಂದ ನೋಡಿದ ಮಗ, ಬಾಯಿಗೆ ಇಟ್ಟವನೇ, ಕೆಳಗೆ ಉಗುಳಿದ. "ಅಪ್ಪ, ಇದು ಉಪ್ಪಿಟ್ಟೋ ಅಥವಾ, ಉಪ್ಪು ಮಾತ್ರನೋ? ಬಾಯಿಗ್ ಇಡಕ್ಕೆ ಆಗ್ತಾ ಇಲ್ಲ. ನನಗೆ ಆ ಹಾಳಾದ್ ಬ್ರೆಡ್ ಜಾಮ್ ಕೊಡಿ."

ಮಕ್ಕಳನ್ನೂ ಹೇಗೋ ಮಾಡಿ ಸ್ಕೂಲ್ ಬಸ್ ಹತ್ತಿಸಿ ಒಳಗೆ ಬಂದವನೇ, ಅಲ್ಲೇ ಇದ್ದ ಮೊಬೈಲ್ ತೆಗೆದು ನನ್ನ ಹೆಂಡತಿಗೆ ಫೋನ್ ಮಾಡಲೇ ಎಂದು ಅನಿಸಿತಾದರೂ, ನನ್ನ ಮೇಲ್ ಇಗೋ ಅದಕ್ಕೆ ಅವಕಾಶ ಕೊಡಲಿಲ್ಲ. ಹಲ್ಲು ಕಚ್ಚಿಕೊಂಡು, ಸೋಫಾ ಮೇಲೆ ಒರಗಿ ಕೂತವನಿಗೆ, ಮಗಳ ಸ್ಕೂಲ್ ನಲ್ಲಿ ಪೇರೆಂಟ್ ಟೀಚರ್ ಮೀಟಿಂಗ್ ಇರುವುದು ಜ್ಞಾಪಕ ಬಂದು ದಡಬಡಿಯಿಸಿಕೊಂಡು ಎದ್ದು ಸ್ನಾನ ಮಾಡಿ ಹೊರಟೆ.

ಸ್ಕೂಲ್ ಟೀಚರ್ ನನ್ನ ಮುಖ ನೋಡಿ ಅನುಮಾನದಿಂದ ಕೇಳಿದರು. "ಯಾಕೆ ನಿಮ್ಮ ಮಗಳ ಅಮ್ಮ ಬರಲಿಲ್ಲವೇ? ಯಾವಾಗಲೂ ಅವರೇ ತಾನೇ ಬರುತ್ತಿದ್ದಿದ್ದು? ನಿಮ್ಮ ಮಗಳ ಪ್ರೋಗ್ರೆಸ್ ಆಗ್ತಾಇರೋದೆ ಮನೆಯಲ್ಲಿ ನಿಮ್ಮ ಹೆಂಡತಿ ಕೆಲಸ ಬಿಟ್ಟು ಮಗಳ ಓದಿನ ಕಡೆ ಗಮನ ಕೊಡೊದ್ರಿಂದ. ಆದ್ರೆ, ನೆನ್ನೆ ಇವತ್ತು, ಅವಳ ಹೋಮೇವರ್ಕ್ ಸರಿಯಾಗಿ ಆಗಿಲ್ಲ. ಏನ್ ಕಾರಣ? ಎಲ್ಲಿ ನಿಮ್ಮ ಹೆಂಡತಿ?"

ಏನೋ ಹಾರಿಕೆಯ ಉತ್ತರ ಕೊಟ್ಟು ಮನೆಗೆ ಬಂದು ಒಂದ್ ಕಪ್ ಟೀ ಕುಡಿಯೋಣವೆಂದರೆ, ಗ್ಯಾಸ್ ಮುಗಿದಿತ್ತು. ಶಾಲು ಹೇಳಿದ್ದಳು; ಮರೆಯದೆ ಗ್ಯಾಸ್ ಬುಕ್ ಮಾಡಿ ಅಂತ. ಸಧ್ಯ ಇನ್ನು ಎರಡು ದಿನ ಹೊರಗೆ ಊಟ ತಿಂಡಿ ಎಲ್ಲ ಅಂತ ನೆನೆಸಿಕೊಂಡು, ಕುಷಿಪುಡುತ್ತಿದ್ದವನಿಗೆ, ಬೆಲ್ ಆಗಿದೆ ಶಬ್ದ ಕೇಳಿ ಬಾಗಿಲು ತೆರೆದರೆ, ಗ್ಯಾಸ್ ಸಿಲಿಂಡರ್ ಹಿಡಿದು ನಿಂತಿದ್ದ, ಗ್ಯಾಸ್ ಕಂಪನಿ ಹುಡುಗ!

ಎಲಾ ಇವನ? ಇವನಿಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯ ಪ್ಲಡುತಿದ್ದರೆ, ಮೊಬೈಲ್ ಗೆ ಶಾಲು ಮೆಸೇಜ್ ಬಂತು. "ಗ್ಯಾಸ್ ಮುಗೀತು ಅಂತ ನೀವು ಖುಷಿ ಪಡುವ ಅಗತ್ಯ ಇಲ್ಲ. ಹೊರಡುವುದಕ್ಕೆ ಮುಂಚ್, ಆಪ್ ನಲ್ಲಿ ಗ್ಯಾಸ್ ಬುಕ್ ಮಾಡಿದ್ದೇನೆ. ಇವತ್ತು ಬರಬಹುದು."!

ಓದುವುದಕ್ಕೆಂದು ತಂದಿದ್ದ ಪುಸ್ತಕಗಳೆಲ್ಲಾ ಹಾಗೆ ಬಿದ್ದಿದ್ದವು.

ಮಕ್ಕಳು ಮನೆಗೆ ಬರುತ್ತಿದ್ದತೆ, ನಗುತ್ತ ಹೇಳಿದೆ; "ನಿಮಗಿಬ್ಬರಿಗೂ ಇವತ್ತು ಹೊರಗೆ ಟ್ರೀಟ್."

"ಏನು ಬೇಕಾಗಿಲ್ಲ, ನನಗ್ಯಾಕೋ ಹುಷಾರಿಲ್ಲ. ಮನೆಯಲ್ಲೇ ಅಡುಗೆ ಮಾಡಿ. ಹೊರಗೆ ದಿನಾ ದಿನ ತಿಂದರೆ ಅರೋಗ್ಯ ಕೆಡತ್ತೆ ಅಂತ ಅಮ್ಮ ಹೇಳಿದ್ದಾರೆ" ಗದರಿದ ನನ್ನ ಮಗ.

ವಿಧಿ ಇಲ್ಲದೆ ಅಡುಗೆ ಮನೆ ಕಡೆ ನಿಧಾನವಾಗಿ ಕಾಳೆದುಕೊಂಡು ಹೋಗುತ್ತಿದ್ದವನಿಗೆ, ಮತ್ತೊಂದು ಬಾಣ ಬಂದು ನಾಟಿತು. "ಚಪಾತಿ ಜೊತೆ ಒಳ್ಳೆ ಸಾಂಬಾರ್, ಪಲ್ಯ ಮಾಡಿ; ಬರೀ ಸಾರು ತಿಂದು ತಲೆ ಕೆಟ್ಟೋಗಿದೆ." ಹೇಳಿದ ನನ್ನ ಸುಪುತ್ರ.

ಹೇಗೋ ಕೆಲಸ ಮುಗಿಸಿ, ಅಡುಗೆ ಮನೆ ಒಂದು ಲೆವೆಲ್ಗೆ ತಂದು ಗಡಿಯಾರ ನೋಡಿದಾಗ, ಗಂಟೆ ರಾತ್ರಿ 12.

ನನಗೆ ಇನ್ನೂ ತಡೆಯಕ್ಕೆ ಆಗಲಿಲ್ಲ.

ಮೊಬೈಲ್ ತೆಗೆದು ಫೋನ್ ಮಾಡಿದೆ ನನ್ನ ಬೆಟರ್ ಹಾಫ್ ಗೆ. ಒಂದೇ ರಿಂಗಿಗೆ ಫೋನ್ ತೆಗೆದವಳು ನಗುತ್ತಾ ಹೇಳಿದಳು. " ನೋಡಿ ನಂಗೆ ಗೊತ್ತಿತ್ತು. ಇವತ್ತು ನಿಮ್ಮ ಫೋನ್ ಬಂದೇ ಬರುತ್ತೆ ಅಂತ. ಏನು ಯೋಚ್ನೆ ಮಾಡ್ಬೇಡಿ. ಅಣ್ಣ ನಾಳೆ ಬೆಳೆಗ್ಗೆ ಫ್ಲೈಟ್ಗೆ ಟಿಕೆಟ್ ಬುಕ್ ಮಾಡಿದ್ದಾನೆ. 10 ಘಂಟೆಗೆ ಬರುತ್ತೆ ಪ್ಲೇನ್. ಬರ್ತೀರಲ್ಲವಾ ಏರ್ಪೋರ್ಟ್ ಗೆ?"

ಏರ್ಪೋರ್ಟಾ? ಶಾಲುನ ಕರ್ಕೊಂಡ್ ಬರಕ್ಕೆನಾನು ಡೆಲ್ಲಿಗೆ ಹೋಗಕ್ಕೆ ರೆಡಿಯಾಗಿದ್ದೆ.

ಎಲ್ಲೊ ಓದಿದ ನೆನಪು; ಗಂಡ ಹೆಂಡತಿ ಚಕ್ರದ ಎರಡು ಗಾಲಿಗಳಿದ್ದ ಹಾಗೆ. ಎರಡು ಬಹಳವೇ ಮುಖ್ಯವಾದದ್ದು. ಒಂದು ಹೆಚ್ಚು ಇನ್ನೊಂದು ಕಮ್ಮಿ ಅನ್ನೋ ಭಾವನೆ ಬಿಟ್ಟು, ಮನೆಯಲ್ಲಿ ಇರುವ ಹೌಸ್ ವೈಫ್ ಗೆ ಅವರ ಕೆಲಸಕ್ಕೆ ಸರಿಯಾದ ಬೆಲೆ ಕೊಟ್ಟು, ವೈಮನಸ್ಯಗಳೇನೆಯಿದ್ದರೂ ಇದ್ದರೂ, ಅದನ್ನು "ನೇರ ಮಾತುಕತೆಯಿಂದ" ಪರಿಹರಿಸಕೊಳ್ಳ ಬೇಕು ಅಂತ.

ಮುಖ್ಯವಾಗಿ, ನನ್ನ ತಲೆ ಕೆಡಿಸಿದ ಆ ಭಾಸ್ಕರನಿಗೆ ಸರಿಯಾಗಿ ಕಾದಿದೆ ಎಂದು ನೆನಿಸಿ ಕೊಂಡು ನನಗೆ ನಾನೇ ನಕ್ಕೆ.


Rate this content
Log in

Similar kannada story from Romance