Ashritha G

Classics Inspirational Others

4.5  

Ashritha G

Classics Inspirational Others

ಹೆತ್ತರೆ ಮಾತ್ರ ಮಗನೇ...!

ಹೆತ್ತರೆ ಮಾತ್ರ ಮಗನೇ...!

2 mins
434


ಕಮಲಿಗೆ ಆಡುವ ವಯಸ್ಸಿನಲ್ಲಿ ಮದುವೆ ಮಾಡಲಾಗಿತ್ತು. ಮೊಡುವೆ ಮೂಡಿರದ ಗಲ್ಲದ ಮೇಲೆ ಅರಶಿನ ನಲಿಯುತ್ತಿತ್ತು.ಅಕ್ಷರ ಕಲಿಯಬೇಕಿದ್ದ ವಯಸ್ಸಿನಲ್ಲಿ ಅಕ್ಷತೆ ಕಾಳು ಮಳೆಯ ಹನಿಯಂತೆ ಬಿದ್ದಿತ್ತು. ಮದುವೆ ಎಂದರೆ ಏನು ಎಂಬ ಪರಿಕಲ್ಪನೆಯೇ ಇಲ್ಲದೆ ಕೊರಳಿಗೆ ಮಾಂಗಲ್ಯವನ್ನು ಕಟ್ಟಲಾಗಿತ್ತು. ಋತುಮತಿಯಾಗದ ಕಮಲಿಯನ್ನು ಗಂಡನ ಮನೆಗೆ ಕರೆದೊಯ್ಯುವಂತಿಲ್ಲ ಎಂಬ ಶಾಸ್ತ್ರ ತಾಯಿಯ ಮನೆಯಲ್ಲಿಯೇ ಉಳಿಯುವಂತೆ ಮಾಡಿತು. ತನಗೆ ಮದುವೆಯಾಗಿದೆ ಎಂಬ ಪರಿಕಲ್ಪನೆಯೇ ಇಲ್ಲದೆ ಅಕ್ಕ ಪಕ್ಕದ ಮನೆಯ ಹುಡುಗರೊಂದಿಗೆ ಕುಂಟೆಬಿಲ್ಲೆ ಆಡುತ್ತಾ ಕಾಲ ಕಳೆಯುತ್ತಿದ್ದ ಕಮಲಿಗೆ ಮನೆಯಲ್ಲಿ ಸದಾ ಬೈಗುಳಗಳ ಸರಮಾಲೆ ತಯಾರಾಗಿರುತ್ತಿತ್ತು. ಯಾವುದನ್ನು ಲೆಕ್ಕಿಸದೆ ಬಹಳ ಖುಷಿಯಲ್ಲಿದ್ದ ಕಮಲಿಗೆ ತನ್ನ ಗಂಡನ ಮನೆಯಿಂದ ಬಂದ ಒಂದು ಸಂದೇಶ ಇಡೀ ಬದುಕನ್ನೇ ಅಲ್ಲಾಡಿಸಿತ್ತು.

15 ದಿನದ ಹಿಂದೆ ಮದುವೆಯ ಶಾಸ್ತ್ರಗಳನ್ನೆಲ್ಲ ಮಾಡಿ ಮುಗಿಸಿ ಸುಧಾರಿಸಿಕೊಳ್ಳುತ್ತಿದ್ದ ಮನೆಯ ಮಂದಿ ಇದೀಗ ಕಮಲಿಯ ಗಂಡನನ್ನು ಸ್ವರ್ಗಕ್ಕೆ ಕಳಿಸುವ ಏರ್ಪಾಡು ಮಾಡಬೇಕಿತ್ತು .ಮನೆಯವರೆಲ್ಲ ಅಳುವುದನ್ನು ಕಂಡು ಕಮಲಿಗೆ ಅಳು ಬರುತ್ತಿತ್ತು ವಿನಹ ಅಲ್ಲಿ ಏನಾಗುತ್ತಿದೆ ಎಂಬ ವಿಚಾರ ಆಕೆಗೆ ತಿಳಿದಿರಲಿಲ್ಲ. ಮದುವೆಗೆಂದು ಅಂದದ ಸೀರೆ ಉಡಿಸಿ ಗೊಂಬೆಯಂತೆ ಅಲಂಕಾರ ಮಾಡಿದ ನೆರೆಹೊರೆಯವರು ಇಂದು ಅಳುತ್ತಾ ಅವಳ ಅಲಂಕಾರವನೆಲ್ಲ ಅಳಿಸಿ ಇನ್ನು ಮುಂದೆ ಇದ್ಯಾವುದನ್ನೂ ತೊಡುವಂತಿಲ್ಲ ಎಂದು ತಿಳಿಸಿದಾಗ ಕಮಲಿಗೆ ಅಳು ತಡೆಯಲಾಗಲಿಲ್ಲ. ತನ್ನ ಉದ್ದವಾದ ಜಡೆಗೆ ಹೂ ಮುಡಿದುಕೊಂಡು ಅಂದವಾಗಿ ಅಲಂಕರಿಸಿಕೊಂಡು ಸುತ್ತುವುದೆಂದರೆ ಅವಳಿಗೆ ಬಾರಿ ಇಷ್ಟ. ಆದರೆ ಕೂದಲನ್ನು ತೆಗೆದು ಅಲಂಕಾರವನ್ನೆಲ್ಲ ಅಳಿಸಿ, ಕೆಂಪಾದ ಸೀರೆಯನ್ನು ಉಡಿಸಿ ಮನೆಯ ಮೂಲೆಯಲ್ಲಿ ಕುರಿಸಲಾಗಿತ್ತು. ಗಂಡ ಸತ್ತಿದ್ದಾನೆ ಎಂಬ ನೋವಿಗಿಂತ ಕಮಲಿಗೆ ತನ್ನನ್ನು ಹೀಗೆ ಕೂರಿಸಿದ್ದಾರಲ್ಲ ಎಂಬ ದುಃಖ ಅತಿಯಾಗಿತ್ತು.

     ಕಮಲಿ ವರುಷಗಳು ಉರುಳುತ್ತಿದ್ದಂತೆ ಕಮಲಕ್ಕ ಎಂಬ ಹೆಸರಿನಲ್ಲಿಯೇ ಊರಿನ ತುಂಬಾ ಖ್ಯಾತಿಗಳಿಸಿದಳು. ಅವಳನ್ನು ಅವಳ ಅಜ್ಜಿಯರೊಂದಿಗೆ ಬಿಟ್ಟಿದ್ದ ಕಾರಣ ಒಳ್ಳೆ ಅಡಿಗೆ ಮಾಡುವುದನ್ನು ಕಲಿತಿದ್ದಳು. ಮದುವೆ ಮುಂಜಿ ಇನ್ನಿತರ ಸಮಾರಂಭಗಳಿಗೆ ಸುಮಾರು 500 ಜನರಿಗೆ ಆಗುವಷ್ಟು ರುಚಿ ರುಚಿಯಾದ ಅಡುಗೆಯನ್ನು ಮಾಡಬಲ್ಲವಳಾಗಿದ್ದಳು. ಜೊತೆಗೆ ಹಳ್ಳಿ ಔಷಧಿಗಳನ್ನು ಕೊಡುವುದನ್ನು ಕಲಿತಿದ್ದಳು. ಮನೆಯಲ್ಲಿಯೇ ಹೆರಿಗೆ ಮಾಡಿಸುವಷ್ಟು ತರಬೇತಿ ಪಡೆದಿದ್ದಳು. ಇಡೀ ಊರಿಗೆ ಅವಳನ್ನು ಕಂಡರೆ ವಿಶೇಷವಾದ ಭಕ್ತಿ ಮತ್ತು ಪ್ರೀತಿ.

ಒಮ್ಮೆ ಪಕ್ಕದ ಊರಿಗೆ ಹೆರಿಗೆ ಮಾಡಿಸಲೆಂದು ಹೋದ ಕಮಲಕ್ಕನಿಗೆ ಹಾದಿಯಲ್ಲಿ ಬರುವಾಗ ಮಗು ಒಂದು ಅಳುವುದು ಕೇಳಿಸುತ್ತಿತ್ತು. ಸುತ್ತಮುತ್ತ ಹುಡುಕಾಡಿದರು ಮಗುವಿನ ಹೆತ್ತಾಕೆಯ ಸುಳಿವು ಸಿಗಲಿಲ್ಲ. ಬೇರೆ ದಾರಿ ಕಾಣದೆ ಮಗುವನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸಾಗದೆ ಮನೆಗೆ ಕರೆದೊಯ್ಯುವ ನಿರ್ಧಾರ ಮಾಡಿದಳು. ಮಗುವನ್ನು ಮನೆಗೆ ಕರೆತಂದು ಅದರ ಲಾಲನೆ ಪಾಲನೆ ಮಾಡುವುದರಲ್ಲಿ ವರ್ಷಗಳು ಉರುಳಿದ್ದು ತಿಳಿಯಲ್ಲಿಲ್ಲ.. ಆ ಮಗುವಿಗೆ ಮಾಧವ ಎಂದು ಹೆಸರಿಟ್ಟು ಆ ಮಗುವಿಗೆ ತಾನು ಸಾಕು ತಾಯಿ ಎಂಬ ಭಾವನೆ ಬಾರದಂತೆ ನೋಡಿಕೊಂಡಿದ್ದಳು. ಉತ್ತಮ ವಿದ್ಯಾಭ್ಯಾಸಕ್ಕೆ ಮಗನನ್ನು ಪಟ್ಟಣಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದ್ದಳು. ಪಟ್ಟಣದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಒಂದೊಳ್ಳೆ ಉದ್ಯೋಗವನ್ನು ಮಾಧವ ಸಂಪಾದಿಸಿದ್ದ. ಮಗನಿಗೊಂದು ಮದುವೆ ಮಾಡುವ ಕನಸನ್ನು ಕಮಲಕ್ಕ ಕಾಣತೊಡಗಿದಳು. ಆದರೆ ಹಲವಾರು ವರ್ಷದಿಂದ ಮುಚ್ಚಿಟ್ಟ ಸತ್ಯ ಹೊರ ಬರಲೇ ಬೇಕು ಅಲ್ಲವೇ...?

    ಕಮಲಕ್ಕ ಬ್ರೋಕರ್ ನನ್ನು ಬರ ಹೇಳಿ ಹುಡುಗಿಯನ್ನು ಹುಡುಕಲಾರಂಭಿಸಿದಳು. ಮನೆಗೆ ಬಂದ ಬ್ರೋಕರ್ ಬಳಿ "ಮಾಧವ ನನ್ನ ಸರ್ವಸ್ವ. ಬರುಡಾಗಿದ್ದ ನನ್ನ ಬದುಕಿಗೆ ಹಸಿರು ತುಂಬಿದವನವನು. ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ನಾನು ಗಂಡನ ಮನೆಯ ಮೆಟ್ಟಿಲನ್ನು ಹತ್ತಲಿಲ್ಲ. ಗಂಡನ ಮನೆಯವರು ನನ್ನನ್ನು ಸೇರಿಸಿಕೊಳ್ಳಲಿಲ್ಲ. ತಾಯಿ ಮನೆಯಲ್ಲಿ ನನಗೆ ಇರಲು ಮನಸಿರಲಿಲ್ಲ. ಹಾಗಾಗಿ ನನ್ನ ಅಜ್ಜಿಯ ಮನೆಯಲ್ಲಿ ಜೀವನವನ್ನು ಆರಂಭಿಸಿದೆ. ತಮ್ಮೆಲ್ಲ ವಿದ್ಯೆಯನ್ನು ಅಜ್ಜಿ ನನಗೆ ಧಾರೆ ಎರೆದರು. ಅವನು ನನ್ನ ಮಗ ಆದರೆ.. ಹೆತ್ತಾಕ್ಕೆ ನಾನಲ್ಲ.. ಹೆತ್ತರೆ ಮಾತ್ರ ಮಗನಾಗಬೇಕೇ?? ಈ ಸತ್ಯವನ್ನು ಅವನಿಗೆ ತಿಳಿಸಲು ಧೈರ್ಯವಿಲ್ಲ. ತಿಳಿದ ನಂತರ ಹೆತ್ತವರನ್ನು ಹುಡುಕಿ ಹೊರಟುಬಿಟ್ಟರೆ ನಾನೇನು ಮಾಡಲಿ?? ನನ್ನವರೆಂದು ಅವನನ್ನು ಬಿಟ್ಟರೆ ನನಗೆ ಬೇರೆ ಯಾರು ಇಲ್ಲ ಅವನನ್ನು ಬಿಟ್ಟಿರುವ ಶಕ್ತಿ ನನಗಿಲ್ಲ"ಎಂದು ಸೆರಗಿನಲ್ಲಿ ಕಣ್ಣೀರನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಇಷ್ಟು ಮಾತುಗಳನ್ನು ಬಾಗಿಲಲ್ಲಿ ನಿಂತು ಆಲಿಸುತ್ತಿದ್ದ ಮಾಧವ ಪ್ರೀತಿಯಿಂದ ಅಮ್ಮನನ್ನು ಅಪ್ಪಿಕೊಂಡು"ನಾಯಿ ನರಿಗಳ ಪಾಲಾಗಬೇಕಿದ್ದ ನನ್ನನ್ನು ನೆರಳಿನಂತೆ ರಕ್ಷಿಸಿರುವೆ. ನಿನ್ನನ್ನು ಬಿಟ್ಟು ನಾನೇಕೆ ನನ್ನ ಬಿಟ್ಟು ಹೋದವರನ್ನು ಹುಡುಕಲು ಹೋಗಲಿ? ನಾನು ಸದಾ ನಿನ್ನೊಂದಿಗೆ ಇರುವೆ"ಎಂದನು. ಈ ಮಾತುಗಳನ್ನು ಕೇಳಿದ ಕಮಲಕ್ಕ ಭಗವಂತನನ್ನು ಮನದಲಿ ನೆನೆದಳು. ಬದುಕನ್ನು ನರಕಕ್ಕೆ ದೂಡಿದ್ದಿ ಎಂದು ಭಾವಿಸಿದ್ದೆ.ಆದರೆ ಬದುಕನ್ನು ಹಸನಾಗಿಸಲು ಮಗುವನ್ನು ನೀಡಿದೆ. ಎಲ್ಲವೂ ನಿನ್ನ ಇಚ್ಛೆ. ನೀನು ನಂಬಿದವರ ಕೈ ಬಿಡಲಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ದೇವರಿಗೆ ದೀಪ ಹಚ್ಚಿ ನಮಸ್ಕರಿಸಿದಳು.ಒಳ್ಳೆಯ ಹುಡುಗಿಯೊಂದಿಗೆ ಮಾಧವನ ವಿವಾಹವಾಯಿತು.ಕಮಲಕ್ಕನ ಬದುಕು ಆರಂಭದಲ್ಲಿ ಶಾಪವೆಂಬಂತೆ ಭಾಸವಾದರೂ ಸಾಕಿದ ಮಗನಿಂದ ಬದುಕು ಹಸನಾಯಿತು.



Rate this content
Log in

Similar kannada story from Classics