Ashritha Kiran ✍️ಆಕೆ

Abstract Inspirational Others

4  

Ashritha Kiran ✍️ಆಕೆ

Abstract Inspirational Others

ಹಣ್ಣೆಲೆಗೂ ಬಣ್ಣ ತುಂಬೋಣ..

ಹಣ್ಣೆಲೆಗೂ ಬಣ್ಣ ತುಂಬೋಣ..

3 mins
379



ಸೂರ್ಯ ಮುಳುಗುವ ಸಮಯವಾಗಿತ್ತು. ಟಿವಿ ಆನ್ ಮಾಡಲು ಮನಸಾಗದ ಜಾನಕಿನಾಥ ರಾಯರು ಕುರ್ಚಿಯ ಮೇಲೆ ಕುಳಿತು ಮನೆಯ ತಾರಸಿಯನ್ನು ನೋಡುತ್ತಾ ಕಣ್ಣು ಮುಚ್ಚಿಕೊಂಡು ದಣಿವಾರಿಸಿಕೊಳ್ಳುತ್ತಾ ಯೋಚನಾ ಲಹರಿಯಲ್ಲಿ ಮುಳುಗಿದರು. ತನ್ನ ಯೋಚನೆಗಳನ್ನು ಕಾಗದ ರೂಪದಲ್ಲಿ ಬರೆದಿರಿಸಬೇಕೆಂದು ಬುಕ್ ತೆಗೆದು ಬರೆಯಲಾರಂಭಿಸಿದರು...


" ನಾನು ಹುಟ್ಟಿದಾಗ ಮನೆಯಲ್ಲಿ ಕಡುಬಡತನ. ಎರಡು ಹೊತ್ತಿನ ಊಟಕ್ಕೆ ಕಷ್ಟವಿದ್ದಕಾಲಾ ಅದಾಗಿತ್ತು.ಆದರೆ ನನ್ನನ್ನು ಹೆತ್ತವರು ಎಂದಿಗೂ ನನ್ನನ್ನು ಉಪವಾಸ ಮಲಗಿಸಲಿಲ್ಲ. ಹಿರಿಯ ಮಗನಾಗಿದ್ದ ನನ್ನ ಮೇಲೆ ಮನೆಯವರಿಗೆ ವಿಪರೀತ ಪ್ರೀತಿ. ಓದಬೇಕು ಎಂಬ ನನ್ನ ಇಚ್ಛೆಗೆ ಸಾಲಾ ಸೋಲ ಮಾಡಿ ಹಳ್ಳಿಯಿಂದ ಪಟ್ಟಣಕ್ಕೆ ಕಳುಹಿಸಿ ನನ್ನ ಇಚ್ಛೆಯನ್ನು ಈಡೇರಿಸಿದರು. ಪದವಿಯನ್ನು ಮುಗಿಸಿ ಒಂದೊಳ್ಳೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಸೇರಿದ ಪ್ರಾರಂಭದಲ್ಲಿ ಸಂಬಳ ಕಡಿಮೆ ಇತ್ತು. ಅಪ್ಪ ಅಮ್ಮನನ್ನು ಸುಖವಾಗಿ ನೋಡಿಕೊಳ್ಳುವ ಅದೃಷ್ಟವಂತ ನಾನಾಗಿರಲಿಲ್ಲ. ಕೆಲಸ ಸಿಕ್ಕಿದ ಕೆಲ ಸಮಯಗಳಲ್ಲಿಯೆ ಹಳ್ಳಿಯಲ್ಲಿ ಹರಡಿದ ಸಾಂಕ್ರಾಮಿಕ ರೋಗಕ್ಕೆ ಇಬ್ಬರನ್ನೂ ಕಳೆದುಕೊಂಡೆ. ಪ್ರಥಮ ಬಾರಿಗೆ ಬದುಕಿನಲ್ಲಿ ಅನಾಥನಾದೆ. ನೆಂಟರು ಇಷ್ಟರು ಎಲ್ಲರೂ ಇದ್ದರು. ಆದರೆ ಯಾರಿಗೂ ಕರೆಯುವ ಮನಸಾಗಲು ಇಲ್ಲಾ ನನಗೂ ಸಹ ಯಾರ ಬಳಿ ಹೋಗುವ ಮನಸಾಗಲೂ ಇಲ್ಲ. ಪಟ್ಟಣದಲ್ಲಿ ಮನೆಯನ್ನು ಬಾಡಿಗೆಗೆ ಹಿಡಿದಿದ್ದೆ. ಒಂಟಿತನ ಆಗಾಗ ಕಾಡುತ್ತಿತ್ತು. ಆಗ ನನ್ನ ಜೊತೆಯಾದವಳೇ ವೈದೇಹಿ.


ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೇವು. ಯಾವ ಕ್ಷಣದಲ್ಲಿ ನಮ್ಮಲ್ಲಿ ಪ್ರೇಮಾಂಕುರವಾಯಿತು ತಿಳಿಯದು. ಆದರೆ ಬದುಕು ತನ್ನಲಿಟ್ಟುಕೊಂಡ ರೋಚಕ ತಿರುವುಗಳಲ್ಲಿ ನಮ್ಮಿಬ್ಬರ ಮದುವೆಯು ಒಂದು. ಒಂಟಿಯಾಗಿದ್ದ ನನ್ನ ಬಾಳಿಗೆ ಬೆಳಕಾಗಿ ಬಂದವಳು ಮನೆಯನ್ನು ಬೆಳಗಿ ವಂಶವನ್ನು ಬೆಳಗಿದಳು. ಇಬ್ಬರು ಪುತ್ರರ ತಂದೆ ಎಂಬ ಹೆಮ್ಮೆ ನನ್ನ ಮಡಿಲಿಗೆ ಹಾಕಿದಳು. ಉದ್ಯೋಗದಲ್ಲಿ ಭಡ್ತಿ ಹೊಂದುತ್ತಾ ಸಂಸಾರದಲ್ಲಿ ನೆಮ್ಮದಿಯನ್ನು ಕಾಣುತ್ತಾ ಸುಖವಾಗಿ ಬಾಳುತ್ತಿದ್ದ ನನಗೆ ಕಾಲ ಕಳೆದಿದ್ದೆ ತಿಳಿಯಲಿಲ್ಲ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ನನ್ನ ಪುತ್ರರು ವಿದೇಶಕ್ಕೆ ಓದಲು ತೆರಳಿದರು. ಈ ಸಮಯದಲ್ಲಿ ಪುತ್ರರಿಲ್ಲವೆಂಬ ಕೊರಗಿದ್ದರು ಕೈಯಲ್ಲಿ ದುಡಿಮೆ ಇದ್ದ ಕಾರಣ ನನ್ನನ್ನು ಹೆಚ್ಚು ಕಾಡಲಿಲ್ಲ.ಆದರೆ ಮನೆಯಲ್ಲಿ ಯಾರು ಇಲ್ಲದೆ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದ ವೈದೇಹಿಗೆ ಒಂಟಿತನ ಸಹಿಸಲಾಗಲಿಲ್ಲ.ಒಂದು ದಿನ ಮುಂಜಾನೆ ಏಳುವಷ್ಟರಲ್ಲಿ ನನ್ನನ್ನು ಒಂಟಿಯನ್ನಾಗಿಸಿ ಹೊರಟಳು. ಮತ್ತೊಮ್ಮೆ ಅನಾಥನಾದೆ ಎಂಬ ಭಾವ ನನ್ನನ್ನು ಕಾಡಿದರು ನನ್ನ ಮಕ್ಕಳು ನನ್ನೊಂದಿಗೆ ಇರುವರು ಎಂಬ ಭಾವ ಸಣ್ಣದೊಂದು ಭರವಸೆಯನ್ನು ಮೂಡಿಸಿತ್ತು. ಓದಲೆಂದು ತೆರಳಿದ ಮಕ್ಕಳು ತಾಯಿಯ ಅಂತ್ಯ ಕಾರ್ಯಕ್ಕೆ ಮರಳಿ ಬರುವಾಗ ಪತ್ನಿ ಹಾಗೂ ಮಕ್ಕಳೊಡನೆ ಬಂದು ಇಳಿದಾಗ ಬರಸಿಡಿಲು ಬಡಿದಂತಾಯಿತು.ಏನನ್ನು ಹೇಳುವ ಅಥವಾ ಕೇಳುವ ಸಮಯ ಅದಾಗಿರಲಿಲ್ಲ.ಎಲ್ಲವನ್ನು ಸ್ವೀಕರಿಸಿದೆ.ಕಾರ್ಯ ಮುಗಿದ ಸ್ವಲ್ಪ ದಿನದಲ್ಲಿ ಮಕ್ಕಳು ತಾವು ಹಿಂದಿರುಗ ಬೇಕು ಎಂದು ಹೇಳಿದಾಗ ಇಲ್ಲ ಎನ್ನಲಾಗದೆ ಕಳುಹಿಸಿಕೊಟ್ಟೆ. ಈಗ ಮಕ್ಕಳಿದ್ದು ನಾನು ಒಂಟಿ.

ಅನೇಕ ಬಾರಿ ವೈದೇಹಿ ತಾನು ಒಂಟಿಯಾಗಿದ್ದೇನೆ ಎಂದು ನನ್ನಲ್ಲಿ ಹೇಳಿಕೊಂಡಾಗ ಸುಮ್ಮನೆ ಕೂತು ಕಾಲ ಹರಣ ಮಾಡುವ ಬದಲು ಏನನ್ನಾದರೂ ಒಳ್ಳೆಯ ವಿಚಾರವನ್ನು ಓದು ಅಥವಾ ಅಕ್ಕಪಕ್ಕದ ದೇವಸ್ಥಾನಗಳಿಗೆ ಹೋಗು ಎಂದು ಗದರಿದ್ದೆ.ಆದರೆ ಅದೇ ಒಂಟಿತನ ಈಗ ನನ್ನನ್ನು ಆವರಿಸಿದೆ. ಅವಳಿಗೆ ಹೇಳಿದಷ್ಟು ಸುಲಭವಾಗಿ ನನಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಪುಸ್ತಕಗಳ ರಾಶಿ ಇದ್ದರೂ ಓದಲು ಮನಸಾಗುತ್ತಿಲ್ಲ. ಟಿವಿಯಲ್ಲಿ ಬರುವ ಯಾವ ಕಾರ್ಯಕ್ರಮವನ್ನು ನೋಡಲು ಮನಸ್ಸಿಲ್ಲ.ದೇವಸ್ಥಾನಗಳಿಗೆ ಹೋದರು ಪುನಃ ಮನೆಗೆ ಹಿಂದಿರುಗಬೇಕಲ್ಲ ಎಂಬ ಚಿಂತೆ ಕಾಡುತ್ತದೆ. ಮಕ್ಕಳು ಪ್ರತಿ ತಿಂಗಳು ಬರುವ ಹಬ್ಬಗಳಿಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ." ಅಲ್ಲಿ ಬಂದು ಮಾಡುವುದೇನು??ದಿನ ವಿಡಿಯೋ ಕಾಲ್ ಮಾಡುತ್ತೇವೆ" ಎಂದು ಹೇಳುವ ಮಕ್ಕಳಿಗೆ ಹೇಗೆ ವರ್ಣಿಸಲಿ ನನ್ನ ಒಂಟಿತನವ??


ಈ ಒಂಟಿತನ ಎಂಬುದು ವಯಸಾದ ನಂತರ ವಿಪರೀತವಾಗಿ ಕಾಡುತ್ತದೆ. ಮಕ್ಕಳು ಮನೆಯಲ್ಲಿ ಜೊತೆಯಲ್ಲಿಯೇ ಇದ್ದರು ನನ್ನೊಡನೆ ಕಳೆಯಲು ಮಕ್ಕಳಿಗೆ ಸಮಯವಿಲ್ಲವಲ್ಲ ಎಂದು ಚಿಂತಿಸುತ್ತೇವೆ. ವಯಸ್ಸಾಗುತ್ತಾ ಹೋದಂತೆ ಗಂಡ ಹೆಂಡತಿಯ ನಡುವೆ ಬಂಧ ಗಟ್ಟಿ ಆಗಿರುತ್ತದೆ. ಒಬ್ಬರನ್ನೊಬ್ಬರು ಅಗಲಿ ಬದುಕುವುದು ಊಹೆಗೂ ಮೀರಿದ್ದು.ಇದ್ದಷ್ಟು ದಿನ ಎಷ್ಟೇ ಚರ್ಚೆ ಮಾಡಿದರು ಅಥವಾ ಜಗಳ ಮಾಡಿದರು ಬಿಟ್ಟಿರಲಾರದ ಬಾಂಧವ್ಯ ಹಿರಿಜೀವಿಗಳದ್ದಾಗಿರುತ್ತದೆ. ಹಿರಿಯರ ಮಾತಿಗೆ ಮನೆಯಲ್ಲಿ ಬೆಲೆ ಇಲ್ಲ ಎಂದು ತಿಳಿದಾಗ ಗಂಡ ಹೆಂಡತಿ ಜೊತೆಗಿದ್ದರೆ ಅವರ ನೋವನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಅದೇ ಒಂಟಿಯಾಗಿದ್ದರೆ ಮನಸಲ್ಲಾಗುವ ತಲ್ಲಣಗಳನ್ನು ಹೇಳಲಾಗಲಿ ಅಥವಾ ಕೇಳಲಾಗಲಿ ಯಾರು ಇರುವುದಿಲ್ಲ. ಯಾರಿಲ್ಲವೆಂಬ ಒಂಟಿತನ ಒಂದೆಡೆಯಾದರೆ ಯಾರಿಗಾಗಿ ನಾನಿನ್ನೂ ಬದುಕಬೇಕು ಎಂಬ ದುಃಖ ಭಾದಿಸುತ್ತದೆ. ಮನೆಯಲ್ಲಿ ಹಿರಿಯರಿದ್ದರೆ ಒಂಟಿಯಾಗಿರಲಿ ಅಥವಾ ಜಂಟಿ ಆಗಿರಲಿ ಅವರನ್ನು ಇಳಿಯ ವಯಸ್ಸಿನಲ್ಲಿ ಒಂಟಿಯನ್ನಾಗಿಸುವುದು ಮಹಾ ಪಾಪವೇ ಸರಿ. ತಿರುಗುವ ಕಾಲ ಚಕ್ರದಲ್ಲಿ ಯುವಕರಾದವರು ಮುದುಕರಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟು ಹಿರಿಯರಿಗೆ ಕೊಂಚ ಗೌರವ ಕೊಟ್ಟು ಒಂಟಿಯನ್ನಾಗಿಸದೆ ಮುಪ್ಪಿನಲ್ಲಿ ಸುಖದಿಂದ ಕಾಣುವುದು ಮನೆ ಮಂದಿಯ ಕರ್ತವ್ಯ. ಫೋನಿನಲ್ಲಿ ಎಷ್ಟೇ ಮಾತನಾಡಿದರು ನೇರವಾಗಿ ಮಾತನಾಡಿದಷ್ಟು ಹಿತ ಮನಸ್ಸಿಗಾಗದು. ಓಡುತ್ತಿರುವ ಕಾಲದಲ್ಲಿ ಬದುಕನ್ನು ಭದ್ರವಾಗಿಸಲು ಹಣದ ಅವಶ್ಯಕತೆ ಎಷ್ಟಿದೆಯೋ ಬದುಕನ್ನು ರೂಪಿಸಿದ ಹಿರಿಯರೆಡೆ ಗಮ್ಮನಹರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಯಾವುದು ಹೇಳಿದಷ್ಟು ಸುಲಭವಲ್ಲ. ಕಷ್ಟವಾದರೂ ನಿಭಾಯಿಸಬೇಕಾದದ್ದು ಮಾನವ ಧರ್ಮ. ಮಗುವನ್ನು ಪೋಷಿಸಿ ಸಲಹುವುದು ಕಷ್ಟವೆನಿಸಿದರು ನಿಭಾಯಿಸಲು ಧೈರ್ಯ ಮಾಡುವ ಮನಸ್ಸು ಹಿರಿಯರನ್ನು ಹೊಂದಿಕೊಂಡು ಹೋಗಲು ಬಯಸುವುದಿಲ್ಲ.ಇದು ಇಂದಿನ ಸಮಾಜದ ಸ್ಥಿತಿ."

ಇದಿಷ್ಟನ್ನು ಬರೆಯುವಷ್ಟರಲ್ಲಿ ಕಣ್ಣು ಕಂಬನಿಯಿಂದ ತುಂಬಿ ಮುಂಜಾಗಿತ್ತು.. ಪುಸ್ತಕವನ್ನು ಬದಿಗಿರಿಸಿ ಅಲ್ಲೇ ಹತ್ತಿರದಲ್ಲಿದ್ದ ಮಂಚಕೊರಗಿದರು..


ಎಂದಿನಂತೆ ಅವರನ್ನು ನೋಡಿಕೊಳ್ಳಲು ಬರುತ್ತಿದ್ದ ದೀಪಕ್ ಎಂದೂ ಕಾಣದ ಪುಸ್ತಕವನ್ನು ಟೇಬಲ್ ಮೇಲೆ ಕಂಡು ಜಾನಕಿನಾಥರು ಬರೆದಿದ್ದ ಪ್ರತಿಯೊಂದು ಅಕ್ಷರವನ್ನು ಓದಿ ಕಂಬನಿಸುರಿಸಿದ..ಹೇಗಾದರೂ ಸರಿ ಮಾಸಿದ ಇವರ ಬದುಕಿಗೆ ಬಣ್ಣ ತುಂಬಬೇಕು ಎಂದು ಯೋಚಿಸಿದವನು ತನ್ನ ಮೊಬೈಲ್ ಇಂದ ಆ ಪುಸ್ತಕದಲ್ಲಿ ಬರೆದಿಟ್ಟ ಸಾಲುಗಳ ಫೋಟೋ ತೆಗೆದು ಜಾನಕಿನಾಥರ ಮಕ್ಕಳಿಗೆ ಕಳುಹಿಸಿದ..

ಜಾನಕಿನಾಥರ ಮಕ್ಕಳು ಅಪ್ಪನ ನೋವನ್ನು ಓದುವ ಮೂಲಕ ಅರಿತರು.. ಅಪ್ಪನನ್ನು ಇಳಿ ವಯಸ್ಸಿನಲ್ಲಿ ಒಂಟಿಯಾಗಿ ಬಿಟ್ಟಿರೋದಕ್ಕೆ ಪಶ್ಚಾತಾಪ ಪಟ್ಟರು.. ತಡ ಮಾಡದೆ ಅಪ್ಪನನ್ನು ಕಾಣಲು ಕೆಲಸ ಬಿಟ್ಟು ಧಾವಿಸಿ ಬಂದರು..


ಮಕ್ಕಳ ಧಿಡೀರ್ ಆಗಮನ ಜಾನಕಿನಾಥರಿಗೆ ಆತಂಕದ ಜೊತೆಗೆ ಸಂತಸವನ್ನು ನೀಡಿತು.. ಎಷ್ಟು ಕರೆದರೂ ಬಾರದೆ ಇರುವ ಮಕ್ಕಳು ಇದೀಗ ದಿಡೀರನೆ ಹಾಜರಾಗಿರುವುದು ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿತು.. ಇನ್ನು ಮುಂದೆ ಅಪ್ಪನೊಂದಿಗೆ ಇರುವ ತಮ್ಮ ಅಭಿಲಾಷೆಯನ್ನು ಮಕ್ಕಳು ವ್ಯಕ್ತಪಡಿಸಿದಾಗ ಹಿರಿ ಜೀವ ಸಂತಸವನ್ನು ತಡೆಯಲಾಗದೆ ಆನಂದ ಭಾಷ್ಪಹರಿಸಿದರು... ಈ ಪವಾಡ ಹೇಗೆ ಸಾಧ್ಯವಾಯಿತು ಎಂದು ಯೋಚಿಸುವಾಗ ದೀಪಕ್ ನೆಡೆದ ವಿಚಾರವನ್ನು ತಿಳಿಸಿದ..


"ನಾನು ಖಾಲಿ ಡಬ್ಬಿ ಕಬ್ಬಿಣದ ಚೂರುಗಳನ್ನು ಆಯ್ದು ಬದುಕು ನಡೆಸುತ್ತಿದೆ.. ನನ್ನ ಬದುಕಿಗೆ ಬಣ್ಣ ತುಂಬಿದವರು ನೀವು.. ಅನಾಥನಾಗಿದ್ದ ನನಗೆ ಆಶ್ರಯ ನೀಡಿದಿರಿ.. ಆಶ್ರಯದ ಜೊತೆಗೆ ನಿಮ್ಮನ್ನು ನೋಡಿಕೊಳ್ಳುವ ಕೆಲಸವನ್ನು ನೀಡಿ ಸಂಬಳವನ್ನು ಕೊಟ್ಟು ಓದಲು ಕಳಿಸುತ್ತಿದ್ದೀರಿ.. ನಿಮ್ಮ ಮನದ ಬಣ್ಣ ಮಾಸಿದೆ ಎಂದು ತಿಳಿದ ಮೇಲೆ ಹೇಗೆ ತಾನೇ ಸುಮ್ಮನಿರಲಿ.. ನನ್ನ ಬದುಕನ್ನು ಬಣ್ಣವಾಗಿಸಿದ ನಿಮ್ಮ ಬದುಕು ಬಣ್ಣದಿಂದ ತುಂಬಿರಬೇಕೆಂಬ ಬಯಕೆ ಮೂಡಿತು.. ಆ ಬಣ್ಣ ತುಂಬುವ ಶಕ್ತಿ ನಿಮ್ಮ ಮಕ್ಕಳು ಮೊಮ್ಮಕ್ಕಳಲ್ಲಿದೆ ಎಂದು ಅರಿತು ನೀವು ಬರೆದಿಟ್ಟ ಸಾಲುಗಳನ್ನು ಅವರಿಗೆ ಕಳುಹಿಸಿದ ಅಷ್ಟೇ.."


ದೀಪಕ್ ನ ಮಾತು ಕೇಳಿ ಜಾನಕಿನಾಥರ ಹೃದಯ ತುಂಬಿ ಬಂತು.. ಅವನನ್ನು ಬಿಗಿದಪ್ಪಿಕೊಂಡರು...


Rate this content
Log in

Similar kannada story from Abstract