Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ಮಾಗಿದ ಪ್ರೇಮ

ಮಾಗಿದ ಪ್ರೇಮ

5 mins
35


"ಬಾ ಬಾ ಕೂತ್ಕೋ ಈತರ ಸಂಜೆ ಆರಾಮಾಗಿ ನೀನು ಕೂತು 

ನನ್ನ ಜೊತೆ ಕಾಫಿ ಕುಡಿದೇ ತುಂಬಾ ವರುಷಗಳು ಕಳೆದಿದೆ .ಬಾ " ಎನ್ನುತ್ತಾ ರಾಮಚಂದ್ರ ರಾಯರು ಮಂಚದಲ್ಲಿ ಕುಳಿತವರು ಕೊಂಚ ಸರಿದು ಮಡದಿ ವೈದೇಹಿಯನ್ನು ಕರೆದರು.


ಸೌಮ್ಯ ಸ್ವಭಾವದ ವೈದೇಹಿ ಕೊಂಚ ನಗುತ್ತಾ ಪತಿಗಾಗಿ ತಂದಿದ್ದ ಕಾಫಿಯನ್ನು ಕೊಟ್ಟು ಪಕ್ಕದಲ್ಲಿ ಕುಳಿತು ಕಾಫಿ ಹೀರುತ್ತಾ ಆಲೋಚನೆಯಲ್ಲಿ ಮುಳುಗಿದ್ದರು.


"ಏನಾಯ್ತು ವೈದೇಹಿ ಏನು ಯೋಚನೆ ಮಾಡ್ತಾ ಇದ್ದಿ. ಬಹಳಾ ಅಪರೂಪಕ್ಕೆ ನಮ್ಮಿಬ್ಬರಿಗೆ ಮಾತಾಡೋಕೆ ಸಮಯ ಸಿಕ್ಕಿದೆ. ಮಾತನಾಡೋದು ಬಿಟ್ಟು ಏನು ಯೋಚನೆ ಮಾಡ್ತಿದ್ದಿ"?


"ರೀ ನಮ್ಮ ಕರ್ತವ್ಯನಾ ಸಂಪೂರ್ಣವಾಗಿ ಪೂರೈಸಿದ್ದೀವಿ ಅಂತ ಹೆಮ್ಮೆ ಪಡಬೇಕೋ ಅಥವಾ ನಾವಿಬ್ಬರೇ ಮನೆಯಲ್ಲಿ ಉಳಿದೆವಲ್ಲಾ ಅಂತ ಬೇಜಾರು ಮಾಡ್ಕೋಬೇಕು ಗೊತ್ತಾಗ್ತಾ ಇಲ್ಲ."?


"ನೀನು ಏನು ಯೋಚನೆ ಮಾಡ್ತಾ ಇದ್ದಿ ಅಂತ ಈಗ ಗೊತ್ತಾಯ್ತು.ಬೆಳದುನಿಂತ ಮಗಳನ್ನು ಮದುವೆಯಾದ ಮೇಲೆ ನಮ್ಮೊಂದಿಗೆ ಇರಿಸಿಕೊಳ್ಳುವುದು ಕಷ್ಟ. ನಮ್ಮ ಮಗಳಿಗೆ ಮದುವೆ ಮಾಡಿ ಅವಳ ಬಾಣಂತನವನ್ನು ಮಾಡಿ ಕಳುಹಿಸಿಕೊಟ್ಟಾಗಿದೆ. ಇನ್ನು ಅವಳು ಸಂಸಾರವನ್ನು ನಿಭಾಯಿಸುವುದನ್ನು ನೋಡುತ್ತಾ ಹರಸಬೇಕು ಅಷ್ಟೇ".


"ಹೌದು ರೀ ಇಷ್ಟು ದಿವಸ ಮಗಳು ಬಾಣಂತನ ಅಂತ ಇಲ್ಲೇ ಇದ್ಲು. ಮಗುವಿನ ಲಾಲನೆ ಪಾಲನೆಯಲ್ಲಿ ನಾನು ಕಳೆದು ಹೋಗಿದ್ದೆ. ಅವಳನ್ನು ಕಳಿಸಿಕೊಟ್ಟ ಮೇಲೆ ಯಾಕೋ ಒಂಥರಾ ಬೇಜಾರು. ಪಾಪ ಆ ಎಳೆ ಮಗುವನ್ನು ಅದು ಹೇಗೆ ಸಂಭಾಳಿಸುತ್ತಾಳೊ ಗೊತ್ತಿಲ್ಲ .ಅದು ನನಗೆ ಚಿಂತೆಯಾಗಿದೆ."


"ಒಂದಲ್ಲ ಎರಡಲ್ಲ ಏಳು ತಿಂಗಳು ಹಗಲಿರುಳು ಮಗಳ ಸೇವೆ ಮಾಡಿದ್ದಿ. ಹಗಲು ರಾತ್ರಿ ನಿನ್ನ ಮಗಳಿಗೋಸ್ಕರ ಅವಳ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿ ನೋಡಿಕೊಂಡಿದ್ದಿ. ಸರಿಯಾಗಿ ನಿದ್ದೆ ಇಲ್ಲದೆ ಒಳ ಹೋಗಿರುವ ನಿನ್ನ ಕಣ್ಣುಗಳನ್ನು ಒಮ್ಮೆ ನೋಡ್ಕೊ. ಮಗಳು ಅವಳು ಮಗುವನ್ನು ನೋಡಿಕೊಳ್ಳುವಷ್ಟು ಶಕ್ತಳಾಗಿದ್ದಾಳೆ.ಅವಳ ಬಗ್ಗೆ ಯೋಚನೆ ಮಾಡ್ದೆ ನಿನ್ನ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸು. ಸ್ವಲ್ಪ ವಿಶ್ರಾಂತಿ ತಗೋ".


"ನನಗೆ ಏನಾಗಿದೆ ನೋಡಿ ಗುಂಡು ಕಲ್ ತರ ಇದೀನಿ"ಎಂದಳು ಜೋರಾಗಿ ನಕ್ಕಳು.ಮಡದಿಯ ನಗು ಕಂಡು ರಾಯರು ಕಣ್ತುಂಬಿ ಕೊಂಡರು.


"ನಿನ್ನನ್ನು ನೀನು ಕನ್ನಡಿಯಲ್ಲಿ ನೋಡಿಕೊಳ್ಳದೆ ಎಷ್ಟು ದಿನ ಕಳೆದಿದೆ ಅಂತ ಗೊತ್ತಾ. ಮದುವೆಯಾಗಿ ಬಂದಾಗ ಹೇಗಿದ್ದೆ ನೀನು ಅನ್ನೋದು ನಿನಗೆ ನೆನಪಿದೆಯಾ? ಮನೆಯವರ ಇಚ್ಛೆಯಂತೆ ನನ್ನನ್ನು ಮದುವೆಯಾಗಿ ಈ ಮನೆಗೆ ದೀಪ ಬೆಳಗಲು ಬಂದು ನನ್ನ ಮನದಲ್ಲಿ ಪ್ರೀತಿಯ ದೀಪವನ್ನು ಬೆಳಗಿ ಮನೆಯನ್ನು ನಂದನ ವನವಾಗಿಸಿದೆ. ನನ್ನ ವಂಶದ ಬೆಳವಣಿಗೆಗೆ ನಿನ್ನ ಜೀವವನ್ನು ಪಣ್ಣಕಿಟ್ಟು ಮಕ್ಕಳನ್ನು ಹಡೆದೆ. ನನ್ನ ವೃದ್ಧ ತಂದೆ ತಾಯಿಗಳ ಇಚ್ಛೆಯನ್ನು ಪೂರೈಸುತ್ತಾ ಅವರ ವೃದ್ಧಾಪ್ಯವನ್ನು ನೆಮ್ಮದಿಯಾಗಿ ಕಳೆಯುವಂತೆ ಮಾಡಿದೆ. ಹಾಸಿಗೆ ಹಾಸಿದ ನನ್ನ ತಂದೆ ತಾಯಿಯನ್ನು ನಿನ್ನ ತಂದೆ ತಾಯಿಯಂತೆ ಹಗಲಿರಳು ಮಕ್ಕಳಂತೆ ಸಲಹುತ್ತಾ ಸೇವೆ ಮಾಡಿದೆ. ನನ್ನ ಮಗಳಿಗೂ ಏನೂ ಕೊರತೆ ಬಾರದಂತೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ ಒಳ್ಳೆ ಮನೆತನಕ್ಕೆ ಸೇರುವಂತೆ ಮಾಡಿದೆ. ಅವಳ ಬಾಣಂತನವನ್ನು ಮಾಡಿದೆ. ಇಷ್ಟು ವರ್ಷಗಳ ಕಾಲ ನನ್ನ ಮನೆಗಾಗಿ ನೀನು ದುಡಿದೆ.ಒಂದು ದಿನವೂ ವಿಶ್ರಾಂತಿಯನ್ನು ಕೇಳಿದವಳು ನೀನಲ್ಲ. ಆಗಾಗ ಬಂದು ಹೋಗುವ ಶೀತ ಕೆಮ್ಮುಗಳಿಗೆ ನೀನೆಂದೂ ಹೆದರಿದವಳಲ್ಲ. ಅದೆಷ್ಟೇ ದಣಿದಿದ್ದರೂ ಮನೆಯ ಕೆಲಸದ ಬಗ್ಗೆ ನನಗೆ ಚಿಂತೆ ನೀಡಿದವಳಲ್ಲ. ಇಷ್ಟು ವರ್ಷಗಳು ನಮ್ಮೆಲ್ಲರ ಸೇವೆಯಲ್ಲಿ ನಿನನ್ನು ನೀನು ಸಂಪೂರ್ಣ ಮರೆತಿದ್ದಿ. ನಮ್ಮ ನಗುವಲ್ಲಿ ನಿನ್ನ ನಗುವನ್ನು ನೋಡಲು ಬಯಸಿದ್ದಿ. ಈ ನಿನ್ನ ಪ್ರೀತಿಗೆ ಈ ನಿನ್ನ ಪ್ರೇಮಕ್ಕೆ ಸಾಟಿ ಉಂಟೇ?


"ಅಯ್ಯೋ ಸಾಕು.. ಹೊಗಳುವಂತದ್ದು ನಾನೇನೂ ಮಾಡಿಲ್ಲ ನನ್ನ ಕರ್ತವ್ಯ ನಾನು ನಿಭಾಯಿಸಿದೆ ಅಷ್ಟೇ. ತಾಳ್ಮೆಯಿಂದ ನನ್ನ ಮಾತಿಗೆ ಪ್ರತಿ ಬಾರಿ ನೀವು ಕಿವಿಯಾಗಿದ್ದಿರಿ. ಹೊರಗೆ ದುಡಿಯುವ ಚಿಂತೆಯನ್ನಾಗಲಿ ದಿನಸಿ ತರಕಾರಿಗಳನ್ನು ತರುವ ತೊಂದರೆಯನ್ನಾಗಲಿ ನನಗೆಂದೂ ನೀವು ನೀಡಿದವರಲ್ಲ. ನಿಮ್ಮ ಬೆಂಬಲವಿಲ್ಲದೆ ನನ್ನ ಕರ್ತವ್ಯ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ."ಎಂದು ಪತಿಯ ಗುಣಗಾನ ಮಾಡುವಷ್ಟರಲ್ಲಿ ಫೋನ್ ರಿಂಗ್ ಆಯ್ತು. ಕಾಫಿ ಲೋಟವನ್ನು ಪತ್ನಿಯ ಕೈಗಿಟ್ಟು ರಾಮಚಂದ್ರ ರಾಯರು ಫೋನ್ ಕೈಗೆತ್ತಿಕೊಂಡರು.


"ಹಲೋ ಅಪ್ಪ ನಾನು ಮೀನಾ. ಹೇಗಿದ್ದೀರಾ? ಅಮ್ಮ ಹೇಗಿದ್ದಾರೆ? ನಾವೆಲ್ಲ ಚೆನ್ನಾಗಿದ್ದೀವಿ. ನನಗೆ ಮನೆ ಹತ್ತಿರದ ಒಂದು ಶಾಲೆಯಲ್ಲಿ ಟೀಚರ್ ಕೆಲಸ ಸಿಕ್ಕಿದೆ. ನಾನು ಸದ್ಯದಲ್ಲೇ ಅಂದ್ರೆ ಇನ್ನೊಂದೆರಡು ವಾರದಲ್ಲಿ ಕೆಲಸಕ್ಕೆ ಹೋಗಬೇಕು. ಮಗುನ ನೋಡ್ಕೊಳ್ಳೋಕೆ ಯಾರು ಸಿಕ್ತಾ ಇಲ್ಲ .ಹೇಗೂ ನೀವು ಅಮ್ಮ ಅಲ್ಲಿ ಇಬ್ರೆ ಇರ್ತೀರಲ್ವಾ. ಅದಕ್ಕೆ ನಿಮ್ಮನ್ನೇ ನಮ್ಮನೆಗೆ ಬನ್ನಿ ಅಂತ ಕರೆಯೋಣ ಅಂತ ಫೋನ್ ಮಾಡಿದೆ. ಮಗು ನೋಡಿಕೊಂಡ ಹಾಗೂ ಆಗುತ್ತೆ ನಿಮಗೂ ಸಮಯ ಕಳೆದಿದ್ದೆ ತಿಳಿಯಲ್ಲ. ಏನಂತೀರಾ ಬಸ್ ಟಿಕೆಟ್ ಬುಕ್ ಮಾಡ್ಲಾ? ಇವತ್ತೆ ಹೊರಡೋದು ಕಷ್ಟ ಆಗಬಹುದು ಹಾಗಾಗಿ ನಾಡಿದ್ದಿಗೆ ಟಿಕೆಟ್ ಬುಕ್ ಮಾಡ್ತೀನಿ."


"ಹಲೋ ಮಗಳೇ, ಒಂದು ನಿಮಿಷ ನನ್ ಮಾತು ಕೇಳು ಎಲ್ಲಾನು ಒಂದೇ ಉಸಿರಲ್ಲಿ ಹೀಗೆ ಹೇಳಿದರೆ ಹೇಗೆ? ನಾವು ಈಗ ತಾನೇ ಸುದರ್ಸ್ಕೊತಾಯಿದೀವಿ. ನಾನು ನಿನ್ನಮ್ಮ ಸರಿಯಾಗಿ ಮಾತನಾಡದೆ ಸುಮಾರು ತಿಂಗಳೆ ಕಳೆದುಹೋಗಿತ್ತು. ಇವತ್ತು ನಿಮ್ಮಮ್ಮ ಪುರುಸೊತ್ತಲ್ಲಿ ನನ್ ಮಾತನ್ನ ಕೇಳಿಸಿಕೊಳ್ಳೋಕೆ ಕೂತಿದ್ಲು ಅಷ್ಟು ಹೊತ್ತಿಗೆ ನೀನು ಫೋನ್ ಮಾಡಿದಿ".


"ಓ ಈ ವಯಸಿನಲ್ಲಿ ಏಕಾಂತವಾಗಿ ಮಾತಾಡೋದು ಏನಿರುತ್ತೆ?"


"ವಯಸ್ಸು ದೇಹಕ್ಕೆ. ನಮ್ಮಿಬ್ಬರ ಪ್ರೀತಿಗಲ್ಲಮ್ಮ ನಿಮ್ಮೆಲ್ಲರನ್ನ ದಡ ಮುಟ್ಸೋಕೆ ನಾವಿಬ್ರೂ ನಮ್ಮ ಸಮಯನ ಕೊಡುವುದರಲ್ಲೇ ಜೀವನ ಮುಗಿತಾ ಬಂತು.ನಮ್ಮಿಬ್ಬರಿಗೆ ಅಂತ ಸಮಯ ಕೊಟ್ಕೊಳಕ್ಕೆ ಅವಕಾಶನೇ ಸಿಗಲಿಲ್ಲ. ಆ ಸಮಯ ಈಗ ಬಂದಿದೆ."


"ಸರಿಯಪ್ಪ ನಾನು ಫೋನ್ ಇಟ್ಟ ಮೇಲೆ ನಿಮ್ಮ ಮಾತನ್ನು ಮುಂದುವರಿಸಿ. ಮೊದಲು ನಾನು ಹೇಳಿರುವ ವಿಚಾರದ ಬಗ್ಗೆ ಯೋಚನೆ ಮಾಡಿ.ನಾನು ಬೇಗ ಟಿಕೆಟ್ ಬುಕ್ ಮಾಡಬೇಕು. ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಿದರೆ ರೇಟ್ ಜಾಸ್ತಿ ಆಗುತ್ತೆ."


"ಬೇಡಮ್ಮ. ನೀನು ಟಿಕೆಟ್ ಬುಕ್ ಮಾಡಬೇಡ. ನಮಗಾಗಿ ನೀನು ಜಾಸ್ತಿ ಖರ್ಚು ಮಾಡೋದು ಬೇಡ. ನಾವಿಬ್ರೂ ನಿನ್ನ ಮಗುನ ನೋಡ್ಕೊಳಕ್ಕೆ ಬರಲ್ಲ. ನಿನ್ನ ಮಗು ನಿನ್ನ ಜವಾಬ್ದಾರಿ.ಇಷ್ಟು ದಿನ ನಿನ್ನ ಮಗುನ ಇಲ್ಲಿ ಇರಿಸಿಕೊಂಡು ನೋಡಿದ್ದಾಯ್ತು. ನಿಮ್ಮ ಅಮ್ಮ ಹಗಲು ರಾತ್ರಿ ದಣಿದಿದ್ದಾಳೆ.ಅದು ಇವತ್ತು ನಿನ್ನೆಯಿಂದಲ್ಲ. ಹಲವಾರು ವರ್ಷದಿಂದ. ನನ್ನನ್ನು ನಂಬಿ ಬಂದವಳಿಗೆ ದಣಿವನ್ನು ಬಿಟ್ಟು ಬೇರೆ ಏನು ಕೊಡೊಕ್ಕಾಗಲಿಲ್ಲ. ಈ ಇಳಿ ವಯಸ್ಸಿನಲ್ಲಾದರೂ ಅವಳಿಗೆ ಒಂದು ಸ್ವಲ್ಪ ವಿಶ್ರಾಂತಿ ಕೊಡೋಣ ಅಂತ ನಿರ್ಧಾರ ಮಾಡಿದ್ದೇನೆ. ಹಾಗಾಗಿ ಅಲ್ಲಿಗೆ ಬರೋಕೆ ಆಗಲ್ಲ."


"ಏನಪ್ಪಾ ಹೀಗೆ ಅಂದುಬಿಟ್ಟರೆ ಹೇಗೆ? ಅಮ್ಮ ಬರ್ಲಿಲ್ಲ ಅಂದ್ರೆ ನಾನು ಹೇಗೆ ಕೆಲಸಕ್ಕೆ ಹೋಗ್ಲಿ. ನನ್ ಮಗುನ್ ಯಾರ್ ನೋಡ್ಕೋತಾರೆ? ಅಜ್ಜ ಅಜ್ಜಿಯಾಗಿ ನಿಮ್ಮ ಕರ್ತವ್ಯನ ನಿಭಾಯಿಸೋಲ್ಲ ಅಂತೀರಲ್ಲ?"


"ನೀನು ಕೆಲಸಕ್ಕೆ ಹೋಗೋದು ಬಿಡೋದು ನಿನ್ನಿಷ್ಟ. ನಮ್ಮ ಕರ್ತವ್ಯನ ನಾವು ನಿಭಾಯಿಸಿದ್ದೀವಿ. ಇನ್ನು ನೀನು ನಿನ್ನ ಕರ್ತವ್ಯ ಮಾಡಬೇಕಿರೋದು.ನಾವು ನಮ್ಮ ಮಕ್ಕಳನ್ನ ಸಾಕಿ ಬೆಳೆಸಿ ಗುರಿ ಮುಟ್ಟಿಸಿದ್ದೀವಿ. ಇನ್ನು ನಿನ್ನ ಮಗುನ ಬೆಳೆಸೋದು ನಿನ್ನ ಜವಾಬ್ದಾರಿ ಅದಕ್ಕೆ ನಮ್ಮನ್ನ ಕರಿಬೇಡ ನಮ್ಮನ್ನ ಕಾಯಬೇಡ."


"ಅಪ್ಪ ನಿಮ್ಮತ್ರ ಪುರಾಣ ಮಾಡ್ತಾ ಕೂತ್ಕೊಳಕ್ಕೆ ಪುರುಸೊತ್ತಿಲ್ಲ.ನೀವು ಬರೆದಿದ್ದರೆ ಬೇಡ ಅಮ್ಮನಾದ್ರೂ ಕಳಿಸಿಕೊಡಿ. ಅಮ್ಮ ಅಲ್ಲೇ ಇದ್ರೆ ಫೋನ್ ಕೊಡಿ ನಾನೇ ಮಾತಾಡ್ತೀನಿ."


"ನಾನು ಹೇಳಿದ್ದನ್ನೇ ನಿಮ್ಮಮ್ಮನು ಹೇಳ್ತಾಳೆ. ಅವಳು ನನ್ ಹೆಂಡ್ತಿ. ಅವಳನ್ನು ಕಳಿಸುವುದು ಬಿಡೋದು ನನ್ನಿಷ್ಟ. ಇಷ್ಟು ವರ್ಷ ನಮ್ಮೆಲ್ಲರ ಸೇವೆ ಮಾಡಿದ್ದಾಳೆ. ಈಗ ಅವಳ ಸೇವೆ ಮಾಡೋ ಸಮಯ ನನ್ನದು .ಆ ಸಮಯನಾ ನಾನು ಹಾಳ್ ಮಾಡ್ಕೊಳಕ್ಕೆ ಇಷ್ಟ ಪಡಲ್ಲ .ನಾನ್ ಅವಳನ್ನ ಎಲ್ಲಿಗೂ ಕಳ್ಸಲ್ಲ."


"ಮಗಳು ಕೆಲಸಕ್ಕೆ ಹೋಗಿ ಸಾಧಿಸ್ತಾಳೆ ಅಂದ್ರೆ ಅದನ್ನ ಬೇಡ ಅಂತ ಹೇಳ್ತಿರೋ ಏಕೈಕ ತಂದೆ ನೀವು."


"ನೀನು ಸಾಧನೆ ಮಾಡು ಮಗಳೇ. ಅದರಲ್ಲಿ ಏನು ಅಭ್ಯಂತರವಿಲ್ಲ. ಆದರೆ ನಿನ್ನ ಸಾಧನೆಗೆ ನಮ್ಮಿಬ್ಬರನ್ನ ದೂರ ಮಾಡಬೇಡ. ಇಷ್ಟು ವರ್ಷ ಸಾಕಷ್ಟು ದೂರ ಆಗಿದ್ದೇವೆ. ಇನ್ನು ಸಾವಿನ ದಿನಗಳನ್ನು ಎಣಿಸುವ ಕಾಲ ಹತ್ತಿರ ಬಂದಾಗಿದೆ. ಈ ದಿನಗಳಲ್ಲಾದರೂ ನಮ್ಮಿಬ್ಬರನ್ನು ಜೊತೆಗೆ ಇರೋಕೆ ಬಿಡು ಅಂತ ಹೇಳ್ತಾ ಇದೀನಿ ಅಷ್ಟೇ."


"ಹಾಗಾದ್ರೆ ನೀವೀಗ ಬರಲ್ಲ. ಅಮ್ಮನೂ ಕಳ್ಸಲ್ಲ. ಸರಿ ನಾನು ಬೇರೆ ಏನಾದ್ರೂ ವ್ಯವಸ್ಥೆ ಮಾಡ್ಕೋತೀನಿ" ಎನ್ನುತ್ತಾ ಕೋಪದಲ್ಲಿ ಕರೆ ಕಟ್ ಮಾಡಿದಳು. ರಾಯರು ಫೋನ್ ಇಟ್ಟು ದೀರ್ಘ ಉಸಿರೆಳೆದುಕೊಂಡು ಒಂದು ಕ್ಷಣ ಕಣ್ಮುಚ್ಚಿ ಕುಳಿತರು.


"ವೈದೇಹಿ ನಿನ್ನ ನಿರ್ಧಾರ ಕೇಳದೆ ನಾನು ಮಗಳ ಫೋನ್ ಇಟ್ಟೆ. ನನಗೆ ನಿನ್ನನ್ನು ಕಳುಹಿಸಲು ಮನಸ್ಸಿಲ್ಲ. ಇನ್ನು ನೀನು ಹೋಗಲೇಬೇಕು ಅಂತಿದ್ರೆ ಹೇಳು ನಿನ್ನನ್ನ ಕಳಿಸಿ ಕೊಡ್ತೀನಿ."


"ಇಲ್ಲ ರೀ. ನಿಮ್ಮ ನಿರ್ಧಾರಕ್ಕೆ ನಾನೆಂದಿಗೂ ಇಲ್ಲ ಅನ್ನಲ್ಲ. ಆದರೆ ಮಗಳಿಗೆ ಈ ಆಲೋಚನೆ ಹೇಗೆ ಬಂತು ಅನ್ನೋದು ನನ್ನ ಕಾಡ್ತಾ ಇದೆ. ನಾನು ಬೆಳೆಸುವುದರಲ್ಲಿ ಎಲ್ಲಾದರೂ ಎಡವಿದ್ದೇನಾ ಅಂತ ಸಂಶಯ ಇದೆ. ನನಗೂ ಕೂಡ ಇಷ್ಟು ವರ್ಷ ಮಕ್ಕಳು ಮನೆ ಅಂತ ನಿಮ್ ಜೊತೆಗೆ ಪ್ರತ್ಯೇಕವಾಗಿ ಸಮಯ ಕಳಿಯೋಕೆ ಆಗಿಲ್ಲಾ. ಈಗ ನಾನು ಬದುಕಿರುವ ಪ್ರತಿ ನಿಮಿಷ ನಿಮ್ಮೊಂದಿಗೆ ಇರಲು ಬಯಸುತ್ತೇನೆ. ನಿಮ್ಮಿಂದ ದೂರ ಆದರೆ ಖಂಡಿತವಾಗಿಯೂ ನಾನು ಆರೋಗ್ಯವಾಗಿ ಇರಲಾರೆ. ನಿಮ್ಮ ಪ್ರೀತಿ ಇಲ್ಲದೆ ನಾನು ಬದುಕಿರುವುದು ವ್ಯರ್ಥವೆನಿಸುತ್ತದೆ. ಇಷ್ಟು ವರ್ಷ ನಮ್ಮಿಬ್ಬರನ್ನು ನೋಡುತ್ತಾ ಬೆಳೆದ ನಮ್ಮ ಮಗಳಿಗೆ ನಮ್ಮ ಈ ಪ್ರೇಮದ ಬಾಂಧವ್ಯ ಅರ್ಥವಾಗದೆ ದೂರ ಮಾಡೋ ಮಾತು ಬಂತಲ್ಲ ಅನ್ನೋದು ತುಂಬಾ ನೋವು ಕೊಡ್ತಾ ಇದೆ".


"ವೈದೇಹಿ ಕಾಲ ಬದಲಾಗಿದೆ ಅಂತ ಹೇಳೋಕೆ ನನಗೆ ಮನಸ್ಸಿಲ್ಲ. ಕಾಲದ ಜೊತೆ ಹೋಗುತ್ತಿರುವ ಮನಸ್ಥಿತಿಗಳು ಬದಲಾಗ್ತಾ ಇದೆ.ನಮ್ಮ ಮಗಳಿಗೆ ಬರಿ ಅವಳ ಉದ್ದೇಶ ಮಾತ್ರ ಮುಖ್ಯವಾಗಿ ಕಾಣ್ತಾ ಇದೆ. ಇದು ನಮ್ಮ ಮಗಳು ಅಂತ ಅಲ್ಲ.ಆ ವಯಸ್ಸಿನ ಎಲ್ಲಾ ಮಕ್ಕಳ ತಲೆಯಲ್ಲಿ ಇರುವುದು ಇದು ಒಂದೇ.ತಮ್ಮ ಮಕ್ಕಳನ್ನು ಅಪ್ಪ-ಅಮ್ಮಂದಿರು ನೋಡಿಕೊಂಡರೆ ತಾವು ಏನನ್ನಾದರೂ ಸಾಧಿಸಬಹುದು ಅಂತ ಮಕ್ಕಳನ್ನು ಮನೇಲಿ ಅಜ್ಜ ಅಜ್ಜಿ ಜೊತೆಗೆ ಬಿಟ್ಟು ಇವ್ರು ಹೊರಗಡೆ ಹೋಗ್ತಾರೆ. ಆ ಅಜ್ಜ ಅಜ್ಜಿಗೂ ಒಂದು ಬದುಕಿದೆ ಅನ್ನೋದನ್ನ ಮಕ್ಕಳು ಮರ್ತು ವರ್ತಿಸ್ತಿದ್ದಾರೆ. ಇದು ಈ ಪೀಳಿಗೆಯ ಮನಸ್ಥಿತಿ.ಇದು ನಾವು ಬೆಳೆಸುವ ರೀತಿಯಿಂದ ಆಗಿದೆ ಅಂತ ಹೇಳಕ್ಕಾಗಲ್ಲ. ಅದರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ .ಅವರಿಗೆ ಬುದ್ಧಿ ಹೇಳಿದರು ಕೇಳುವ ಪರಿಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅವರಿಗೆ ಕಷ್ಟವಾಗುತ್ತದೆ ಅಂತ ನಾವು ದೂರ ಉಳಿದು ಕಷ್ಟ ಪಡುವ ಬದಲು ನಿಷ್ಟೂರವಾದರೂ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳಿ ನಮ್ಮಿಬ್ಬರ ಪ್ರೇಮ ದೂರವಾಗದಂತೆ ನೋಡಿಕೊಳ್ಳುವುದೊಂದೇ ಪರಿಹಾರ."


"ನೀವು ಮನಸಲ್ಲಿರೋದನ್ನ ನೇರವಾಗಿ ಹೇಳಿ ಒಳ್ಳೆ ಕೆಲಸ ಮಾಡಿದ್ರಿ. ಒಂದಿಷ್ಟು ದಿನ ನಮ್ಮ ಮೇಲೆ ಕೋಪಸಿಕೊಳ್ತಾಳೆ ಮಾತನ್ನು ಆಡದೆ ಇರಬಹುದು. ನನಗೂ ಮನಸ್ಸಿಗೆ ತುಂಬಾ ಕಷ್ಟ ಅನ್ಸುತ್ತೆ. ಆದರೆ ಅವಳ ಮಗುವನ್ನು ಅವಳು ಈಗ ನೋಡಿಕೊಳ್ಳದೆ ಇನ್ಯಾವಾಗ ನೋಡಿಕೊಳ್ತಾಳೆ? ಅವಳು ಕೂಡ ಸ್ವಲ್ಪ ಜವಾಬ್ದಾರಿಯನ್ನ ಕಲಿಲಿ ಗಟ್ಟಿ ಮನಸ್ಸು ಮಾಡಿ ನಾನು ಅವಳ ಅಳುವಿಗೆ ಈ ಬಾರಿ ಮರುಗಲಾರೆ."


"ಭೇಷ್ ವೈದೇಹಿ ನಿನ್ನ ನಿರ್ಧಾರಕ್ಕೆ ಮೆಚ್ಚಿದೆ. ಮಗಳೆಂಬ ವ್ಯಾಮೋಹದಲ್ಲಿ ಸಿಲುಕಿ ನರಳುವ ಬದಲು ಅವಳಿಗೆ ಜವಾಬ್ದಾರಿಯನ್ನು ಕಲಿಸಬೇಕೆಂದು ತಾಯಿಯಾಗಿ ಗಟ್ಟಿ ಮನಸ್ಸು ಮಾಡಿ, ನನ್ನ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರುವ ನಿನ್ನ ಬಗ್ಗೆ ತುಂಬಾ ಹೆಮ್ಮೆ ಅನ್ನಿಸ್ತಿದೆ. ಮೀನ ಇನ್ನೊಂದು ಸ್ವಲ್ಪ ಹೊತ್ತಲ್ಲಿ ನಿನಗೂ ಫೋನ್ ಮಾಡಬಹುದು. ಅವಳು ನಿನ್ನ ತರ ಸೌಮ್ಯ ಸ್ವಭಾವದವಳಲ್ಲ .ನನ್ನ ಅಮ್ಮನ ತರ ಹಿಡಿದ ಕೆಲಸ ಅತ್ತಾದರೂ ಮಾಡಿಸಿಕೊಳ್ಳುತ್ತಾಳೆ.ನಿನ್ನ ನಿಲುವನ್ನು ಧೈರ್ಯವಾಗಿ ಹೇಳು.ನಿನ್ನ ಜೊತೆಗೆ ನಾನಿದ್ದೇನೆ. ಯೋಚನೆ ಮಾಡಬೇಡ. ಮಾತಾಡ್ತಾ ಮಾತಾಡ್ತಾ ಸಮಯ ಹೋಗಿದ್ದೆ ಗೊತ್ತಾಗಿಲ್ಲ. ತುಂಬಾ ಹಸಿವಾಗ್ತಾ ಇದೆ .ನೆಡಿ ಊಟ ಮಾಡೋಣ. ಅನುದಿನ ಈ ಮಕ್ಕಳ ಬಗ್ಗೆ ಚಿಂತೆ ತಪ್ಪಿದ್ದಲ್ಲ ಇನ್ನಾದರೂ ಚಿಂತೆ ಬಿಟ್ಟು ಬದುಕಿರುವಷ್ಟು ದಿವಸ ನೆಮ್ಮದಿಯಾಗಿ ಇರೋಕೆ ಪ್ರಯತ್ನ ಪಡೋಣ" ಎನ್ನುತ್ತಾ ಮಡದಿಯೊಂದಿಗೆ ಅಡುಗೆ ಮನೆ ಕಡೆ ನಡೆದರು.


Rate this content
Log in

Similar kannada story from Classics