Ashritha Kiran ✍️ ಆಕೆ

Abstract Inspirational Others

4  

Ashritha Kiran ✍️ ಆಕೆ

Abstract Inspirational Others

ಹೊಸ ಬೆಳಕು

ಹೊಸ ಬೆಳಕು

4 mins
21



 "ಒಂದು ಮಗ್ನಲಿ ಹಾಲು ಮತ್ತೊಂದರಲ್ಲಿ ಬ್ರೂ ಸ್ವಲ್ಪ ಸಕ್ಕರೆ ಸೇರಿಸಿ ಈಗ ಮಿಕ್ಸ್ ಆರಂಭಿಸಿ ಈ ಕಪ್ಪಿನಿಂದ ಆ ಕಪ್ಪಿಗೆ ಸವಿಯಿರಿ ಟೇಸ್ಟಿ ಕಾಫಿ ಮಾಡಿ ಅಲ್ಲಿ ಇಲ್ಲಿ " ಎಂದು ಅಡಿಗೆ ಮನೆಯಲ್ಲಿ ಜಾಹಿರಾತಿನ ಹಾಡನ್ನು ಗುನುಗುತ್ತಾ ಕಾಫಿ ಮಾಡಿ ಮುದ್ದಿನ ಮಡದಿಯ ಮುಂದೆ ತಂದಿಟ್ಟು " ತಗೋ ಮೈ ಡಿಯರ್ ಬಿಸಿ ಬಿಸಿ ಕಾಫಿ " ಎಂದು ಕೊಟ್ಟನು.


"ಥ್ಯಾಂಕ್ಯೂ ಭಾನು" ಎಂದವಳು ಕಾಫಿ ಹಿಡಿದು ಅವನ ಪಕ್ಕದಲ್ಲಿ ಕುಳಿತಳು..ಪ್ರತಿ ದಿನ ಒಟ್ಟಿಗೆ ಕುಳಿತು ಕಾಫಿ ಕುಡಿದು ಒಂದಿಷ್ಟು ಮಾತನಾಡಿ 30 ಕಿಲೋ ಮೀಟರ್ ದೂರದಲ್ಲಿ ಇರುವ ಕಾಲೇಜಿಗೆ ಹೋಗಿ ಬರುತ್ತಿದ್ದ ಮಡದಿಗೆ ಕೊಂಚ ಸಹಾಯ ಮಾಡುವ ಅವಕಾಶವನ್ನು ಅವನು ತಪ್ಪಿಸಿಕೊಳ್ಳುತ್ತಿರಲಿಲ್ಲ.ಮುಂಜಾನೆ ಕಾಫಿ ಮಾಡಿ ಅಡಿಗೆ ತಿಂಡಿಗೆ ಕೊಂಚ ಸಹಾಯ ಮಾಡಿ ತನ್ನ ಕೆಲಸಕ್ಕೆ ಸಿದ್ಧನಾಗುತ್ತಿದ್ದನು.


ಎಂದಿನಂತೆ ಅಂದು ಕೂಡ ಬೇಗ ಬೇಗ ಮನೆ ಕೆಲಸ ಮುಗಿಸಿ ತಿಂಡಿ ಅಡಿಗೆಯನ್ನು ತಯಾರಿಸಿ ತನ್ನ ಪತಿ ಭಾನು ಗೆ ತಿಳಿಸಿ ಕಾಲೇಜ್ ಕಡೆ ನಡೆದಳು.ಬಸ್ ಹತ್ತಿದವಳು ತನ್ನ ಬದುಕು ಬದಲಾದ ರೀತಿಯನ್ನು ನೆನಪಿಸಿಕೊಳ್ಳಲು ಆರಂಭಿಸಿದಳು.


ಮುಂದಿನ ನಿಲ್ದಾಣದಲ್ಲಿ ಹತ್ತಿದ ತನ್ನ ಸಹೋದ್ಯೋಗಿ ಕರೆದರು ಕೇಳಿದಷ್ಟು ಮುಳುಗಿ ಹೋಗಿದ್ದಳು.


" ಏನು ಮೇಡಂ ತುಂಬಾ ಯೋಚನೆ ಮಾಡ್ತಾ ಇದ್ದೀರಾ? ಬದುಕಿನಲಿ ನಿಮಗೇನು ಸಮಸ್ಯೆ ಇದೆ ಅಂತ ಇಷ್ಟು ಆಳವಾಗಿ ಯೋಚನೆ ಮಾಡ್ತಾ ಇದ್ದೀರಾ? ಅಷ್ಟು ಪ್ರೀತಿಸೋ , ನಿಮ್ಮ ಹೆಗಲಿಗೆ ಹೆಗಲಾಗಿ ಜೊತೆನೆಡೆಯುವ ಯಜಮಾನರು ಇರೋ ನಿಮಗೆ ಏನು ಯೋಚನೆ ಇರೋಕೆ ಸಾಧ್ಯ ಮಾಧುರ್ಯ ಮೇಡಂ. ನಂದು ಬರೀ ಗೋಳಿನ ಬದುಕು. ನಿಮ್ಮ ಹಾಗೆ ಆರಾಮ್ ಇಲ್ಲ.ನಿಮ್ಮ ಜೀವನದ ಬಗ್ಗೆ ತಿಳಿಯುವ ಕುತೂಹಲ ನನಗಂತೂ ತುಂಬಾ ಇದೆ.ಮದುವೆಯಾಗಿ ಪಿ ಎಚ್ ಡಿ ಪದವಿಗೆ ಓದಿ ಪ್ರಥಮ ಸ್ಥಾನ ಪಡೆದವರು ನೀವು .ಏನೇ ಹೇಳಿ ನೀವು ಸೂಪರ್ ನಿಮ್ಮ ಹೆಸರು ಸೂಪರ್.ನೀವು ತುಂಬಾ ಅದೃಷ್ಟವಂತರಪ್ಪ " ಎಂದವಳು ಮಾತಿಗೆ ಮುಗುಳುನಗೆ ಬೀರಿದಳು.

ಕಣ್ಣಿಗೆ ಬರುತ್ತಿದ್ದ ಕೂದಲನ್ನು ಹಿಂದಕ್ಕೆ ಸರಿಸುತ್ತಾ ತನ್ನ ಬದುಕಿನ ಬಗ್ಗೆ ಹೇಳ ಬಯಸಿ ಮಾತನ್ನು ಆರಂಭಿಸಿದಳು.


"ನನಗೆ ಮಾಧುರ್ಯ ಎಂಬ ಹೆಸರಿಟ್ಟಿದ್ದು ಅಪ್ಪ. ಎಲ್ಲರಂತೆ ನನಗೂ ಕೂಡ ನನ್ನ ಅಪ್ಪ ಹೀರೋ. ಹುಟ್ಟಿದ ಕೆಲ ತಿಂಗಳುಗಳಲ್ಲಿಯೇ ಅನಾರೋಗ್ಯದ ಕಾರಣದಿಂದ ತಾಯಿಯನ್ನು ಕಳೆದುಕೊಂಡೆ.ಆದರೆ ಎಂದಿಗೂ ಕೂಡ ತಾಯಿ ಇಲ್ಲ ಎಂಬ ಭಾವ ನನ್ನಲ್ಲಿ ಮೂಡದಂತೆ ನನ್ನ ತಂದೆ ನನ್ನನ್ನು ಬೆಳೆಸಿದ್ದಾರೆ. ನನ್ನ ಪ್ರತಿಯೊಂದು ಕಾರ್ಯಕ್ಕೆ ನನ್ನ ಅಪ್ಪನೇ ಸ್ಪೂರ್ತಿ.ಅವರೇ ನನ್ನ ಬೆನ್ನೆಲುಬು ನಾನು ಆಸೆಪಟ್ಟಿದ್ದನ್ನು ಎಂದಿಗೂ ಇಲ್ಲವೆಂದು ಹೇಳಿದವರಲ್ಲ.   

  

ನಾವು ಬಹಳ ಸಿರಿವಂತರೇನಲ್ಲ.ಮಧ್ಯಮ ವರ್ಗದ ಕುಟುಂಬ ನಮ್ಮದು. ಅಪ್ಪನಿಗೆ ಅಣ್ಣ ತಮ್ಮ ತಂಗಿ ಎಲ್ಲರೂ ಇದ್ದಾರೆ. ಅಮ್ಮ ಮರಳಿ ಬಾರದ ಊರಿಗೆ ಹೋದ ನಂತರ ಮನೆಯವರೆಲ್ಲರೂ ಅಪ್ಪನ ಬಳಿ ಮರುಮದುವೆಯ ಪ್ರಸ್ತಾಪ ಮಾಡಿದ್ದರಂತೆ. ಇನ್ನೊಂದು ಮದುವೆಯಾಗಲಾರೆ ಎಂದು ಅಪ್ಪ ತಮ್ಮ ದೃಢ ನಿರ್ಧಾರವನ್ನು ಮನೆಮಂದಿಗೆ ತಿಳಿಸಿದಾಗ ಮನೆಯವರು ನಮ್ಮಿಂದ ದೂರ ಉಳಿದರು.ಇನ್ನೊಂದು ಮದುವೆಯಾದರೆ ತಾಯಿಯಾಗಿ ಬರುವವಳು ನನ್ನನ್ನು ಸರಿಯಾಗಿ ನೋಡಿಕೊಳ್ಳಲಾರಳು ಎಂಬ ಭಾವನೆಯಿಂದ ನನಗಾಗಿ ಅಪ್ಪ ತನ್ನ ಮನೆಯವರನ್ನೆಲ್ಲಾ ದೂರ ಮಾಡಿಕೊಂಡರು. ಆದರೆ ದೂರದಲ್ಲಿದ್ದರೂ ನಮ್ಮ ಮನೆಯ ಆಗುಹೋಗುಗಳು ಅಕ್ಕ ಪಕ್ಕದ ಮನೆಯವರಿಂದ ನಮ್ಮ ಬಂಧು ಬಾಂಧವರೆನಿಸಿಕೊಂಡವರಿಗೆ ಗಾಳಿ ಮಾತಿನ ರೂಪದಲ್ಲಿ ಬಹಳ ವೇಗವಾಗಿ ತಲುಪುತ್ತಿತ್ತು.ಹಾಗಾಗಿ ನಾನು ಏನು ಮಾಡುತ್ತಿದ್ದೆ ಎಲ್ಲಿ ಹೋಗುತ್ತಿದ್ದೇನೆ ಎಂಬುದರ ಬಗ್ಗೆ ಗಮನಹರಿಸುವವರು ನನ್ನ ಸುತ್ತ ಬಹಳ ಮಂದಿ ಇದ್ದರು.

        

ನನಗೆ ಬಾಲ್ಯದಿಂದಲೂ ಶಿಕ್ಷಕಿ ಆಗಬೇಕೆಂಬ ಆಸೆ ಇತ್ತು. ಅದರಂತೆ ಅಪ್ಪನು ಕೂಡ ನನಗೆ ಟೀಚರ್ ಆಗಲು ಓದಬೇಕಾದ ಪದವಿಯನ್ನು ಓದಿಸಿದರು .ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದೆ. ಕೆಲಸಕ್ಕೆ ಸೇರಿದ ಒಂದೆರಡು ವರ್ಷದಲ್ಲಿ ನನಗೆ ಮದುವೆಗಾಗಿ ಅನೇಕ ಸಂಬಂಧಗಳ ಪ್ರಸ್ತಾಪ ಬಂದಿತ್ತು. ಅಪ್ಪ ನನ್ನನ್ನು ಮದುವೆಗೆ ಒಪ್ಪಿಸಲು ಹೇಳಿದ ಮಾತು ಹೀಗಿತ್ತು.


"ಮಧು ನಿನ್ನ ಮದುವೆ ನನ್ನ ಜವಾಬ್ದಾರಿ.ನೀನು ಎಂದಿಗೂ ನನಗೆ ಹೊರೆಯಲ್ಲ. ಆದರೆ ನನಗೂ ವಯಸ್ಸಾಗುತ್ತಾ ಬಂದಿದೆ ಜವಾಬ್ದಾರಿಯನ್ನು ಕೊಂಚ ಹಂಚಿಕೊಳ್ಳಲು ಬಯಸುತ್ತಿದ್ದೇನೆ. ಹಾಗಾಗಿ ನಿನಗೊಬ್ಬ ಸಂಗಾತಿಯನ್ನು ಹುಡುಕಿ ಮದುವೆ ಮಾಡಲು ಯೋಚಿಸಿದ್ದೇನೆ. ನಿನಗೆ ಒಪ್ಪಿಗೆಯಾಗುವ ಹುಡುಗನೊಂದಿಗೆ ಮದುವೆ ನಿಶ್ಚಯಿಸುತ್ತೇನೆ. ನಿನ್ನ ಅಮ್ಮ ನನ್ನನ್ನು ಬಿಟ್ಟು ಹೋಗುವಾಗ ನಿನ್ನನ್ನು ನನ್ನ ಜೊತೆಯಾಗಿಸಿದಳು. ಹಾಗೆ ನಿನಗೊಂದು ಜೊತೆ ಸಿಕ್ಕರೆ ನನ್ನ ಕಾಲ ಬಂದಾಗ ನಿನ್ನನ್ನು ಒಂಟಿ ಮಾಡಿ ಹೋಗುವ ಸಂದರ್ಭ ಬರಲಾರದು. ಯೋಚಿಸಿ ತಿಳಿಸು"ಎಂದ ಅಪ್ಪನ ಮಾತುಗಳು ಮನದಲ್ಲಿ ಒಂದು ರೀತಿಯ ನಡಕವನ್ನು ಸೃಷ್ಟಿಸಿತು. ಅಪ್ಪ ತೋರಿದ ಹುಡುಗನನ್ನು ಮದುವೆಯಾಗಿ ಅಪ್ಪನನ್ನು ಒಂಟಿಯಾಗಿಸಿ ಹೋಗಲು ಮನಸಿರಲಿಲ್ಲ.ಆದರೆ ನನಗಾಗಿ ಅಪ್ಪ ಏನನ್ನು ಇಲ್ಲವೆಂದವರಲ್ಲ. ಅಪ್ಪ ಕೇಳಿದ ಈ ಮಾತುಗಳಿಗೆ ನನಗೂ ಇಲ್ಲವೆನ್ನಲ್ಲಾಗಲಿಲ್ಲ. ಮದುವೆಗೆ ಒಪ್ಪಿದೆ .ಒಂದೊಳ್ಳೆ ವರನೊಂದಿಗೆ ನನ್ನ ವಿವಾಹವು ನೆರವೇರಿತು.ಆದರೆ ಭಗವಂತನ ನಿರ್ಣಯ ಬೇರೆದೇ ಆಗಿತ್ತು.ಮದುವೆಯಾದ ವರ್ಷದೊಳಗೆ ರಸ್ತೆ ಅಪಘಾತ ಒಂದರಲ್ಲಿ ನನ್ನವರನ್ನು ಕಳೆದುಕೊಂಡೆ. ನನ್ನೆಲ್ಲಾ ಬಂಧುಗಳು ಇವಳು ನತದೃಷ್ಟೆ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡಳು.ಕಟ್ಟಿಕೊಂಡ ಗಂಡನನ್ನು ಕಳೆದುಕೊಂಡಳು ಎಂದು ನನ್ನನ್ನು ಇರಿದು ಮಾತನಾಡಿಸಲು ಪ್ರಾರಂಭಿಸಿದರು.ಆದರೆ ನನ್ನ ಅಪ್ಪ ನೋವನ್ನು ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡು " ನಿನ್ನೊಂದಿಗೆ ನಾನಿರುವ ಮಗಳೇ..ಯಾವ ಮಾತಿಗೂ ತಲೆಕೆಡಿಸಿಕೊಳ್ಳಬೇಡ " ಎಂಬ ಧೈರ್ಯವನ್ನು ನೀಡುತ್ತಿದ್ದರು.ಗಂಡನ ಮನೆಯವರು ನನ್ನನು ಜೊತೆಗಿರಿಸಿಕೊಳ್ಳದಿದ್ದಾಗ ಪುನಃ ನನ್ನ ಜೊತೆ ನಿಂತಿದ್ದು ನನ್ನ ಅಪ್ಪ.. ತಾಯಿಯಂತೆ ಪೋಷಿಸಿ,ತಂದೆಯಾಗಿ ಸಲಹಿ,ಅಣ್ಣನಂತೆ ರಕ್ಷಿಸಿ, ಗುರುವಿನಂತೆ ಬೋಧಿಸಿ, ಸ್ನೇಹಿತನಾಗಿ ಸದಾ ನನ್ನೊಂದಿಗೆ ಇದ್ದವರು ನನ್ನ ಅಪ್ಪ.ಅಪ್ಪನ ಸಲಹೆಯಂತೆ ಮತ್ತೆ ಟೀಚರ್ ಕೆಲಸಕ್ಕೆ ಸೇರಿದೆ.ನನ್ನ ನೋವನು ಮರೆಯುವ ಪ್ರಯತ್ನವನ್ನು ಮಾಡುತ್ತಿದೆ.

 

 ಒಂದು ಸಂಜೆ ಸಮುದ್ರದ ದಡದಲ್ಲಿ ಕುಳಿತು ಮುಳುಗುವ ಸೂರ್ಯನನ್ನು ನೋಡುತ್ತಾ ಕಳೆದು ಹೋಗಿದ್ದೆ. ಒಂದು ಕ್ಷಣ ಬದುಕಿನಲ್ಲಿ ನಡೆದ ಎಲ್ಲಾ ಘಟನೆಗಳನ್ನು ನೆನೆದು ಕಣ್ಣಂಚಲ್ಲಿ ಕಂಬನಿ ಮೂಡಿರುವುದನ್ನು ಅಪ್ಪ ಗಮನಿಸಿದರು. ಏನಾಯಿತೆಂದು ಕೇಳಲಿಲ್ಲ. ಆ ಪ್ರಶ್ನೆಗೆ ಉತ್ತರವೂ ಇಲ್ಲ. ಅನೇಕ ಬಾರಿ ಮರು ಮದುವೆಯ ಬಗ್ಗೆ ಪ್ರಸ್ತಾಪಿಸಿ ಅಪ್ಪ ಸೋತು ಹೋಗಿದ್ದರು. ಮತ್ತೆ ಮತ್ತೆ ಮರು ಮದುವೆಯ ಮಾತುಗಳನ್ನು ಕೇಳುವಾಗ ಮನದ ಮೂಲೆಯಲ್ಲಿ ಮನದ ಭಾವನೆ ಹಂಚ್ಚಿಕೊಳ್ಳಲು ಜೊತೆಗಾರ ಬೇಕು ಅನಿಸುತ್ತಿತ್ತು.ಆದರೆ ಮತ್ತೊಮ್ಮೆ ಪೆಟ್ಟು ಬೀಳುವುದೆಂಬ ಭಯದಿಂದ ಸುಮ್ಮನಾಗುತ್ತಿದೆ.


"ಯೋಚಿಸ ಬೇಡ ಮಗಳೇ, ಪ್ರತಿ ಬಾರಿ ದೇವರು ಕ್ರೂರಿ ಆಗಲಾರ.ಒಳ್ಳೆಯ ಸಂಗಾತಿಯನ್ನು ಮತ್ತೊಮ್ಮೆ ಆರಿಸುವೆ ನಿನ್ನನು ಗುರಿ ತಲುಪಿಸುವೆ. ಭದ್ರ ನೆಲೆಯನ್ನು ಒದಗಿಸುವೆ.ಹೇಳುವವರ ಮಾತಿಗೆ ಕಿವಿಗೊಡಬೇಡ ನಿನ್ನ ಬದುಕನ್ನು ನೀನು ಬದುಕಬೇಕು.ನಾನು ಬದುಕಿರುವಷ್ಟು ದಿವಸ ನಿನ್ನೊಂದಿಗೆ ದೈರ್ಯಕ್ಕೆ ನಾನಿದ್ದೇನೆ.ಏನೇ ಬರಲಿ ಎಂದಿಗೂ ಜೊತೆಯಾಗಿ ಸಾಗೋಣ ಎಂದು ಹೇಳುವವನನ್ನು ನಿನಗಾಗಿ ಅನ್ವೇಷಿಸುವೆ ಎಂದರು.ನನಗಾಗಿ ಅನ್ವೇಷಣೆ ನಡೆಸಿದರು.ಆ ಅನ್ವೇಷಣೆಯ ಫಲವೇ ಭಾನುಪ್ರಕಾಶ್.


ನನ್ನ ಬದುಕಿಗೆ ಬಣ್ಣ ತುಂಬಿದವರು ಭಾನುಪ್ರಕಾಶ್.ಅಪ್ಪ ನನಗಾಗಿ ಆರಿಸಿದ ವರ.ಭಾನು ನನ್ನ ಬದುಕಿನಲ್ಲಿ ಬಂದ ಗಳಿಗೆಯಿಂದ ನನ್ನ ಬದುಕು ಹೊಸ ಹಾದಿಯಲ್ಲಿ ಬದಲಾಯಿತು. ಭಾನು ನನ್ನನ್ನು ಪಿ ಎಚ್ ಡಿ ಗೆ ಸೇರಿ ವೃತ್ತಿ ಬದುಕಿನಲ್ಲಿ ಮೇಲೇಕೆ ಏರಲು ಪ್ರೋತ್ಸಾಹಿಸಿ ಬೆಳೆಸಿದರು. ಅಪ್ಪನಿಂದ ಟೇಚರ್ ಆದವಳು ಗಂಡನಿಂದ ಪ್ರೋಫೆಸರ್ ಆದೆ.ನೀವಂದುಕೊಂಡಂತೆ ನಾನು ಪೂರ್ತಿ ಸುಖವಾಗಿದ್ದವಳಲ್ಲ. ಬದುಕಿನಲ್ಲಿ ಏರಿಳಿತ ಕಂಡವಳು ನಾನು" ಎನ್ನುತ್ತಾ ನಗು ಬೀರಿದಳು.ಅದೇ ವೇಳೆಗೆ ತಾವು ಇಳಿಯುವ ಜಾಗ ಬಂದಿದ್ದ ಕಾರಣ ಇಳಿಯಲು ಸಿದ್ದರಾದರು.ಬಸ್ಸ ನಿಂತಿತು.ಇಬ್ಬರು ಕೆಳಗಿಳಿದರು.


ಬದಲಾದ ಬದುಕಿಗೆ ಹೊಸ ಹಾದಿಯಲ್ಲಿ ಮುನ್ನುಡಿ ಬರೆದ ಅಪ್ಪನನ್ನು ಹಾಗು ಕಣ್ಣ ರೆಪ್ಪೆಯಂತೆ ಕಾಯುತ್ತಿರುವ ಪತಿಯನ್ನು ನೆನೆದು ದೇವರನ್ನು ಸ್ಮರಿಸಿಕೊಳುತ್ತಾ ಅವರಿಬ್ಬರಿಗೂ ಮನದಲಿ ಆಯಸ್ಸು ಆರೋಗ್ಯ ಕೊಡುವಂತೆ ಪ್ರಾರ್ಥಿಸುತ್ತಾ ತನ್ನ ಕೆಲಸಕ್ಕೆ ನಡೆದಳು.


ನಗುತ್ತಾ ಇರುವವರ ಬದುಕಿನಲ್ಲಿ ನೋವಿರಲಾರದು ಎಂಬ ತನ್ನ ಕಲ್ಪನೆಯನ್ನು ಪ್ರಶ್ನೆ ಕೇಳುವ ಮೂಲಕ ಮಾಧುರ್ಯಾಳ ಬದುಕಿನ ವೃತ್ತಾಂತದಿಂದ ಅರಿತು ಮನದಲಿ ನೊಂದು ತನ್ನ ಕೆಲಸದ ಕಡೆ ಗಮನ ಹರಿಸಲಾಗದೆ ತೊಳಲಾಡುತ್ತಿದ್ದವಳಿಗೆ ಮಾಧುರ್ಯ ಸಹಾಯ ಮಾಡಿದಳು.


Rate this content
Log in

Similar kannada story from Abstract