Ashritha Kiran ✍️ಆಕೆ

Classics Inspirational Others

4  

Ashritha Kiran ✍️ಆಕೆ

Classics Inspirational Others

ವಿಧಿಯ ಆಟ ಕಲಿಸಿತು ಪಾಠ ಭಾಗ 2

ವಿಧಿಯ ಆಟ ಕಲಿಸಿತು ಪಾಠ ಭಾಗ 2

3 mins
289


ಸಣ್ಣಕ್ಕನ ಮದುವೆಯ ನಂತರ ಜೋಯಿಸರು ನಮ್ಮ ಮನೆಗೆ ಬರುತ್ತಿರಲ್ಲಿಲ್ಲ.. ಕಲಿಯುವವರು ನಾವಿಬ್ಬರೇ ಆಗಿದ್ದ ಕಾರಣ ಅಲ್ಲಿಯ ಸಮೀಪದಲ್ಲಿದ್ದ ಇನ್ನೊಂದು ಮನೆಗೆ ಹೇಳಿಕೊಡಲು ಬರುತ್ತಿದ್ದರು.ಆ ಮನೆಗೆ ನಾವೇ ಹೋಗಿ ನಿತ್ಯದ ಪಾಠವನ್ನು ಕಲಿತು ಬರುತ್ತಿದ್ದೆವು.. ದೊಡ್ಡಕ್ಕನಿಗೆ ಹೆರಿಗೆಯ ದಿನ ಹತ್ತಿರವಾಗುತ್ತಿದೆ ಎಂದು ಮನೆಯಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದೆ. ಇದ್ದಕ್ಕಿದ್ದ ಹಾಗೆ ರಾತ್ರಿ ಮಲಗಿದ ಅಕ್ಕ" ಅಮ್ಮ" ಎಂದು ಬೊಬ್ಬೆ ಇಡಲು ಶುರು ಮಾಡಿದಳು.. ಅವಳು ಪಕ್ಕದಲ್ಲಿಯೇ ಮಲಗುತ್ತಿದ್ದ ಅಮ್ಮ ನಮ್ಮ ಮನೆಯಿಂದ ನಾಲ್ಕು ಮನೆ ಆಚೆ ಇದ್ದ ಸೂಲಗಿತ್ತಿ ಸೀತಮ್ಮನನ್ನು ಬರಲು ಹೇಳಿ ಕಳುಹಿಸಿದರು.. ಅಪ್ಪಯ್ಯ ಹೋಗಿ ಕರೆದುಕೊಂಡು ಬಂದರು.. ಮನೆಯಲ್ಲಿ ದೀಪದ ಬೆಳಕಿನಲ್ಲಿ ಅಕ್ಕನಿಗೆ ಮಗುವಾಯಿತು. ಆದರೆ ಆ ಕೋಣೆಗೆ ಯಾರನ್ನು ಹೋಗಲು ಬಿಡುತ್ತಿರಲಿಲ್ಲ.. ಅಮ್ಮ ಮಗುವನ್ನು ಕರೆತಂದು ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಪುನಃ ಆ ಕೋಣೆಯಲ್ಲಿ ಮಲಗಿಸಿ ಬಿಟ್ಟರೆ ಅಕ್ಕನು ಸಹ ಅದೇ ಕತ್ತಲ ಕೋಣೆಯಲ್ಲಿ ಮಲಗಬೇಕಿತ್ತು.. ಕೇಳಿದರೆ ಹಸುಗುಸು ನಂಜಾದರೆ ಕಷ್ಟ ಒಳ ಹೋಗಬೇಡ ಎಂದು ಹೇಳುತ್ತಿದ್ದರು ಪಾಪುಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅಕ್ಕನ ಗಂಡನ ಮನೆಯವರು ಬಂದು ಅವಳನ್ನು ಕರೆದುಕೊಂಡು ಹೋದರು..

  

 ಸಣ್ಣಕ್ಕನ ಮದುವೆಯಾದ ನಂತರ ನಾನು ಅರ್ಧ ಒಂಟಿಯಾಗಿದ್ದೆ.ಆದರೆ ಅದೇ ಸಮಯದಲ್ಲಿ ಹೆರಿಗೆಗೆ ದೊಡ್ಡ ಅಕ್ಕ ಬಂದ ಕಾರಣ ಅಷ್ಟು ಬೇಸರವೆನಿಸಲಿಲ್ಲ ಇದೀಗ ದೊಡ್ಡ ಅಕ್ಕನು ಹೊರಟು ಹೋದಳು. ನಾನು ತಮ್ಮ ಇಬ್ಬರೇ ಮನೆಯಲ್ಲಿ ಉಳಿಯಬೇಕಾಯಿತು. ನಾವಿಬ್ಬರೂ ಕುಂಟೆಬಿಲ್ಲೆ ಐಸ್ ಪೈಸ್ ಆಟವಾಡುತ್ತಾ ಕಾಲ ಕಳೆಯುತ್ತಿದ್ದೆವು... ಮುಂಜಾನೆ ಎದ್ದು ಹಸುಗಳನ್ನು ಹೊಡೆದುಕೊಂಡು ಮೇಯಿಸಲು ಹೋಗುತ್ತಿದ್ದೆವು.. ಆಗೆಲ್ಲ ಪ್ರತಿಯೊಂದು ಮನೆಯಿಂದಲೂ ಇಬ್ಬರು ಮಕ್ಕಳು ಹಸುವನ್ನು ಮೇಯಿಸಲು ಬರುತ್ತಿದ್ದ ಕಾರಣ ಹಸುಗಳ ಕಡೆ ಗಮನ ಕೊಡುತ್ತಾ ನಾವೆಲ್ಲರೂ ಸೇರಿ ಆಟವಾಡುತ್ತಿದ್ದೆವು.. ದಿನಗಳು ಉರುಳಿದವು..


ನಾನು ಬಹಳ ತುಂಟಿ .. ಸುತ್ತಮುತ್ತದವರು ಆದಷ್ಟು ಬೇಗ ನಿನಗೊಂದು ಮದುವೆ ಆಗಬೇಕು ಈ ತುಂಟತನವೆಲ್ಲ ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದರು.. ಅಪ್ಪಯ್ಯನಿಗೂ ನನಗೊಂದು ಮದುವೆ ಮಾಡಿದರೆ ಮೂವರು ಹೆಣ್ಣು ಮಕ್ಕಳ ಜವಾಬ್ದಾರಿ ಕಡಿಮೆ ಮಾಡಿಕೊಂಡಂತೆ ಎಂದನಿಸಿ ನನಗಾಗಿ ವರ ಅನ್ವೇಷಣೆ ಆರಂಭಿಸಿದರು... ನನಗಾಗ ಒಂಬತ್ತು ವರ್ಷ.. ಅಮ್ಮ ಪ್ರತಿನಿತ್ಯ ತಲೆಗೆ ಹರಳೆಣ್ಣೆ ಹಾಕಿ ಬಾಚುತ್ತಿದ್ದ ಕಾರಣ ಕಪ್ಪಾದ ದಪ್ಪನೆಯ ನೀಳವಾದ ಜಡೆ ನನ್ನದಾಗಿತ್ತು.. ದನ ಕರುವನ್ನು ಮೇಯಿಸಲು ಹೋದಾಗ ಅಲ್ಲಿ ಸೇರುತ್ತಿದ್ದ ಸ್ನೇಹಿತರೆಲ್ಲಾ "ಒಂದು ವೇಳೆ ದನಕ್ಕೆ ಕಟ್ಟುವ ಹಗ್ಗ ತುಂಡಾದರೆ ಗೌರಿಯ ಜಡೆ ಇದೆ ಅದನ್ನೇ ಕತ್ತರಿಸಿ ದನವನ್ನು ಕಟ್ಟಿಕೊಂಡು ಹೋಗಬಹುದು" ಎಂದು ರೇಗಿಸುತ್ತಿದ್ದರು.. ನನ್ನದು ಗೋಧಿ ಬಣ್ಣ .ನೋಡಲು ಅಂತಹ ಸುಂದರಿ ಅಲ್ಲದಿದ್ದರೂ ನನ್ನನ್ನು ನೋಡಿದವರು ಲಕ್ಷಣವಾಗಿದ್ದಿ ಎಂದು ಹೊಗಳುತ್ತಿದ್ದರು... ನನಗೆ ಕೈ ತುಂಬಾ ಬಳೆ ಇಡುವುದು ತುಂಬಾ ಇಷ್ಟ ಅಪ್ಪಯ್ಯ ಮನೆಯ ಬಾಗಿಲಿಗೆ ಬರುತ್ತಿದ್ದ ಬಳೆಗಾರನ ಬಳಿ ಪ್ರತಿ ಬಾರಿ ಕೈ ತುಂಬಾ ಬಳೆಯನ್ನು ಇಡಿಸುತ್ತಿದ್ದರು.. ಅದೇ ಊರಿನ ನಮ್ಮದೇ ದೂರ ಸಂಬಂಧಿಯೊಬ್ಬರ ಮೂಲಕ ನನಗೊಂದು ಗಂಡು ಗೊತ್ತಾಯಿತು.. ಆದರೆ ಮದುವೆ ಎಂದರೇನು ಮದುವೆ ಯಾಕಾಗುತ್ತಾರೆ ಎಂಬ ಯಾವ ವಿಚಾರವೂ ತಿಳಿಯದ ವಯಸ್ಸು ನನ್ನದು.. ಮದುವೆ ಎಂಬುದು ನನ್ನ ಮಟ್ಟಿಗೆ ಮನೆಯಲ್ಲಿ ಹಬ್ಬದ ವಾತಾವರಣವಿದ್ದಂತಿತ್ತು. ಬಗೆ ಬಗೆಯ ತಿಂಡಿ ತಿನಿಸುಗಳಿದ್ದವು. ಹೂವಿನಿಂದ ಅಲಂಕಾರ ಮಾಡಿದ್ದರು ಅಲ್ಲಿವರೆಗೆ ಸಾಧಾರಣವಾದ ಉಡುಗೆ ತೊಡೆಗೆ ಹಾಕುತ್ತಿದ್ದ ನನಗೆ ಸ್ವಲ್ಪ ಒಳ್ಳೆಯ ಸೀರೆಯನ್ನು ಉಡಿಸಿ ನನ್ನ ಉದ್ದವಾದ ಜಡೆಗೆ ಮೊಗ್ಗಿನ ಜಡೆಯನ್ನು ಹೆಣೆದು ಒಪ್ಪವಾಗಿ ಅಲಂಕಾರ ಮಾಡಿ ಮಂಟಪದಲ್ಲಿ ಕೂರಿಸಿದರು.. ನನಗಿಂತ ಕೊಂಚ ಎತ್ತರವಾದ ಹುಡುಗನನ್ನು ನನ್ನ ಪಕ್ಕದಲ್ಲಿ ಕೂರಿಸಿ ಅವನ ಕೈಯಲ್ಲಿ ತುದಿಯಲ್ಲಿ ಅರಿಶಿನದ ಕೊಂಬನ್ನು ಹೊಂದಿದ್ದ ಅರಿಶಿಣದ ದಾರವನ್ನು ನನ್ನ ಕೊರಳಿಗೆ ಕಟ್ಟಿಸಿದರು. ಆ ಸಮಯದಲ್ಲಿ ಅದೇನೆಂದು ತಿಳಿದಿರಲಿಲ್ಲ.. ಮದುವೆಯ ಸಂಭ್ರಮ ಮುಗಿಯಿತು ಮದುವೆಗೆಂದು ಬಂದವರು ಮರಳಿ ಮನೆಗೆ ಹೋದರು.ಕೊರಳಲ್ಲಿರುವುದು ಏನೆಂದು ಅಮ್ಮನನ್ನು ಕೇಳಿದಾಗ ಅದು ತಾಳಿ ನೀನು ಸಾಯುವವರೆಗೂ ಅದನ್ನು ತೆಗೆದು ಇಡಬಾರದು ಎಂದು ಹೇಳಿದರಷ್ಟೇ... ಒಂದು ವಾರದ ನಂತರ ಒಂದು ರೇಷ್ಮೆ ದಾರದಲ್ಲಿ ಕರಿಮಣಿಗಳನ್ನು ಪೋಣಿಸುವಂತೆ ಹೇಳಿ ಅರಿಶಿನದ ದಾರದ ಬದಲು ಅದನ್ನು ಹಾಕುವಂತೆ ಗಂಡನ ಬಳಿ ಹೇಳಿದರು.. ಕರಿಮಣಿಯಶಾಸ್ತ್ರ ಮುಗಿಯುತ್ತಿದ್ದಂತೆ ಪುನಃ ಬಂದವರು ಪೂಜೆ ಮುಗಿದ ನಂತರ ಅವರವರ ಮನೆಗೆ ಹೋದರು..

   

ಈಗ ಶುರುವಾಯಿತು ಅಮ್ಮನ ರಗಳೆ.. ಇಷ್ಟು ದಿನ ಇಡೀ ಊರನ್ನು ಆರಾಮವಾಗಿ ಸುತ್ತಿಕೊಂಡು ಬರುತ್ತಿದ್ದವಳನ್ನು ಹಾಗೆಲ್ಲ ಸುತ್ತ ಬಾರದೆಂದು ಮನೆಯಲ್ಲಿಯೇ ಇರಬೇಕೆಂದು ಹೇಳುತ್ತಿದ್ದರು. ತಮ್ಮನೊಂದಿಗೆ ಕುಂಟೆಬಿಲ್ಲೆ ಮರಕೋತಿ ಆಟವನ್ನು ಆಡಲು ಹೋದರೆ ಈ ಆಟಗಳನ್ನೆಲ್ಲ ಇನ್ನು ನೀನು ಆಡುವಂತಿಲ್ಲ ನಿನಗೆ ಮದುವೆಯಾಗಿದೆ ಎಂದು ಬೈಯುತ್ತಿದ್ದರು.. ಆಗ ನನಗೆ ನನ್ನ ಸಣ್ಣಕ್ಕ ಮದುವೆಯಾಗಿ ಮನೆಯಲ್ಲಿದ್ದ ದಿನಗಳು ನೆನಪಿಗೆ ಬರುತ್ತಿತ್ತು.. ನೆರೆಮನೆಯ ಪಾಠಕ್ಕೆ ಹೋಗುತ್ತಿದ್ದ ನನ್ನನ್ನು ಹೋಗದಂತೆ ಹೇಳಿದ್ದರು.ತಮ್ಮನಿಗೆ ಹೇಳಿಕೊಡುತ್ತಿದ್ದ ಪಾಠವನ್ನು ಪ್ರತಿದಿನ ಅವನ ಮನೆಗೆ ಬಂದ ನಂತರ ಹೇಳಿಸಿಕೊಳ್ಳುತ್ತಿದ್ದೆ.. ಮದುವೆಯಾದ ಹೆಣ್ಣಿಗೆ ಇದರ ಅಗತ್ಯವಿಲ್ಲವೆಂದು ಮನೆ ಕೆಲಸವನ್ನು ಕಲಿಯೆಂದು ಬೈದು ಅಮ್ಮ ಮನೆ ಕೆಲಸವನ್ನು ಕಲಿಸುತ್ತಿದ್ದಳು...


ಒಂಬತ್ತನೇ ವಯಸ್ಸಿಗೆ ಕಾಲಿಟ್ಟಾಗ ನನ್ನ ಮದುವೆಯಾಗಿದ್ದು.. 9 ರಿಂದ 14 ವರುಷದವರೆಗು ಅಮ್ಮನ ಮನೆಯಲ್ಲಿಯೇ ಆರಾಮ್ ಆಗಿ ಕಾಲ ಕಳೆಯುತ್ತಿದ್ದೆ.. ಇದ್ದಕ್ಕಿದ್ದಂತೆ ಒಂದು ಮುಂಜಾನೆ ಅಸಾಧ್ಯವಾದ ಹೊಟ್ಟೆ ನೋವು ಕಾಣಿಸಿತು ಅಮ್ಮನನ್ನು ಕೂಗಿ ಕರೆದೆ.. ಅಳುತ್ತಾ ಬಾಗಿಲಲ್ಲಿ ನಿಂತೆ.. ರಕ್ತಸ್ರಾವವಾಗುತ್ತಿರುವ ವಿಚಾರ ತಿಳಿಸಿದೆ..ಹೆದರಿಕೆಯಿಂದ ನಲುಗಿ ಹೋಗಿದ್ದೆ.. ವಿಚಾರ ಕೇಳುತ್ತಿದ್ದಂತೆ ದೂರ ನಿಲ್ಲು ಎಂದು ಗದರಿ ಬರಬರನೆ ಒಳ ಹೋಗಿ ಅವಳ ಒಂದು ಸೀರೆಯನ್ನು ತಂದು ದೂರದಲ್ಲಿಟ್ಟು ಇದನ್ನು ಹರಿದು ಇಟ್ಟುಕೊಳ್ಳುವಂತೆ ತಿಳಿಸಿದಳು.. ಇನ್ನು ಮೂರು ದಿನ ದನದ ಕೊಟ್ಟಿಗೆಯ ಬಳಿ ಗೋಣಿಚೀಲ ಹಾಕಿ ಮಲಗಬೇಕು ಮನೆ ಒಳಗೆ ಬರುವಂತಿಲ್ಲ ಎಂದು ತಿಳಿಸಿದಳು.. ವಿಚಾರ ತಿಳಿಯುತ್ತಿದ್ದಂತೆ ನನ್ನ ಗಂಡನ ಮನೆಯವರಿಗೆ ಅಪ್ಪ ವಿಷಯ ಮುಟ್ಟಿಸಿದರು...

   

 ಅಮ್ಮ ಮನೆಯ ಒಳಗಿನ ಕೆಲಸವನ್ನು ಮುಗಿಸಿ ತೋಟಕೆಂದು ಹೊರ ಹೋಗುವಾಗ ಎರಡು ತಂಬಿಗೆ ನೀರು ಇಟ್ಟು ಹೊರ ಹೋಗುತ್ತಿದ್ದಳು...ಅಸಾಧ್ಯವಾದ ನೋವು ತಡೆಯಲಾಗುತ್ತಿರಲ್ಲಿಲ್ಲ.. ಕುಡಿಯಲು ನೀರು ಖಾಲಿಯಾದರೂ ಕೊಡಲು ಮನೆಯಲ್ಲಿ ಬೇರೆ ಯಾರು ಇರುತ್ತಿರಲ್ಲಿಲ್ಲ.. ದೇವರೇ ಯಾಕಾಗಿ ನನಗೆ ಈ ಶಿಕ್ಷೆ ಎಂದು ಅಳುತ್ತಾ ಮಲಗುತ್ತಿದ್ದೆ.. ಗೋಡೆ ಬದಿಯಲ್ಲಿ ಹರಿದಾಡುವ ಇರುವೆಗಳು ಒಮ್ಮೊಮ್ಮೆ ಕಚ್ಚಿ ಮೈಕೈಯನ್ನು ಕೆಂಪು ಮಾಡುತ್ತಿದ್ದವು.. ಅಂತೂ ಮೂರು ದಿನ ಕಳೆಯಿತು ಅಕ್ಕನಿಗೆ ಮಾಡಿದಂತೆ ನಾಲ್ಕನೇ ದಿನಕ್ಕೆ ಸ್ನಾನ ಮಾಡಿಸಿ ಆರತಿ ಮಾಡಿ ಸಿಹಿ ತಿನಿಸುಗಳನ್ನು ಕೊಟ್ಟು ಉಪಚರಿಸಿದರು... ಇದಾಗಿ ಒಂದು ವಾರಕ್ಕೆ ಗಂಡನ ಮನೆಗೆ ಹೊರಡಬೇಕೆಂದು ಅಮ್ಮ ಹೇಳುತ್ತಲೇ ಇದ್ದಳು... ಆ ಮನೆಯಲ್ಲಿ ಹೇಗಿರಬೇಕು ಹೇಗಿರಬಾರದು ಎಂಬ ಎಲ್ಲಾ ವಿಚಾರವನ್ನು ಸಮಯ ಸಿಕ್ಕಾಗೆಲ್ಲ ಅಮ್ಮ ಕಲಿಸುತ್ತಿದ್ದಳು...

   

ಮುಂಚಿನ ಹುಡುಗಾಟದ ಬುದ್ದಿ ಈಗ ನನ್ನಲ್ಲಿ ಇರಲಿಲ್ಲ ಪ್ರಬುದ್ಧ ಹೆಣ್ಣಿನಂತೆ ವರ್ತಿಸುತ್ತಿದ್ದೆ.. ಇಬ್ಬರು ಅಕ್ಕಂದಿರನ್ನು ಕಳುಹಿಸಿದಂತೆ ನನ್ನನ್ನು ಕಳುಹಿಸುವ ಆ ದಿನ ಬಂದೇ ಬಿಟ್ಟಿತು.ಗಂಡನ ಮನಗೆ ಹೊರಡುವ ತಯಾರಿ ನಡೆಸಿಕೊಂಡೆವು..ಅದೇ ಸಮಯಕ್ಕೆ ನನ್ನ ಸಣ್ಣಕ್ಕ ಹೆರಿಗೆಗೆ ತವರಿಗೆ ಬಂದಳು.. ವಿಧಿ ನನ್ನ ಪಾಲಿಗೆ ಬೇರೆಯ ಬದುಕನ್ನು ನಿರ್ಧಾರ ಮಾಡಿತ್ತು...


ಮುಂದುವರೆಯುವುದು....


Rate this content
Log in

Similar kannada story from Classics