Rashmi R Kotian

Horror Fantasy

4.1  

Rashmi R Kotian

Horror Fantasy

ದೆವ್ವಗಳ ಮದುವೆ

ದೆವ್ವಗಳ ಮದುವೆ

2 mins
1.1K


       ನನಗೂ ಹಾಗೂ ನನ್ನಿಬ್ಬರು ಸ್ನೇಹಿತರಿಗಾದ ಅನುಭವವಿದು. ಅಂದೊಂದು ರಾತ್ರಿ ನಾವೆಲ್ಲರೂ ಕಡಲಬದಿಯಲ್ಲಿ ಪಾರ್ಟಿ ಮಾಡುತ್ತಿದ್ವಿ. ಆದಿನ ಅಮಾವಾಸ್ಯೆ. ನಾವು ಮೂವರು ಸ್ನೇಹಿತರು ನಮ್ಮ ಊರಿನ ಕಡಲಬದಿಯ ರೋಡಿನಲ್ಲಿ ನಡೆದುಕೊಂಡು ಬರುತ್ತಾ ಇದ್ವಿ. ಆಗ ರೋಡಿನ ಬದಿಯಲ್ಲೇ ಇದ್ದ ನನ್ನ ಸ್ನೇಹಿತ ರಾಘವೇಂದ್ರನ ಮನೆಯ ಹೊರಗಡೆ ಎಡಬದಿಯಲ್ಲಿ ಕತ್ತಲೆಯಲ್ಲಿ ಯಾರೋ ಹುಡುಗ ನಿಂತುಕೊಂಡಿರುವಂತೆ ಕಾಣಿಸಿತು!!

                ನಮಗ್ಯಾಕೋ ರಾಘುವನ್ನೇ ನೋಡಿದ ಹಾಗನಿಸಿ "ರಾಘು ರಾಘು ಎಂದು ದೂರದಿಂದ ಕರೆದೆವು. ಆದರೆ ನಿಂತುಕೊಂಡ ಆ ಹುಡುಗ ಏನೂ ಪ್ರತಿಕ್ರಿಯಿಸಲಿಲ್ಲ!!

                 ಗಂಟೆ 12 ಆಗಿತ್ತು. ನಾವು ಮತ್ತೆ " ರಾಘು ರಾಘು " ಎಂದು ಗಟ್ಟಿಯಾಗಿ ಕರೆದೆವು ಆದರೆ ಎಷ್ಟೇ ಗಟ್ಟಿಯಾಗಿ ಕರೆದರೂ ಸುಮ್ಮನೆ ನಿಂತುಕೊಂಡ ಆ ಹುಡುಗ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ನಮಗೆ ಕತ್ತಲೆಯಲ್ಲಿ ಆ ಹುಡುಗನ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದ್ರೆ ಒಬ್ಬ ಹುಡುಗ ಶಾಂತವಾಗಿ ನಿಂತಿರುವುದು ಸರಿಯಾಗಿ ಕಾಣಿಸುತ್ತಿತ್ತು. ನಾವು ಅಷ್ಟು ಗಟ್ಟಿ ಕೂಗಿದರೂ ಪ್ರತ್ರಿಕ್ರಿಯೆ ಬಾರದಿದ್ದಾಗ ನಮಗೆ ಭಯವಾಗಿ ನಾವಲ್ಲಿಂದ ಓಡಿದೆವು.

                      ಮರುದಿನ ಬೆಳಿಗ್ಗೆ ರಾಘವೇಂದ್ರ ಸಿಕ್ಕಿದಾಗ ಅವನ ಬಳಿ ರಾತ್ರಿ ನಾವು 12 ಗಂಟೆಗೆ ಮನೆಯ ಬಳಿ ನಿಂತಿದ್ದ ಅವನನ್ನು ಕರೆದಾಗ ಅವ್ನು ಏಕೆ ಪ್ರತಿಕ್ರಿಯಿಸಲಿಲ್ಲ ಎಂದು ಕೇಳಿದೆವು. ಆದರೆ ಅವನು ತಾನು 9 ಗಂಟೆಗೇ ಮಲಗಿರುವುದಾಗಿ, ಹೊರಗಡೆ ಬಂದಿಲ್ಲದಿರುವುದಾಗಿ ಹೇಳಿದಾಗ ನಮಗೆ ಆಶ್ಚರ್ಯವಾಗಿತ್ತು. ನಾವು ರಾತ್ರಿ ನಡೆದ ಘಟನೆಯನ್ನು ಅವನಿಗೆ ವಿವರಿಸಿದಾಗ ಅವನು ಹೇಳಿದ್ದ,

" ಅದು ನನ್ನ ತಮ್ಮ. ಮನೆಯ ಅಕ್ಕಪಕ್ಕದಲ್ಲೇ ಇರುತ್ತಾನೆ. ಮನೆಯಲ್ಲೇ ಇರುತ್ತಾನೆ" ಎಂದಾಗ ನಮಗೆ ಆಶ್ಚರ್ಯವಾಗಿತ್ತು.

"ತಮ್ಮನಾ?" ಎಂದು ಉದ್ಗಾರವೆಳೆದಿದ್ದೆವು. ಏಕೆಂದರೆ ರಾಘವೇಂದ್ರನಿಗೆ ನಮಗೆ ತಿಳಿದಿರುವ ಪ್ರಕಾರ ತಮ್ಮ ಇರಲಿಲ್ಲ. ನಂತರ ಅವನು ಹೇಳಿದ ಮಾತು ಕೇಳಿ ನಮಗೆ ಭಯವಾಗಿತ್ತು.

       " ನನ್ನ ತಮ್ಮ ನಾನು ಚಿಕ್ಕವನಿರುವಾಗಲೆ ಪುಟ್ಟ ಒಂದೂವರೆ ವರ್ಷದ ಮಗುವಿರುವಾಗ ಏನೋ ಖಾಯಿಲೆ ಬಂದು ಸತ್ತು ಹೋದ. ಅವನ ಆತ್ಮ ಮನೆಯಲ್ಲೇ ಇದೆಯಂತೆ." ಎಂದು ಹೇಳಿದಾಗ ಮತ್ತೆ ನಮಗೆ ಅಚ್ಚರಿಯಾಗಿತ್ತು. ಏಕೆಂದರೆ ಸತ್ತಿದ್ದದು ಒಂದೂವರೆ ವರ್ಷದ ಮಗು ಆದರೆ ನಾವು ನೋಡಿದ್ದು ಅಷ್ಟು ದೊಡ್ಡ ಹುಡುಗನನ್ನು . ನನಗೆ ವಿಚಿತ್ರವೆನಿಸಿ ಕೇಳಿದ್ದೆ.

" ಆದ್ರೆ ನಾವು ನೋಡಿದ್ದು ಒಂದೂವರೆ ವರ್ಷದ ಮಗುವನ್ನಲ್ಲ"

" ಅಯ್ಯೋ .. ಆತ್ಮಗಳು ದೊಡ್ಡವರಾಗುತ್ತವೆ. ಅವುಗಳು ವಯಸ್ಸಿಗೆ ಬಂದಾಗ ಅವುಗಳಿಗೆ ಮದುವೆ ಕೂಡ ಮಾಡಿಸುವ ಪದ್ಧತಿಯಿದೆ. ವಯಸ್ಸಲ್ಲದ ವಯಸ್ಸಿಗೆ ಅಕಾಲಿಕವಾಗಿ ಆಕಸ್ಮಿಕವಾಗಿ ಬಾಲ್ಯವಸ್ಥೆಯಲ್ಲಿ ಸತ್ತವರು ತಮ್ಮ ಪೂರ್ಣ ಆಯಸ್ಸು ತಲುಪುವ ವರೆಗೂ ಆತ್ಮವಾಗಿ ಸುತ್ತುತ್ತಿರುತ್ತಾರೆ. ಅವರ ಪೂರ್ಣ ಆಯಸ್ಸು ಮುಗಿದ ಮೇಲೆ ಇಹಲೋಕ ತ್ಯಜಿಸುತ್ತಾರೆ "ಎಂದಿದ್ದ.

     ನನಗೆ ವಿಚಿತ್ರವೆನಿಸಿ ಅಮ್ಮನ ಬಳಿ ಕೇಳಿದಾಗ ಅಮ್ಮ ಕೂಡ,

" ನೀನು ಹುಟ್ಟುವ ಮುಂಚೆ ಒಂದು ಮಗು , ನಿನ್ನ ಅಣ್ಣ ಹೊಟ್ಟೆಯಿಂದ ಹೊರಗೆ ಬಂದ ಮೇಲೆಯೇ ಸತ್ತಿದ್ದ. ನಿನ್ನ ತಂದೆ ಹಾಗೂ ಮನೆಯವರ ಪ್ರಕಾರ ಅವನ ಆತ್ಮ ಇದೆಯಂತೆ. ಅದಕ್ಕೆ ವಯಸ್ಸಿಗೆ ಬಂದಾಗ ವಿವಾಹ ಕಾರ್ಯ ಮಾಡಿಸಬೇಕಂತೆ. ಇಲ್ಲವಾದಲ್ಲಿ ಅದು ತೊಂದರೆ ಕೊಡಬಹುದಂತೆ, ನನಗೇನೋ ಅಂದು ಸತ್ತ ನನ್ನ ಮಗು ಆತ್ಮವಾಗಿ ಬೆಳೆದು ದೊಡ್ಡ ಹುಡುಗನಾಗಿರುತ್ತದೆ ಎಂಬ ನಂಬಿಕೆಯಿಲ್ಲ. ಇದೆಲ್ಲ ಮೂಢನಂಬಿಕೆಗಳಷ್ಟೇ " ಎಂದು ಹೇಳಿದ್ದರು.

     ಈ ದೆವ್ವದ ಮದುವೆಯ ಪದ್ಧತಿಯ ಪ್ರಕಾರ ಈ ಆತ್ಮಗಳಿಗೆ ಎಲ್ಲೋ ಇನ್ನೊಂದು ಕಡೆ ಸತ್ತಿರುವ ಹೆಣ್ಣು ಆತ್ಮವನ್ನು ಹುಡುಕಿ ಯಾವುದೋ ಹಿಟ್ಟಿನಿಂದ ಎರಡು ಮಧುಮಗ ಮಧುಮಗಳಂತಹ ಗೊಂಬೆ ಮಾಡಿ ಪೂಜಾರಿಗಳೆಲ್ಲ ಬಂದು ಅಗ್ನಿಸಾಕ್ಷಿಯಾಗಿ ವಿವಾಹ ಮಾಡಿಸುತ್ತಾರೆ. ಈ ಗಂಡು ಹೆಣ್ಣು ಹುಡುಕುವಾಗ ವಯಸ್ಸು ನೋಡಿ ಹುಡುಕುತ್ತಾರಾ ಎಂದು ಅಮ್ಮನ ಬಳಿ ಕೇಳಿದ್ದೆ . ಆಗ ಅಮ್ಮ ಹೇಳಿದ್ದರು ನನ್ನ ಸೋದರಮಾವನ ಮದುವೆಗೆ ಯಾವತ್ತೋ ಸತ್ತಿರುವ ಹೆಂಗಸನ್ನು ಹುಡುಕಿ ಸರಿಯಾಗಿ ವಯಸ್ಸು ನೋಡದೆ ವಿವಾಹ ಮಾಡಿಸಿದ್ದರಂತೆ. ಅಂದರೆ ಇಂತಹ ವಿಷಯಗಳನ್ನು ಈ ದೆವ್ವಗಳ ಮದುವೆಯಲ್ಲಿ ಅಷ್ಟೊಂದು ಕೂಲಂಕುಷವಾಗಿ ಪರಿಗಣಿಸುವುದಿಲ್ಲ. ಆದರೆ ಮದುವೆ ಮಾತ್ರ ಶಾಸ್ತ್ರೋತ್ರವಾಗಿ ಮಾಡಿ ಮುಗಿಸುತ್ತಾರೆ. ಆಗ ಎರಡೂ ಆತ್ಮಗಳು ಗಂಡ ಹೆಂಡಿರಾಗುತ್ತವೆಯಂತೆ.ಅಂದರೆ ದೆವ್ವಗಳೂ ಸಂಸಾರ ಮಾಡುತ್ತವಾ? ಇದೆಲ್ಲ ನನಗೆ ಬಹಳ ವಿಚಿತ್ರ ಎನಿಸಿತ್ತು. 

 



Rate this content
Log in

Similar kannada story from Horror