ಹೃದಯ ಸ್ಪರ್ಶಿ

Romance

3.5  

ಹೃದಯ ಸ್ಪರ್ಶಿ

Romance

ದೃಷ್ಟಿ

ದೃಷ್ಟಿ

4 mins
302


ಯಾವುದೋ ಯೋಚನೆಯಲ್ಲಿ ಮನೆಯತ್ತ ಸಾಗುತ್ತಿದ್ದವಳು ಹತ್ತಿರದಲ್ಲೇ ಕೇಳಿ ಬಂದ ಬುಲೆಟ್ ಸದ್ದಿಗೆ ಅಲ್ಲೇ ನಿಂತಳು. ಆ ಸದ್ದು ಅವಳಿಗೆ ಐದು ವರ್ಷದ ಹಿಂದಿನ ಘಟನೆಯನ್ನು ನೆನಪಿಸಿತ್ತು. ಯಾಕೋ ಅಲ್ಲಿ ನಿಲ್ಲಬೇಕೆಂದು ಅನಿಸದೆ ಮುಂದೆ ಹೆಜ್ಜೆ ಹಾಕ ಹೋದವಳು ಯಾವುದೋ ಬೈಕಿಗೆ ತಾಗಿ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಲವಾದ ಕೈಯ್ಯೊಂದು ಅವಳನ್ನು ಬೀಳದಂತೆ ತಡೆದು ನಿಲ್ಲಿಸಿತ್ತು.

'ಹೇಗಿದ್ದೀಯಾ ದೃಷ್ಟಿ...?' ಮೃದು ದನಿ ಕೇಳಿ ಅಚ್ಚರಿಯಿಂದ ನಿಮಿರಿತು ಅವಳ ಕರ್ಣಗಳು.

'ನಿ.. ನಿ..ನಿರ್ಮಲ್?' ತಡೆ ತಡೆದು ಹೊರ ಬಂದಿತ್ತು ಮಾತು.

'ಹೌದು ನಾನೇ. ನಿನ್ನ ಜೊತೆ ಮಾತನಾಡೋಣ ಎಂದು ಬಂದರೆ, ನೀನು ನಿಲ್ಲದೆ ಓಡುತ್ತಿರುವೆ...' ಅವನು ಆಕ್ಷೇಪಿಸುವಂತೆ ನುಡಿದರೆ,

'ಐ ಯಾಮ್ ಸಾರಿ...' ಎಂದಳು ಅವಳು.

'ಪರ್ವಾಗಿಲ್ಲ ಬಾ...' ಕೈ ಹಿಡಿದು ಬೈಕೇರಲು ಸಹಾಯ ಮಾಡಿದವನು ಬುಲೆಟನ್ನು ಪಾರ್ಕ್ ಕಡೆಗೆ ಟರ್ನ್ ಮಾಡಿದ್ದ.

'ಎಲ್ಲಿಗೆ ಹೋಗುತ್ತಿದ್ದೇವೆ...?'

'ನಿನ್ನ ಜೊತೆ ಮಾತನಾಡಬೇಕು ತುಂಬಾ. ಅದಿಕ್ಕೆ ಪ್ರಶಾಂತವಾದ ಜಾಗ ಹುಡುಕುತ್ತಿದ್ದೇನೆ...' ಅವಳು ಮೌನಿಯಾದಳು. ಅವಳ ಮನಸ್ಸು ಐದು ವರ್ಷಗಳ ಹಿಂದಕ್ಕೋಡಿದ್ದವು.


ಪ್ರೀತಿಗೆ ಕಣ್ಣಿಲ್ಲ ನಿಜ ಆದರೆ ಪ್ರೀತಿಸುವವರಿಗೆ ಕಣ್ಣಿಲ್ವಾ..? ಎಂಬ ಮಾತೊಂದಿದೆ. ಆದರಿಲ್ಲಿ, ಪ್ರೀತಿಗೆ ಮಾತ್ರ ಅಲ್ಲ ತಾನು ಪ್ರೀತಿ ಮಾಡುತ್ತಿರೋ ಹುಡುಗಿಗೂ ಕಣ್ಣಿಲ್ಲ ಎಂಬ ಸತ್ಯ ತಿಳಿಯದ ನಿರ್ಮಲ್, ಪ್ರೀತಿಗೆ ಬಿದ್ದಿದ್ದ..!!

ದಿನವಿಡೀ ಗೆಳೆಯರು, ಮೋಜು-ಮಸ್ತಿಯೆಂದು ತಿರುಗಾಡುವ ಅವನಿಗೆ ಆಕಸ್ಮಿಕವಾಗಿ ಕಣ್ಣಿಗೆ ಕಂಡಿದ್ದಳು ದೃಷ್ಟಿ. ಹುಟ್ಟು ಅಂಧೆಯಲ್ಲದ ದೃಷ್ಟಿ, ಅವಳ ಜೀವನದಲ್ಲಿ ನಡೆದ ಘಟನೆಯ ಕಾರಣದಿಂದ ಅಂಧೆಯಾಗಿದ್ದಳು.

ಅವಳನ್ನು ಮನಸಾರೆ ಪ್ರೀತಿಸುತ್ತಿದ್ದವನು ನಿಜ ತಿಳಿದ ನಂತರವೂ ಅದನ್ನು ಮುಂದುವರಿಸಿದ್ದ.

ದಿನಗಳು ಉರುಳಿ ತಿಂಗಳು ಕಳೆದರೂ ಅವಳಲ್ಲಿ ತನ್ನ ಪ್ರೀತಿ ಹೇಳುವ ಧೈರ್ಯ ಬಂದಿರಲಿಲ್ಲ. ಕೊನೆಗೊಂದು ದಿನ ಧೈರ್ಯ ಮಾಡಿ ಅವಳ ಮುಂದೆ ನಿಂತೇ ಬಿಟ್ಟಿದ್ದ.

'ಹ್.. ಹಾಯ್, ಐ ಯಾಮ್ ನಿರ್ಮಲ್..' ತನ್ನ ಪರಿಚಯ ಹೇಳಿಕೊಂಡ.

'ಹೇಳಿ ಏನಾಗ್ಬೇಕು..?' ಬೇಬಿ ಸಿಟ್ಟಿಂಗಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಅಂದು ತಡವಾಗಿತ್ತು.

'ಐ... ಐ ಲವ್ ಯೂ' ತಡೆ ತಡೆದು ನೇರವಾಗಿ ಹೇಳಿದ್ದ. ಅವನ ಮಾತು ಕೇಳಿ ಒಂದು ಕ್ಷಣ ಗಾಬರಿಗೊಂಡವಳಂತೆ ನಿಂತ ದೃಷ್ಟಿ,

'ವ್ಹಾಟ್...?' ಎಂದಿದ್ದಳು.

'ನನಗೆ ನಿಮ್ಮ ಬಗ್ಗೆ ಎಲ್ಲಾ ಗೊತ್ತು. ಆದರೂ ನನಗೆ ನಿಮ್ಮನ್ನು ಪ್ರೀತಿಸದೆ ಇರಲು ಸಾಧ್ಯವಿಲ್ಲ. ನಾನು ನಿನಗೆ ಬಾಳು ಕೊಡುತ್ತೇನೆ, ದಿನ ನಿತ್ಯ ಈ ರೀತಿ ಕೆಲಸ ಮಾಡೋ ಯಾವುದೇ ಅಗತ್ಯ ಇಲ್ಲ. ಆ ರೀತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ...' ಪಟಪಟನೇ ಹೇಳಿದ ಮಾತು ಕೇಳಿ ಅವಳಿಗೆ ಕೋಪ ಬಂದಿದ್ದವು.

'ನೋಡಿ ಮಿಸ್ಟರ್, ನನಗೆ ಈ ಕೆಲಸ ಅಗತ್ಯ ಎಂದು ನಾನು ಮಾಡುತ್ತಿಲ್ಲ. ನನ್ನ ತಂದೆಗೆ ನನ್ನನ್ನು ನೋಡಿಕೊಳ್ಳೋ ತಾಕತ್ತಿದೆ, ಅದು ಬೇರೆ ವಿಷಯ. ನಾನು ಈ ಕೆಲಸ ನನ್ನ ಮನದ ತೃಪ್ತಿಗಾಗಿ ಮಾಡುತ್ತಿದ್ದೇನೆ, ಮಾತನಾಡುವಾಗ ಯೋಚಿಸಿ ಮಾತನಾಡಿ.

ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದು ಆ ನಂತರದ ಮಾತಲ್ವಾ..? ಮೊದಲು ನೀವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ಎಷ್ಟು ದಿನ ಎಂದು ಹೆತ್ತವರ ದುಡಿಮೆಯಲ್ಲಿ ಬದುಕ್ತೀರಿ..? ಮೊದಲು ನೀವು ನಿಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನಾದರೂ ಸಾಧಿಸಿ, ಆ ಮೇಲೆ ಬನ್ನಿ ನನ್ನ ಮುಂದೆ.

ಇರುವುದು ಒಂದು ಜೀವನ ಯಾಕೆ ಅದನ್ನು ಈ ರೀತಿ ವೇಸ್ಟ್ ಮಾಡ್ಕೋತಿದ್ದೀರಿ...??

ಬಿಡಿ ಜಾಗ, ನನಗೆ ತಡವಾಗಿದೆ. ನಿಮ್ಮ ಜೊತೆ ಹರಟೆ ಹೊಡೆಯಲು ಸಮಯವಿಲ್ಲ...' ಅವನ ಜೀವನದ ಬಗ್ಗೆ ಗೆಳತಿಯರಿಂದ ತಿಳಿದಿದ್ದ ದೃಷ್ಟಿ ಬೇಕೆಂದೇ ಆ ರೀತಿಯ ಮಾತುಗಳನ್ನಾಡಿದ್ದಳು. ಅವಳ ಮಾತುಗಳು ಚಾಟಿ ಏಟಿನಂತೆ ಅವನ ಮನದ ಮೇಲೆ ಬೀಸಿ ಹೋಗಿದ್ದವು.

ಬೇಸರವೂ ಅಲ್ಲ, ಕೋಪವೂ ಅಲ್ಲ ಎಂಬಂತಹ ಹತಾಶೆಯ ಮುಖ ಹೊತ್ತು ಅಲ್ಲಿಂದ ವಾಪಾಸ್ಸಾಗಿದ್ದ ನಿರ್ಮಲ್.


'ದೃಷ್ಟಿ... ದೃಷ್ಟಿ, ಏನು ಯೋಚಿಸ್ತಿದ್ದೀಯಾ?' ಬೈಕ್ ಪಾರ್ಕ್ ಮಾಡಿ ಅವಳನ್ನು ಕೂಗುತ್ತಿದ್ದ ನಿರ್ಮಲ್.

'ಅಹ್...' ಎಂದವಳು ವಾಸ್ತವಕ್ಕೆ ಬಂದಿದ್ದಳು.

'ಏನ್ ಯೋಚಿಸ್ತಿದ್ದೆ..? ಇಳಿ ಕೆಳಗೆ, ಪಾರ್ಕ್ ಬಂತು' ಕೈ ಹಿಡಿದು ಇಳಿಯಲು ಸಹಾಯ ಮಾಡಿದ ನಿರ್ಮಲ್ ತಾನೂ ಇಳಿದಿದ್ದ.

'ನಿರ್ಮಲ್, ಯಾವಾಗ ಬಂದೆ ನೀನು ದಿಲ್ಲಿಯಿಂದ?' ಮೆಲ್ಲಗೇ ಕೇಳಿದ್ದಳು.

'ನಿನ್ನೆಯಷ್ಟೇ ಬಂದೆ...' ಎಂದವನು,

'ಈ ಕಡೆ ಬಾ...' ಎನ್ನುತ್ತಾ ಅವಳ ಕೈ ಹಿಡಿದು ನಡೆಸಿದ್ದ. ಪಾರ್ಕ್ ಒಳಗೆ ಬಂದವನು ಯಾರಿಲ್ಲದ ಪ್ರಶಾಂತ ಜಾಗವೊಂದನ್ನು ನೋಡಿ ಅವಳನ್ನು ಅಲ್ಲಿಗೆ ಕರೆ ತಂದು ಬೆಂಚ್ ಮೇಲೆ ಕೂರಿಸಿದ್ದ.

'ಹೇಗಿದ್ದೀಯಾ ದೃಷ್ಟಿ..?' ಕೇಳಿದ.

'ಹೀಗಿದ್ದೀನಿ ನೋಡು...' ಎಂದಾಗ ನಗು ಬೀರಿದ ಅವನು.

'ಯಾಕೆ ಸಂಕೋಚ ಪಡ್ತಿದ್ದೀಯಾ..? ಅಂದು ಅಷ್ಟೆಲ್ಲಾ ಮಾತನಾಡಿದೆ. ಇಂದು ನೋಡಿದ್ರೆ...' ಅವಳು ಉತ್ತರಿಸಲಿಲ್ಲ. ಕಂಗಳಲ್ಲಿ ತೆಳುವಾಗಿ ನೀರಾಡಿತು.

'ಅರೇ, ಯಾಕೆ ಅಳ್ತಿದ್ದೀಯಾ..?' ಕಣ್ಣೊರೆಸುತ್ತ ಕೇಳಿದ.

'ನಾನಂದು ಹಾಗೇ ಮಾತನಾಡಬಾರದಿತ್ತು. ಐ ಯಾಮ್ ಸಾರಿ...' ಸಣ್ಣಗೆ ನುಡಿದಳು.

'ಇಲ್ಲ. ನಿಜ ಹೇಳಬೇಕು ಅಂದ್ರೆ ನೀನಂದು ಹಾಗೇ ಮಾತನಾಡಿದ್ದೇ ಸರಿ ಇತ್ತು. ಐ ಸ್ವೇರ್ ಕಣೋ, ನನಗೆ ನಿನ್ನ ಮೇಲೆ ಯಾವುದೇ ಕೋಪವಿಲ್ಲ. ಅಂದು ನಿನ್ನ ಮಾತು ಕೇಳಿ, ನೀನು ನನ್ನ ಹಂಗಿಸ್ತಿದ್ದೀಯಾ ಅಂತ ಒಂದು ಬಾರಿ ಕೋಪ ಬಂದಿದ್ದು ನಿಜ. ಆದರೆ ಕುಳಿತು ಯೋಚಿಸಿದಾಗ ನಿನ್ನ ಮಾತು ನಿಜವಾಗಿತ್ತು. ಅದೇ ಮಾತನ್ನು ನಮ್ಮ ಮನೆಯಲ್ಲಿ, ಫ್ಯಾಮಿಲಿ ಯಲ್ಲಿ ಸಾಕಷ್ಟು ಮಂದಿ ಹೇಳಿದ್ದಾರೆ ನನಗೆ. ಆದರೆ ಆಗ ಆ ಮಾತು ತಲೆಗೆ ಹೋಗಿರಲಿಲ್ಲ. ಎಲ್ಲದಕ್ಕೂ ಒಂದು ಸಮಯ ಅನ್ನುವುದು ಬರಬೇಕು ಅಂತಾರಲ್ಲ ಹಾಗೇ...!

ನಿನಗೊಂದು ಸತ್ಯ ಹೇಳ್ಲಾ..?' ಅವಳ ಗಲ್ಲವನ್ನೆತ್ತಿ ಕೇಳಿದ.

'ಏನು...?'

'ನಿಜ ಹೇಳಬೇಕು ಅಂದ್ರೆ ನನ್ನ ಮೇಲೆ ನಿನ್ನ ಮಾತುಗಳು ಅಷ್ಟೇನೂ ಪ್ರಭಾವ ಬೀರಲಿಲ್ಲ. ನಿನ್ನ ಜೀವನ ನನ್ನ ಮೇಲೆ ಪ್ರಭಾವ ಬೀರಿತು. ನನ್ನನ್ನು ನಿನಗೆ ಹೋಲಿಸಿದರೆ, ನನ್ನ ಎಲ್ಲಾ ಅಂಗಾಂಗಗಳು ನೆಟ್ಟಗಿದೆ. ಆದರೆ ಯೋಚನೆಯಲ್ಲಿ, ಜೀವನ ಶೈಲಿಯಲ್ಲಿ ನೀನು ನನಗಿಂತ ಉತ್ತಮ ಜೀವನ ನಡೆಸುತ್ತಿದ್ದೆ. ನಿನಗೆ ಕಣ್ಣು ಕಾಣಿಸೋದಿಲ್ಲ, ಅಂದ್ರೆ ಏನಾಯಿತು..? ನೀನು ಬೇರೆಯವರಿಗಿಂತ ಯಾವುದರಲ್ಲಿ ಕಡಿಮೆ ಇದ್ದೀಯಾ...? ಹೇಳು.

ಇದೇ ಜೀವನ ನನಗೆ ಸ್ಫೂರ್ತಿ ನೀಡಿತು. ನಾನೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹುಟ್ಟಿಸಿತು. ಇವತ್ತು ನಾನು ಏನೇ ಆಗಿದ್ದರೂ ನಿನ್ನ ಆ ಮಾತು ಮತ್ತು ನಿನ್ನ ಈ ಜೀವನವೇ ಸ್ಫೂರ್ತಿ ನನಗೆ. ನೀನಿಲ್ಲದಿದ್ದರೆ ಇವತ್ತೂ ನಾನು ಅದೇ ಹಳೆಯ ನಿರ್ಮಲ್ ಆಗಿರುತ್ತಿದ್ದೆನೇ ವಿನಃಹ, ಇಂದಿನ ಯೂತ್ ಐಕಾನ್ ನಿರ್ಮಲ್ ಆಗ್ತಿರಲಿಲ್ಲ...!' ಅವನ ಮಾತಿಗೆ ಕಿವಿಯಾಗಿದ್ದವಳು.

'ಇಲ್ಲ ನಿರ್ಮಲ್, ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ಇಲ್ಲಿ ನಾನು ಕೇವಲ ನಿಮಿತ್ತ ಮಾತ್ರ. ನಾನಲ್ಲದಿದ್ದರೆ ಇನ್ಯಾರೋ ಇರುತ್ತಿದ್ದರು. ಆದರೆ ಇವತ್ತು ನೀನು ಆ ಸ್ಥಾನದಲ್ಲಿ ಇದ್ದೀಯಾ ಅಂದ್ರೆ ಅದು ನಿನ್ನ ಶ್ರಮಕ್ಕೆ ದೊರೆತ ಫಲ. ನೀನು ಸುಮ್ಮನೇ ನನ್ನ ಹೊಗಳುತ್ತಿರುವೆ ಅಷ್ಟೇ...!' ಕ್ರೆಡಿಟ್ ಬೇಕಿರಲಿಲ್ಲ ಅವಳಿಗೆ.

'ಸರಿ, ನಿನಗೆ ಕ್ರೆಡಿಟ್ ಬೇಡದಿದ್ದರೆ ನಾನು ಹೊಗಳೋದಿಲ್ಲ. ಆದರೆ ಈ ಬಾರಿ ನಮ್ಮ ಮದುವೆಯ ದಿನಾಂಕ ನೀನು ಮುಂದೂಡುವಂತಿಲ್ಲ. ನಿನ್ನ ಆಸೆಯಂತೆ ಈಗ ನೀನೇ ಸ್ವಂತ ಬೇಬಿ ಸಿಟ್ಟಿಂಗ್ ಕೇರ್ ನಡೆಸ್ತಿದ್ದೀಯಾ. ಇದೇ ದಿನಕ್ಕಾಗಿ ತಾನೇ ಕಾದಿದ್ದು...?

ಅಂದು ನೀನು ಹೇಳಿದಂತೆ ನಾನು ನನ್ನ ಜೀವನದಲ್ಲಿ ಒಂದು ಹಂತಕ್ಕೆ ಸಾಧಿಸಿ ನಿನ್ನ ಮುಂದೆ ನಿಂತಾಗ ನೀನು ನನ್ನಲ್ಲಿ ಕೇಳಿಕೊಂಡಿದ್ದೆ, ನಾನೂ ಸ್ವಂತದಾಗಿ ಒಂದು ಬೇಬಿ ಸಿಟ್ಟಿಂಗ್ ಕೇರ್ ಸಂಸ್ಥೆ ನಡೆಸಬೇಕು. ಅಲ್ಲಿಯವರೆಗೆ ನೀವು ಕಾಯುವಿರಿ ಎಂದಾದರೆ ನನಗೇನೂ ತೊಂದರೆ ಇಲ್ಲ ಎಂದು. ನಿನಗೆ ಕೊಟ್ಟ ಮಾತಿನಂತೆ ಅಂದು ಹೋದವನು ಇಂದು ಮರಳಿ ಬಂದಿದ್ದೇನೆ, ಈಗ ನಿನ್ನಾಸೆಯೂ ಈಡೇರಿದೆ. ಈಗಲಾದರೂ ಒಪ್ಪಿಗೆ ಕೊಡು...' ಪುಟ್ಟ ಮಗು ಚಾಕಲೇಟಿಗೆ ರಚ್ಚೆ ಹಿಡಿಯುವಂತೆ ಕೇಳಿದ ಅವನ ಮಾತಿಗೆ ನಗು ಬಂದಿತ್ತು ಅವಳಿಗೆ.

'ಸರಿ. ನಾಳೆ ಬಂದು ಮನೆಯಲ್ಲಿ ಮಾತನಾಡಿ... ' ಕೊನೆಗೂ ಒಪ್ಪಿಗೆ ನೀಡಿದ್ದಳು.

'ಯಾಹ್... ' ಸಂತಸದಿ ಕೇಕೆ ಹಾಕಿ ಮೇಲಕ್ಕೆ ಜಿಗಿದಿದ್ದ ನಿರ್ಮಲ್.

ಒಬ್ಬರಿಗೊಬ್ಬರು ಹೆಗಲಾಗಿ ನಡೆಯುವೆವು ಎಂಬ ನಿರ್ಧಾರಕ್ಕೆ ಇಬ್ಬರ ಒಪ್ಪಿಗೆಯ ಮುದ್ರೆಯೂ ಬಿದ್ದಿತ್ತು. ನಿರ್ಮಲ್- ಪ್ರೀತಿ ಮತ್ತು ಯೋಚನಾ ಶಕ್ತಿ ದೃಷ್ಟಿಯಾದರೆ, ಅವಳ ಕಣ್ಣ ದೃಷ್ಟಿ ಅವನಾಗಿದ್ದ.

ಜೀವನದುದ್ದಕ್ಕೂ ಕೈ ಹಿಡಿದು ನಡೆಸುತ್ತೇನೆ ಎಂದು ನುಡಿದ ಅವನ ಮಾತು ಇಂದು ನಿಜವಾಗುತ್ತಿದೆ ಎಂಬ ಹರ್ಷಕ್ಕೆ ಅವನ ಗಂಟಲಿನಿಂದ ಮಾತೇ ಹೊರಡುತ್ತಿಲ್ಲ.

'ನಿರ್ಮಲ್.. ಆಗಲೇ ತಡವಾಗಿದೆ. ಮನೆಗೆ ಹೋಗೋಣ್ವಾ..?' ಅವಳ ಪ್ರಶ್ನೆಗೆ ಸರಿಯೆಂದು ತಲೆದೂಗಿ ಅವಳನ್ನು ಕೈ ಹಿಡಿದೇ ನಡೆಸಿದ್ದ ಬುಲೆಟಿನೆಡೆಗೆ. ಜೊತೆಯಾಗಿ ಹೆಜ್ಜೆ ಹಾಕಿದ ಗುರುತಿಗೆಂಬಂತೆ ನಡೆದು ಬಂದ ದಾರಿಯಲ್ಲಿ ಮೂಡಿದ ಹೆಜ್ಜೆ ಗುರುತು ಅವರ ಪ್ರೀತಿಗೆ ಅಸ್ತು ಎಂದಿತ್ತು.

ಜೋಡಿಯನ್ನು ಹೊತ್ತ ಬುಲೆಟ್ ಮನೆಯೆಡೆಗೆ ಸಾಗಿತ್ತು.


ಮುಗಿಯಿತು.


Rate this content
Log in

Similar kannada story from Romance