Ashwini Desai

Romance Classics Others

4  

Ashwini Desai

Romance Classics Others

ಒಲವಿನ ಭಾಷೆ

ಒಲವಿನ ಭಾಷೆ

2 mins
239


ಮನದ ಭಾವಗಳ ಏರಿಳಿತಕ್ಕೆ ಕೊನೆ ಎಂದೋ, ಮನದಲ್ಲಿ ಅಡಗಿದ ಸುಪ್ತ ಭಾವನೆಗಳಿಗೆ ಇಂದು ಬಿಡುಗಡೆಯ ಹಂಬಲ. ಚಿಕ್ಕ ವಯಸ್ಸಿನಿಂದ ಒಟ್ಟಿಗೇ ಆಡಿ ಬೆಳೆದಿದ್ದರು, ಅದು ಯಾವ ಘಳಿಗೆಯಲ್ಲಿ ನೀನು ನನ್ನ ಹೃದಯಕ್ಕೆ ಲಗ್ಗೆ ಇಟ್ಟೆ ಎಂಬುದೇ ತಿಳಿಯದು. ವಯೋ ಸಹಜ ಪ್ರೇಮ ಭಾವಗಳು ನನ್ನಲ್ಲಿ ಮೂಡಿದಾಗ ನನಗಾದ ಪುಳಕ ಪದಗಳಲ್ಲಿ ವರ್ಣಿಸಲು ಸಾಧ್ಯವೇ? ನನ್ನಲ್ಲಿ ಜನಿಸಿದ ಭಾವಗಳು ನಿನ್ನಲ್ಲಿಯೂ ಜನ್ಮ ತಳೆದಿಲ್ಲವೇ, ನಿನಗೇಕೆ ಆ ಭಾವ ಬಂದಿಲ್ಲ?, ಕಳ್ಳಿ ನೀನು, ನಿನ್ನಲ್ಲಿಯೂ ಒಲವು ಮೂಡಿದೆ. ಎಷ್ಟೇ ಆದರೂ ಹೆಣ್ಣು ಮನಸ್ಸು. ನಾಚುವುದು ಸಹಜ. ನಾಚಿಕೆಯೇ ಮೈದಳೆದಾಗ ನಿನ್ನಂದ ಕಣ್ತುಂಬಿಕೊಳ್ಳಲು ನನ್ನ ಮನ ಕಾತರಿಸಿದೆ. ಇಂದು ನನ್ನೆಲ್ಲಾ ಭಾವನೆಗಳನ್ನು ನಿನ್ನಲ್ಲಿ ಅರುಹಿ ನಿನ್ನೊಪ್ಪಿಗೆ ಪಡೆದು ನಮ್ಮಿಬ್ಬರ ಬಾಲ್ಯ ಸ್ನೇಹಕ್ಕೆ ಹೊಸ ಅರ್ಥ ಕೊಡುವ ಮನಸ್ಸಾಗಿದೆ. ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹುನ್ನಾರ ನನ್ನದು.


(ದೇವಸ್ಥಾನದ ಕಟ್ಟೆಯ ಮೇಲೆ ಕೂತ ಸ್ವಸ್ತಿಕ್ ತನ್ನ ಮನದನ್ನೆ, ಬಾಲ್ಯ ಸಖಿ ಚಿಂತನಳ ದಾರಿ ಕಾಯುತ್ತಾ ಮನದಲ್ಲೇ ತನ್ನ ಮಾತುಗಳನ್ನು ಆಡುತ್ತಿದ್ದಾನೆ.)


ಪ್ರತಿನಿತ್ಯ ಆ ಪ್ರೇಮ ಮೂರ್ತಿ ಸ್ಮಶಾನ ವಾಸಿ ಪರಶಿವನ ದರ್ಶನ ಪಡೆಯುವುದು ಅವಳ ಎಷ್ಟೋ ವರ್ಷದ ದಿನಚರಿ. ಅವಳೊಟ್ಟಿಗೆ ಸ್ವಲ್ಪ ಸಮಯವನ್ನಾದರೂ ಕಳೆಯುವ ಮಹದಾಸೆ ಹೊದ್ದು ಗೌರಿಯನ್ನು ಅರಸಿ ಬರುವ ಶಂಕರನಂತೆ ಅವಳ ಹಿಂದೆ ಇವನ ಸವಾರಿ. ಇಂದು ಅವಳಲ್ಲಿ ತನ್ನ ಪ್ರೇಮ ನಿವೇಧನೆ ಮಾಡಿಕೊಳ್ಳುವ ಸಲುವಾಗಿ ಅವಳಿಗಿಂತ ಬೇಗ ಬಂದು ಕಾಯುತ್ತಿದ್ದವನಿಗೆ ಗಡಿಯಾರದ ಮುಳ್ಳು ಮುಂದೆ ಚಲಿಸುತ್ತಲೇ ಇಲ್ಲವೇನೋ ಎಂಬ ಭಾವ.


ಹಸಿರು ಲಂಗ, ಅದೇ ಬಣ್ಣದ ರವಿಕೆ, ಬಿಳಿ ಬಣ್ಣದ ದಾವಣಿ ತೊಟ್ಟು, ಅದಕ್ಕೋಪ್ಪುವ ಜುಮುಕಿ, ಕೈಬಳೆ, ಅವಳ ಉದ್ದದ ನಾಗರ ಜಡೆಗೆ ಮೊಳ ಮಲ್ಲಿಗೆ ದಂಡೆ ಮುಡಿದವಳು ಸುಂದರಿಯೇ ಸರಿ. ಇಷ್ಟೇ ಅವಳ ಅಲಂಕಾರ. ಯಾವ ಕೃತಕ ಅಲಂಕಾರವನ್ನು ಬಯಸದ ಸಹಜ ಸೌಂದರ್ಯ ಅವಳದು. ಅವಳ ಸೌಂದರ್ಯ ರಾಶಿಯನ್ನು ನೋಡುತ್ತಾ ಮೈಮರೆತವನನ್ನು ಎಚ್ಚರಿಸಿದ್ದು ಅವಳ ಕಾಲ್ಗೆಜ್ಜೆಯ ನಾದ. ಅವಳು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮೆಟ್ಟಿಲು ಹತ್ತಿ ಬರುತ್ತಿದ್ದರೆ ಅವನ ಎದೆಬಡಿತ ಹಾದಿ ತಪ್ಪಿತ್ತು.


ಬಂದವಳು ಅವನ ಪಕ್ಕವೇ ಕಟ್ಟೆ ಏರಿ ಕುಳಿತು ಅವನನ್ನು ಕಲ್ಪನಾ ಲೋಕದಿಂದ ಹೊರ ತಂದು ವಾಸ್ತವಕ್ಕೆ ಎಳೆದಾಗ ಅತೀ ಸನಿಹ ಕೂತ ಮನದನ್ನೆಯ ಕಂಡು ಅವನ ಮೈ ಮನಗಳು ಪುಳಕಿತಗೊಂಡವು. ಅವನ ಮನದ ತೊಳಲಾಟ ಅರಿತವಳಿಗೆ ಒಳಗೊಳಗೇ ನಗು. ಅವನಲ್ಲಿರುವ ಭಾವವೇ ಅವಳಲ್ಲಿಯೂ ಇರುವಾಗ ಯಾವುದನ್ನೂ ಬಾಯಿ ಬಿಟ್ಟು ಹೇಳುವ ಅಗತ್ಯ ಇರಲಿಲ್ಲ.


ಅವಳ ಪಕ್ಕದಲ್ಲಿಂದ ಕೆಳಗೆ ಜಿಗಿದು ಅವಳ ತೊಡೆ ಮೇಲೆ ಕೈ ಊರಿ ಅವಳ ಕಣ್ಣಲ್ಲಿ ಕಣ್ಣಿಟ್ಟು ಒಪ್ಪಿಗೆಯ? ಎಂಬಂತೆ ಕಣ್ಸನ್ನೆ ಮಾಡಿದನು. ಅವನ ಕಣ್ಣ ಭಾಷೆ ಅರಿತವಳು ಕಣ್ಣಲ್ಲಿಯೇ ಒಪ್ಪಿಗೆಯನ್ನು ನೀಡಿದಳು. ಅವಳ ಮೈ ರಕ್ತವೆಲ್ಲಾ ಮುಖಕ್ಕೆ ರಾಚಿದಂತೆ ಅವಳ ಕೆನ್ನೆ ಸೇಬಿನ ಬಣ್ಣಕ್ಕೆ ತಿರುಗಿದ್ದೆ ಬಯಸಿದ ಒಲವಿಗೆ ಒಪ್ಪಿಗೆಯ ಮುದ್ರೆ ಬಿದ್ದ ಸಂತಸಕ್ಕೆ ಹುಡುಗನ ಎದೆಯಲ್ಲಿ ಸಾವಿರ ಚಿಟ್ಟೆಗಳ ಹಾರಾಟ.


ಧನ್ಯವಾದಗಳು,



Rate this content
Log in

Similar kannada story from Romance