JAISHREE HALLUR

Action Inspirational Others

4  

JAISHREE HALLUR

Action Inspirational Others

ಹಸಿವನ್ನು ಸಹಿಸುವುದು ಹೇಗೆ?

ಹಸಿವನ್ನು ಸಹಿಸುವುದು ಹೇಗೆ?

3 mins
289



ಯಾಕೋ ಗಂಟೆ ಹನ್ನೆರಡಾದರೂ ನಿದ್ದೆ ಹತ್ತಿರ ಸುಳೀತಿಲ್ಲಾ. ಕಣ್ಣು ಪೂರಾ ಸ್ವಚ್ಛಂದವಾಗಿ ತೆರೆದುಕೊಂಡದ್ದಕ್ಕೂ ಮೊಬಾಯಿಲ್ ನ ನೆಟ್ ವರ್ಕ್ ಸಂಪರ್ಕ ನೆಟ್ಗಿದ್ದಕ್ಕೂ ಕಾಕತಾಳೀಯವಾದಂತೆ, ನನ್ನ ನಿದ್ದೆಯೂ ಹಾರಿ ಹೋಯಿತು. ಎಫ್ಬೀಯ ಎಲ್ಲ ಸ್ಟೇಟಸ್ ಹಾಗೂ ಕಾಮೆಂಟುಗಳನ್ನು ಪಟಪಟನೆ ನೋಡಲಾರಂಭಿಸಿದೆ. ಖುಷೀ ಆಗ್ತಿದೆ. ಬಹಳ ದಿನಗಳ ನಂತರ, ಚೆನೈಲಿ ರಾತ್ರಿ ಹೀಗೆ ಸಂಪರ್ಕ ದೊರೆತದ್ದು. 

   ಇದಲ್ಲ ನಿಜವಾದ ಕಾರಣ. ಬೇರೆಯೆ ಇದೆ. ಡ್ಯೂಟೀ ಮುಗಿಸಿ, ಬೆವರಿಳಿಸುತ್ತಾ ರೂಮಿಗೆ ಬಂದುಸಿರು ಬಿಟ್ಟಾಗ, ಸಂಕುಚಿತ ಗಾಳಿ, ಉರಿ ಬಿಸಿಲಿ ಧಗೆ, ತಾಳಲಾರದೇ ಬಚ್ಚಲಿಗೆ ನುಗ್ಗಿ ತಣ್ಣೀರಲ್ಲಿ ಮಿಂದೆದ್ದು ಬಂದೆ. ನಂತರ ಕಾಫೀ ಕಪ್ ಕೈಗೆತ್ತಿ ಕುಡಿದು, ಹಾಸಿಗೆಗೊರಗಿದ್ದಷ್ಟೇ ನೆನಪು. ಎಚ್ಚರವಾದಾಗ ಸರೀ ಏಳು ಗಂಟೆ. ಏನೂ ಮಾಡುವ ಆತುರವಿರಲಿಲ್ಲ. ಬೇಗ ಬೇಗ ಫ್ರೆಶ್ ಆಗಿ, ಅಡಿಗೆ ಮನೆ ಕ್ಲೀನ್ ಮಾಡಿ, ಹೊರಗೆ ವರಾಂಡಕ್ಕೆ ಕಾಲಿಟ್ಟಾಗ, ಮನೆಯ ಓನರ್ ಮಗು ಓಡೋಡಿ ಬಂದು ನನ್ನ ಕೈಲಿದ್ದ ಮೊಬಾಯಿಲ್ ಕಡೆ ಬೆರಳು ಮಾಡಿ ತೊದಲು ನುಡಿಯಲ್ಲಿ ಏನೋ ಹೇಳಿತು. ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟ ಆಯಿತು. ಯಾಕೆಂದರೆ ಭಾಷೆ ತಮಿಳಾಗಿತ್ತು. ಏನೋ ಒಂದು ಹೋಗಲಿ ಬಿಡಿ. ಮಗೂ ಕೈಗೆ ಚಾಕಲೇಟು ಕೊಟ್ಟು ಅಲ್ಲೇ ಮೆಟ್ಟಿಲಲ್ಲಿ ಕೂತೆ. ಕಾಮೆಂಟುಗಳ ಸುರಿಮಳೆ. ಒಂದೆ ಎರಡೇ....ಸುಮಾರಿದ್ದವು. ಅವುಗಳಿಗೆ ಕಾಮೆಂಟು ಹಾಕೋಣಾಂತ , ಕೀ ಪ್ಯಾಡ್ ಓಪನ್ ಮಾಡ್ತಿದ್ದಂಗೇ ತಲೇ ಮೇಲೆ ಹಾರಿ ಬರುವ ಚಂಗನೆ ನೆಗೆದು ಎದುರಾಗುವ ಮೆಸೆಂಜರ್ನ ಮೆಸೇಜುಗಳು....

ನಾ ಬರೆಯಬೇಕಾದ ಕಾಮೆಂಟು ಇನ್ನೂ ಅರ್ದಕ್ಕೇ ನಿಂತು, ಬರೆಯಬೇಕೆಂಬ ಪೋಣಿಸಿದ ಪದಗಳ ನೆನಪು ಹಾರಿ, ಇನ್ನೇನೋ ಬರೆದು ಪೋಸ್ಟ್ ಮಾಡುವಷ್ಟರಲ್ಲಿ , ಚಂಗನೆ ವಾಟ್ಸ್ಯಾಪ್ ಮೆಸೇಜು ಕುಕ್ಕರಿಸುತ್ತೆ. ನನ್ನ ಬೆರಳು ಸೆಂಡ್ ಒತ್ತುವುದಕ್ಕೂ ಆ ಮೆಸೇಜು ಬರುವುದಕ್ಕೂ ಸರಿಯಾಗಿ ಮ್ಯಾಚ್ ಆಗಿ, ಯಾರಿಗೋ ಕಳಿಸಬೇಕಾದ ಸಂದೇಶ ಇನ್ನಾರಿಗೋ ಹೋಗಿ, ಆ ವ್ಯಕ್ತಿ ಫುಲ್ ಕಕ್ಕಾಬಿಕ್ಕಿಯಾಗಿರಲು ಸಾಕು. ನಂತರ ತಪ್ಪಿನರಿವಾಗಿ ಸಾರೀ ಹೇಳಿ ಸಮಜಾಯಿಶಿ ಹೇಳುವಂತಹ ಸಂಧರ್ಭ ಬಹಳ ಸಲ ಉಂಟಾಗಿದೆ...

  ಇವತ್ತು ಯಾಕೋ ರಾತ್ರಿ ಅಡಿಗೆ ಮಾಡೋಕೆ ಸೋಮಾರಿತನ ಆಯ್ತು. ಇರೋದು ತಿಂದ್ರಾಯ್ತು, ಒಬ್ಬಳಿಗೇನು ಅಡಿಗೆ ಮಾಡೋದು. ಮಜ್ಜಿಗೆ ಮೊಸರು ಹಣ್ಣು ತಿಂದು ಮಲಗಿದರಾಯ್ತು. ಏನೂ ಆಗಲ್ಲ ಅಂತ ತೀರ್ಮಾನಿಸಿದ್ದೆ. ನಂತರ, ಸಮಯ ಕಳೆದು, ಮಧ್ಯ ರಾತ್ರಿ ಆದರೂ ನಿದ್ದೇನೆ ಬರ್ತಿಲ್ಲ. ಏನಪ್ಪಾ ಮಾಡೋದು. ಇದೊಳ್ಳೆ ಕತೆಯಾಯ್ತಲ್ಲಾ..ಅಂತಾ ಎದ್ದು ಕುಳಿತೆ. ಎರಡೂ ಫ್ಯಾನ್ಗಳು ಓಡಿದರೂ ಬಿಸೀ ಗಾಳಿ ಬೇರೆ. ಹೊಟ್ಟೇಲಿ ತಿಂದಿದ್ದು ಯಾವಾಗಲೋ ಕರಗಿ , ತಾಳ ಹಾಕ್ತಿತ್ತು. ನೀರು ಕುಡಿದು ಮಲಗಲು ಪ್ರಯತ್ನಿಸಿದೆ. ಉಹೂಂ. ಆಗಲಿಲ್ಲ. ಸರಿ ಹೋಗಲಿಲ್ಲ. ಟೀವಿ ಬೇರೆ ಇಲ್ಲ. ಪುಸ್ತಕ ಓದಲು ಮನಸಿಲ್ಲ. ಏನು ಮಾಡೋದಂತ ಯೋಚನೆ ಶುರುವಾಗಿ, ಎದ್ದು ಕುಳಿತೆ. 

 ಮನೆ ಯೋಚನೆ ಬೇರೆ ಬಂತು . ತಲೆ ಕೆಟ್ಟು ಕೆರ ಹಿಡೀತಿದೆ, ಯಾಕೋ ಟೈಮು ಸರಿಯಿಲ್ಲ ಅನಿಸ್ತು. ಮೆಸೆಂಜರ್ ಮುಖಪುಟಗಳು ಕೆಲಸ ನಿಲ್ಲಿಸಿ ಬಹಳ ಸಮಯವಾಗಿತ್ತು. ನೆಟ್ ಇಲ್ಲದ ಕಾರಣ ಶಾಂತವಾಗಿತ್ತು. ಹಸಿವೊಂದು ಕಡೆ, ಹಠವೊಂದು ಕಡೆ ನನಗೆ. ಎಷ್ಟೇ ಹಸಿವಾಗಲಿ ನೋಡೋಣ, ತಡೀತೀನಿ ಅಂತ ಕಾದೆ. ಆಗ ನೆನಪಾದದ್ದು, ....

  ಎಷ್ಟೋ ಜನ ಊಟಕ್ಕೆ ಪರದಾಡಿ ಹಸಿವೆಯಿಂದ ಎಷ್ಟೋ ರಾತ್ರಿಗಳನ್ನು ಹೀಗೇ ಒದ್ದಾಡಿಕೊಂಡು ಕಳೀತಾರಲ್ವಾ..ಪಾಪ, ಅವರಿಗೆ ಅನಿವಾರ್ಯದ ಪರಿಸ್ತಿತಿ, ಬಡತನದ ಬೇಗೆ, ಹಣದ ಅಡಚಣೆ, ಊಟದ ವ್ಯವಸ್ಥೆ ಇಲ್ಲದಿರುವಿಕೆ....ಏನೇನೋ ಹಲವು ಕಾರಣಗಳೇ ಇರಬಹುದು...ಅವರೆಲ್ಲ ಜೀವನ ಮಾಡ್ತಿದ್ದಾರೆ ಈ ಭೂಮಿ ಮೇಲೆ. ಉಪವಾಸದ ಕಷ್ಟ ಬಲವಂತವಾಗದೆ ಸ್ವ ಇಚ್ಚೆಯಿಂದ ಇಷ್ಟು ಮನಸಿಗೆ ದೇಹಕ್ಕೆ ಹಿಂಸೆಯಾಗಬೇಕಾದರೆ, ನಾನಾ ತೊಂದರೆಗಳಿಂದ ಬದುಕಿನ ಜಂಜಾಟದಲ್ಲಿ ಸಿಲುಕಿ ಉಪವಾಸವಿರಬೇಕಾದ ಸಂಧರ್ಭ ಬಂದಾಗ ಅತೀವ ದುಃಖ ನೋವಾಗುತ್ತದೆ. ದೇವಸ್ಥಾನದ ಮೆಟ್ಟಿಲಲ್ಲಿ ಕುಳಿತು ದೇವರ ಪ್ರಸಾದಕೆ ಕಾಯುವ ಎಷ್ಟೋ ಅಮಾಯಕರ ಮೂಕ ವೇದನೆಯ ಮುಖ ಎದುರಾದಂತಾಯ್ತು. ಚಿಂತೆಗೀಡಾದ ಮನ ಇನ್ನಷ್ಟು ಕಳವಳಿಸಿತು. 

   ನಾನು ಬಾಗಲಕೋಟೇಲಿ ವಿಧ್ಯಾಬ್ಯಾಸ ಮಾಡುತ್ತಿದ್ದಾಗ, ಹಾಸ್ಟೆಲ್ ನಲ್ಲಿ ಮೆಸ್ ವ್ಯವಸ್ತೆ ಇಲ್ಲದ ಕಾರಣ, ಖಾನಾವಳಿಯಿಂದ ಊಟದ ಡಬ್ಬಿ ತರಿಸುತಿದ್ದೆ. ಒಂದೊತ್ತಿನ ಊಟಕ್ಕೆ ತಿಂಳಿಗೆ ನೂರೈವತ್ತು ರೂ ಇತ್ತು. ಎರಡ್ಹೊತ್ತಿಗೆ ಮುನ್ನೂರಾಗಿತ್ತು. ನನಗೆ ಸಿಗುತಿದ್ದ ಕಡಿಮೆ ಹಣ, ಖರ್ಚಿಗೆ ಸಾಲದೆ ಇದ್ದಾಗ, ನಾನು ಒಂದೇ ಹೊತ್ತಿನ ಊಟವನ್ನು ಎರಡೂ ಹೊತ್ತು ತಿಂದು ನಾಲ್ಕು ವರ್ಷ ಮುಗಿಸಿದ ನೆನಪು. ಹಸಿವೆಂದರೇನೆಂದು ಚೆನ್ನಾಗಿ ಮನವರಿಕೆಯಾದ ದಿನಗಳವು. ಮರೆಯಲು ಸಾಧ್ಯವೇ ಇಲ್ಲದಂತಹ ನೋವಿನ ಹಸೀ ನೆನಪುಗಳು. ತಂದೆ ತಾಯಿಯನ್ನು ಬಿಟ್ಟರೆ ಇನ್ನಾರಿಗೂ ಇವು ಅರ್ಥವಾಗದ ಸಂಗತಿಗಳು. ನಿರ್ಗತಿಕ ಬೀದಿ ಮಕ್ಕಳು ಎಷ್ಟೋ ಜನ ಹೀಗೆ ಹಸಿವಿನಿಂದ ಕಂಗಾಲಾಗಿ ಕಸದ ತೊಟ್ಟಿಯಿಂದ ಆಯ್ದು ತಿನ್ನುವ ದೃಶ್ಯ ಬಹುತೇಕ ನೋಡೇ ಇರ್ತೀವಿ. ಇವು ನಮ್ಮ ದೇಶದಲ್ಲಿ ಕಾಣುವಂತ ಸಾಮಾನ್ಯ ದೃಶ್ಯ ಹೌದು. ಇತ್ತೀಚೆಗೆ ಅಮ್ಮಾ ಕ್ಯಾಂಟೀನ್, ಅಪ್ಪಾ ಕ್ಯಾಂಟೀನ್ ಅಂತವುಗಳು ತೆರೆದುಕೊಂಡರೂ, ತೀರ ಬಡಜನರು ಅಲ್ಲಿಗೆ ಹೋಗಿ ಸೌಲಭ್ಯ ಪಡೆದು ಸಂತಸಿಸಿದ ಸನ್ನಿವೇಶವಂತೂ ಎಲ್ಲೂ ಕಂಡುಬಂದಿಲ್ಲ. ಅಷ್ಟೊಂದು ಉಧಾರ ಮನಸಿನ್ನೂ ನಮ್ಮ ಕ್ಯಾಂಟೀನ್ ಕಾರ್ಮಿಕರಿಗೆ ಬಂದಿಲ್ಲ. 

  ಅಂತೂ ನಿದ್ದೆಯಿಲ್ಲದ ರಾತ್ರಿ, ಹಸಿವಿನೊಂದಿಗೆ ಇನ್ನಿತರರ ಬಗೆಗೆ ಕೊಂಚ ಯೋಚಿಸುವಂತಾಗಿ, ನನ್ನ ಮನದಲ್ಲಿ ಕೋಲಾಹಲವೆಬ್ಬಿಸಿದ ಕೆಲವು ನೆನಪು, ಕೆಲವು ಭಾವನೆ, ಕೆಲವು ಸತ್ಯ ಸಂಗತಿಗಳನ್ನು ಸುಮ್ನಿರಲಾರದೇ ಇಲ್ಲಿ ಗೀಚಿ ನನ್ನ ಸಮಯ ಬರಿದು ಮಾಡಿಕೊಂಡೆ. ಹಾಗೇಯೆ ಮನಸನ್ನೂ ಹಗುರ ಮಾಡಿಕೊಂಡೆ ಕೂಡ. ಓದಬೇಕೆನಿದರೆ ಓದಿಕೊಳ್ಳಿ. ನಂದೇನೂ ಅಭ್ಯಂತರವಿಲ್ಲ. ನಿದ್ದೆ ಬಂದರೆ ಮಲಗಿಕೊಳ್ಳಿ. ನಾಳೆಯ ಹೊಸಬೆಳಗು ಬಂದೇ ಬರುತ್ತೆ, ನಾವು ಮತ್ತೆ ಎದ್ದು ಉಸಿರಾಡುತ್ತೇವೆ . ಜೀವನ ಮುಂದುವರಿಯುತ್ತದೆ. ದಿನಚರಿ ಎಂದಿನಂತೆ ಸಾಗಿ, ಹಸಿವು ನಿರಡಿಕೆಗಳು ಯಥಾಪ್ರಕಾರ ನಡೆದು, ಕೆಲವರ ಹೊಟ್ಟೆ ತುಂಬಿ, ಕೆಲವರ ಹೊಟ್ಟೆ ಬರಿದಾಗಿ, ಅವರವರ ಕರ್ಮಾನುಸಾರ, ಪ್ರಪಂಚ ಸಾಗುತ್ತದೆ. ನಾವು ನೀವು ಎಲ್ಲರೂ ಬದುಕಿರುವ ತನಕ. ಆ ದೇವನಿಗೊಂದು ವಿನಮ್ರ ನಮನ, ನನ್ನ ಜೀವಂತವಾಗಿರಿಸಿದ್ದಕ್ಕೆ....


Rate this content
Log in

Similar kannada story from Action